ಅಸ್ಸಾಂನ ಮತಗಟ್ಟೆಯೊಂದರ ಇವಿಎಂಗಳು ಬಿಜೆಪಿ ಮುಖಂಡರ ಕಾರಿನಲ್ಲಿ ಪತ್ತೆಯಾದ ಪ್ರಕರಣ ಮತ್ತು ಬಿಜೆಪಿ ಹಿರಿಯ ನಾಯಕನ ಚುನಾವಣಾ ಪ್ರಚಾರದಿಂದ ಹೊರಗುಳಿಯುವಿಕೆ ಶಿಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಚುನಾವಣಾ ಆಯೋಗದ ನಿಲುವಿನ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇವಲ ಎರಡು ಪದಗಳಲ್ಲಿ ಟ್ವೀಟ್ ಮಾಡುವ ಮೂಲಕ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Election “Commission”.
— Rahul Gandhi (@RahulGandhi) April 3, 2021
ಎಲೆಕ್ಷನ್ “ಕಮಿಷನ್” ಎಂಬ ಎರಡು ಪದಗಳ ಟ್ವೀಟ್ ಮಾಡುವ ಮೂಲಕ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಕಮಿಷನ್ ಪದಕ್ಕೆ ಮಹತ್ವ ನೀಡುವುದರ ಮೂಲಕ ಚುನಾವಣಾ ಆಯೋಗ ಸ್ವತಂತ್ರವಾಗಿ ಉಳಿದಿಲ್ಲ, ಅದು ಬಿಜೆಪಿಗೆ ಮಾರಾಟವಾಗಿದೆ ಎಂದು ಪರೋಕ್ಷವಾಗಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ: ಮರುಮತದಾನಕ್ಕೆ ಆದೇಶ, 4 ಅಧಿಕಾರಿಗಳ ಅಮಾನತು!
ಏಪ್ರಿಲ್ 1 ರಂದು ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ಆದರೆ ಕರೀಮ್‌ಗಂಜ್‌ನ ರತನಾರಿ ಕ್ಷೇತ್ರದ ಸ್ಟೇಷನ್ ನಂಬರ್ 149ರ ರತನಾರಿ – ಇಂದಿರಾ ಎಂವಿ ಸ್ಕೂಲ್ ಬೂತ್‌ನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಅನ್ನು ಪಕ್ಕದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದ್ರ ಪೌಲ್‌ರವರ ಪತ್ನಿಯ ಕಾರಿನಲ್ಲಿ ಸಾಗಿಸಿದ್ದರು. ಕಾರು ಸ್ಟ್ರಾಂಗ್‌ರೂಂ ಬಳಿ ಬರುತ್ತಲೇ ವಿರೋಧ ಪಕ್ಷದ ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟಿಸಿದ್ದರು. ಹಿಂಸಾಚಾರ ಉಲ್ಭಣಗೊಂಡ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠೀ ಚಾರ್ಜ್ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮತ್ತು ಆ ಕ್ಷೇತ್ರದಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ.
ಶುಕ್ರವಾರ ರಾತ್ರಿ ತಾನೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಸ್ಸಾಂ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೆ 48 ಗಂಟೆಗಳ ಪ್ರಚಾರ ನಿಷೇಧ ಹೇರಿದ್ದ ಚುನಾವಣಾ ಆಯೋಗ ಶನಿವಾರ ಅದನ್ನು ಏಕಾಏಕಿ ಅರ್ಧಕ್ಕೆ ಇಳಿಸಿದೆ. ಹಾಗಾಗಿ ಹಿಮಂತ ಬಿಸ್ವಾ ಶರ್ಮಾ ನಾಳೆ ಪ್ರಚಾರ ನಡೆಸಬಹುದಾಗಿದೆ.
ಈ ಎರಡು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ: ಬಿಜೆಪಿ ಮುಖಂಡನ ಮೇಲಿನ ಪ್ರಚಾರ ನಿಷೇಧ ಅರ್ಧ ತೆರವುಗೊಳಿಸಿದ ಚುನಾವಣಾ ಆಯೋಗ!


