ಏಪ್ರಿಲ್ 28 ರಂದು, ಕೇಂದ್ರವು ತನ್ನ ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಮೂರನೇ ಹಂತದ ಲಸಿಕೆಗಾಗಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೋಂದಣಿಯನ್ನು ತೆರೆಯಿತು. ಈಗ ಒಂದರ ಹಿಂದೆ ಒಂದು ರಾಜ್ಯಗಳು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭಿಸುವುದು ಕಷ್ಟ ಎಂದು ಘೋಷಿಸುತ್ತಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಾರಣವೆಂದರೆ ಲಸಿಕೆ ದಾಸ್ತಾನು ಸಂಗ್ರಹಿಸಲು ಆಗದಿರುವುದು ಮತ್ತು 18-45 ಗುಂಪಿಗೆ ವಿಸ್ತರಿಸುವ ಮೊದಲು ಈಗಾಗಲೇ ಮೊದಲ ಡೋಸ್ ಪಡೆದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಬೇಕಿರುವುದು.
ತಡರಾತ್ರಿ ವಿಡಿಯೋ ಪೋಸ್ಟ್ ಮಾಡಿರುವ ಬಿಜೆಪಿ ಆಡಳಿತದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ತಮ್ಮ ರಾಜ್ಯವು ಮೇ 1 ರಂದು 18-45 ವಯೋಮಾನದವರಿಗೆ ಲಸಿಕೆ ಹಾಕುವುದನ್ನು ಪ್ರಾರಂಭಿಸುವುದಿಲ್ಲ. ಆದರೆ 45 ವರ್ಷಕ್ಕಿಂತ ಹೆಚ್ಚಿನ ವಯಸ್ಕರಿಗೆ ಲಸಿಕೆ ನೀಡುವುದನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ.
“ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ತಯಾರಕರನ್ನು ಸಂಪರ್ಕಿಸಿದಾಗ, ಮೇ 1 ರಂದು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಮಗೆ ಡೋಸೇಜ್ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದ್ದರಿಂದ ಯುವಜನರನ್ನು ಒಳಗೊಳ್ಳುವ ಅಭಿಯಾನ ಮೇ 1 ರಿಂದ ಪ್ರಾರಂಭವಾಗುವುದಿಲ್ಲ” ಎಂದು ತಿಳಿಸಿದ್ದಾರೆ.
ಕೋ-ವಿನ್ ಪ್ಲಾಟ್‌ಫಾರ್ಮಿನಲ್ಲಿ ಬುಧವಾರ ಮಧ್ಯರಾತ್ರಿಯ ಹೊತ್ತಿಗೆ, 1.33 ಕೋಟಿ ಹೊಸ ಸೈನ್‌ಇನ್‌ಗಳಿವೆ. ಅಂದರೆ ಅಷ್ಟು ಜನರು ಲಸಿಕೆ ನೋಂದಣಿಗೆ ಯತ್ನಿಸಿದ್ದಾರೆ.. ಈ ತಿಂಗಳ ಆರಂಭದಲ್ಲಿ, ಕೇಂದ್ರವು ಇಡೀ ವಯಸ್ಕ ಜನಸಂಖ್ಯೆಗೆ ಲಸಿಕೆ ತೆರೆಯುವುದಾಗಿ ಘೋಷಿಸಿತ್ತು ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಕೋವಿಶೀಲ್ಡ್) ಮತ್ತು ಭಾರತ್ ಬಯೋಟೆಕ್ (ಕೊವಾಕ್ಸಿನ್) ತಮ್ಮ ಹೊಸ ಶೇ.50 ರಷ್ಟು ಲಸಿಕೆಗಳನ್ನು ನೇರವಾಗಿ ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡಲು ಅವಕಾಶ ನೀಡಿತು.
ಮೇ 3 ರ ಸುಮಾರಿಗೆ ಮಧ್ಯಪ್ರದೇಶವು ಲಸಿಕೆ ಪ್ರಮಾಣವನ್ನು ಪಡೆಯಬೇಕೆಂದು ಆಶಿಸುತ್ತಿದೆ ಎಂದು ಚೌಹಾಣ್ ಹೇಳಿದರು. “ಅದರ ನಂತರ ನಾವು ಯುವಜನರಿಗೆ ಲಸಿಕೆ ನೀಡುವ ಅಭಿಯಾನದ ಚಾಲನೆಗೆ ಅಂತಿಮ ಆಕಾರವನ್ನು ನೀಡುತ್ತೇವೆ. ತಾಳ್ಮೆಯಿಂದಿರಿ ಮತ್ತು ಭಯಪಡುವ ಅಗತ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ. ರಾಜ್ಯವು ಈಗಾಗಲೇ ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ಗಳಿಗೆ ಆರ್ಡರ್ ಸಲ್ಲಿಸಿದೆ.
ಎರಡನೇ ಡೋಸ್‌ಗೆ ಅರ್ಹರಾದವರಿಗೆ ರಾಜ್ಯ ಆದ್ಯತೆ ನೀಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ, “ಇದಕ್ಕಾಗಿ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಧಾವಿಸುವ ಅಗತ್ಯವಿಲ್ಲ. ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅನ್ನು 6-8 ವಾರಗಳಲ್ಲಿ ಮತ್ತು ಕೋವಾಕ್ಸಿನ್ ಅನ್ನು 4-6 ವಾರಗಳಲ್ಲಿ ತೆಗೆದುಕೊಳ್ಳಬೇಕು. ಎರಡನೇ ಡೋಸ್ ತೆಗೆದುಕೊಳ್ಳುವವರಿಗೆ ಆದ್ಯತೆ ನೀಡಿದ ನಂತರವೇ ಮೊದಲ ಡೋಸ್‌ನ ಸ್ಲಾಟ್ ಅನ್ನು ಆನ್‌ಲೈನ್ ಬುಕಿಂಗ್‌ಗೆ ಅನುಮತಿಸಲಾಗುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ
ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಕೂಡ ಮೇ 1 ರಂದು ಯುವಕರಿಗೆ ಲಸಿಕಾ ಅಭಿಯಾನ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸಿವೆ.
ಎರಡನೇ ಡೋಸ್‌ಗೆ ಆದ್ಯತೆ
ಭೀತಿ ಮತ್ತು ಅನಿಶ್ಚಿತತೆಯನ್ನು ತಪ್ಪಿಸಲು, ಬಿಜೆಪಿ ಮತ್ತು ಬಿಜೆಪಿಯೇತರ ಆಡಳಿತದ ಹಲವಾರು ರಾಜ್ಯಗಳು 18-45 ವಯೋಮಾನದವರಿಗೆ ವ್ಯಾಕ್ಸಿನೇಷನ್ ಮೇ 1 ರಿಂದ ಪ್ರಾರಂಭವಾಗುವುದಿಲ್ಲ ಎಂದು ಜನರಿಗೆ ಮಾಹಿತಿ ನೀಡಲು ಆರಂಭಿಸಿವೆ. ಲಸಿಕೆ ತಯಾರಕರಿಂದ ಹೆಚ್ಚಿನ ಪ್ರಮಾಣವನ್ನು ಸಂಗ್ರಹಿಸಲು ಯಾವುದೇ ರಾಜ್ಯಗಳಿಗೆ ಸಾಧ್ಯವಾಗಿಲ್ಲ. ಈಗ ಉಳಿದಿರುವ ಲಸಿಕೆ ಸಂಗ್ರಹದಲ್ಲಿ, ಮೊದಲ ಡೋಸ್ ಪಡೆದ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುವುದು ರಾಜ್ಯಗಳ ಆದ್ಯತೆಯಾಗಿದೆ.
ಸೀರಮ್ ಸಂಸ್ಥೆ ಮಹಾರಾಷ್ಟ್ರಕ್ಕೆ 3 ಲಕ್ಷ ಡೋಸ್ ನೀಡಲು ಒಪ್ಪಿಗೆ ಸೂಚಿಸಿದೆ. ಆರೋಗ್ಯ ಸಚಿವ ರಾಜೇಶ್ ಟೊಪೆ, ರಾಜ್ಯವು ಇಷ್ಟು ಸಣ್ಣ ದಾಸ್ತಾನು ಮೂಲಕ ಸಾಮೂಹಿಕ ಲಸಿಕಾ ಅಭಿಯಾನ ಪ್ರಾರಂಭಿಸುವುದಿಲ್ಲ. “18-44 ವರ್ಷ ವಯಸ್ಸಿನವರಿಗೆ ಮುಂದಿನ ಹಂತದ ವ್ಯಾಕ್ಸಿನೇಷನ್ ಪ್ರಾರಂಭಿಸಲು ನಾವು ಕನಿಷ್ಠ 25-30 ಲಕ್ಷಗಳನ್ನು ಹೊಂದಿರಬೇಕು” ಎಂದು ಅವರು ಹೇಳಿದರು.
ರಾಷ್ಟ್ರದ ರಾಜಧಾನಿ ದೆಹಲಿಯ ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು, ರಾಜ್ಯವು ಸಾಕಷ್ಟು ಲಸಿಕೆಗಳನ್ನು ಹೊಂದಿಲ್ಲ ಎಂದು ಹೇಳಿದರು. “ನಾವು ಆಯಾ ಕಂಪನಿಗಳಿಂದ ಲಸಿಕೆಗಳನ್ನು ಪೂರೈಸಲು ವಿನಂತಿಸಿದ್ದೇವೆ. ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದರೂ, ಅಭಿಯಾನ ಪ್ರಾರಂಭವಾಗಲು ಲಸಿಕೆಗಳ ಲಭ್ಯತೆ ಅನಿವಾರ್ಯವಾಗಿದೆ. ನಾವು ಲಸಿಕೆಗಳನ್ನು ಸ್ವೀಕರಿಸಿದ ತಕ್ಷಣ, ಒಂದೆರಡು ದಿನಗಳಲ್ಲಿ ವಿವರ ತಿಳಿಸುತ್ತೇವೆ. ಕಂಪೆನಿಗಳಿಂದ ನಾವು ಇನ್ನೂ ವೇಳಾಪಟ್ಟಿಯನ್ನು ಸ್ವೀಕರಿಸಿಲ್ಲ, ಇದರಲ್ಲಿ ಯಾವ ದಿನಾಂಕಗಳಲ್ಲಿ ಎಷ್ಟು ಬಾಟಲುಗಳು ತಲುಪುತ್ತವೆ ಗೊತ್ತಿಲ್ಲ” ಎಂದು ಜೈನ್ ಹೇಳಿದರು.
ಬಿಜೆಪಿ ಆಡಳಿತದ ಗುಜರಾತ್‌ನ ಮುಖ್ಯಮಂತ್ರಿ ವಿಜಯ್ ರೂಪಾನಿ, ಅಗತ್ಯವಾದ ಸ್ಟಾಕ್ ಅನ್ನು ಪೂರೈಸದ ಕಾರಣ 18 ವರ್ಷಕ್ಕಿಂತ ಹೆಚ್ಚಿನವರಿಗೆ ಲಸಿಕೆ ತೆರೆಯಲು ತಮ್ಮ ರಾಜ್ಯಕ್ಕೆ ಸಾಧ್ಯವಾಗದಿರಬಹುದು ಎಂದು ಹೇಳಿದರು. ರಾಜ್ಯವು 2.5 ಕೋಟಿ ಡೋಸ್‌ಗಳನ್ನು ಆದೇಶಿಸಿದೆ. ಮೇ ತಿಂಗಳ ಮೊದಲ 15 ದಿನಗಳಲ್ಲಿ ಆರ್ಡರ್‌ನ ಒಂದು ಭಾಗವಾದರೂ ಲಭ್ಯವಾಗಲಿದೆ ಎಂದು ಅವರು ನಿರೀಕ್ಷಿಸಿದ್ದಾರೆ. “ನಾವು ಲಸಿಕೆ ಪ್ರಮಾಣವನ್ನು ಸ್ವೀಕರಿಸುತ್ತೇವೆ ಮತ್ತು 15 ದಿನಗಳಲ್ಲಿ ನಾವು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ (18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ)” ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಎಲ್ಲರಿಗೂ ವ್ಯಾಕ್ಸಿನೇಷನ್ ಪ್ರಾರಂಭಿಸುವುದು ಪಂಜಾಬ್‌ನಲ್ಲೂ ಅನಿಶ್ಚಿತವಾಗಿದೆ. “ಕೋವಾಕ್ಸಿನ್ ಆದೇಶಕ್ಕಾಗಿ ನಾವು ಇನ್ನೂ ಭಾರತ್ ಬಯೋಟೆಕ್ ಅನ್ನು ಸಂಪರ್ಕಿಸಿರಲಿಲ್ಲ. ಏಕೆಂದರೆ ಅವುಗಳ ಬೆಲೆಗಳು ಹೆಚ್ಚಿನ ಪ್ರಮಾಣದಲ್ಲಿತ್ತು (ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ.) ಆದರೆ ಇಂದು ಅವರು ಅದನ್ನು ರಾಜ್ಯಗಳಿಗೆ ಡೋಸ್‌ಗೆ 400 ರೂ.ಗೆ ಇಳಿಸಿದ್ದಾರೆ, ಆದ್ದರಿಂದ ನಾವು ಈಗ ಅದನ್ನು ಪರಿಗಣಿಸುತ್ತೇವೆ” ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಹುಸೇನ್ ಲಾಲ್ ಹೇಳಿದರು. ಲಸಿಕೆ ಪೂರೈಕೆಯ ಬಗ್ಗೆ ಯಾವುದೇ ದೃಢೀಕರಣವಿಲ್ಲದ ಕಾರಣ 18ಕ್ಕೆ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆಯನ್ನು ರಾಜ್ಯ ಇನ್ನೂ ಅಂತಿಮಗೊಳಿಸಿಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಸಾಕಷ್ಟು ಲಸಿಕೆ ಲಭ್ಯತೆ ಇಲ್ಲದ ಕಾರಣದಿಂದ ನಂತರವೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ


