ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 3 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟವನ್ನು ತೀವ್ರಗೊಳಿಸುವ ಸಲುವಾಗಿ ಇದೇ ಮಾರ್ಚ್ 26 ರಂದು ಭಾರತದಾದ್ಯಂತ ಸಂಪೂರ್ಣ ಭಾರತ್ ಬಂದ್‌ಗೆ ಹೋರಾಟನಿರತ ರೈತರು ಕರೆ ನೀಡಿದ್ದಾರೆ.
ಅಖಿಲ ಭಾರತ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಇತರೆ ಸಾಮೂಹಿಕ ಸಂಘಟನೆಗಳ ಬೆಂಬಲವನ್ನು ಕೇಳಲಾಗಿದೆ ಎಂದು ರೈತ ಸಂಘಟನೆಗಳು ಹೇಳಿವೆ.
ರೈತರ ಚಳವಳಿಗೆ ನಾಲ್ಕು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾರ್ಚ್ 26ರಂದು ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಎಲ್ಲ ಅಂಗಡಿಗಳು ಹಾಗೂ ಇತರ ವ್ಯವಹಾರ ಸಂಸ್ಥೆಗಳು 12 ಗಂಟೆಗಳ ಕಾಲ ಮುಚ್ಚಲಿವೆ. ಮಾರ್ಚ್ 28ರಂದು ಹೋಳಿ ದಹನದ ವೇಳೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡಲಾಗುವುದು ಎಂದು ಎಸ್ ಕೆ ಎಂ ತಿಳಿಸಿದೆ.
ಮುಷ್ಕರವು ಬೆಳಗ್ಗೆ 6ಕ್ಕೆ ಆರಂಭವಾಗಿ ಸಂಜೆ 6ರ ತನಕವೂ ಮುಂದುವರಿಯಲಿದೆ. ಈ ಅವಧಿಯಲ್ಲಿ ಎಲ್ಲ ಅಂಗಡಿಗಳು, ಡೈರಿಗಳು ಸೇರಿದಂತೆ ಎಲ್ಲವೂ ಬಾಗಿಲು ಮುಚ್ಚಲಿವೆ. ಹೋಳಿಯ ದಿನ 3 ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ಹಾಕಲಾಗುವುದು. ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕನಿಷ್ಠ ಬೆಂಬಲ ಬೆಲೆಗೆ ಲಿಖಿತ ಖಾತರಿ ನೀಡುವ ವಿಶ್ವಾಸ ನಮಗಿದೆ ಎಂದು ಗಂಗಾನಗರ್ ಕಿಸಾನ್ ಸಮಿತಿಯ ರಂಜಿತ್ ರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: ‘ನನ್ನನ್ನು ಕಿತ್ತು ಹಾಕಿದರೂ ನಾನು ಮಾತನಾಡುತ್ತೇನೆ’-ರೈತರನ್ನು ಮತ್ತೆ ಬೆಂಬಲಿಸಿದ ಮೇಘಾಲಯ ರಾಜ್ಯಪಾಲ
ಕನಿಷ್ಟ ಬೆಂಬಲೆ ಬೆಲೆ ನಿಗದಿಗೊಳಿಸುವಂತೆ ಮತ್ತು 3 ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುವಂತೆ ದೇಶದಾದ್ಯಂತ ಇರುವ ರೈತರು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 2020ರ ನವೆಂಬರ್ ತಿಂಗಳಿನಿಂದಲೂ ಹೋರಾಟ ಮಾಡುತ್ತಿದ್ದಾರೆ.
ಈ ಕುರಿತು ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳಾಗಿವೆ. ಆದರೆ ಅವುಗಳೆಲ್ಲವೂ ವಿಫಲವಾಗಿವೆ. ನಂತರ ಜ. 26 ರಂದು ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಕರೆ ನೀಡಿದ್ದರು. ಆ ಸಂದರ್ಭದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದ ರೈತ ಹೋರಾಟಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ರಾಕೆಶ್ ಟಿಕಾಯತ್ ಭಾವನಾತ್ಮಕ ಭಾಷಣ ಮಾಡಿದ ನಂತರ ಉತ್ತರ ಭಾರತದಾದ್ಯಂತ ಪ್ರತಿ ಹಳ್ಳಿಗಳಲ್ಲೂ ಮಹಾ ಪಂಚಾಯತ್‌ಗಳನ್ನು ನಡೆಸಿ ಲಕ್ಷಾಂತರ ರೈತ ಬೆಂಬಲಿಗರನ್ನು ಒಟ್ಟಗೂಡಿಸಲಾಗುತ್ತಿದೆ. ಅಂದಿನಿಂದ ರೈತ ಹೋರಾಟ ಮತ್ತಷ್ಟು ಚುರುಕು ಪಡೆದುಕೊಂಡಿದೆ.
ರೈತ ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ಹಲವು ಅನೈತಿಕ ಮಾರ್ಗಗಳನ್ನು ಪರೋಕ್ಷವಾಗಿ ಅನುಸರಿಸುತ್ತಿದೆ. ಆದರೆ ಹೋರಾಟವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಈಗ ರೈತರು ಮತ್ತೊಮ್ಮೆ ದೇಶದಾದ್ಯಂತ ಬಂದ್ ಮಾಡಲು ಕರೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಎನ್‌ಆರ್‌ಸಿಯನ್ನು ದೇಶದಾದ್ಯಂತ ಜಾರಿಗೆ ನಿರ್ಧರಿಸಿಲ್ಲ: ಕೇಂದ್ರ ಸರ್ಕಾರ


