ಹಂಪಿ ಕನ್ನಡ ವಿಶ್ವವಿದ್ಯಾಲಯವು ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಹಿರಿಯ ಸಾಹಿತಿ ಪುಸಕ್ತಮನೆ ಹರಿಹರಪ್ರಿಯ, ವಿವಿಯು ಹೊರತಂದಿರುವ 12 ಸಂಪುಟಗಳ ಕುವೆಂಪು ಸಮಗ್ರ ಸಾಹಿತ್ಯ ಸರಣಿ ಮಾರಾಟಕ್ಕೆ ತಡೆ ತಂದಿದ್ದಾರೆ.
ಕೃತಿಚೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಮಾರಾಟಕ್ಕೆ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಬುಧವಾರ (ಮಾ.17) ತಡೆಯಾಜ್ಞೆ ನೀಡಿದ್ದಾರೆ.
ಪುಸ್ತಕಮನೆ ಹರಿಹರಪ್ರಿಯ ಅವರು 1974ರಲ್ಲಿ ಸಂಪಾದಿಸಿದ್ದ ಕುವೆಂಪು ಪತ್ರಗಳು ಪುಸ್ತಕದಿಂದ ಕುವೆಂಪು ಅವರ 62 ಪತ್ರಗಳನ್ನು ಯಥಾವತ್ತಾಗಿ ಕನ್ನಡ ವಿಶ್ವವಿದ್ಯಾಲಯ ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿದೆ ಎಂಬ ಆರೋಪವಿದೆ.
ಇದನ್ನೂ ಓದಿ: ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸ್ವಪ್ನಗಳ ಪಾತ್ರ
“ವಿಶ್ವವಿದ್ಯಾಲಯದ ಸಿಂಡಿಕೇಟ್‍ನ ಸದಸ್ಯರ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ. ವಿಧಿಯಿಲ್ಲದೆ ನ್ಯಾಯಾಲಯದ ಮೊರೆ ಹೋಗಿರುವೆ. ನ್ಯಾಯಾಲಯದ ಆದೇಶ ಸ್ವಲ್ಪ ಸಮಾಧಾನ ತಂದಿದೆ. ವಿಶ್ವವಿದ್ಯಾಲಯ ಈಗಲಾದರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ಹರಿಹರಪ್ರಿಯ ಹೇಳಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ, “ಸಂಪುಟ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ” ಎಂದು ತಿಳಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಪ್ರಸಾರಂಗದ ನಿರ್ದೇಶಕರಾದ ಪ್ರಶಾಂತ್ ಮಾತನಾಡಿ, “ಮೊದಲನೆಯದಾಗಿ, ಇದು ಮಧ್ಯಂತರ ಆದೇಶವಾಗಿದೆ. ಇದು ಎರಡೂ ಕಡೆಯವರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಕೋರ್ಟ್ ಇಂತಹ ಆದೇಶ ಹೊರಡಿಸಿದೆ ಎಂದು ಭಾವಿಸಿದ್ದೇನೆ. ಆದರೆ ಅಂತಿಮ ತೀರ್ಪು ಬೇರೆಯೇ ಆಗಿರುವ ಸಾಧ್ಯತೆಯಿದೆ. ಎರಡನೆಯದಾಗಿ, ನಾವು ಈ ಸಂಪುಟದಲ್ಲಿ 250ಕ್ಕೂ ಹೆಚ್ಚು ಪತ್ರಗಳನ್ನು ಬಳಸಿಕೊಂಡಿದ್ದೇವೆ. ಅದರಲ್ಲಿ 62 ಪತ್ರಗಳ ಹಕ್ಕು ನನ್ನದು ಎಂದು ಹರಹರಪ್ರಿಯ ಅವರು ಹೇಳುತ್ತಿದ್ದಾರೆ. ಆದರೆ ಕುವೆಂಪು ಅವರ ಎಲ್ಲಾ ಬರಹಗಳಿಗೂ ನಿಜವಾದ ಹಕ್ಕುದಾರರು ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ಮತ್ತು ಕುವೆಂಪು ಅವರ ಮಗಳು ತಾರಿಣಿಗೆ ಸೇರಿದ್ದಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಕೋರ್ಟ್‌ನ ಅಂತಿಮ ತೀರ್ಪು ಏನಾಗಲಿದೆ ಎಂದು ಕಾದುನೋಡಬೇಕಿದೆ” ಎಂದು ಹೇಳಿದರು.
ಕೆ.ಸಿ.ಶಿವಾರೆಡ್ಡಿ ಸಂಪಾದಕತ್ವದ ಕುವೆಂಪು ಸಮಗ್ರ ಸಾಹಿತ್ಯವನ್ನು 2020ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. 12ನೆ ಸಂಪುಟಗಳಲ್ಲಿ ಪ್ರಕಟಿಸಿರುವ ಕುವೆಂಪು ಅವರ 62 ಪತ್ರಗಳೇ ಈಗ ವಿವಾದ ಸೃಷ್ಟಿಸಿವೆ.
ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು


