ಮೇ 1 ರಿಂದ ಕೋವಿಡ್ ಲಸಿಕೆಗಳಿಗೆ ಮೂರು ವಿಭಿನ್ನ ಬೆಲೆಗಳು ಇರುತ್ತವೆ ಎಂದು ಕೇಂದ್ರ ಘೋಷಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯಗಳಿಗೆ ಉಚಿತ ಲಸಿಕೆ ಒದಗಿಸುವಂತೆ ಆಗ್ರಹಿಸಿದ್ದಾರೆ.
‘ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬಿಜೆಪಿ-ನೇತೃತ್ವದ ವ್ಯವಸ್ಥೆಯ ಬಲಿಪಶುಗಳನ್ನಾಗಿ ಮಾಡಬೇಡಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ‘ಲಸಿಕೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡಬೇಕು ಮತ್ತು ಇದು ಇನ್ನು ಮುಂದೆ ಚರ್ಚೆಯ ವಿಷಯವಲ್ಲ’ ಎಂದು ಅವರು ಹೇಳಿದ್ದಾರೆ.
ಈ ಕುರಿತು ಹಿಂದಿಯಲ್ಲಿ ತೀಕ್ಷ್ಣವಾದ ಟ್ವೀಟ್ ಮಾಡಿರುವ ಅವರು, “ಸಾಕಷ್ಟು ಚರ್ಚೆಯಾಗಿದೆ. ಇನ್ನು ಚರ್ಚೆ ಸಾಕು. ನಾಗರಿಕರು ಲಸಿಕೆಗಳನ್ನು ಉಚಿತವಾಗಿ ಪಡೆಯಬೇಕು. ಭಾರತವನ್ನು ಬಿಜೆಪಿ ನೇತೃತ್ವದ ವ್ಯವಸ್ಥೆಗೆ ಬಲಿಗೊಡಬೇಡಿ’ ಎಂದಿದ್ದಾರೆ.
ಕೇಂದ್ರವು ತನ್ನ ‘ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್ ವ್ಯಾಕ್ಸಿನೇಷನ್ ಸ್ಟಾಟರ್ಜಿ’ ಅಡಿಯಲ್ಲಿ, ಮೇ 1 ರಿಂದ ಲಸಿಕೆಗಳಿಗೆ ಮೂರು ವಿಭಿನ್ನ ಬೆಲೆಗಳು ಇರುತ್ತವೆ ಎಂದು ಘೋಷಿಸಿದ್ದು ಚರ್ಚೆಗೆ ಮತ್ತು ರಾಜ್ಯಗಳ ಆಕ್ಷೇಪಗಳಿಗೆ ಕಾರಣವಾಗಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400. ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಎಂದು ದರ ನಿಗದಿ ಮಾಡಿದೆ. ಭಾರತ್ ಬಯೋಟೆಕ್ ಕೊವಾಕ್ಸಿನ್ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಎಂದು ನಿಗದಿ ಮಾಡಿದೆ. ಆದರೆ ಎರಡೂ ಕಂಪನಿಗಳು ಕೇಂದ್ರಕ್ಕೆ ಮಾತ್ರ ಒಂದು ಡೋಸ್‌ಗೆ ಕೇವಲ 150 ರೂ. ದರ ನಿಗದಿ ಮಾಡಿವೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ನಿನ್ನೆ ಫೇಸ್‌ಬುಕ್ ಪೋಸ್ಟ್‌ನಲ್ಲಿ, ‘ರಾಜ್ಯಗಳಿಗಿಂತ ಕೇಂದ್ರವು ಅಗ್ಗವಾಗಿ ಲಸಿಕೆ ಪಡೆಯುತ್ತಿದೆ ಎಂಬ ವಾದ ಸುಳ್ಳು’ ಎಂದಿರುವುದು ಬಹುಪಾಲು ರಾಜ್ಯ ಸರ್ಕಾರಗಳಲ್ಲಿ ಆಕ್ರೋಶ ಮೂಡಿಸಿದೆ.
ಇದನ್ನೂ ಓದಿ: ಮೋದಿಯವರೆ ಬಾಯಿ ಬಡಾಯಿ ಬಿಟ್ಟಾಕಿ ಉಚಿತ ಲಸಿಕೆ ನೀಡಿ: ಸಿದ್ದರಾಮಯ್ಯ


