ಟಿಆರ್‌ಪಿ ಹಗರಣದ ಬಗ್ಗೆ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಮೂರು ಮಹಾರಾಷ್ಟ್ರ ಮೂಲದ ಟಿವಿ ಚಾನೆಲ್‌ಗಳ ಸುಮಾರು 32 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ವಶಪಡಿಸಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯ ನಿಬಂಧನೆಗಳ ಪ್ರಕಾರ ವಶಪಡಿಸಲಾದ ಆಸ್ತಿಗಳು ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿ ಚಾನೆಲ್‌ಗಳಿಗೆ ಸೇರಿವೆ. ಮುಂಬೈ, ಇಂದೋರ್, ದೆಹಲಿ ಮತ್ತು ಗುರಗಾಂವ್‌ನಲ್ಲಿ ಈ ಆಸ್ತಿಗಳಿವೆ. ಚಾನೆಲ್‌ಗಳ ಕೆಲವು ಬ್ಯಾಂಕ್ ಠೇವಣಿಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ.
ಇದನ್ನೂ ಓದಿ: ಕೇರಳ: ಬಿಜೆಪಿ ಮೈತ್ರಿಕೂಟ ತೊರೆದ ‘ಕೇರಳ ಕಾಂಗ್ರೆಸ್’!
ಟಿಆರ್‌ಪಿ ದಂಧೆ ಒಂದು ವಂಚನೆಯ ಆಟ. ಎಷ್ಟು ವೀಕ್ಷಕರು ಯಾವ ಚಾನೆಲ್ ಜಾಸ್ತಿ ನೋಡಿದರು, ಯಾವ ಪ್ರೊಗ್ರಾಮ್ ಹೆಚ್ಚು ನೋಡಿದರು ಎಂಬುದರ ಆಧಾರದಲ್ಲಿ ಆ ಚಾನೆಲ್‌ಗಳಿಗೆ ಜಾಹೀರಾತು ಹರಿದು ಬರುತ್ತದೆ. ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಚಾನೆಲ್ ಬಾರ್ಕ್ ಮುಖ್ಯಸ್ಥನ ಜೊತೆ ಸೇರಿ ಕೃತಕ ಟಿಆರ್‌ಪಿಗಳನ್ನು ಸೃಷ್ಟಿಸಿದ ಆರೋಪ ಎದುರಿಸುತ್ತಿದೆ.
ಜೊತೆಗೆ ಮೇಲೆ ಉಲ್ಲೇಖಿಸಲಾದ ಮೂರು ಮಹಾರಾಷ್ಟ್ರ ಮೂಲದ ಚಾನೆಲ್‌ಗಳು ಕೂಡ ಈ ಕೃತಕ ಟಿಆರ್‌ಪಿ ಏರಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದವು. ಆಯ್ದ ವೀಕ್ಷಕ ಕುಟುಂಬಗಳು ಪದೇ ಪದೇ ಅದೇ ಚಾನೆಲ್ ಅಥವಾ ಆ ಚಾನೆಲ್‌ನ ಒಂದು ಕಾರ್ಯರಕ್ರಮವನ್ನು ವೀಕ್ಷಿಸುವಂತೆ ಲಂಚ ನೀಡುವ ಮೂಲಕ ಇದನ್ನು ಮಾಡಲಾಗಿದೆ.
’ಮೇಲೆ ಉಲ್ಲೇಖಗೊಂಡ ಮೊದಲ ಎರಡು ಚಾನೆಲ್‌ಗಳು 5 ಕುಟುಂಬಗಳ ಜೊತೆಗೆ ಒಪ್ಪಂದ ಮಾಡಿ ಸುಮಾರು 25% ಟಿಆರ್‌ಪಿಯನ್ನು ಪಡೆಯುತ್ತಿದ್ದವು. ಮೂರನೇ ಚಾನಲ್ ಕೂಡಾ 5 ಕುಟುಂಬಗಳೊಂದಿಗೆ ಒಪ್ಪಂದ ಮಾಡಿಕೊಂಡ ಪರಿಣಾಮ ಕೃತಕವಾಗಿ 12% ಟಿಆರ್‌ಪಿಯನ್ನು ಪಡೆಯುತ್ತಿದ್ದವು’ ಎಂದು ಇ.ಡಿ. ಹೇಳಿದೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ ಹೇಳಿಕೆ
ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಳನ್ನು (ಟಿಆರ್‌ಪಿ) ತಿರುಚಿರುವ ಆರೋಪದ ಮೇಲೆ ಮುಂಬೈ ಪೊಲೀಸ್ ಸಿದ್ಧಪಡಿಸಿದ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಇ.ಡಿ. ಚಾನೆಲ್‌ಗಳ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು.
“ಟೆಲಿವಿಷನ್ ಚಾನೆಲ್‌ಗಳಾದ ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವಿ ಚಾನೆಲ್‌ಗಳು ಟಿಆರ್‌ಪಿಗಳನ್ನು ತಿರುಚುವ ಮೂಲಕ ಅಕ್ರಮ ಲಾಭ ಮಾಡಿಕೊಂಡಿವೆ’ ಎಂದು ಇ.ಡಿ ಮತ್ತು ಮಹಾರಾಷ್ಟ್ರ ಪೊಲೀಸರು ಅಪಾದಿಸಿದ್ದಾರೆ.
“ಟಿಆರ್‌ಪಿ ರೇಟಿಂಗ್‌ಗಳನ್ನು ಮೋಸದಿಂದ ಹೆಚ್ಚಿಸುವ ಮೂಲಕ, ಈ ಚಾನಲ್‌ಗಳು ವಿಪರೀತ ಜಾಹೀರಾತು ಆದಾಯವನ್ನು ಗಳಿಸಿವೆ” ಎಂದು ಇಡಿ ಹೇಳಿದೆ.
ಟಿಆರ್‌ಪಿ ಎಂಬುದು ಟಿವಿ ಚಾನೆಲ್ ಅಥವಾ ಪ್ರೋಗ್ರಾಂನ ಜನಪ್ರಿಯತೆಯನ್ನು ಸೂಚಿಸುತ್ತದೆ ಮತ್ತು ವೀಕ್ಷಕರು ಯಾವುದನ್ನು ಹೆಚ್ಚು ನೋಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜಾಹೀರಾತುದಾರರಿಗೆ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಹುತಾತ್ಮ ರೈತರಿಗೆ ಗೌರವ ಸಲ್ಲಿಸದ ಕೇಂದ್ರದ ವಿರುದ್ದ ರಾಹುಲ್ ಗಾಂಧಿ ಹೇಳಿದ್ದೇನು?
ವೀಕ್ಷಕರ ಮನೆಗಳಲ್ಲಿ ಬಾರೋಮೀಟರ್‌ಗಳನ್ನು ಅಳವಡಿಸಿ, ಟಿಆರ್‌ಪಿ ಅಳೆಯಲಾಗುತ್ತದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಇದನ್ನು ನಿರ್ವಹಿಸುತ್ತದೆ. ಆದರೆ ಅದು ಅಳವಡಿಸುವಿಕೆ ಮತ್ತು ಸೇವೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುತ್ತದೆ. ಈ ಪ್ರಕರಣದಲ್ಲಿ ಅದು ಹನ್ಸಾ ಏಜೆನ್ಸಿಯನ್ನು ನೇಮಿಸಿಕೊಂಡಿತ್ತು. (ಬಾರೋಮೀಟರ್‌ಗಳನ್ನು ಯಾವ ಮನೆಗಳಲ್ಲಿ ಅಳವಡಿಸಬೇಕು ಎಂಬುದನ್ನು ಬಾರ್ಕ್ ನಿರ್ಧರಿಸುತ್ತದೆ).
ಟಿಆರ್‌ಪಿ ಯಾವುದೇ ಚಾನಲ್‌ಗೆ ಜಾಹೀರಾತನ್ನು ಪಡೆಯುವ ಪ್ರಮುಖ ಆಧಾರ ಮೂಲ. ಅದು ಟಿವಿ ಚಾನೆಲ್‌ನ ಆದಾಯವನ್ನು ನಿರ್ಧರಿಸುತ್ತದೆ. ಹೀಗಾಗಿ, ಟಿಆರ್‌ಪಿಯನ್ನು ವಾಮಮಾರ್ಗಗಳಲ್ಲಿ ಹೆಚ್ಚಿಸಿ ಹೆಚ್ಚಿನ ಜಾಹೀರಾತು ಆದಾಯವನ್ನು ಗಳಿಸುವ ಸಾಧನವಾಗಿ ಬಳಸಿಕೊಳ್ಳಲಾಗಿದೆ.
“ಬಾರೋಮೀಟರ್ ಸ್ಥಾಪಿಸಲಾದ ಮನೆಗಳ ಗೌಪ್ಯ ಮಾಹಿತಿಯನ್ನು ಏಜೆನ್ಸಿ ವ್ಯವಸ್ಥಾಪಕರು ಹಣದ ಲಾಭಕ್ಕಾಗಿ ಬಹಿರಂಗಪಡಿಸಿದ್ದು, ನಂತರ ಮನೆಯವರಿಗೆ ಲಂಚ ನೀಡಲಾಯಿತು. ಈ ಮೂಲಕ ನಿರ್ದಿಷ್ಟ ಚಾನೆಲ್‌ಗಳನ್ನು ವೀಕ್ಷಿಸುವಂತೆ ಪ್ರೇರೇಪಿಸಲಾಯಿತು. ಟಿಆರ್‌ಪಿಯನ್ನು ಕೃತಕವಾಗಿ ಏರಿಸಿ ಜಾಹೀರಾತುದಾರರನ್ನು ಮೋಸಗೊಳಿಸಲಾಯಿತು” ಎಂದು ಇ.ಡಿ ವಿವರಿಸಿದೆ.
ಆರೋಪಿತ ಚಾನೆಲ್‌ಗಳು ಒಟ್ಟು 46.77 ಕೋಟಿ ರೂ.ಗಳನ್ನು ಅಕ್ರಮ ಟಿಆರ್‌ಪಿ ಆಧಾರದಲ್ಲಿ ಗಳಿಸಿವೆ ಎಂದು ಇ.ಡಿ ಹೇಳಿದೆ.
ಇದನ್ನೂ ಓದಿ: ‘ಎರಡು ವರ್ಷಗಳಲ್ಲಿ 157 ಲಾಕಪ್ ಡೆತ್’- ಆಘಾತಕಾರಿ ಮಾಹಿತಿ ನೀಡಿದ ಗುಜರಾತ್ ಸರ್ಕಾರ


