ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಗೆ ಪ್ರಚಾರ ಮಾಡದಂತೆ ಕೋರಿ ಕಾಂಗ್ರೆಸ್ ಮುಖಂಡ ಮತ್ತು ಪಶ್ಚಿಮ ಬಂಗಾಳದ ರಾಜ್ಯಸಭಾ ಸಂಸದ ಪ್ರದೀಪ್ ಭಟ್ಟಾಚಾರ್ಯ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
ಮಮತಾ ಬ್ಯಾನರ್ಜಿಯ ಟಿಎಂಸಿ ಪರವಾಗಿ ಪ್ರಚಾರ ಮಾಡದಂತೆ ಭಟ್ಟಾಚಾರ್ಯ ಅವರು ಶರದ್ ಪವಾರ್ ಮತ್ತು ತೇಜಶ್ವಿ ಯಾದವ್ ಇಬ್ಬರಿಗೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ‘ನನ್ನನ್ನು ಕಿತ್ತು ಹಾಕಿದರೂ ನಾನು ಮಾತನಾಡುತ್ತೇನೆ’-ರೈತರನ್ನು ಮತ್ತೆ ಬೆಂಬಲಿಸಿದ ಮೇಘಾಲಯ ರಾಜ್ಯಪಾಲ
“ಪಶ್ಚಿಮ ಬಂಗಾಳದಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ರಾಜಕೀಯ ಹೋರಾಟ ನಡೆಸುತ್ತಿದೆ. ಸ್ಟಾರ್ ಕ್ಯಾಂಪೇನರ್ ಆಗಿ ನಿಮ್ಮ ಉಪಸ್ಥಿತಿಯು ಪಶ್ಚಿಮ ಬಂಗಾಳದ ಸಾಮಾನ್ಯ ಮತದಾರರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ” ಎಂದು ಭಟ್ಟಾಚಾರ್ಯ ಎರಡೂ ಪತ್ರಗಳಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಬಿಹಾರದಲ್ಲಿ ಆರ್‌ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭಾರಿ ಹೋರಾಟ ನಡೆಯುತ್ತಿದೆ. ರಾಜ್ಯದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮತದಾನದ ಫಲಿತಾಂಶವನ್ನು ಮೇ 2 ರಂದು ಪ್ರಕಟಿಸಲಾಗುವುದು.
ಇದನ್ನೂ ಓದಿ: ಎನ್‌ಆರ್‌ಸಿಯನ್ನು ದೇಶದಾದ್ಯಂತ ಜಾರಿಗೆ ನಿರ್ಧರಿಸಿಲ್ಲ: ಕೇಂದ್ರ ಸರ್ಕಾರ


