ತನ್ನ ವಿರುದ್ಧದ ಟೀಕೆ, ವಿಮರ್ಶೆಯನ್ನು ಸಹಿಸದ ಬಿಜೆಪಿ ಹಲವಾರು ಜನರ ವಿರುದ್ಧ ದೇಶಾದ್ಯಂತ ದೂರು ನೀಡಿರುವುದು ನಮಗೆಲ್ಲ ಗೊತ್ತಿದೆ. ಅದೇ ರೀತಿಯಲ್ಲಿ ಮಣಿಪುರದಲ್ಲಿ ವಿವಾದಿತ ಫೇಸ್‌ಬುಕ್ ಪೋಸ್ಟ್ ಹಾಕಿದ ಆರೋಪದ ಮೇಲೆ ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತನ ವಿರುದ್ಧ ದೂರು ನೀಡಿದ್ದು, ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪುರ ಬಿಜೆಪಿ ಅಧ್ಯಕ್ಷ ಮೃತ ಸೈಖೋಮ್ ತಿಕೇಂದ್ರ ಸಿಂಗ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಮಣಿಪುರ ಬಿಜೆಪಿ ಕಾರ್ಯದರ್ಶಿ ಪಿ.ಪ್ರೇಮಾನಂದ ಮೀಟೈ ಮತ್ತು ಬಿಜೆಪಿ ಉಪಾಧ್ಯಕ್ಷ ಉಷಮ್ ದೇಬನ್ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಖೆಮ್ ಮತ್ತು ರಾಜಕೀಯ ಕಾರ್ಯಕರ್ತ ಎರೆಂಡ್ರೊ ಲೈಚೋಂಬಮ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಐಪಿಸಿಯ ಸೆಕ್ಷನ್ 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) / 505 (ಬಿ) (2) (ಪ್ರಚೋದನಾಕಾರಿ ಹೇಳಿಕೆ ನೀಡುವುದು) ಅಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಮೇ 17 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಣಿಪುರ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಕೋವಿಡ್‌ನಿಂದ ನಿಧನರಾದಾಗ “ಹಸುವಿನ ಸೆಗಣಿ, ಹಸುವಿನ ಗಂಜಲ ಕೆಲಸ ಮಾಡುವುದಿಲ್ಲ. ಆಧಾರವಿಲ್ಲದ ವಾದಗಳು. ನಾನು ನಾಳೆ ಮೀನು ತಿನ್ನುತ್ತೇನೆ” ಎಂದು ಫೇಸ್‌ಬುಕ್‌ನಲ್ಲಿ ವಾಂಗ್‌ಖೆಮ್ ಬರೆದಿದ್ದರು ಎನ್ನಲಾಗಿದೆ. ಅದೇ ರೀತಿ ಎರೆಂಡ್ರೊ ಲೈಚೋಂಬಮ್ ಕೂಡ “ಹಸುವಿನ ಸೆಗಣಿ, ಹಸುವಿನ ಗಂಜಲದಿಂದ ಕೊರೊನಾ ವಾಸಿಯಾಗುವುದಿಲ್ಲ. ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದಿಂದ ವಾಸಿಯಾಗುತ್ತದೆ ಪ್ರೊಫೆಸರ್‌ಜಿ, RIP” ಎಂದು ಬರೆದಿದ್ದರು.
ಹಸುವಿನ ಸೆಗಣಿ, ಹಸುವಿನ ಗಂಜಲದಿಂದ ಕೊರೊನಾ ವಾಸಿಯಾಗುತ್ತದೆ ಎಂದು ಹಲವು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಅದನ್ನು ಟೀಕಿಸಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.
ಈ ಇಬ್ಬರೂ ಈ ಮೊದಲು ಸಹ ಬಿಜೆಪಿ ನೀಡಿದ ದೂರುಗಳಿಂದಾಗಿ ಬಂಧಿತರಾಗಿದ್ದರು. ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿತ್ತು.
ಇದನ್ನೂ ಓದಿ; ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು


