ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ ಎಂದು ಪಂಚಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ತುರ್ತು ಪತ್ರ ಬರೆದಿದ್ದ 400 ಜನ ಸಾಮಾಜಿಕ ಕಾರ್ಯಕರ್ತರು, ಸರ್ಕಾರದಿಂದ ಸ್ಪಂದನೆ ಸಿಗದಿದ್ದ ಕಾರಣಕ್ಕೆ ಮೇ 15 ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಮೇ 15ರ ಬೆಳಿಗ್ಗೆ 11 ಗಂಟೆಗೆ ರಾಜ್ಯದ ಜನತೆ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆಯೇ ಪ್ರತಿಭಟನೆ ದಾಖಲಿಸಬೇಕು. ಜನರ ಜೀವ ಮತ್ತು ಜೀವನ ಉಳಿಸುವುದು ಸರ್ಕಾರದ ಹೊಣೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟಿಸೋಣ. ಸರ್ಕಾರ ಕಿವಿಗೊಡದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟಗಳಿಗೆ ಮುಂದಾಗೋಣ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೋವಿಡ್ ಉಲ್ಬಣಿಸಿರುವ ಸಂದರ್ಭದಲ್ಲಿ ಜನರ ಜೀವ ಮತ್ತು ಜೀವನ ಉಳಿಸುವಂತೆ ವಾರದ ಹಿಂದೆ ಮುಖ್ಯಮಂತ್ರಿಗಳಿಗೆ ತುರ್ತು ಪತ್ರ ಬರೆದಿದ್ದೆವು. ಖುದ್ದು ಸಿಎಂ ಕಛೇರಿಗೂ ತಲುಪಿಸಿದ್ದೆವು. ಅದರಲ್ಲಿ ಪ್ರಸ್ತುತ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಪಂಚ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಸರ್ಕಾರ ಕಾರ್ಯರೂಪಕ್ಕೆ ತರಬೇಕೆಂದು ವಿನಂತಿಸಿಕೊಂಡಿದ್ದೆವು. ಅಲ್ಲಿಂದೀಚೆಗೆ ರಾಜ್ಯದಲ್ಲಿ ಸಣ್ಣ ಮಟ್ಟಕ್ಕೆ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಿರುವುದನ್ನು ಬಿಟ್ಟರೆ ಸರ್ಕಾರ ಮತ್ತ್ಯಾವ ಕ್ರಮಗಳಿಗೂ ಮುಂದಾಗಿಲ್ಲ. ಕನಿಷ್ಟ ಪ್ರತಿಕ್ರಿಯಿಸುವ ಜವಬ್ದಾರಿಯನ್ನೂ ತೋರಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಜನರಿಗೆ ಆಸರೆಯಾಗುವ ಯಾವ ಕ್ರಮಗಳೂ ಇಲ್ಲದೆ, ಲಾಕ್ ಡೌನ್ ಮಾತ್ರ ಮುಂದುವರೆಯುತ್ತಿದೆ. ಈ ಸಮಯದಲ್ಲಿ ಜನರನ್ನು ಅಮಾನವೀಯವಾಗಿ ಥಳಿಸಲಾಗುತ್ತಿದೆ. ಹಾಗಾಗಿ ಸರ್ಕಾರದ ಈ ನಿಶ್ಚಲ ಮತ್ತು ಅಮಾನವೀಯ ಧೋರಣೆಯನ್ನು ಖಂಡಿಸಿ ಮತ್ತು ಪಂಚ ಕ್ರಮಗಳನ್ನು ಸರ್ಕಾರ ಕಾರ್ಯರೂಪಕ್ಕೆ ತರಲೇಬೇಕು ಎಂದು ಒತ್ತಾಯಿಸಬೇಕಿದೆ. ಪ್ರತಿಭಟನೆ ಮಾಡುವುದೇ ನಮ್ಮ ಗುರಿಯಲ್ಲ. ಇದು ಅನಿವಾರ್ಯ ಕ್ರಿಯೆ. ಒಂದು ವೇಳೆ ಸರ್ಕಾರ ಜನಪರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದರೆ ಸಾವಿರಾರು ಜನ ಕಾರ್ಯಕರ್ತರು ಸರ್ಕಾರದ ಜೊತೆ ಕೈಗೂಡಿಸಿ ಜನರನ್ನು ಉಳಿಸುವ ಕೈಂಕರ್ಯದಲ್ಲಿ ಭಾಗಿಯಾಗುತ್ತೇವೆ ಎಂಬ ಭರವಸೆಯನ್ನೂ ಇದರ ಜೊತೆಯಲ್ಲೇ ನೀಡುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಚ್.ಎಸ್. ದೊರೆಸ್ವಾಮಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದೇವನೂರ ಮಹಾದೇವ, ಡಾ. ಕೆ. ಮರುಳಸಿದ್ದಪ್ಪ, ಬಿ.ಟಿ. ಲಲಿತಾ ನಾಯ್ಕ್, ಶಶಿಕಾಂತ್ ಸೆಂದಿಲ್, ಮಾವಳ್ಳಿ ಶಂಕರ್, ಯಾಸಿನ್ ಮಲ್ಪೆ, ಸಿ.ಎಸ್. ದ್ವಾರಕಾನಾಥ್, ಬಡಗಲಪುರ ನಾಗೇಂದ್ರ, ಎಚ್. ಆರ್. ಬಸವರಾಜಪ್ಪ, ಎಸ್. ಬಾಲನ್, ಎನ್. ವೆಂಕಟೇಶ್, ಕೆ.ಎಲ್. ಅಶೋಕ್ ಮುಂತಾದವರು ಹೇಳಿಕೆಗೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ : ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ: 400 ಸಾಮಾಜಿಕ ಕಾರ್ಯಕರ್ತರ ಜನಾಗ್ರಹ


