ಯಾವುದೋ ಕಾಲದಲ್ಲಿ ಸೃಷ್ಟಿಸಿ ವ್ಯಾಪಕವಾಗಿದ್ದ ದುರ್ನೀತಿಯ ವರ್ಣವ್ಯವಸ್ಥೆ, ಜಾತಿಯ ಉಗಮಕ್ಕೆ ಕಾರಣವಾಗಿ ಮನುಷ್ಯ-ಮನುಷ್ಯ ನಡುವೆ ನಿರ್ಬಂಧಗಳನ್ನು ಸೃಷ್ಟಿಸಿತ್ತು. ಜಾತಿ ಅಂದಿನಿಂದಲೂ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆಯುತ್ತಿದೆ. ಜಾತಿ, ಅಸ್ಪೃಶ್ಯತೆ ನಮಲ್ಲಿ ಎಷ್ಟು ಆಳಕ್ಕೆ ಬೇರೂರಿದೆಯೆಂದರೆ, ಅದನ್ನು ಎಷ್ಟು ಬಾರಿ ಕಡಿದರೂ ಮತ್ತೆ ಮತ್ತೆ ಮರವಾಗಿ ಬೇರೆ-ಬೇರೆ ಸ್ವರೂಪಗಳಲ್ಲಿ ಬೆಳೆಯುತ್ತಲೇ ಇದೆ. ಈ ಜಾತಿಯ ಭೂತ ನೀರಿಗೂ ಅಂಟಿಕೊಂಡಿತ್ತು.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸನ ದೇವಿ ಮಂದಿರ್ ದೇವಾಲಯದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಬಾಲಕನೊಬ್ಬನ ಮೇಲೆ ಶೃಂಗಿ ನಂದನ್ ಯಾದವ್ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದ. ಅಲ್ಲದೇ ಹಿಂದು ಏಕ್ತಾ ಸಂಘ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಮುಸ್ಲಿಂ ಬಾಲಕನಿಗೆ ಥಳಿಸುವ ವಿಡಿಯೋವನ್ನು ಅಪ್‌ಲೋಡ್ ಮಾಡಿ, ಈ ರೀತಿಯ ಧರ್ಮರಕ್ಷಣೆಯ ಕೆಲಸಗಳಿಗಾಗಿ, ಕೇಸುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾನೆ. ಜೊತೆಗೆ ನೀರು ಕುಡಿದಿದ್ದಕ್ಕಾಗಿ ಬಾಲಕನ ಪುರುಷತ್ವ ಹರಣ ಮಾಡಬೇಕು ಎಂದೂ ಬರೆದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಆರೋಪಿ ಶೃಂಗಿ ನಂದನ್ ಯಾದವ್, ಆ ಹುಡುಗನಿಗೆ ತನ್ನ ಹೆಸರನ್ನು ಕೇಳಿದ್ದಾನೆ. ಅದಕ್ಕೆ ಆ ಹುಡುಗ ತನ್ನ ಹೆಸರು ಆಸಿಫ್ ಎಂದು ಹೇಳಿದ್ದು, ನೀರು ಕುಡಿಯಲು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಅದಕ್ಕೆ ಕೋಪಗೊಂಡ ಆರೋಪಿ ಅಮಾನುಷವಾಗಿ ಥಳಿಸಿದ್ದಲ್ಲದೆ, ಕಾಲಿನಲ್ಲಿ ಒದ್ದಿದ್ದಾನೆ ಮತ್ತು ಕೈಮುರಿಯಲು ಯತ್ನಿಸಿದ್ದಾನೆ. ಇದು ವಿಡಿಯೋದಲ್ಲಿ ದಾಖಲಾಗಿದೆ.
ಶತಮಾನಗಳಷ್ಟು ಹಿಂದೆಯೇ ಊರಿನಲ್ಲಿರುವ ಸಾರ್ವಜನಿಕ ಬಾವಿಯಲ್ಲಿನ ನೀರನ್ನು ಜಾತಿವ್ಯವಸ್ಥೆಯ ಪಿರಮಿಡ್‌ನಲ್ಲಿ ಕೆಳಗಿದ್ದ ಶೂದ್ರರು ಮತ್ತು ಅವರಿಗೂ ಹಿಂದುಳಿದವರು ಮುಟ್ಟುವಂತಿರಲಿಲ್ಲ. ಕುಡಿಯುವ ನೀರು ಒಂದುಕಡೆಯಾದರೆ, ಕೆಳಜಾತಿಯವರ ಮನೆಯಿಂದ ಬರುವ ಚರಂಡಿ ನೀರೂ ಕೂಡ ಮೇಲ್ಜಾತಿಯವರ ಚರಂಡಿ ನೀರಿನೊಂದಿಗೆ ಬೆರೆಯಬಾರದು ಎಂಬ ಕಾರಣಕ್ಕೆ ಎತ್ತರದ ಪ್ರದೇಶದಲ್ಲಿ ಮೇಲ್ಜಾತಿಯವರು ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಕೆಳಜಾತಿಯವರಿಗೆ ತಗ್ಗು ಪ್ರದೇಶಗಳಲ್ಲಿಯೇ ಉಳಿಯುವಂತೆ ನೋಡಿಕೊಳ್ಳುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಳಜಾತಿಯವರ ನೆರಳೂ ಕೂಡ ಮೇಲ್ಜಾತಿಯವರ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಸೂರ್ಯ ನೆತ್ತಿಗೇರುವ ಮುನ್ನ ಕೆಳಜಾತಿಯವರು ಬೀದಿಯಲ್ಲಿ ಓಡಾಡುವಂತಿರಲಿಲ್ಲ. ಇಳಿಸಂಜೆಯ ಹೊತ್ತಿಗೆ ಕೆಳಜಾತಿಯವರು ಹಟ್ಟಿ ಸೇರಿಕೊಳ್ಳಬೇಕಾಗಿತ್ತು. (ಯಾಕೆಂದರೆ ಈ ಸಮಯದಲ್ಲಿ ಯಾವುದೇ ವ್ಯಕ್ತಿಯ ನೆರಳು ಉದ್ದವಾಗಿರುತ್ತದೆ)
ಹೀಗೆ ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆಯ ಸಂತತಿ ಹೆಚ್ಚುತ್ತಿದೆ. ಒಬ್ಬ ಮುಸ್ಲಿಂ ಹುಡುಗನಿಗೆ ಬಾಯಾರಿಕೆಯಾಗಿ ದೇವಸ್ಥಾನದೊಳಗೆ ಹೋಗಿ ನೀರು ಕುಡಿದ ಎನ್ನುವ ಕಾರಣಕ್ಕೆ ಇದನ್ನು ಸಹಿಸದೆ ಆ ಹುಡುಗನ ಮೇಲೆ ಹಲ್ಲೆ ಮಾಡಿರುವ ಮೇಲ್ಜಾತಿಯವನೇ ಈ ಸಂತತಿಯ ವಾರಸುದಾರ. ಇನ್ನೂ ಉಳಿದುಕೊಂಡಿರುವ ಈ ದೊಡ್ಡ ಸಂತತಿಯ ಪ್ರತಿನಿಧಿ.
ಇಂತಹ ದೌರ್ಜನ್ಯಗಳ ವಿರುದ್ಧ ಬಹುಶಃ ಇಡೀ ಭಾರತದಲ್ಲಿ ಮೊದಲು ನೇರಾ-ನೇರ ದನಿಯೆತ್ತಿದವರು ನಮ್ಮ ವಚನಕಾರರು. ಇದಕ್ಕೆ ಒಂದು ಸ್ಪಷ್ಟ ಮತ್ತು ಸಣ್ಣ ಉದಾಹರಣೆಗೆ ಅಲ್ಲಮನ ಈ ವಚನವನ್ನು ನೆನಪಿಸಿಕೊಳ್ಳಬಹುದು.
ನಾ ದೇವನಲ್ಲದೆ ನೀ ದೇವನೆ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ
“ನಾನು ದೇವರು. ನೀನು ದೇವರಾಗಲು ಹೇಗೆ ಸಾಧ್ಯ? ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ಯಾರಾದರೂ ಬಂದು ಕುಳಿತರೆ ನೀರು ಕೊಡುವೆ. ಹಸಿದಾಗ ಒಂದು ತುತ್ತು ಅನ್ನ ಕೊಡುವೆ. ನಾನೇ ದೇವರು” ಎಂದು ಅಲ್ಲಮಪ್ರಭು ಹೇಳುತ್ತಾರೆ.
ಈ ವಚನ ದೇವರನ್ನು ಉದ್ದೇಶಿಸಿರುವುದಲ್ಲ, ಬದಲಿಗೆ ಆ ದೇವರನ್ನೂ ರಾಜಕೀಯಗೊಳಿಸಿ, ಅದಕ್ಕೂ ಅಸ್ಪೃಶ್ಯತೆ ಅಂಟಿಸಿದ ಕರ್ಮಟ ವೈದಿಕರಿಗೆ ಹೇಳುತ್ತಿರುವ ಮಾತಿದು.
ಯಾರೂ ಯಾರನ್ನೂ ಭೇದದಿಂದ ನಡೆಸಿಕೊಳ್ಳಬಾರದು ಮತ್ತು ಸಮಾನತೆ, ಭ್ರಾತೃತ್ವದಿಂದ ಕಾಣಬೇಕು ಎಂದು ಇದೇ ರೀತಿಯ ತತ್ವ ಸಿದ್ಧಾಂತವನ್ನು ಬುದ್ಧನೂ ಕೂಡ ಕ್ರಿಸ್ತಪೂರ್ವದಲ್ಲೆ ಹೇಳಿದ್ದ. ಆದರೆ ಬಸವಣ್ಣನ ನೇತೃತ್ವದಲ್ಲಿ ನಡೆದ ಈ ಕಲ್ಯಾಣದ ಕ್ರಾಂತಿಯನ್ನು ಆದಷ್ಟು ಬೇಗನೆ ಮುಗಿಸಿದವರು, ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿದವರೂ ಈ ಭವ್ಯ ಪರಂಪರೆಯ ವಾರಸುದಾರರೇ.
ಕೆರೆಯಲ್ಲಿ ದಲಿತರು ನೀರು ಮುಟ್ಟಬಾರದು ಎಂಬುದರ ವಿರುದ್ಧ ಚೌಡಾರ್ ಕರೆ ನೀರನ್ನು ಮುಟ್ಟಿ ಅಂಬೇಡ್ಕರ್ ಪ್ರತಿಭಟಿಸಿದ್ದರು. ಇದು ಬಹಶ: ಸ್ವತಂತ್ರಪೂರ್ವದಲ್ಲಿ ಸಮಾನತೆಗೆ ನಡದ ಮೊದಲನೇ ಬಹುದೊಡ್ಡ ಆಂದೋಲನ. ಇದನ್ನು ಸಹಿಸದ ಇದೇ ವಾರಸುದಾರರು ಅಂದು ಅವರ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಪ್ರಶ್ನಿಸಿದರೆ, ಕೆಲವು ಸುಪ್ತ ಮನುವಾದಿಗಳು, “ಇದು ಯಾವುದೋ ಕಾಲದಲ್ಲಿ ಆಗಿದ್ದು. ಇದನ್ನೇ ಇಟ್ಟುಕೊಂಡು ಇನ್ನೂ ಎಷ್ಟು ಕಾಲ ಕಳೆಯುತ್ತೀರಾ? ಇಂತಹವುಗಳೆಲ್ಲಾ ಈಗ ನಡೆಯುತ್ತಿಲ್ಲ. ಎಲ್ಲರೂ ಬದಲಾಗಿದ್ದಾರೆ” ಎಂದು ಹೇಳುತ್ತಾರೆ.
ಅದರೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವ ಘಟನೆಗೂ ಅಂಬೇಡ್ಕರ್ ಅವರ ಕಾಲದಲ್ಲಿ ನಡೆದಿರುವ ಈ ಘಟನೆಗೂ ವ್ಯತ್ಯಾಸವೇನಾದರೂ ಇದೆಯೇ? ವಾಸ್ತವದಲ್ಲಿ ಇವೆರಡಕ್ಕೂ ಸಂಬಂಧ ಇದೆ. ಆದರೆ ಇದನ್ನೂ ಸಮರ್ಥಿಸಿಕೊಳ್ಳುವವರು ಇದ್ದಾರೆ ಎಂದರೆ ಈ ದೇಶದ ಪರಿಸ್ಥಿತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ನೀರು ಕುಡಿದಿದ್ದಕ್ಕೆ, ಪ್ರೀತಿ ಮಾಡಿದ್ದಕ್ಕೆ ಕೈಕಾಲು ಮುರಿಯುವ ಪುರುಷತ್ವ ಹರಣ ಮಾಡುವ ಮನಸ್ಥಿತಿ ಇಷ್ಟು ಅಗಾಧವಾಗಿ ಬೆಳೆಯಲು ಯಾವ ಕುಯುಕ್ತಿ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೋಚರವಾಗುತ್ತದೆ. ಮುಕ್ತ ಮನಸ್ಸಿನಿಂದ ಕಾಣುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕಷ್ಟೇ!
ಭಾರತವನ್ನು ವಿಶ್ವಗುರು ಮಾಡಲು ನೀರೆರೆದು ಪೋಷಿಸುತ್ತಿರುವ ಹೊತ್ತಲ್ಲೇ ಇಲ್ಲೊಬ್ಬ ನೀರು ಕುಡಿದಿದ್ದಕ್ಕೆ ಹಲ್ಲೆಗೊಳಗಾಗಿದ್ದಾನೆ. ಹೀಗಿರುವಾಗ ನನ್ನ ದೇಶವನ್ನು ವಿಶ್ವಗುರು ಎಂದು ಹೇಗೆ ಒಪ್ಪಿಕೊಳ್ಳುವುದು? ನಮ್ಮ ಪರಂಪರೆ ವಿಶ್ವಕ್ಕೆ ಮಾದರಿ ಎಂದು ಹೇಳುತ್ತಿರುವವರು ಇಂತಹ ಅನಿಷ್ಟ ಪರಂಪರೆಯನ್ನು ಮರೆತರೇಕೆ?
ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ #SorryAsif ಹ್ಯಾಷ್‌ಟ್ಯಾಗ್ ಮೂಲಕ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ ಎಷ್ಟು ದಿನ, ಹೀಗೆ ಖಂಡನೆಗಳಲ್ಲೆ ತಾತ್ಕಾಲಿಕವಾಗಿ ಮರೆಯಾಗಿ ಮತ್ತೊಂದು ದಿನ ಇನ್ನೆಲ್ಲೋ ಚಿಗುರಿ ಎದ್ದು, ನೀರು ಕುಡಿದಿದ್ದಕ್ಕೆ ಮತ್ತೊಬ್ಬ ಥಳಿತಗೊಂಡು ಅವಮಾನಕ್ಕೆ ಗುರಿಯಾಗಬೇಕು? ಸಂವಿಧಾನದಲ್ಲಿ ಹೇಳಿಕೊಟ್ಟಿರುವ ಸಮಾನತೆ, ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಲು ನನ್ನ ದೇಶವಾಸಿಗಳಿಗೆ ಏಕಿಷ್ಟು ಕಷ್ಟ?

ಪ್ರತಾಪ್ ಹುಣಸೂರು
ಸಂಶೋಧನಾ ವಿದ್ಯಾರ್ಥಿ. ಸದ್ಯ ನಾನುಗೌರಿ.ಕಾಂನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


