‘ಹಂಗೆಲ್ಲ ಫ್ರೀಯಾಗಿ ರೇಷನ್ ಕೊಟ್ರೆ ಜನರು ಕೆಲಸಕ್ಕೆ ಬರಲ್ಲ. ಇದರಿಂದ ಕೈಗಾರಿಗೆ ಹೊಡೆತ ಬೀಳುತ್ತೆ’ ಎಂದು ಬಿಜೆಪಿ ನಾಯಕ, ವಿಆರ್‌ಎಲ್ ಮಾಲೀಕ ವಿಜಯ ಸಂಕೇಶ್ವರ ಇಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇದನ್ನು ಹೇಳಲೆಂದೇ ಸುದ್ದಿಗೋಷ್ಠಿ ಕರೆದಿದ್ದ ಅವರು, ‘ಕೇಂದ್ರ ಸರ್ಕಾರ ಮತ್ತೆ ಉಚಿತ ಪಡಿತರ ಕೊಡಲು ಹೊರಟಿದೆ. ಇದು ಸರಿಯಲ್ಲ. ಇದು ದೇಶಕ್ಕೇ ಗಂಡಾಂತರದ ವಿಷಯವಾಗಿದ್ದು, ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುತ್ತದೆ, ಸರ್ಕಾರದ ಈ ನಡೆ ಸರಿಯಲ್ಲ; ಎಂದು ಹೇಳಿದ್ದಾರೆ.
‘ಹೋದ ವರ್ಷ ಲಾಕ್‌ಡೌನ್ ನಂತರವೂ ಮೂರು ತಿಂಗಳು ಕೇಂದ್ರ ಸರ್ಕಾರ ಉಚಿತ ಪಡಿತರ ನೀಡಿತ್ತು. ಇದರಿಂದ ಜನ ತಮ್ಮ ಕೆಲಸದ ಸ್ಥಳ ತೊರೆದು ಊರು ಸೇರುತ್ತಾರೆ. ಕೆಲಸಕ್ಕೆ ಬರುವುದಿಲ್ಲ. ಇದು ಕಾರ್ಖಾನೆ-ಕೈಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈಗಲೂ ಎರಡನೆ ಅಲೆ ಸಂದರ್ಭದಲ್ಲಿ ಮತ್ತೆ ಉಚಿತ ಪಡಿತರ ಕೊಡಲು ಹೊರಟಿದ್ದಾರೆ. ಇದರಿಂದ ಜನರು ಮನೆಯಲ್ಲೇ ಉಳಿದು ದುಡಿಯಲು ಬರುವುದಿಲ್ಲ. ಹೀಗಾಗಿ ಇದು ಕೈಗಾರಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ ’ ಎಂದು ಸಂಕೇಶ್ವರ್ ಅಭಿಪ್ರಾಯಪಟ್ಟರು.
‘ನಮ್ಮಂತಹ ವಿಚಿತ್ರ ದೇಶದಲ್ಲಿ ಹೀಗೆ ಉಚಿತ ಪಡಿತರ ನೀಡುವುದು ಸರಿಯಲ್ಲ. ಜನ ಕೆಲಸಕ್ಕೇ ಬರದಂತಾಗುತ್ತದೆ’ ಎಂದು ಅವರು ಹೇಳಿದರು.
ಆಮ್ಲಜನಕಕ್ಕೆ ನಿಂಬೆರಸ ಪರ್ಯಾಯ?
ಇದೇ ಸಂದರ್ಭದಲ್ಲಿ ಅವರು ಸದ್ಯ ತಲೆದೋರಿರುವ ಆಮ್ಲಜನಕ ಬಿಕ್ಕಟ್ಟಿಗೆ ತಮ್ಮದೇ ಆದ ಪರಿಹಾರವನ್ನೂ ಸೂಚಿಸಿದರು. ‘ಉಸಿರಾಟ ಸಮಸ್ಯೆ ಇರುವವರು, ಆಮ್ಲಜನಕ ಮಟ್ಟ ಕಡಿಮೆಯಾದವರು ಮೂಗಿನೊಳಗೆ ನಿಂಬೆರಸ ಹಾಕಿಕೊಂಡರೆ ಅರ್ಧ ಗಂಟೆಯಲ್ಲಿ ಸರಳವಾಗುತ್ತದೆ. ಇದರಿಂದ ರಕ್ತದಲ್ಲಿನ ಆಮ್ಲಜನಕ ವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.
‘ಈ ವಿಧಾನ ಅನುಸರಿಸಿದರೆ ಶೇ. 80ರಷ್ಟು ಆಮ್ಲಜನಕ ಹಾಸಿಗೆಗಳು ಖಾಲಿಯಾಗುತ್ತವೆ’ ಎಂದು ಹೇಳಿದರು.
ಕೊರೋನಾ ತಡೆಗೆ ಕೊಬ್ಬರಿ ಎಣ್ಣೆ
‘ಡಾ.ಬಿ.ಎಂ ಹೆಗಡೆ ಅವರು ಹೇಳಿರುವಂತೆ, ಮುಖ ಮತ್ತು ಮೂಗಿನ ಹೊಳ್ಳೆಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡರೆ ವೈರಸ್ ದೇಹ ಪ್ರವೇಶಿಸದಂತೆ ತಡೆಯಬಹುದು. ಬಿಸಿ ಅವಿ ಉಸಿರಾಡಿದರೆ ಕೋವಿಡ್‌ನಿಂದ ದೂರ ಉಳಿಯಬಹುದು. ನಾನು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಮೊದಲಿಗಿಂತ ಹೆಚ್ಚು ಪ್ರಯಾಣ ಮಾಡಿದರೂ ಯಾವುದೇ ಸೋಂಕು ತಗುಲಿಲ್ಲ’ ಎಂದು ಸಂಕೇಶ್ವರ್ ತಿಳಿಸಿದರು.
ಸರ್ಕಾರ ಎರಡು ದಿನ ವಿಳಂಬವಾದರೂ ಕೊವಿಡ್ ನಿಯಂತ್ರಣಕ್ಕೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇಂತಹ ಬೃಹತ್ ದೇಶದಲ್ಲಿ ಇಷ್ಟು ಮಾಡಿರುವುದೇ ದೊಡ್ಡ ಸಾಧನೆ ಎಂದು ಕೇಂದ್ರ ಸರ್ಕಾರವನ್ನು ಪ್ರಶಂಸಿದರು.
ಇದನ್ನೂ ಓದಿ: ಈ ಆರೋಗ್ಯ ಬಿಕ್ಕಟ್ಟಿಗೆ ಮೋದಿ ಸರ್ಕಾರದ ಅಸಮರ್ಥತೆಯೇ ಕಾರಣ: ಡಾ. ಪರಕಾಲ ಪ್ರಭಾಕರ್



It’s true and fact