ಕೇಂದ್ರ ಸರ್ಕಾರವು ನಮಗೆ ತಿಂಗಳಿಗೆ 80-85 ಲಕ್ಷ ಡೋಸೆಜ್ ಲಸಿಕೆ ಒದಗಿಸಿದ್ದಲ್ಲಿ ಕೇವಲ ಮೂರು ತಿಂಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ದೆಹಲಿವಾಸಿಗಳಿಗೆ ಲಸಿಕೆ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದುವರೆಗೂ ನಮಗೆ ಕೇವಲ 40 ಲಕ್ಷ ಡೋಸೆಜ್ ಮಾತ್ರ ಲಸಿಕೆ ನೀಡಲಾಗಿದೆ. ಈಗ ಪ್ರತಿದಿನ 1 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗುತ್ತಿದೆ. ಅದನ್ನು ನಾವು ದಿನಕ್ಕೆ 3 ಲಕ್ಷ ಜನರಿಗೆ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಅಗತ್ಯವಿರುವಷ್ಟು ಲಸಿಕೆ ಒದಗಿಸಿಲ್ಲ. ಅಲ್ಲದೆ ದೆಹಲಿಯ ಅಕ್ಕಪಕ್ಕದ ನಗರಗಳಾದ ಫರಿದಾಬಾದ್, ಗಾಜಿಯಾಬಾದ್, ಸೋನಿಪತ್, ಗುರ್ಗಾವ್, ನೋಯ್ಡಾಗಳಿಂದಲೂ ಜನ ಲಸಿಕೆಗಾಗಿ ದೆಹಲಿಗೆ ಬರುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಕೇಳಿದಷ್ಟು ಲಸಿಕೆ ನೀಡಿದರೆ ಉಪಯೋಗವಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟರು 1.5 ಕೋಟಿ ಜನರಿದ್ದಾರೆ. ಅಂದರೆ ನಮಗೆ 3 ಕೋಟಿ ಡೋಸೆಜ್ ಲಸಿಕೆ ಬೇಕು. ಈಗ 40 ಲಕ್ಷ ಡೋಸೆಜ್ ಬಂದಿದೆ. ಪ್ರತಿ ತಿಂಗಳು 80-85 ಲಕ್ಷ ಡೋಸೆಜ್ ಲಸಿಕೆ ಒದಗಿಸಿದ್ದಲ್ಲಿ ಮೂರು ತಿಂಗಳಲ್ಲಿ ಪ್ರತಿಯೊಬ್ಬ ದೆಹಲಿವಾಸಿಗಳಿಗೂ ಲಸಿಕೆ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈಗ ಸದ್ಯಕ್ಕೆ ನಾವು 100 ಶಾಲೆಗಳಲ್ಲಿ ಲಸಿಕೆ ನೀಡುತ್ತಿದ್ದೇವೆ. ಅಗತ್ಯವಿರುವಷ್ಟು ಲಸಿಕೆ ಸಿಕ್ಕ ಕೂಡಲೇ 300 ಶಾಲೆಗಳಲ್ಲಿ ಲಸಿಕೆ ಅಭಿಯಾನ ಆರಂಭಿಸುತ್ತೇವೆ ಎಂದಿದ್ದಾರೆ.
ಕೋವಿಡ್ 3 ನೇ ಅಲೆ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾಗಿ ಅಷ್ಟರೊಳಗಾಗಿ ನಾವು ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನೊಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಕೋವಿಡ್ ಲಸಿಕೆಗಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಆಗಾಗ್ಗೆ ತೊಂದರೆಗಳಾಗುವ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಈ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಕೊರತೆ ಸಮಸ್ಯೆಯನ್ನು ಮುಂಬೈ ಯಶಸ್ವಿಯಾಗಿ ನಿಭಾಯಿಸಿದ್ದು ಹೇಗೆ?


