ಆಫ್ರಿಕನ್-ಅಮೇರಿಕನ್ ಜಾರ್ಜ್ ಫ್ಲಾಯ್ಡ್‌ನನ್ನು ಕೊಲೆ ಮಾಡಿದ ಆರೋಪದ ಮೇಲೆ ಮಾಜಿ ಮಿನ್ನಿಯಾಪೊಲಿಸ್ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅಪರಾಧಿ ಎಂದು ಸಾಬೀತುಗೊಂಡಿದ್ದು ಶಿಕ್ಷೆಗೆ ಗುರಿಯಾಗಿದ್ದಾನೆ. ಮಂಗಳವಾರ ಈ ತೀರ್ಪು ಪ್ರಕಟಗೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಪ್ರಕರಣ ಅಮೆರಿಕದಲ್ಲಿ ತೀವ್ರ ಚರ್ಚೆಯ ವಿಷಯವಾಗಿತ್ತು. ಪೊಲೀಸ್ ಹೊಣೆಗಾರಿಕೆ ಕುರಿತ ಪ್ರಮುಖ ಪರೀಕ್ಷೆಯೆಂದು ಇದನ್ನು ಪರಿಗಣಿಸಲಾಗಿತ್ತು.
ಎರಡನೇ-ದರ್ಜೆ (ಸೆಕೆಂಡ್ ಡಿಗ್ರಿ) ಕೊಲೆ, ಮೂರನೇ-ದರ್ಜೆ (ಥರ್ಡ್ ಡಿಗ್ರಿ) ಕೊಲೆ ಮತ್ತು ನರಹತ್ಯೆ – ಈ ಮೂರೂ ಆರೋಪಗಳಲ್ಲಿ 45 ವರ್ಷದ ಚೌವಿನ್ ತಪ್ಪಿತಸ್ಥನೆಂದು ಪರಿಗಣಿತರಾಗಿದ್ದಾನೆ..
ಮೂರು ವಾರಗಳ ವಿಚಾರಣೆಯ ನಂತರ ತೀರ್ಪುಗಳನ್ನು ಘೋಷಿಸಿದಾಗ ಭಾರಿ ಕಾವಲಿನಲ್ಲಿರುವ ಮಿನ್ನಿಯಾಪೊಲಿಸ್ ನ್ಯಾಯಾಲಯದ ಕೋಣೆಯ ಹೊರಗೆ ನೆರೆದಿದ್ದ ಜನಸಮೂಹವು ಸಂತಸ ವ್ಯಕ್ತಪಡಿಸಿತು.
ವಿವಿಧ ಜನಾಂಗಗಳಿಗೆ ಸೇರಿದ ಏಳು ಮಹಿಳಾ, ಐದು ಪುರುಷ ತೀರ್ಪುಗಾರರ ಸರ್ವಾನುಮತದ ತೀರ್ಪನ್ನು ಹೆನ್ನೆಪಿನ್ ಕೌಂಟಿ ನ್ಯಾಯಾಧೀಶ ಪೀಟರ್ ಕಾಹಿಲ್ ಓದಿದ ನಂತರ ಜಾಮೀನಿನ ಮೇಲೆ ಮುಕ್ತರಾಗಿದ್ದ ಚೌವಿನ್‌ಗೆ ಕೈಕೋಳ ತೊಡಿಸಲಾಗಿತು.
ಫೇಸ್ ಮಾಸ್ಕ್ ಧರಿಸಿದ್ದ ಮತ್ತು ಯಾವುದೇ ಬಾಹ್ಯ ಭಾವನೆಯನ್ನು ಪ್ರದರ್ಶಿಸದ ಚೌವಿನ್ ಅವನನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವಾಗ ಜಾರ್ಜ್ ಫ್ಲಾಯ್ಡ್ ಸಹೋದರರಲ್ಲಿ ಒಬ್ಬರಾದ ಫಿಲೋನಿಸ್ ಫ್ಲಾಯ್ಡ್ ಪ್ರಾಸಿಕ್ಯೂಟರ್‌ಗಳನ್ನು ಅಭನಂದಿಸಿದರು.
ಚೌವಿನ್ ಅತ್ಯಂತ ಗಂಭೀರವಾದ ಆರೋಪದ ಮೇಲೆ 40 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎನ್ನಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಂತರ ಘೋಷಿಸಲಾಗುತ್ತದೆ.
ಪೊಲೀಸ್ ಅಧಿಕಾರಿ ಚೌವಿನ್, ಫ್ಲಾಯ್ಡ್‌ನ ಕುತ್ತಿಗೆಗೆ ಒಂಬತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಮಂಡಿಯೂರಿ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದು, ಫ್ಲಾಯ್ಡ್ ಉಸಿರುಗಟ್ಟಿ ಮೃತರಾಗಿದ್ದರು.
ನಕಲಿ ಬಿಲ್ ಆರೋಪದ ಮೇಲೆ ಮೇ 25, 2020 ರಂದು ಬಂಧನಕ್ಕೊಳಗಾದ 46 ವರ್ಷದ ಫ್ಲಾಯ್ಡ್ ಹತ್ಯೆ ವಿಶ್ವದಾದ್ಯಂತ ಜನಾಂಗೀಯ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಗೆ ನಾಂದಿ ಹಾಡಿತು. ಅಮೆರಿಕದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಂದೋಲನ ತೀವ್ರವಾಗಿತ್ತು.
ಅಧ್ಯಕ್ಷ ಜೋ ಬಿಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತೀರ್ಪಿನ ನಂತರ ಫ್ಲಾಯ್ಡ್ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಮಾತನಾಡಿದರು. “ಇದರಿಂದ ಒಮ್ಮೆಲೇ ಏನೂ ಉತ್ತಮವಾಗುವುದಿಲ್ಲ, ಆದರೆ ಕನಿಷ್ಠ ದೇವರು ಈಗ ಸ್ವಲ್ಪ ನ್ಯಾಯದ ಕಡೆಗಿದ್ದಾನೆ ಎಂದು ಸಾಬೀತಾಗಿದೆ’ ಎಂದು ಬಿಡೆನ್ ಹೇಳಿದರು.
“ಇದು ಅಮೆರಿಕದಲ್ಲಿ ನ್ಯಾಯದ ದಿನ” ಎಂದು ಅಮೆರಿಕದ ಮೊದಲ ಕಪ್ಪು ವರ್ಣೀಯ ಉಪಾಧ್ಯಕ್ಷೆ ಹ್ಯಾರಿಸ್ ಹೇಳಿದ್ದಾರೆ. “ಇತಿಹಾಸವು ಈ ಕ್ಷಣದಲ್ಲಿ ಹಿಂತಿರುಗಿ ನೋಡುತ್ತದೆ’ ಎಂದು ಅವರು ಹೇಳಿದ್ದಾರೆ.
ಫ್ಲಾಯ್ಡ್ ಕುಟುಂಬ ವಕೀಲ ಬೆನ್ ಕ್ರಾಂಪ್ ಈ ತೀರ್ಪನ್ನು ನಾಗರಿಕ ಹಕ್ಕುಗಳ ಮಹತ್ವದ ವಿಜಯ, ಎಂದಿದ್ದಾರೆ.
ಅಮೆರಿಕದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಬರಾಕ್ ಒಬಾಮಾ, “ತೀರ್ಪುಗಾರರು ಸರಿಯಾದ ಕೆಲಸವನ್ನು ಮಾಡಿದ್ದಾರೆ, ಆದರೆ ನಿಜವಾದ ನ್ಯಾಯಕ್ಕೆ ಇನ್ನೂ ಹೆಚ್ಚಿನ ಅಗತ್ಯವಿದೆ” ಎಂದು ಹೇಳಿದ್ದಾರೆ.
ಫ್ಲಾಯ್ಡ್ ಬಂಧನದಲ್ಲಿ ಭಾಗಿಯಾಗಿರುವ ಇತರ ಮೂವರು ಮಾಜಿ ಪೊಲೀಸ್ ಅಧಿಕಾರಿಗಳು ಈ ವರ್ಷದ ಕೊನೆಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ


