Homeಮುಖಪುಟನೀವು ಹೂಗಳನ್ನು ಕತ್ತರಿಸಬಹುದು, ವಸಂತವನ್ನು ತಡೆಯಲಾಗದು..

ನೀವು ಹೂಗಳನ್ನು ಕತ್ತರಿಸಬಹುದು, ವಸಂತವನ್ನು ತಡೆಯಲಾಗದು..

- Advertisement -
- Advertisement -

ಅನುಮಾನ ಮತ್ತು ಹತಾಶೆಯ ಸಮಯದಲ್ಲಿ, ಪ್ಯಾಬ್ಲೊ ನೆರುಡಾ ಅವರ ಒಂದು ಸಾಲನ್ನು ನೆನಪಿಸಿಕೊಳ್ಳಿ: “ನೀವು ಎಲ್ಲಾ ಹೂವುಗಳನ್ನು ಕತ್ತರಿಸಬಹುದು, ಆದರೆ ವಸಂತದ ಆಗಮನವನ್ನು ತಡೆಯಲು ಸಾಧ್ಯವಿಲ್ಲ….”.

ಸಂವಹನಗಳೆಲ್ಲವನ್ನೂ ಕಡಿತಗೊಳಿಸಲು ಏನೇನು ಸಾಧ್ಯವೋ ಸರ್ಕಾರ ಅವೆಲ್ಲವನ್ನೂ ಮಾಡಿದೆ. ರಸ್ತೆಗಳನ್ನು ನಿರ್ಬಂಧಿಸಲಾಗಿದೆ; ಟ್ರಾಕ್ಟರುಗಳು ನಗರಕ್ಕೆ ಪ್ರವೇಶಿಸದಂತೆ ಕಂದಕಗಳನ್ನು ತೋಡಲಾಗಿದೆ; ಗಡಿಗಳನ್ನು ದಾಟಲು ಪ್ರಯತ್ನಿಸುವವರನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸಲು ಮತ್ತು ನೋಯಿಸಲು ಮೊನಚಾದ ಮೊಳೆಗಳ ಹಾಸಿಗೆಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲ, ಅಪಾರ ಸಂಖ್ಯೆಯ ಸಶಸ್ತ್ರ ಪೊಲೀಸ್ ಪಡೆಗಳನ್ನು, ’ದೇಶದ್ರೋಹಿಗಳು, ಆಂದೋಲನ ಜೀವಿಗಳು, ಪರಾವಲಂಬಿಗಳು’ ಎಂದೆಲ್ಲ ವಿಭಿನ್ನವಾಗಿ ಕರೆಯಲ್ಪಡುವ ಶತ್ರುಗಳನ್ನು, ದೇಶದ ಶತ್ರುಗಳನ್ನು ಕಾಯಲು ಕಾವಲು ಹಾಕಲಾಗಿದೆ!

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಕರಿನೆರಳು ವಿಸ್ತಾರವಾಗಿದೆ. ಎಲ್ಲಾ ಹಿಂದೂ ಪುರಾಣಗಳು ಮತ್ತು ಆಚರಣೆಗಳು ಈ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತವೆ ಎಂಬ ನಂಬಿಕೆಯನ್ನು ಹೊಂದಿರುವ ಮತ್ತು ಬೇರೆಯದೇನನ್ನು ಅರ್ಥ ಮಾಡಿಕೊಳ್ಳದ ನಮ್ಮ ನಿರಂಕುಶ ನಾಯಕ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲು ಕೊಡುಗೆ ನೀಡಿದ್ದಾರೆ. ಇದು ಅಪಾಯಕಾರಿ, ಆದರೆ ರೈತ ಚಳವಳಿಯ ನಾಯಕರೊಬ್ಬರು ಹೇಳಿದಂತೆ, ಜೀವನೋಪಾಯವನ್ನೇ ನಾಶ ಮಾಡಲಿರುವ ಕೃಷಿ ಕಾನೂನುಗಳು ಇನ್ನೂ ಅಪಾಯಕಾರಿ, ಅಂದರೆ ಈಗಿನ ಪರಿಸ್ಥಿತಿಗಿಂತಲೂ ಅಪಾಯಕಾರಿ. ವಾಸ್ತವವಾಗಿ, ರೈತರು ಭಯಭೀತರಾಗಲು ಅವರಿಗೆ ಅವಕಾಶವಿಲ್ಲ.

ಡಿಜಿಟಲ್ ಯುಗದಲ್ಲೂ ಸುದ್ದಿ ಗಡಿಗಳನ್ನು ದಾಟದೆ ತಡೆಯಲಾಗಿರುವ ದೆಹಲಿ, ಆಕ್ರಮಣಕ್ಕೊಳಗಾಗಿರುವ ನಗರ ಎಂದು ಭಾಸವಾಗುತ್ತಿದೆ. ವಿಧೇಯ ರಾಷ್ಟ್ರೀಯ ಮಾಧ್ಯಮಗಳು ಅದನ್ನು ನೋಡಿಕೊಳ್ಳುತ್ತಿವೆ. ಸರ್ಕಾರದ ಅಧಿಕೃತ ಮಾಧ್ಯಮವನ್ನು ಬಿಡಿ, ಸರ್ಕಾರ ಮತ್ತು ಕಾರ್ಪೊರೇಟ್‌ಗಳಿಂದ ಯಥೇಚ್ಛ ಜಾಹೀರಾತುಗಳನ್ನು ಪಡೆಯುವ ಖಾಸಗಿ ಮಾಧ್ಯಮಗಳು ಕೂಡ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಅವುಗಳು ಲಾಭದಾಯಕ ಜಾಹೀರಾತುಗಳಿಂದ ಆಮಿಷಕ್ಕೊಳಗಾಗಿ ಹೇಳಿದಂತೆ ಕೇಳಿಕೊಂಡು ಇರದಿದ್ದರೆ, ಕಾನೂನು ಮತ್ತು ತೆರಿಗೆ ಕಿರುಕುಳದ ಬೆದರಿಕೆ ಎದುರಿಸಬೇಕಿದೆ. ಅದನ್ನು ಮೀರಿ ನಡೆದರೆ, ಅಂತಹ ಮಾಧ್ಯಮಗಳು ಈ ಆಡಳಿತದಿಂದ ವಿವಿಧ ಆಯಾಮಗಳಲ್ಲಿ ಕಿರುಕುಳ ಅನುಭವಿಸಬೇಕಿದೆ ಮತ್ತು ವಿತ್ತೀಯ ಸಂಕಷ್ಟವನ್ನೂ ಎದುರಿಸಬೇಕಾಗಿ ಬರಬಹುದು.

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಈ ಸರ್ಕಾರವು ಎಲ್ಲಾ ಭಿನ್ನಮತೀಯರನ್ನು ಮತ್ತು ಗಡಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ’ದೇಶದ್ರೋಹಿಗಳನ್ನು’ ಮೌನಗೊಳಿಸುವುದು ತನ್ನ ಕರ್ತವ್ಯವೆಂದು ಭಾವಿಸಿದೆ. ಆದ್ದರಿಂದ ಫೇಕ್ ಸುದ್ದಿಗಳು, ’ಉತ್ಪಾದಿಸಲ್ಪಟ್ಟ’ ಸುದ್ದಿಗಳು ಮತ್ತು ಪ್ರೊಪೋಗಾಂಡಾಗಳನ್ನು ಸಾರ್ವಜನಿಕರಿಗೆ ಉಣಬಡಿಸಿ, ರೈತರ ಹೋರಾಟಕ್ಕೆ ಸಿಗುತ್ತಿರುವ ಸಾರ್ವಜನಿಕ ಬೆಂಬಲವನ್ನು ಹಿಮ್ಮೆಟ್ಟಿಸುವ ಯತ್ನ ಮಾಡಲಾಗುತ್ತಿದೆ. ರೈತರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುವ ಯತ್ನ ಮುಂದುವರಿಯುತ್ತಲೇ ಇದೆ.

ಆದರೆ, ಇಂತಹ ಸನ್ನಿವೇಶ-ಸಂದರ್ಭಗಳಲ್ಲಿ ಒಂದು ವಿಪರ್ಯಾಸವನ್ನು ಗಮನಿಸಬಹುದು. ಯಾವುದೇ ಕ್ರಿಯೆ ಅದಕ್ಕೆ ಪ್ರತಿಕ್ರಿಯೆಯನ್ನು ಹುಟ್ಟುಹಾಕಿ, ನೇರ ಪರಿಸ್ಥಿತಿಯಲ್ಲಿ, ತಾರ್ಕಿಕ ಕಾರಣಗಳು ಮತ್ತು ಐಡಿಯಾಗಳ ಸಹಾಯದಿಂದ, ವಿರೋಧಿ ರಾಜಕೀಯ ಪ್ರವೃತ್ತಿಗಳು ಹಂತಹಂತವಾಗಿ ಬೆಳೆಯುತ್ತವೆ. ಎಲ್ಲಾ ಸಂವಹನಗಳನ್ನು ಕಡಿತಗೊಳಿಸುವುದರ ಮೂಲಕ ಮತ್ತು ನೈಜ ಸಂವಾದಗಳನ್ನು ಮುಚ್ಚುವ ಮೂಲಕ ಸರ್ಕಾರವು ಭಿನ್ನಾಭಿಪ್ರಾಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಲು ಎಷ್ಟು ಪ್ರಯತ್ನಿಸುತ್ತದೆಯೋ, ಸಂವಹನದ ಹೊಸ ಮಾರ್ಗಗಳನ್ನು ರೈತರ ಸಾಮೂಹಿಕ ಹೋರಾಟ ಆವಿಷ್ಕರಿಸುತ್ತಿದೆ. ಭಿನ್ನಾಭಿಪ್ರಾಯದ ವಲಯವು ವಿಸ್ತರಿಸಿದಂತೆ, ಸಂವಹನಗಳನ್ನು ಕ್ರೂರವಾಗಿ ತಡೆಯುವ ಕ್ರಿಯೆ, ಈ ಮೊದಲು ಕಾಣಿಸದ ಹೊಸ ಬಂಧ-ಸಂಬಂಧಗಳನ್ನು ಸೃಷ್ಟಿಸುತ್ತಿದೆ. ಭೂಕಂಪಗಳಂತಹ ವಿಪತ್ತುಗಳನ್ನು ನಿಭಾಯಿಸಲು ಜನರು ಹೆಚ್ಚಿನ ಐಕ್ಯೆತೆಯಿಂದ ವರ್ತಿಸುತ್ತಾರೆ ಎಂಬುದು ಸಾಮಾಜಿಕ ನಡವಳಿಕೆಯ ಪ್ರಸಿದ್ಧ ಲಕ್ಷಣವಾಗಿದೆ. ಇಂತಹುದ್ದೇ ಏನೋ ನಡೆಯುತ್ತಿದೆ ಎಂಬುದನ್ನು ಈ ರೈತ ಹೋರಾಟದ ಸನ್ನಿವೇಶ ತೋರಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ, ಸಮಸ್ಯೆಗಳನ್ನು ಕ್ರಮೇಣ ನಿವಾರಣೆಗೊಳ್ಳುತ್ತವೆ. ಸ್ವಲ್ಪ ಸಮಯದ ಹಿಂದೆ ಸಾಧಿಸಲು ಅಸಾಧ್ಯವೆಂದು ತೋರುತ್ತಿದ್ದುದು, ಈಗ ಸಂಪೂರ್ಣವಾಗಿ ಸಾಧ್ಯವೆಂದು ತೋರುತ್ತದೆ.

ಸಮಾಜದಲ್ಲಿನ ಸಾಂಪ್ರದಾಯಿಕ ಅಡೆತಡೆಗಳು ಮತ್ತು ಸಾಮಾಜಿಕ ವಿಭಜನೆ-ತಾರತಮ್ಯಗಳನ್ನು ನಿವಾರಿಸಲು ಪ್ರಾರಂಭಿಸಿದಾಗ ಮಾತ್ರ ಪ್ರಭುತ್ವದ ಸರ್ವಾಧಿಕಾರಿ ಹೇರಿಕೆಯ ವಿರುದ್ಧ ಹೋರಾಡಲು, ಪರ್ವತಗಳನ್ನು ದೂಡಬಹುದಾದ ಐಕ್ಯತೆಯ ಶಕ್ತಿಯು ಸಾಕಾರವಾಗುವುದು. ಬಹುಶಃ ವಿಶ್ವದ ಇತರ ದೇಶಗಳಿಗಿಂತ ಹೆಚ್ಚಾಗಿ ಭಾರತವು ಇಂತಹ ಅನೇಕ ಅಡೆತಡೆಗಳನ್ನು ಹೊಂದಿದೆ. ’ವೈವಿಧ್ಯತೆಯಲ್ಲಿ ಏಕತೆ’ ಎಂಬ ಘೋಷಣೆಯಡಿಯಲ್ಲಿ ಅಂತಹ ದೋಷಗಳನ್ನು ಮುಚ್ಚಿಹಾಕುವ ಸಂಪ್ರದಾಯವಿದೆ. ಆದರೆ ಚಳುವಳಿಯ ನಿಜವಾದ ಶಕ್ತಿಯು ಅಂತಹ ನೈತಿಕ ಘೋಷವಾಕ್ಯಗಳ ಮೇಲೆ ಅವಲಂಬಿತ ಆಗಿರುವುದಿಲ್ಲ. ಈ ವೈವಿಧ್ಯತೆಗಳನ್ನು ವಿವೇಕಯುತವಾಗಿ ನಿರ್ವಹಿಸುವ ಮೂಲಕ ನಿಜವಾದ ಐಕ್ಯತೆಯನ್ನು ರೂಪಿಸಬೇಕಾಗಿದೆ. ಈ ರೈತ ಚಳವಳಿಯಲ್ಲಿರುವ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, ಈ ಹೋರಾಟ ಸಾಂದರ್ಭಿಕವಾಗಿ ಅಂತರ್ಗತವಾಗಿ ಹುಟ್ಟಿದ್ದು ಮತ್ತು ಯಾವುದೇ ಸಿದ್ಧಾಂತಗಳಿಗೆ ಒಳಪಡದ ಇದರ ತಿಳುವಳಿಕೆ, ರಾಜಕೀಯ ಪಕ್ಷಗಳಿಗಿಂತ ಹೆಚ್ಚು ತೀವ್ರವಾಗಿದೆ. ಆದುದರಿಂದಲೇ ಇದು ರಾಜಕೀಯ ಪಕ್ಷಗಳ ಚಳುವಳಿಗಳಿಗಿಂತ ಭಿನ್ನವಾಗಿದೆ. ಇದು ಈ ರೀತಿ ಮುಂದುವರಿದರೆ, ಅದು ತನ್ನ ಬಲವನ್ನು ವೃದ್ಧಿಸಿಕೊಂಡು ಹೋಗುವ ಸಾಧ್ಯತೆಯಿದೆ ಮತ್ತು ಬಹುಶಃ ಇದು ಭಾರತದ ರಾಜಕೀಯಕ್ಕೆ ಹೊಸ ದಿಕ್ಕನ್ನು ಸೂಚಿಸುತ್ತದೆ. ವಸಂತದ ಆಗಮನವು ಈಗ ಸಾಧ್ಯವಾಗಿದ್ದು, ಹಾ, ಬಹುಶಃ ಅದು ನಿಶ್ಚಿತವಾಗಿದ ಕೂಡ.

ಹಿಂದೂ ಸಮಾಜವು ಜಾತಿ ಮತ್ತು ಉಪಜಾತಿಗಳ ವಿಷಯದಲ್ಲಿ ಸಾಮಾಜಿಕ ವಿಭಜನೆಗಳ ಚಕ್ರವ್ಯೂಹವಾಗಿದೆ. ಈ ದೃಷ್ಟಿಕೋನದಿಂದ, ರೈತ ಚಳುವಳಿಯು ಮೂಲತಃ ಹೆಚ್ಚಾಗಿ ಸಿಖ್ ರೈತರ ನೇತೃತ್ವ ವಹಿಸಲ್ಪಟ್ಟಿತ್ತು ಎಂಬ ಅಂಶವು ಪ್ರಯೋಜನಕಾರಿಯಾಗಿದೆ. ಬಹುಸಂಖ್ಯಾತರ ರಾಜಕಾರಣಕ್ಕಷ್ಟೇ ಈ ದೇಶದಲ್ಲಿ ಭವಿಷ್ಯವಿದೆ ಎಂಬ ಮಿಥ್ಯವನ್ನು ಅದು ಒಡೆದು ಹಾಕಿದೆ. ಅಲ್ಲದೆ, ಪಂಜಾಬ್‌ನಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಗಳಿವೆ (ಸುಮಾರು ಮೂರನೇ ಒಂದು ಭಾಗದಷ್ಟು). ಸಣ್ಣ ಮತ್ತು ದೊಡ್ಡ ಭೂಮಿಯನ್ನು ಹೊಂದಿರುವ ಜಾಟ್ ರೈತರು ಮತ್ತು ದಲಿತರು ಇದರಲ್ಲಿ ಇದ್ದಾರೆ. ಈ ಎರಡು ಸಮುದಾಯಗಳ ನಡುವೆ ವಿಭಜನೆಯಿದೆ. ಭೂರಹಿತ ಕೂಲಿಕಾರರಲ್ಲಿ ದಲಿತರೇ ಹೆಚ್ಚಿದ್ದಾರೆ. ವರ್ಗ ಮತ್ತು ಜಾತಿ ವಿಭಜನೆ ಭಾರತದ ಇತರೆಡೆಗಳಂತೆ ಬಹಳ ದೊಡ್ಡ ಪ್ರಮಾಣದಲ್ಲಿ ಇಲ್ಲೂ ಇದೆ. ಗಡಿಯಲ್ಲಿ ರೈತರು ಅನಿರ್ದಿಷ್ಟವಾಗಿ ಕ್ಯಾಂಪ್ ಮಾಡುತ್ತಿದ್ದಂತೆ, ’ಎಲ್ಲರಿಗೂ ಸೇವೆ’ ಎಂಬ ಗುರುದ್ವಾರ ಸಂಸ್ಕೃತಿಯು, ಎಲ್ಲ ಸೇರಿ ಊಟ ಮಾಡುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದು ಮುಂತಾದವುಗಳನ್ನು ಒಂದು ಮಟ್ಟಿಗೆ ಜಾರಿಗೆ ತಂದಿದೆ. ಇದು ಸ್ವಲ್ಪವಾದರೂ ಬೇಧವನ್ನು ತೊಡೆದುಹಾಕಲು ಸಹಕರಿಸಿದೆ. ಇಷ್ಟಾದರೂ ಕೂಡ, ಮೊದಲಿಗೆ ಇದು ಕೇವಲ ಸಾಂಕೇತಿಕವಾಗಿ ಉಳಿದಿತ್ತು, ಆದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಕ್ಕರೆ, ಒಂದೇ ಆಹಾರ ಭದ್ರತೆ ವ್ಯವಸ್ಥೆಯಲ್ಲಿ, ಎರಡೂ ಬದಿಗಳಲ್ಲಿನ ಬಡವರಿಗೆ ಇದು ಅನುಕೂಲವಾಗಲಿದೆ ಎಂಬ ಸಂದೇಶ ರವಾನೆಯಾಗತೊಡಗಿದಾಗ, ಅದು ಸಾಂಕೇತಿಕತೆಯಿಂದ ತಿಳಿವಳಿಕೆಯ ಸ್ವರೂಪ ಪಡೆಯತೊಡಗಿತು.

ಮೂರು ಕಾನೂನುಗಳನ್ನು ಸೂಕ್ಷ್ಮವಾಗಿ ಓದಿದರೆ, ಕನಿಷ್ಟ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧಗೊಳಿಸಲು ನಿರಾಕರಿಸುವ ಮೂಲಕ, ಆಹಾರ ಭದ್ರತಾ ವ್ಯವಸ್ಥೆಯನ್ನು ಕೆಡವಲು ಸರ್ಕಾರ ಹೇಗೆ ನಿರ್ಧರಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಸಂಸ್ಕರಿಸಿದ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಸಂಗ್ರಹಣೆಯನ್ನು ಅನಿಯಂತ್ರಣಗೊಳಿಸುವ ಮೂಲಕ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಈ ಕಾನೂನುಗಳು ಬೆಂಬಲಿಸುತ್ತವೆ.

ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು (ಉದಾಹರಣೆಗೆ ಅಕ್ಕಿ), ತೆರಿಗೆ ಇಲ್ಲದೆ ಎಲ್ಲಿಯಾದರೂ ಇ-ವ್ಯಾಪಾರ ಮಾಡುವ ಖರೀದಿಗೆ ಅವಕಾಶವಿದೆ.

ಗಡಿಯಲ್ಲಿ ಕೇಳಿದ ಒಂದು ತಮಾಷೆಯ ಪ್ರಕಾರ, ಈ ಖರೀದಿಯ ಆದ್ಯತೆಯ ಸ್ಥಳಗಳು ಪಿಎಂಒ (ಪ್ರಧಾನಿ ಕಚೇರಿ) ಕೂಡ ಒಂದು ಏಕೆಂದರೆ ಪ್ರಧಾನಮಂತ್ರಿಯ ಸಮೀಪವರ್ತಿಗಳಾದ ಇಬ್ಬರು ಗುಜರಾತಿ ಉದ್ಯಮಿಗಳಿಗೆ ಈ ಕಾನೂನುಗಳನ್ನು ಬೇಕಾದಂತೆ ಮಾಡಲಾಗಿದೆ!

ಮೂರು ಕೃಷಿ ಕಾನೂನುಗಳನ್ನು ರದ್ದುಮಾಡಲು ನಡೆದಿರುವ ರೈತರ ಹೋರಾಟಕ್ಕೆ ಬೆಂಬಲ ವಿಸ್ತಾರಗೊಳ್ಳಲು ಪ್ರಾರಂಭಿಸಿದ್ದು ಆಶ್ಚರ್ಯವೇನಲ್ಲ. ಏಕೆಂದರೆ ಅದು ದಲಿತ ಭೂರಹಿತ ಮತ್ತು ಅರೆ-ಭೂರಹಿತ ಕೃಷಿ ಕಾರ್ಮಿಕರಲ್ಲೂ ಅನುರಣಿಸಿತು. ಮೇಲ್ವರ್ಗದ ಭದ್ರಕೋಟೆಗಳಾಗಿದ್ದ ಹರಿಯಾಣ ಮತ್ತು ಉತ್ತರಪ್ರದೇಶದ ಸಾಂಪ್ರದಾಯಿಕ ’ಖಾಪ್’ ಪಂಚಾಯತ್‌ಗಳು ತಮ್ಮ ಬಾಗಿಲುಗಳನ್ನು ಎಲ್ಲರಿಗೂ ಮುಕ್ತವಾಗಿ ತೆರೆದಾಗ ಭಾರತದಾದ್ಯಂತ ನಾಟಕೀಯ ವಿಸ್ತರಣೆ ಪ್ರಾರಂಭವಾಯಿತು. ಹಲವಾರು ವರ್ಷಗಳಿಂದ ಸುಪ್ತವಾಗಿದ್ದ ಅನೇಕ ಜನಪರ ಹೋರಟಗಳು, ಜನರ ಭರವಸೆಯನ್ನು ಎಂದಿಗೂ ಗೆಲ್ಲಲಾಗದಿದ್ದ ವಿಭಿನ್ನ ಸಾಮಾಜಿಕ ಚಳುವಳಿಗಳು ಮತ್ತು ಭಿನ್ನಾಭಿಪ್ರಾಯಗಳ ಪರ್ವತಗಳನ್ನು ದಾಟಲಾಯಿತು. ಅಧಿಕಾರಿಗಳ ಹಳಸಲು ಕುತಂತ್ರಗಳನ್ನು ಮತ್ತು ಪಕ್ಷಪಾತಿ ಹಾಗೂ ಅಸತ್ಯ ಮಾಧ್ಯಮ ವರದಿಗಳನ್ನು ಪ್ರತಿ ತಿರುವಿನಲ್ಲಿಯೂ ಸೋಲಿಸಲು, ಈ ಬೃಹತ್ ಚಳವಳಿಯ ವಿನೂತನ ಬುದ್ಧಿವಂತಿಕೆಯನ್ನು ಸಂಭ್ರಮಿಸಲು ಮುಂದಕ್ಕೆ ಒಯ್ಯಲು ಹೊಸ ಉಪಕ್ರಮಗಳು ಹುಟ್ಟಿ, ಮುನ್ನಡೆದಿವೆ.

ಮೂರು ಕೃಷಿ ಕಾನೂನುಗಳ ರದ್ದತಿಯ ಹೋರಾಟದ ಪರೋಕ್ಷ ಹೊಡೆತಕ್ಕೆ, ಹಿಂದೂ ರಾಷ್ಟ್ರ ಸಿದ್ಧಾಂತದ ಮುಖ್ಯ ಆಧಾರ ಸ್ತಂಭವಾದ ಮನುವಾದ ಸಿದ್ಧಾಂತವು ಬಿರುಕು ಬಿಡುತ್ತಿದೆ. ಕೃಷಿ ಕೆಲಸಗಳಲ್ಲಿ ಮಹಿಳೆಯರು ಯಾವಾಗಲೂ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಈಗ ಅವರು ಸವಾಲಿನ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಮಹಿಳಾ ಕೃಷಿಕರು ಟ್ರಾಕ್ಟರುಗಳನ್ನು ಓಡಿಸಿದರು, ಬಸ್ಸುಗಳಲ್ಲಿ ಪ್ರತಿಭಟನೆಗೆ ಧಾವಿಸಿದರು, ಕಾಲ್ನಡಿಗೆ ಮೂಲಕವೂ ಹೋರಾಟವನ್ನೂ ಸೇರಿಕೊಂಡರು. ಈ ಮೂಲಕ ಅವರು ಹೋರಾಟದಲ್ಲಿ ಪ್ರಮುಖ ಸ್ಥಾನಗಳನ್ನು ವಹಿಸಿಕೊಂಡರು. ಉದ್ಯಮದಲ್ಲಿ ಉಪಸ್ಥಿತವಿರುವ ಸಾಂಪ್ರದಾಯಿಕ ಕಾರ್ಮಿಕ ಸಂಘಟನೆಗಳ ಹೊರತಾಗಿ, ಯುವ ಕಾರ್ಮಿಕ-ಕಾರ್ಯಕರ್ತರ ನೇತೃತ್ವದ ಸ್ವತಂತ್ರ ಕಾರ್ಮಿಕ ಸಂಘಗಳು ಮತ್ತು ಆಗಷ್ಟೇ ಜೈಲಿನಿಂದ ಬಿಡುಗಡೆಯಾದ ಕೆಲವರು ಕೂಡ ಸೇರಿಕೊಂಡರು.

ಮುಸ್ಲಿಂ ರೈತರು, ವಿಶೇಷವಾಗಿ ಪಶ್ಚಿಮ ಯು.ಪಿ.ಯಲ್ಲಿನ ಮುಸ್ಲಿಂ ರೈತರು, ಕೋಮು ಗಲಭೆಗಳ ಇತ್ತೀಚಿನ ಕಹಿ ನೆನಪುಗಳನ್ನು ಹಿಂದೆ ಹಾಕಿ ಪ್ರತಿಭಟನೆಗೆ ಸೇರಿದರು. ಗಾಂಧಿ ಮತ್ತು ನೆಹರೂ ನೇತೃತ್ವದ ರಾಷ್ಟ್ರೀಯವಾದಿ ಹೋರಾಟದ ಸಮಯದಲ್ಲಿಯೂ ಸಹ ಇಂತಹ ಐಕ್ಯತೆಯನ್ನು ನೋಡಿಲ್ಲ. ಇದು ಭಗತ್ ಸಿಂಗ್ ಅವರ ಮತ್ತು ಸುಭಾಷ್ ಚಂದ್ರ ಬೋಸ್ ನೇತೃತ್ವದ ಐಎನ್‌ಎಯ ದೂರದೃಷ್ಟಿತ್ವವನ್ನು ನೆನಪಿಸುತ್ತದೆ. ಇದನ್ನು ಸಾರುವ ಇವರಿಬ್ಬರ ಫೋಟೊಗಳನ್ನು ಸಿಂಘು ಗಡಿಯಲ್ಲಿ ಸಾಮಾನ್ಯವಾಗಿ ನೋಡಬಹುದಾಗಿದೆ. ಆಂದೋಲನವು ಅಖಿಲ ಭಾರತ ವ್ಯಾಪ್ತಿಯ ಪಾತ್ರವನ್ನು ಪಡೆಯುತ್ತಿದ್ದಂತೆ ಪೆರಿಯಾರ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಇಲ್ಲಿ ಮುನ್ನಲೆಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ, ಕ್ರಾಂತಿಕಾರಿ ಮತ್ತು ಸುಧಾರಣಾವಾದಿ ಹೋರಾಟಗಳ ಕುರಿತು ಇರುವ ಹುಸಿ ಬೇಧವನ್ನು ಒಡೆಯುವ ಸ್ಪೂರ್ತಿದಾಯಕ ಐಕಾನ್‌ಗಳು ಇವರು. ಈ ಎಲ್ಲದರ ನಡುವೆ, ರೈತರ ಆಂದೋಲನವು ಎಲ್ಲಾ ಪ್ರಚೋದನೆಗಳು ಮತ್ತು ಬೆದರಿಕೆಗಳನ್ನು ಮೆಟ್ಟಿನಿಂತು ಶಾಂತಿಯುತವಾಗಿ ಬೆಳೆಯುವ ಸಾಮೂಹಿಕ ಹೋರಾಟವಾಗಿ ಉಳಿದಿದೆ.

ಯುದ್ಧವನ್ನು ಇನ್ನೂ ಗೆದ್ದಿಲ್ಲ ಮತ್ತು ಎರಡೂ ಕಡೆಗಳಲ್ಲಿ ತಯ್ಯಾರಿ ಮುಂದುವರಿದಿದೆ. ಬಹುತೇಕ ಎಲ್ಲ ವಿರೋಧ ಪಕ್ಷಗಳು ಆಂದೋಲನವನ್ನು ಬೆಂಬಲಿಸಿವೆ, ಆದರೆ ಅವು ಬಾಹ್ಯವಾಗಿ ಉಳಿದಿವೆ. ಅವರು ಕೃಷಿ, ಭೂಸ್ವಾಧೀನ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸ್ಪಷ್ಟಪಡಿಸುವವರೆಗೆ, ಇದು ತಾತ್ಕಾಲಿಕ ತಂತ್ರದ ಮೈತ್ರಿಗಿಂತ ಹೆಚ್ಚೇನೂ ಆಗಿರಲಾರದು. ಇನ್ನೊಂದು ಬದಿಯಲ್ಲಿ, ಮೇಲ್ಜಾತಿಯ ಬ್ರಾಹ್ಮಣವಾದದ ಪೋಷಕರಾದ ಹಿಂದೂ ರಾಷ್ಟ್ರದ ಪ್ರತಿಪಾದಕರು, ದಲಿತರಿಗೆ ಸಾಮಾಜಿಕ ಸೇವೆ ಮಾಡುವ ಸೋಗಿನಲ್ಲಿ ಆರ್‌ಎಸ್‌ಎಸ್ ಅನ್ನು ಮುಂದೆ ಬಿಟ್ಟು, ಮುಸ್ಲಿಮರ ವಿರುದ್ಧ ದ್ವೇಷ ರಾಜಕಾರಣವನ್ನು ನಡೆಸುತ್ತಿದ್ದಾರೆ. ಹಿಂದೂ ರಾಷ್ಟ್ರದ ಸಿದ್ಧಾಂತವು, ಕಾರ್ಪೊರೆಟ್ ಹಿತಾಸಕ್ತಿಗಳು ಮತ್ತು ಹಣಬಲದಿಂದ ಖರೀದಿಸಬಹುದಾದ ಎಲ್ಲಾ ಮತಗಳು ಮತ್ತು ರಾಜಕೀಯ ಕುದುರೆ ವ್ಯಾಪಾರವನ್ನು ಒಳಗೊಂಡಿದೆ. ಆದರೆ, ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ ಅಥವಾ ಪ್ರಭುತ್ವದ ಅಧಿಕಾರವು ಎಲ್ಲ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸರ್ಕಾರ ನಿಧಾನವಾಗಿ ತಿಳಿಯುತ್ತಿದೆ. ಭಿನ್ನಮತ, ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ಫೇಕ್ ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಹಣ ಪೋಲು ಮಾಡಿದ ಸರ್ಕಾರವು ಈಗ ವಿಫಲವಾಗಿದೆ ಎಂಬುದು ಜನತೆಗೆ ಮನವರಿಕೆ ಆಗುತ್ತಿದೆ.

ಕೋವಿಡ್ 19ರ ಈ ಎರಡನೇ ಅಲೆಯಲ್ಲಿ ಸೋಂಕು ಉಲ್ಬಣವಾಗಿರುವ ಸಮಯದಲ್ಲಿ ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಂತಿರುವ ಸರ್ಕಾರದ ಚಿತ್ರಣ ಜನರನ್ನು ತಲುಪಿ ಸತ್ಯದರ್ಶನ ಮಾಡಿಸುತ್ತಿದೆ. ನೀವು ಕೆಲವು ಜನರನ್ನು ಕೆಲವು ಸಮಯದವರೆಗೆ ಮರುಳು ಮಾಡಬಹುದು, ಆದರೆ ನೀವು ಎಲ್ಲಾ ಜನರನ್ನು ಎಲ್ಲಾ ಸಮಯದಲ್ಲೂ ಮರುಳು ಮಾಡಲು ಸಾಧ್ಯವಿಲ್ಲ; ನೀವು ಸ್ವಲ್ಪ ಸಮಯದವರೆಗೆ ಕೆಲವು ಭಿನ್ನಾಭಿಪ್ರಾಯಗಳನ್ನು ನಿಗ್ರಹಿಸಬಹುದು, ಆದರೆ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನೀವು ಸಾರ್ವಕಾಲಿಕವಾಗಿ ನಿಗ್ರಹಿಸಲು ಸಾಧ್ಯವಿಲ್ಲ. ಹಣ ಮತ್ತು ಪ್ರಭುತ್ವದ ಅಧಿಕಾರಕ್ಕೆ ಮಿತಿ ಇದೆ. ರೈತರ ಹೋರಾಟದ ಮುಂದುವರಿಕೆಯ ದೃಢ ನಿಶ್ಚಯವು ಅದನ್ನು ಸಾಬೀತುಪಡಿಸುತ್ತಿದೆ. ಹಾಗೆಯೇ ಕೋವಿಡ್ ಉಗ್ರತೆಯು ಆಕಾಶದಿಂದ ಅಪ್ಪಳಿಸಿದ ಗುಡುಗಿನಂತಿದ್ದು, ನಮ್ಮೆಲ್ಲರಲ್ಲೂ ಜಾಗೃತಿ ಮೂಡಿಸುತ್ತಿದೆ.

ಅನೇಕ ಹೂವುಗಳನ್ನು ಕತ್ತರಿಸಬಹುದು, ಆದರೆ ವಸಂತವನ್ನು ಇನ್ನು ಮುಂದೆ ಬರದಂತೆ ತಡೆಯಲು ಸಾಧ್ಯವಿಲ್ಲ.

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು 2020ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.

(ಕನ್ನಡಕ್ಕೆ: ಪಿ.ಕೆ. ಮಲ್ಲನಗೌಡರ್)


ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮೇ 10 ರಂದು `ರೈತರ ರಾಷ್ಟ್ರೀಯ ಸಮಾವೇಶ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...