“ಜನರು ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಗಮನಹರಿಸಬೇಕು. ಕೋವಿಡ್‌ನಿಂದ ಸತ್ತವರೆಷ್ಟು ಎಂದು ಚರ್ಚೆ ಮಾಡುತ್ತ ಕೋಲಾಹಲ ಎಬ್ಬಿಸಿದರೆ ಮತ್ತೆ ಅವರು ಹುಟ್ಟಿ ಬರುತ್ತಾರಾ? ಕೋವಿಡ್ ಸಾವಿನ ಸಂಖ್ಯೆಯ ಕುರಿತ ಚರ್ಚೆಯಲ್ಲಿ ಯಾವುದೇ ಅರ್ಥವಿಲ್ಲ …” ಎಂದು ಹೇಳುವ ಮೂಲಕ ಹರಿಯಾಣ ಮುಖ್ಯಮಂತ್ರಿ, ಬಿಜೆಪಿ ನಾಯಕ ಮನೋಹರ ಲಾಲ್ ಕಟ್ಟರ್ ವಿವಾದಕ್ಕೆ ಈಡಾಗಿದ್ದು, ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಮ್ಲಜನಕದ ಕೊರತೆಯಿಂದಾಗಿ ಹಿಸಾರ್ ಜಿಲ್ಲೆಯಲ್ಲಿ ಸೋಮವಾರ ಐದು ಸಾವುಗಳು ಸಂಭವಿಸಿದ ನಂತರ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ರಾಜ್ಯದಲ್ಲಿ ಕೋವಿಡ್ ಸಾವುಗಳ ಸಂಖ್ಯೆಯನ್ನು ಮುಚ್ಚಿಟ್ಟು ಕಡಿಮೆ ತೋರಿಸಲಾಗುತ್ತಿದೆ ಎಂಬ ಆರೋಪದ ಕುರಿತು ಕೇಳಿದಾಗ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಆಮ್ಲಜನಕದ ಕೊರತೆಯಿಂದಾಗಿ ಹಿಸಾರ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಐದು ಸಾವುಗಳನ್ನು ಉಲ್ಲೇಖಿಸಿದ ಅವರು, ಲಭ್ಯವಿರುವ ಮೂಲಸೌಕರ್ಯಗಳ ಮಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. “ನಾವು ಯಾವ ರೀತಿಯ ಪರಿಸ್ಥಿತಿಯಲ್ಲಿದ್ದೇವೆ ಎಂದು ನೋಡಿ. ಡೇಟಾದೊಂದಿಗೆ ಆಟ ಆಡಲು ನಾವು ಬಯಸುವುದಿಲ್ಲ” ಎಂದು ಅವರು ಹೇಳಿದರು.
ಸೋಮವಾರ ಹಿಸಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ಐದು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ, ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಆಮ್ಲಜನಕದ ಕೊರತೆಯಿಂದಾಗಿ ಸಾವು ಸಂಭವಿಸಿವೆ. ಆದರೆ ಇದನ್ನು ನಿರಾಕರಿಸಿದ ಜಿಲ್ಲಾಡಳಿತವು ಆಸ್ಪತ್ರೆ ವಿರುದ್ಧ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ.
“ಕೋವಿಡ್ ರೋಗಿಗಳು ಹೇಗೆ ಗುಣಮುಖರಾಗುತ್ತಿದ್ದಾರೆ ಎಂಬುದಕ್ಕೆ ಮಹತ್ವ ನೀಡಬೇಕು. ಅದು ಬಿಟ್ಟು ಕೋವಿಡ್ ಕುರಿತ ಸಾವಿನ ಸಂಖ್ಯೆ ಬಗ್ಗೆ ಚರ್ಚೆ ಮಾಡಿ ಕೋಲಾಹಲ ಎಬ್ಬಿಸಿದರೆ, ಸತ್ತವರೇನು ಪುನರ್ಜನ್ಮ ಪಡೆಯುತ್ತಾರಾ?’ ಎಂದು ಪ್ರಶ್ನೆ ಮಾಡಿದ ಖಟ್ಟರ್, ಸಾಂಕ್ರಾಮಿಕದ ಬಗ್ಗೆ ನಿಮಗೆ ಅಥವಾ ನನಗೆ ಏನೂ ತಿಳಿದಿರಲಿಲ್ಲ. ಈ ಕಾಲದಲ್ಲಿ, ನೀವು (ಮೀಡಿಯಾ), ರೋಗಿಗಳು ಮತ್ತು ಎಲ್ಲರ ಸಹಕಾರ ನಮಗೆ ಬೇಕು’ ಎಂದು ಮನವಿ ಮಾಡಿದರು.
ಹರಿಯಾಣದಲ್ಲಿ ಸೋಮವಾರ 11,504 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 75 ಸಾವುಗಳು ದಾಖಲಾಗಿವೆ. ಹೋಲಿಕೆಯಲ್ಲಿ ತಮ್ಮಲ್ಲಿ ಪ್ರಕರಣ ಮತ್ತು ಸಾವು ಕಡಿಮೆ ಎಂದು ತೋರಿಸಲು ಅನೇಕ ರಾಜ್ಯಗಳು ಕೋವಿಡ್ ಸಾವುನೋವುಗಳನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಉತ್ತರಪ್ರದೇಶ, ಹರಿಯಾಣ ಮತ್ತು ಇತರ ಕೆಲವು ಬಿಜೆಪಿ ಆಡಳಿತ ಇರುವ ಸರ್ಕಾರಗಳು ಹೀಗೆ ಮಾಡುತ್ತ ಬಂದಿವೆ ಎಂದು ಆರೋಪಿಸಲಾಗಿದೆ.
“ನಾವು ಪ್ರತಿ ಜೀವವನ್ನು ಉಳಿಸಲು ಪ್ರಯತ್ನಿಸುತ್ತೇವೆ. ಸಾವುಗಳು ಕಡಿಮೆಯಿವೆ ಅಥವಾ ಹೆಚ್ಚಾಗಿವೆ ಎಂದು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮ ವ್ಯವಸ್ಥೆಗಳನ್ನು ಸರಿಪಡಿಸಲು ನಾವು ಸಮರ್ಥರಾಗಿದ್ದೇವೆ. ನಾವು ಏನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂಬುದು ಮುಖ್ಯವಷ್ಟೇ” ಎಂದು ಖಟ್ಟರ್ ಹೇಳಿದ್ದಾರೆ.
ಕೋವಿಡ್ ರೋಗ ಮತ್ತು ಅದರ ಪರಿಣಾಮದ ಕುರಿತಾದ ಪ್ರಶ್ನೆಗಳಿಗೆ ತಮ್ಮ ಆಡಳಿತವು ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ!


