(ಇದು ಹೊಸ ಬರಹದಲ್ಲಿದೆ. ಮಹಾಪ್ರಾಣಗಳನ್ನು ನಿಯಮಿತವಾಗಿ ಬಳಸಲಾಗಿದೆ)
2014 ರಲ್ಲಿ 7 ವಾರಗಳ ಕಾಲ ನಡೆದ ಇಸ್ರೇಲ್-ಪ್ಯಾಲೆಸ್ಟೀನ್ ಯುದ್ದದಲ್ಲಿ ನಾಗರಿಕರನ್ನು ಒಳಗೊಂಡಂತೆ ಸುಮಾರು 2000 ಪ್ಯಾಲೆಸ್ಟೇನಿಯರು ಮೃತಪಟ್ಟರು, ಗಾಜಾ ನಗರದ ಮೂಲಭೂತ ಸೌಕರ್ಯಗಳು ದ್ವಂಸಗೊಂಡವು. ಈ ಭೀಕರ ಹತ್ಯಾಕಾಂಡದ ನೆನಪು, ಆ ರಕ್ತದ ವಾಸನೆ ಇನ್ನು ಹಸಿ ಹಸಿಯಾಗಿರುವಾಗಲೆ ಮೇ, 2021ರಲ್ಲಿ ಇಸ್ರೇಲ್ ದೇಶವು ಪ್ಯಾಲೆಸ್ಟೀನ್‌ರು ವಾಸಿಸುವ ಗಾಜಾ ನಗರದ ಮೇಲೆ ನಿರಂತರವಾಗಿ ನಡೆಸುತ್ತಿರುವ ಬಾಂಬ್ ದಾಳಿಯಿಂದಾಗಿ 40 ಮಕ್ಕಳು ಸೇರಿದಂತೆ ನೂರಾರು ಪ್ಯಾಲೆಸ್ಟೇನಿಯರು ಹತರಾಗಿದ್ದಾರೆ. ಒಂದೇ ಕುಟುಂಬದ ಹತ್ತು ಜನ ಹತ್ಯೆಯಾಗಿದ್ದಾರೆ. ಮಹಿಳೆಯರು, ಮಕ್ಕಳನ್ನು ಒಳಗೊಂಡಂತೆ ಅಪಾರ ಪ್ರಮಾಣದ ಸಾವುನೋವುಗಳಾಗಿವೆ. ಇಸ್ರೇಲ್ ಮಿಲಿಟರಿಯು ಗಾಜಾ ನಗರದಲ್ಲಿ ಅಲ್ ಜಜೀರ ಮತ್ತು ಇತರ ಪತ್ರಿಕಾ ಮಾದ್ಯಗಳ ಕಚೇರಿಗಳ ಮೇಲೆ ಗುರಿ ಇಟ್ಟು ದಾಳಿ ಮಾಡುತ್ತಿದೆ. ಗಾಜಾ ಪ್ರಾಂತದ ಭಗ್ನಗೊಂಡ ಕಟ್ಟಡಗಳಿಂದ ಹೊರಹೊಮ್ಮುತ್ತಿರುವ ಹೊಗೆ ಹೆಣದ ವಾಸನೆಯನ್ನು ಪಸರಿಸುತ್ತಿದೆ. ಜ್ಯೂ ಸೈನಿಕರು ’ಅರಬರ ಸಾವು’ ಎಂದು ಮದೋನ್ಮತ್ತರಾಗಿ ಅರಚುತ್ತಿದ್ದಾರೆ. ಪ್ಯಾಲೆಸ್ಟೀನರು ಅದಿಕ ಜನಸಂಖ್ಯೆಯಲ್ಲಿರುವ, ತಮ್ಮ ರಾಜದಾನಿ ಎಂದು ನಂಬಿರುವ ಪೂರ್ವ ಜೆರುಸೆಲಂನಲ್ಲಿ ದಶಕಗಳಿಂದ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ, ನಿರಾಶ್ರಿತರನ್ನಾಗಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಲೇ ಬಂದ ಇಸ್ರೇಲ್ ಮೇ ತಿಂಗಳ ಮೊದಲ ವಾರದಲ್ಲಿ ಅವರ ಮೇಲೆ ದಾಳಿ ಪ್ರಾರಂಬಿಸಿದೆ. ಹಮಾಸ್ ರಾಕೆಟ್ ದಾಳಿ ಮಾಡಿದೆ ಎನ್ನುವ ಹಿನ್ನಲೆಯಲ್ಲಿ ಇಸ್ರೇಲ್ ಪೋಲೀಸ್ ಪಡೆ ಅಲ್ಲಿನ ಅಲ್-ಅಕ್ಸಾ ಮಸೀದಿ ಕಾಂಪೌಡಿನೊಳಗಡೆ ಪ್ರವೇಶಿಸಿದೆ. ಇಸ್ರೇಲ್ ಪೋಲೀಸರು ಮಸೀದಿಯನ್ನು ತೆರವುಗೊಳಿಸದಿದ್ದರೆ ಪ್ರತಿ ದಾಳಿ ಮಾಡುವುದಾಗಿ ಹಮಾಸ್ ಎಚ್ಚರಿಸಿತು ಮತ್ತು ಜೆರುಸೆಲಂ ಮೇಲೆ ರಾಕೆಟ್ ದಾಳಿ ನಡೆಸಿತು.
ಇದಕ್ಕೆ ಜಾಗತಿಕವಾಗಿ ಅನೇಕ ಬಾಗಗಳಿಂದ ಇಸ್ರೇಲ್ ವಿರುದ್ದ ಖಂಡನೆಗಳು ವ್ಯಕ್ತವಾಗಿದೆ ಮತ್ತು ಅದೇ ಪ್ರಮಾಣದಲ್ಲಿ ಇಸ್ರೇಲ್‌ಗೆ ಬೆಂಬಲವೂ ದೊರಕುತ್ತಿದೆ. ಅಮೆರಿಕವು ’ಹಮಾಸ್ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದಾಗ ಸ್ವಯಂ ರಕ್ಷಣೆಗೆ ಅವರೇನು ಕೈ ಕಟ್ಟಿಕೊಂಡು ಕೂಡಲು ಸಾದ್ಯವಿಲ್ಲ ಎಂದು ಸ್ಪಶ್ಟವಾಗಿ ಇಸ್ರೇಲ್ ಪರ ಹೇಳಿಕೆ ನೀಡಿದೆ ಮತ್ತು ಕಣ್ಣೊರೆಸುವ ತಂತ್ರವಾಗಿ ಸಂದಾನದ ಮಾತುಗಳನ್ನು ಸಣ್ಣ ದನಿಯಲ್ಲಿ ಗೊಣಗುತ್ತಿದೆ. ಅಮೆರಿಕದ ಈ ಗೊಣಗುವಿಕೆ ಯಾರಿಗೂ ಕೇಳಿಸುತ್ತಿಲ್ಲ. ಆದರೆ ದಶಕಗಳಿಂದ ಇಸ್ರೇಲ್‌ಗೆ ಎಲ್ಲಾ ಬಗೆಯ ಬೆಂಬಲ ನೀಡಿ ಕೊಬ್ಬಿಸುವಲ್ಲಿ ಅಮೆರಿಕದ ಪಾತ್ರ ನಿಚ್ಚಳವಾಗಿದೆ. ಹೀಗಾಗಿ ಕಳೆದ ಎಪ್ಪತ್ತು ವರ್ಶಗಳಲ್ಲಿ ನಡೆದ ಈ ಹಿಂಸಾಚಾರವನ್ನು ಅಮಾಯಕ ಪ್ಯಾಲೆಸ್ಟೇನಿಯರ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ನಡೆಸಿದ ಜಂಟಿ ಬಯೋತ್ಪಾದನೆ ಎಂದು ಕರೆಯುವುದಕ್ಕೆ ಯಾವುದೇ ಹಿಂಜರಿಕೆಯೂ ಬೇಡ. ಇಸ್ರೇಲ್‌ನ ಪ್ರದಾನಿ ಬೆಂಜಮಿನ್ ನೇತ್ಯಾನ್ಯು ಈ ಹಿಂಸೆಯನ್ನು ಮತ್ತುಶ್ಟು ಉಗ್ರ ರೂಪದಲ್ಲಿ ಮುಂದುವರೆಸುತ್ತೇವೆ ಎಂದಿದ್ದಾನೆ ಮತ್ತು ಪ್ಯಾಲೆಸ್ಟೇನಿಯನ್‌ನ ಹಮಾಸ್ ಸಂಘಟನೆ ನಾವು ಸಹ ಪ್ರತಿ ದಾಳಿ ನಡೆಸಿಯೇ ಸಿದ್ದ, ಹಿಂಜರಿಯುವ ಮಾತೇ ಇಲ್ಲ ಎಂದು ತೊಡೆತಟ್ಟಿದೆ.

ಪರಿಸ್ಥಿತಿ ಮತ್ತಶ್ಟು ಬಿಗಡಾಯಿಸಲು ಹಮಾಸ್‌ನ ಹಿಂಸೆಯೂ ಸಹ ತನ್ನದೇ ಕಾಣಿಕೆ ಕೊಟ್ಟಿದೆ. ಕಳೆದ ಒಂದು ವಾರದಿಂದ ಮಧ್ಯ-ಏಶ್ಯಾ ಪ್ರಾಂತದಲ್ಲಿನ ಈ ಅಪಾಯಕಾರಿ ಪರಿಸ್ಥಿತಿಗೆ ಕೇಂದ್ರವಾಗಿರುವ ಗಾಜಾ ಪಟ್ಟಿ, ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಂ ಇತಿಹಾಸದಲ್ಲಿ ರಕ್ತಚರಿತ ಪ್ರದೇಶಗಳೆಂದು ದಾಖಲಾಗಲಿವೆ. ಗಾಜಾ ಪ್ರಾಂತ್ಯದಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ’ಹಮಾಸ್ ಆಡಳಿತ ನಡೆಸುತ್ತಿದೆ. ಆದರೆ ಗಾಜಾ ಗಡಿಗಳು ಇಸ್ರೇಲ್ ಮತ್ತು ಈಜಿಪ್ತ್‌ನ ನಿಯಂತ್ರಣದಲ್ಲಿವೆ. ಗಾಜಾ, ವೆಸ್ಟ್ ಬ್ಯಾಂಕ್‌ನಲ್ಲಿ ವಾಸಿಸುತ್ತಿರುವ ಪ್ಯಾಲೆಸ್ಟೇನ್‌ರು ಸದಾ ಇಸ್ರೇಲ್‌ನ ಬಯೋತ್ಪಾದನೆಯ ತೂಗುಗತ್ತಿಯ ಅಡಿಯಲ್ಲಿ ಬದುಕುತ್ತಿದ್ದಾರೆ. ಆದರೆ ಇಸ್ರೇಲ್ ದೇಶವು ಹಮಾಸ್‌ನ ಉಗ್ರಗಾಮಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲಿ ವಾಸಿಸುತ್ತಿರುವ ಪ್ಯಾಲೆಸ್ಟೇನಿಯರಿಗೆ ಬೆಂಕಿ ಯಾವುದು, ಬಾಣಲೆ ಯಾವುದು ಎನ್ನುವ ಆಯ್ಕೆಯೇ ಇಲ್ಲದಂತೆ ತಬ್ಬಲಿಗಳಾಗಿದ್ದಾರೆ, ಅನಾಥರಾಗಿದ್ದಾರೆ. ಪ್ರತಿ ಕ್ಷಣವೂ ತಮ್ಮ ಸಾವನ್ನು ಎದುರು ನೋಡುವ ಭೀಕರ ಸ್ಥಿತಿಯ ಬದುಕನ್ನು ನಾವಿಲ್ಲಿ ಕುಳಿತು ಅಂದಾಜಿಸಲು ಸಾದ್ಯವಿಲ್ಲ.
ಇಸ್ರೇಲ್-ಪ್ಯಾಲೆಸ್ಟೀನ್ ಸಂಘರ್ಶಕ್ಕೆ (ಜ್ಯೂ ಮತ್ತು ಮಸ್ಲಿಂ) ಸಾವಿರಾರು ವರ್ಶಗಳ ಇತಿಹಾಸವಿದ್ದರೂ ಸಹ ಈಗಿನ ರಾಜಕೀಯ ಸಂಘರ್ಶವು 20ನೆ ಶತಮಾನದ ಆರಂಬದಲ್ಲಿ ಪ್ರಾರಂಬವಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಮೊದಲ ಜಾಗತಿಕ ಯುದ್ದದ ನಂತರ 1920ರ ದಶಕದಲ್ಲಿ ಅರಬ್ ಬಹುಸಂಖ್ಯಾತರು, ಜ್ಯೂ ಅಲ್ಪಸಂಖ್ಯಾತರು ಇರುವ ಪ್ಯಾಲೆಸ್ಟೀನ್ ಎಂದು ಕರೆಯಲ್ಪಡುವ ಭಾಗವನ್ನು ಬ್ರಿಟೀಶ್ ಸಾಮ್ರಾಜ್ಯಶಾಹಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು ಮತ್ತು ಜ್ಯೂಗಳಿಗೆ ’ರಾಶ್ಟ್ರೀಯ ಮನೆ’ಯನ್ನು ಕಟ್ಟುತ್ತೇವೆ ಎಂದು ಬ್ರಿಟಿಶ್ ಏಕಪಕ್ಷೀಯವಾಗಿ ಘೋಶಿಸಿದಾಗ ಅಲ್ಲಿಂದ ಹೊಸ ಬಿಕ್ಕಟ್ಟು ಶುರುವಾಯಿತು. ಎರಡನೇ ಮಾಹಯುದ್ದ ನಂತರ ಜ್ಯೂಗಳು ಯುರೋಪ್‌ನಿಂದ ಪಲಾಯನಗೈದು ಈ ಪ್ಯಾಲೆಸ್ಟೀನ್ ಪ್ರಾಂತ್ಯಕ್ಕೆ ವಲಸೆ ಬಂದರು. ಇದು ಅಲ್ಲಿನ ಸ್ಥಳೀಯರಾದ ಅರಬ್ ಮುಸ್ಲಿಂ ಮತ್ತು ವಲಸೆಗಾರರಾದ ಜ್ಯೂಗಳ ನಡುವೆ ಕಲಹಕ್ಕೆ ಕಾರಣವಾಯಿತು.
ಅರಬ್ ಮತ್ತು ಜ್ಯೂಗಳ ನಡುವೆ ಶಾಂತಿ ಮೂಡಿಸಲು ವಿಫಲರಾದ ಬ್ರಿಟೀಶರು 1948ರಲ್ಲಿ ಇಸ್ರೇಲ್ ದೇಶವನ್ನು ಘೋಶಿಸಿದರು. ಇದಕ್ಕೆ ಪ್ಯಾಲೆಸ್ಟೀನರು ಆಕ್ಷೇಪಿಸಿದರು. ಯುದ್ದದ ವಾತಾವರಣ ನಿರ್ಮಾಣವಾಯಿತು. ಈ ಅನಾಹುತಕಾರಿ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಪ್ಯಾಲಸ್ಟೇನರು ದೇಶಬ್ರಶ್ಟರಾಗಬೇಕಾಯಿತು ಅಥವಾ ಅವರನ್ನು ಅವರ ತಾಯ್ನಾಡಿನಿಂದ ಹೊರತಳ್ಳಲಾಯಿತು. ಈ ದುರಂತವನ್ನು ಅರಬ್‌ರು ’ಅಲ್ ನಕ್ಬಾ ಎಂದು ಕರೆದರು. ಈ ಅಂತರಿಕ ಯುದ್ದ ಕೊನೆಗೊಂಡು ಶಾಂತಿ ಸೌಹಾರ್ದತೆಯ ಬೆಳಕು ಮೂಡುವಶ್ಟರಲ್ಲಿ ಇಸ್ರೇಲ್ ಆ ಭಾಗದ ಬಹುತೇಕ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದುಕೊಂಡಿತು. ಈ ಯುದ್ದದಲ್ಲಿ ಅಂದಾಜು 7 ಲಕ್ಷ ಪ್ಯಾಲೆಸ್ಟೇನಿಯರು ನಿರಾಶ್ರಿತರಾದರು.

ಜೆರುಸೆಲಂಅನ್ನು ಪಶ್ಚಿಮದಲ್ಲಿ ಇಸ್ರೇಲ್‌ಗೂ ಪೂರ್ವದಲ್ಲಿ ಜೋರ್ಡಾನಿಯನ್‌ಗಳಿಗೂ ಹಂಚಲಾಯಿತು. ಆದರೆ ಈ ಎಲ್ಲಾ ಹಂತಗಳಲ್ಲಿಯೂ ಅದಿಕೃತವಾದ ಶಾಂತಿ ಒಪ್ಪಂದವಾಗಲೇ ಇಲ್ಲ. ಇದಕ್ಕಾಗಿ ಪ್ಯಾಲೆಸ್ಟೇನಿಯರು ದುಬಾರಿ ಬೆಲೆ ತೆರಬೇಕಾಯಿತು ಮತ್ತು ಈಗಲೂ ತೆರುತ್ತಿದ್ದಾರೆ. ಇಸ್ರೇಲ್‌ನ ಈ ಗೂಂಡಾಗಿರಿಯ ಮುಂದುವರೆದ ಭಾಗವಾಗಿ ಮತ್ತೆ 1967ರಲ್ಲಿ ಮತ್ತೊಂದು ಯುದ್ದ ನಡೆಯಿತು. ಆಗ ಇಸ್ರೇಲ್ ಪೂರ್ವ ಜೆರುಸೆಲಂ ಮತ್ತು ವೆಸ್ಟ್ ಬ್ಯಾಂಕ್‌ನ್ನು ಆಕ್ರಮಿಸಿಕೊಂಡಿತು. 1948 ಮತ್ತು 1967ರ ಈ ಯುದ್ದಗಳು ಇಂದಿನ ಇಸ್ರೇಲ್ ಬಯೋತ್ಪಾನೆಗೆ ಮೂಲ ಪ್ರೇರಣೆಯಾಗಿದೆ. 1967ರಿಂದ ನಡೆದ ಇಸ್ರೇಲ್ ಬಾಂಬ್ ದಾಳಿಯಿಂದ ಅಂದಾಜು 50,000 ಪ್ಯಾಲೆಸ್ಟೇನ್ ಮನೆಗಳು ದ್ವಂಸಗೊಂಡಿವೆ.
1960ರ ದಶಕದಲ್ಲಿ ಇಸ್ರೇಲ್ ಬಯೋತ್ಪಾದನೆಯ ವಿರುದ್ದ ಯಾಸೆರ್ ಅರಾಫತ್ ನೇತೃತ್ವದಲ್ಲಿ ’ಪಿಎಲ್‌ಓ’ (ಪ್ಯಾಲೆಸ್ಟೇನ್ ಲಿಬರೇಶನ್ ಆರ್ಗನೈಸೇಶನ್) ಗೆರಿಲ್ಲಾ ಯುದ್ದ ಆರಂಬಿಸಿತು. ಅರಾಫತ್ ಪ್ಯಾಲೆಸ್ಟೇನ್‌ರ ಹೋರಾಟದ ಮುಂಚೂಣಿ ವಹಿಸಿದರು. ಈ ಸಂಘರ್ಶ ಸುಮಾರು ಎರಡು ದಶಕಗಳ ಕಾಲ ಮುಂದುವರೆಯಿತು. ಆದರೆ ಕಡೆಕಡೆಗೆ ಸಂಪೂರ್ಣ ಹತಾಶರಾದ ಅರಾಫತ್ ಅಮೆರಿಕದ ಮದ್ಯಸ್ಥಿಕೆಯಲ್ಲಿ 1993ರ ’ಓಸ್ಲೋ’ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಪ್ರಕಾರ ಇಡೀ ಗಾಜಾ, ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಮೂರು ಭಾಗಗಳಾಗಿ ವಿಬಜಿಸಲಾಯಿತು. ಏರಿಯಾ ’ಎ’ಯನ್ನು ಪ್ಯಾಲೆಸ್ಟೇನ್‌ರಿಗೆ, ಏರಿಯಾ ’ಬಿ’ಯನ್ನು ಪ್ಯಾಲೆಸ್ಟೇನ್ ಮತ್ತು ಇಸ್ರೇಲ್‌ನ ಜಂಟಿ ನಿಯಂತ್ರಣಕ್ಕೆ ಮತ್ತು ಏರಿಯಾ ’ಸಿ’ಯನ್ನು ಇಸ್ರೇಲ್ ನಿಯಂತ್ರಣಕ್ಕೆ ಒಳಪಡುವಂತೆ ಹಂಚಿಕೆ ಮಾಡಲಾಯಿತು. ಆದರೆ ಇಸ್ರೇಲ್‌ಗೆ ದಕ್ಕಿದ ಏರಿಯಾ ’ಸಿ’ನಲ್ಲಿ ಫಲವತ್ತಾದ ಕೃಶಿ ಭೂಮಿ, ಖನಿಜಗಳು, ನೀರಾವರಿ ಪ್ರದೇಶಗಳಿದ್ದವು ಮತ್ತು ಅರಾಫತ್ ಮೋಸಗೊಳಗಾಗಿದ್ದು ಸ್ಪಶ್ಟವಾಗಿತ್ತು. ಈ ಒಪ್ಪಂದದಲ್ಲಿ ಪ್ಯಾಲೆಸ್ಟೇನ್‌ರಿಗೆ ’ನ್ಯಾಯಬದ್ದವಾದ ಮತ್ತು ರಾಜಕೀಯ ಹಕ್ಕುಗಳನ್ನು’ ಮಾನ್ಯಮಾಡಬೇಕೆಂದು ಪ್ರಸ್ತಾಪಿಸಲಾಯಿತು. ಆದರೆ ಈ ಓಸ್ಲೋ ಒಪ್ಪಂದದ ನಂತರದ ಪ್ಯಾಲೆಸ್ಟೇನ್ ಸರಕಾರದ ಸ್ವರೂಪದ ಕುರಿತು, ಅವರ ಜವಬ್ದಾರಿ ಕುರಿತು ಯಾವುದೇ ಸ್ಪಶ್ಟತೆ ಇರಲಿಲ್ಲ. ಮತ್ತು ಗಡಿಗಳ ಕುರಿತು ಎಲ್ಲಿಯೂ ನಿಖರವಾದ ಮಾತುಕತೆ ನಡೆಯಲಿಲ್ಲ. ಚಿಂತಕ ಮತ್ತು ಪ್ಯಾಲೆಸ್ಟೇನ್ ಹಕ್ಕುಗಳ ಹೋರಾಟಗಾರ ಎಡ್ವರ್ಡ ಸೈದ್ ಓಸ್ಲೋ ಒಪ್ಪಂದವನ್ನು ಆತ್ಮಹತ್ಯಾತ್ಮಕ ಎಂದು ಕಟುವಾಗಿ ಟೀಕಿಸಿದ. ಇದೇ ಸಂದರ್ಬದಲ್ಲಿ ಅರಾಫತ್ ಅವರ ಲಿಬರಲ್ ಸೆಕ್ಯಲರಿಸಂಅನ್ನು ವಿರೋದಿಸಿ ಹಿಂಸೆಯನ್ನು ಪ್ರತಿಪಾದಿಸುವ (ಕಣ್ಣಿಗೆ ಕಣ್ಣು ನೀತಿ) ’ಹಮಾಸ್ ಎನ್ನುವ ಸಂಘಟನೆ ಹುಟ್ಟಿಕೊಂಡಿತು ಮತ್ತು ಇಲ್ಲಿಂದ ಇಸ್ರೇಲ್- ಪ್ಯಾಲೆಸ್ಟೇನ್ ನಡುವಿನ ಸಂಘರ್ಶವು ಮತ್ತೊಂದು ತಿರುವಿಗೆ ಹೊರಳಿಕೊಂಡಿತು.
90ರ ದಶಕದಿಂದ ಈ ಬಯೋತ್ಪಾದನೆಯನ್ನು ಮತ್ತಶ್ಟು ಉಗ್ರ ಸ್ವರೂಪದಲ್ಲಿ ಮುಂದುವರೆಸಿದ ಇಸ್ರೇಲ್ ಇಂದಿಗೂ ತನ್ನ ಪ್ಯಾಲೆಸ್ಟೇನ್ ಆಕ್ರಮಣವನ್ನು ಬಿಟ್ಟುಕೊಟ್ಟಿಲ್ಲ ಜೊತೆಗೆ ಪೂರ್ವ ಜೆರುಸೆಲಂನ್ನು ವಶಪಡಿಸಿಕೊಂಡಿದೆ. ಪರದೇಶದ ನೆಲದಲ್ಲಿ ತನ್ನ ಅದಿಪತ್ಯ ಸ್ಥಾಪಿಸಿ ಅಲ್ಲಿನ ಮೂಲನಿವಾಸಿಗಳಾದ ಪ್ಯಾಲೆಸ್ಟೇನಿಯರನ್ನು ನಿರಾಶ್ರಿತರನ್ನಾಗಿ ಮಾಡಿದೆ. 2000-2017ರ ಇಸ್ರೇಲ್ ಬಯೋತ್ಪಾದನೆಯಿಂದ 2000 ಮಕ್ಕಳು ಮೃತರಾಗಿದ್ದಾರೆ ಎಂದು ಅಂತರಾಶ್ಟ್ರೀಯ ಪ್ಯಾಲೆಸ್ಟೇನ್ ಮಕ್ಕಳ ರಕ್ಷಣೆ ಆಯೋಗ ವರದಿ ಮಾಡಿದೆ. ಅವರಲ್ಲಿ 514 ಮಕ್ಕಳು ಎಂಟು ವರ್ಶಕ್ಕಿಂತಲೂ ಕಡಿಮೆ ವಯಸ್ಸಿನವರು. ಇಂತಹ ಬರ್ಬರತೆಯನ್ನು ನಡೆಸಿದ ಇಸ್ರೇಲ್‌ಅನ್ನು ನಾಗರಿಕ ಸಮಾಜ ಎಂದು ಕರೆಯಲು ಸಾದ್ಯವೇ ಇಲ್ಲ. ಮುಂದುವರಿದು ಇಸ್ರೇಲ್ ಸರಕಾರವು ಪ್ಯಾಲೆಸ್ಟೇನ್ ಮಾನವ ಹಕ್ಕುಗಳ ಮೇಲೆ ನಿರಂತರವಾದ ನಿಯಂತ್ರಣವನ್ನು ಹೇರುತ್ತಿದೆ. ತಾನು ಆಕ್ರಮಿತ ಪ್ರದೇಶಗಳಲ್ಲಿ ಅನದಿಕೃತವಾಗಿ ಕಟ್ಟಡಗಳನ್ನು, ತಡೆಗೋಡೆಗಳನ್ನು ಕಟ್ಟಿಕೊಂಡಿದೆ. ಗಾಜಾ ಪಟ್ಟಿಯಿಂದ ಹೊರಗೆ ಮತ್ತು ಹೊರಗಿನಿಂದ ಗಾಜಾ ಪಟ್ಟಿಯೊಳಗೆ ಸರಕುಗಳ ಸಾಕಣೆಯನ್ನು, ನಾಗರಿಕರ ಓಡಾಟಕ್ಕೆ ಕಾನೂನುಬಾಹಿರವಾಗಿ ನಿರ್ಬಂದ ವಿದಿಸಿದೆ. ತಾನು ಆಕ್ರಮಿಸಿಕೊಂಡ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲಿಗರನ್ನು ಅಕ್ರಮವಾಗಿ ನೆಲೆಗೊಳಿಸುತ್ತಿದೆ. 12 ವರ್ಶಗಳ ಕಾಲ ಗಾಜಾ ಗಡಿಯನ್ನು ಮುಚ್ಚಿದ ಇಸ್ರೇಲ್‌ನ ದುಶ್ಟತನದಿಂದ ಅಲ್ಲಿ ವಾಸಿಸುತ್ತಿರುವ 2 ಮಿಲಿಯನ್ ಪ್ಯಾಲೆಸ್ಟೇನ್‌ರಿಗೆ ಶಿಕ್ಷಣ, ಆರ್ಥಿಕ ಮತ್ತಿತರ ಅವಕಾಶಗಳಿಂದ ಮತ್ತು ವೈದ್ಯಕೀಯ ಸೌಲಬ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣ ನಿರ್ಬಂದ ವಿದಿಸಿದ ಕಾರಣದಿಂದ 2001-2005ರ ಅವದಿಯಲ್ಲಿ ಇಸ್ರೇಲ್ ನಿರ್ಮಿತ ಚೆಕ್‌ಪೋಸ್ಟ್ ಬಳಿ 67 ಪ್ಯಾಲೆಸ್ಟೇನ್ ಮಹಿಳೆಯರ ಹೆರಿಗೆ ಮಾಡಲಾಯಿತು. ಇಸ್ರೇಲ್‌ನ ಈ ದಬ್ಬಾಳಿಕೆಯಿಂದ ಪ್ಯಾಲೆಸ್ಟೀನರು ಸ್ವತಃ ತಮ್ಮ ನೆಲದಲ್ಲಿಯೇ ಅತಂತ್ರರಾಗಿ, ಅನಾಥರಾಗಿ ಬದುಕುತ್ತಿದ್ದಾರೆ. ಇಸ್ರೇಲ್‌ನ ಈ ಎಲ್ಲಾ ಕ್ರಿಯೆಗಳು ಅಂತರಾಶ್ಟ್ರೀಯ ಮಾನವೀಯ ಕಾನೂನುಗಳ ಉಲ್ಲಂಘನೆಯಾಗಿದೆ.

ಇಂಡಿಯಾ ದೇಶವು ಅಂದಕಾಲತ್ತಿನಿಂದಲೂ ಪ್ಯಾಲೆಸ್ಟೇನ್ ಪರವಾಗಿ ನಿಂತು ಬೆಂಬಲಿಸುತ್ತಾ ಬಂದಿದೆ. 1947ರಲ್ಲಿ ವಿಶ್ವಸಂಸ್ಥೆಯು ಪ್ಯಾಲೆಸ್ಟೇನ್‌ನನ್ನು ವಿಬಜಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಭಾರತವು ಇದನ್ನು ವಿರೋದಿಸಿತು. 1988ರಲ್ಲಿ ಪ್ಯಾಲೆಸ್ಟೇನ್ ರಾಜ್ಯವನ್ನು ಮಾನ್ಯ ಮಾಡಿದ ಇಂಡಿಯಾ ಈ ನಿಲುವನ್ನು ಪ್ರಕಟಿಸಿದ ಮೊದಲ ಅರಬ್ ಅಲ್ಲದ ದೇಶವೆಂದು ಹೆಸರು ಗಳಿಸಿತು. ಮತ್ತು ವಿಶ್ವಸಂಸ್ಥೆಯ ಪ್ರತಿ ನಿಲುವಳಿ ಮಂಡನೆಯ ಸಂದರ್ಬದಲ್ಲಿ ಪ್ಯಾಲೆಸ್ಟೇನ್‌ಅನ್ನು ಬೆಂಬಲಿಸುತ್ತಾ ಬಂದಿದೆ. ಮೋದಿ ಸರಕಾರ ಬಂದ ನಂತರ ಪ್ಯಾಲೆಸ್ಟೀನ್ ಹಿತಾಸಕ್ತಿ ಕುರಿತಂತೆ ಭಾರತದ ನಿಲುವು ಬದಲಾಗಿದೆ. ನೈಜ ಇತಿಹಾಸದ ಅರಿವಿಲ್ಲದ ಇಲ್ಲಿನ ಸಂಘಪರಿವಾರವು ತನ್ನ ಪ್ರತಿಗಾಮಿ ಸಿದ್ದಾಂತಗಳ ಕಾರಣಕ್ಕಾಗಿ ಇಸ್ರೇಲ್‌ನ್ನು ಬೆಂಬಲಿಸುತ್ತಾ ಬಂದಿದೆ ಮತ್ತು ಮೋದಿ ಸರಕಾರದ ಇಸ್ರೇಲ್ ಪರವಾದ ಒಲವು ಅಂತರಾಶ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೂ ಚ್ಯುತಿ ಬರಲಿಕ್ಕೆ ಕಾರಣವಾಯಿತು. ಇಲ್ಲಿನ ಬಕ್ತರು ಮತಿಬ್ರಮಣೆಗೊಂಡವರಂತೆ ಇಸ್ರೇಲ್ ದಾಳಿಯನ್ನು ಸಂಬ್ರಮಿಸುತ್ತಿದ್ದರೆ ಅತ್ತ ಭಾರತವು ಅನಿವಾರ್ಯವಾಗಿ 17, ಮೇ 2021ರಂದು ನಡೆದ ವಿಶ್ವಸಂಸ್ಥೆಯ ಬದ್ರತಾ ಸಮಿತಿಯ ಸಬೆಯಲ್ಲಿ ಪ್ಯಾಲೆಸ್ಟೇನ್ ಹಿತಾಸಕ್ತಿಯನ್ನು ಬೆಂಬಲಿಸಿದೆ. ಎರಡೂ ಕಡೆಯಿಂದ ಶಾಂತಿ ಒಪ್ಪಂದವಾಗಬೇಕೆಂದು ಆಶಿಸಿದೆ. ಆದರೆ ತನ್ನ ನಾಲ್ಕು ನಿಮಿಶಗಳ ಬಾಶಣದಲ್ಲಿ ಭಾರತದ ಖಾಯಂ ಪ್ರತಿನಿದಿ ತಿರುಮೂರ್ತಿ ಎಲ್ಲಿಯೂ ಇಸ್ರೇಲ್ ದಾಳಿಯನ್ನು ಖಂಡಿಸಲಿಲ್ಲ ಮತ್ತು ಎರಡೂ ದೇಶಗಳ ನಡುವಿನ ಗಡಿ ವಿವಾದದ ಕುರಿತು ತನ್ನ ನಿಲುವನ್ನು ಪ್ರಕಟಿಸಲಿಲ್ಲ. ಪೂರ್ವ ಜೆರುಸೆಲಂ ಕುರಿತು ಯಥಾಸ್ಥಿತಿ ಮುಂದುವರೆಸಲು ಬಯಸಿದೆ ಎಂದು ಹೇಳಿದರು. ಆದರೆ ವಾಸ್ತವದಲ್ಲಿ ಈ ಪೂರ್ವ ಜೆರುಸೆಲಂ ಪ್ಯಾಲೆಸ್ಟೀನ್ ರಾಜದಾನಿ ಎಂದೇ ಪರಿಗಣಿಸಲಾಗಿದೆ. ಭಾರತದ ಹಿಂದಿನ ಸರಕಾರಗಳು ಪ್ಯಾಲೆಸ್ಟೀನ್ ರಾಜದಾನಿ ಪರ ಸೂಚ್ಯವಾಗಿ ಒತ್ತಾಯಿಸುತ್ತಲೇ ಬಂದಿದ್ದರು. ಹೀಗಾಗಿ ಭಾರತದ ಈ ನಿಲುವು ಸಮಸ್ಯಾತ್ಮಕವಾಗಲಿದೆ.
ಇಸ್ರೇಲ್‌ನ ಬಯೋತ್ಪಾದನೆ ಒಂದೆಡೆಯಾದರೆ, ಮತ್ತೊಂದೆಡೆ ಹಮಾಸ್‌ನ ಉಗ್ರ ದಾಳಿಯನ್ನು ನಿಯಂತ್ರಿಸುವ ಸಾದ್ಯತೆಗಳೂ ಸಹ ಕ್ಷೀಣಿಸುತ್ತಿದೆ. ಹಮಾಸ್‌ನ ದಾಳಿಕೋರುತನವನ್ನು ಇಸ್ರೇಲ್‌ನ ಬಯೋತ್ಪಾದನೆಯ ವಿರುದ್ದದ ಪ್ರತಿರೋದ ಎಂದು ಅರುಂದತಿ ರಾಯ್ ಅಬಿಪ್ರಾಯ ಪಟ್ಟಿದ್ದಾರೆ. ಆದರೆ ಇಸ್ರೇಲ್-ಪ್ಯಾಲೆಸ್ಟೇನ್ ಸಂಘರ್ಶದಲ್ಲಿ ಅಮೆರಿಕದ ಮದ್ಯಸ್ಥಿಕೆಯ ಸಾದ್ಯತೆಗಳು ಮತ್ತು ಅದರ ನ್ಯಾಯಪರತೆಯ ಕ್ಷೀಣಿಸುತ್ತಿವೆ. ಇಸ್ರೇಲ್‌ನ ಬಯೋತ್ಪಾದನೆಯನ್ನು ಬೆಂಬಲಿಸುವ ಅಮೆರಿಕದಿಂದ ಯಾವುದೇ ಬಗೆಯ ನ್ಯಾಯವಂತಿಕೆಯನ್ನು ನಿರೀಕ್ಷಿಸಲು ಸಾದ್ಯವಿಲ್ಲ. ಇನ್ನುಳಿದಂತೆ ಯುರೋಪ್ ದೇಶಗಳು ತಮ್ಮ ನಿಲುವನ್ನು ಸ್ಪಶ್ಟಪಡಿಸುತ್ತಿಲ್ಲ. ಇಸ್ರೇಲ್ ಮತ್ತು ಹಮಾಸ್ ದಾಳಿಯನ್ನು ಖಂಡಿಸಿವೆ ಆದರೆ ಇಸ್ರೇಲ್ ಕಾನೂನುಬಾಹಿರವಾಗಿ ಪ್ಯಾಲಸ್ಟೇನ್, ಪೂರ್ವ ಜೆರುಸಲಂನ ಆಕ್ರಮಿಸಿಕೊಂಡಿರುವುದನ್ನು ವಿರೋದಿಸುತ್ತಿಲ್ಲ. ಇನ್ನು ಬಹುತೇಕ ಅರಬ್ ದೇಶಗಳೂ ಸಹ ಅಮೆರಿಕದ ಪರವಾಗಿವೆ. ಮತ್ತು ಏಶ್ಯಾದ ದೇಶಗಳ ಪೈಕಿ ಭಾರತದಲ್ಲಿ ಬಲಪಂಥೀಯ ಸರಕಾರವಿದೆ ಮತ್ತು ಈ ಮೋದಿ ಸರಕಾರವು ಎಂತಹ ಸಂದರ್ಬದಲ್ಲಿಯೂ ಇಸ್ರೇಲ್‌ನ ಏಕಪಕ್ಷೀಯ ದಾಳಿಯನ್ನು ಖಂಡಿಸುವುದಿಲ್ಲ. ಕಡೆಗೂ ಈ ಸಂಘರ್ಶದ ಅಂತ್ಯ ಹೇಗೆ ಎನ್ನುವ ಯಕ್ಷಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆಶಾವಾದದ ಬೆಳಕು ಗೋಚರಿಸುತ್ತಿಲ್ಲ. ದಶಕಗಳಿಂದ ತಮ್ಮ ಸ್ಪೂರ್ತಿ ಮತ್ತು ದೈರ್ಯದ ಬಲದಿಂದ ಇಸ್ರೇಲ್ ದಾಳಿಗೆ ಪ್ರತಿರೋದ ವ್ಯಕ್ತಪಡಿಸುತ್ತಿರುವ ಪ್ಯಾಲಸ್ಟೇನ್‌ರ ಬಳಿ ನೈತಿಕ ಶಕ್ತಿ ಇನ್ನೂ ದೃಡಾಗಿದೆ. ಆದರೆ ಇದು ಮೇಲ್ನೋಟಕ್ಕೆ ಕಾಣುವಂತೆ ಸರಳವಾಗಿಲ್ಲ.
ಉಪಸಂಹಾರ
ಪ್ಯಾಲೆಸ್ಟೇನ್ ಮಾನವ ಹಕ್ಕುಗಳ ಹೋರಾಟಗಾರ್ತಿ ರಫೀಫ್ ಜಿಯಾದ 2011ರಲ್ಲಿ ಬರೆ ಕವಿತೆ ಸಾಲುಗಳು
ಅರಬ್‌ನ ನಾಲಗೆಯಲ್ಲಿ ಮಾತನಾಡಲು ನನಗೆ ಅನುಮತಿ ಕೊಡಿ
ಅವರು ನನ್ನ ಬಾಶೆಯನ್ನು ಆಕ್ರಮಿಸಿಕೊಳ್ಳುವುದಕ್ಕಿಂತಲೂ ಮೊದಲು
ನನ್ನ ತಾಯ್ನುಡಿಯಲ್ಲಿ ಮಾತನಾಡಲು ಅನುಮತಿ ಕೊಡಿ
ಅವರು ಆಕೆಯ ನೆನಪನ್ನು ವಸಾಹತೀಕರಣಗೊಳಿಸುವುದಕ್ಕೂ ಮೊದಲು….
ನಾನು ನಿಮಗೆ ಹೇಳಲು ಬಯಸುತ್ತೇನೆ, ನನ್ನೊಳಗಿನ ಈ ಗರ್ಭವು
ಮತ್ತೊಬ್ಬ ಬಂಡಾಯಗಾರರಿಗೆ ಜನ್ಮ ಕೊಡುತ್ತದೆ
ಆಕೆಯ ಒಂದು ಕೈಯಲ್ಲಿ ಬಂಡೆ ಮತ್ತೊಂದು ಕೈಯಲ್ಲಿ ಪ್ಯಾಲೆಸ್ಟೀನ್ ದ್ವಜ
ನಾನು ಬಣ್ಣದಲ್ಲಿ ಅರಬ್ ಮಹಿಳೆ
ನನ್ನ ಸಿಟ್ಟಿನ ಕುರಿತು ಎಚ್ಚರಿಕೆಯಿಂದಿರಿ….


