ಹಲವು ರಾಜ್ಯಗಳ ಚುನಾವಣೆಯ ಕಾರಣದಿಂದ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ ನಾಲ್ಕನೇ ದಿನಕ್ಕೆ ಏರಿಸಲಾಗಿದ್ದು, 2021 ರ ಮೇ 7 ರ ಶುಕ್ರವಾರದಂದು ದೇಶಾದ್ಯಂತ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆಯಾದರೆ ಡೀಸೆಲ್ ದರ 31 ಪೈಸೆ ಏರಿಕೆಯಾಗಿದೆ.
ಈ ತಿಂಗಳ ಇತ್ತೀಚಿನ ಹೆಚ್ಚಳವು ಮಾರ್ಚ್ 24 ಮತ್ತು ಏಪ್ರಿಲ್ 15 ರ ನಡುವಿನ ನಾಲ್ಕು ಪರಿಷ್ಕರಣೆಗಳ ಅವಧಿಯಲ್ಲಿ ಬಂದ ಎಲ್ಲಾ ಇಂಧನ ದರಗಳ ಕಡಿತವನ್ನು ಅಳಿಸಿಹಾಕಿದೆ. ಕಳೆದ ನಾಲ್ಕು ದಿನಗಳಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 87 ಪೈಸೆ ಹೆಚ್ಚಾಗಿದೆ ಮತ್ತು ಡೀಸೆಲ್ ದರ ಒಂದು ರೂಪಾಯಿ ಏರಿಕೆಯಾಗಿದೆ.
ಜನವರಿ-ಫೆಬ್ರವರಿ ಅವಧಿಯಲ್ಲಿ ಇಂಧನ ಬೆಲೆಗಳು ನಾಗಾಲೋಟದಲ್ಲಿ ಇದ್ದವು. ಈ ಮೊದಲು ಫೆಬ್ರವರಿ 27 ರಂದು ತಮ್ಮ ಹಿಂದಿನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ನಂತರ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಮಾರ್ಚ್ 24 ರಿಂದ 24 ದಿನಗಳ ಕಾಲ ಇಂಧನ ದರ ಪರಿಷ್ಕರಣೆ ಮಾಡಲಿಲ್ಲ. (ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿತ್ತು. ಚುನಾವಣೆಯ ನಂತರ ಮತ್ತೆ ತೀವ್ರ ದರ ಏರಿಕೆ ಆಗಲಿದೆ ಎಂದು ನಾನುಗೌರಿ.ಕಾಂ ವರದಿ ಮಾಡಿತ್ತು)
ಮೇ 4 ರಂದು ಏರಿಕೆಯಾಗುವವರೆಗೂ ಬೆಲೆಗಳು 18 ದಿನಗಳವರೆಗೆ ಸ್ಥಿರವಾಗಿದ್ದವು. ಇತ್ತೀಚಿನ ಬೆಲೆ ಪರಿಷ್ಕರಣೆಯ ನಂತರ, ದೆಹಲಿಯಲ್ಲಿ ಪೆಟ್ರೋಲ್ ಈಗ ಲೀಟರ್ 91.27 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ 81.73 ರೂ.ಗೆ ಮಾರಾಟವಾಗುತ್ತಿದೆ. ಹಣಕಾಸು ರಾಜಧಾನಿ ಮುಂಬಯಿಯಲ್ಲಿ, ಪೆಟ್ರೋಲ್ ಬೆಲೆ ಈಗ 97.61 ರೂ., ಡೀಸೆಲ್ ಬೆಲೆ 88.82 ರೂ..
ಫೆಬ್ರವರಿ ತಿಂಗಳಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಎರಡು ಸ್ಥಳಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ದಾಟಿತ್ತು.
ಸ್ಥಳೀಯ ತೆರಿಗೆ (ವ್ಯಾಟ್) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ರಾಜಸ್ಥಾನವು ದೇಶದಲ್ಲಿ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುತ್ತದೆ ಮತ್ತು ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ.
ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್‌ನ ಚಿಲ್ಲರೆ ಮಾರಾಟದ ಬೆಲೆಯ ಶೇಕಡಾ 60 ಮತ್ತು ಡೀಸೆಲ್‌ನ ಶೇಕಡಾ 54 ಕ್ಕಿಂತ ಹೆಚ್ಚು ಪ್ರಮಾಣದ ತೆರಿಗೆ ವಿಧಿಸುತ್ತಿವೆ. ಕೇಂದ್ರವು ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 32.90 ರೂ. ಮತ್ತು ಡೀಸೆಲ್‌ಗೆ 31.80 ರೂ. ಅಬಕಾರಿ ಸುಂಕ ಹೇರುತ್ತಿದೆ.
ಸಾಮಾನ್ಯವಾಗಿ, ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ.
ಸಾಂಕ್ರಾಮಿಕದ ಬಿಕ್ಕಟ್ಟಿನ ವೇಳೆ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹಾಕುತ್ತಿವೆ. ಚುನಾವಣಾ ಸಂದರ್ಭ ದಲ್ಲಿ ಸ್ಥಿರವಾಗಿದ್ದ ಇಂಧನ ದರಗಳು ಈಗ ಮರಳಿ ಏರುಮುಖದಲ್ಲಿವೆ.
ಇದನ್ನೂ ಓದಿ: ಚುನಾವಣೆಯ ನಂತರ ಮತ್ತೆ ಏರಲಿದೆ ಪೆಟ್ರೋಲ್-ಡಿಸೇಲ್ ದರ!



DANYAVADHGALU.SIR