ಬಿಹಾರದ ರಾಜಧಾನಿಗೆ ಹೊಂದಿಕೊಂಡಂತೆ ಇರುವ ದನಪುರ ನಗರವನ್ನು ಸಂಪರ್ಕಿಸುವ ಪಿಪಾ ಬೃಹತ್ ಸೇತುವೆ ನಿನ್ನೆಯ ಮಹಾ ಮಳೆಗೆ ಇಬ್ಬಾಗವಾಗಿದೆ.
ಪಾಟ್ನಾ ನಗರದ ಹೊರ ವಲಯವಾದ ದೈರಾ ಪ್ರದೇಶದ ಜನರಿಗೆ ಪಟ್ನಾದ ಸಂಪರ್ಕ ಸೇತು ವಾಗಿದ್ದ ಪಿಪಾ ಬಿಡ್ಜ್ ನದಿಯಲ್ಲಿ ಕೊಚ್ಚಿ ಹೋಗಿದೆ. ಇದರಿಂದ ದೈರಾ ಮತ್ತು ಪಾಟ್ನಾ ನಗರಕ್ಕೆ ಇದ್ದ ಸಂಪರ್ಕ ಮಾರ್ಗ ಕಡಿತಗೊಂಡಿದೆ. ಸೇತುವೆ ಕೊಚ್ಚಿ ಹೋಗಿರುವ ದುರಂತದಿಂದ ದನಪುರ ದೈರಾ ಮಾರ್ಗದ 6 ಪಂಚಾಯತ್‌ಗಳ ಸಂಪರ್ಕವೂ ಕಡಿತಗೊಂಡಿದೆ.
ಬಿಹಾರ ರಾಜ್ಯ ಪೂಲ್ ನಿರ್ಮಾಣ ನಿಗಮದ ಕಾರ್ಯಕಾರಿ ಅಧಿಕಾರಿ ಮಹಮದ್ ಖುರ್ಷಿದ್ ಈ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜೂನ್ 1 ರಿಂದ ಜೂನ್ 7 ಅವಧಿಯಲ್ಲಿ ಸೇತುವೆ ರಿಪೇರಿಗೆ ದಿನ ನಿಗದಿ ಮಾಡಲಾಗಿತ್ತು. ಆ ಸಂಬಂಧ ಮೇ 26 ರಂದು ಅಧಿಕೃತ ಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ರಿಪೇರಿಗೆ ಮುನ್ನವೇ ಸೇತುವೆ ಕೊಚ್ಚಿಹೋಗಿದೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾನಪುರ ದೈರಾ ನಡುವಿನ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರವನ್ನು ಸದ್ಯ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಘಟನೆಯು ಬಿಹಾರದ ಜನರಿಗೆ ಕಳೆದ ವಾರ ಒರಿಸ್ಸಾ ಮತ್ತು ಬಂಗಾಳಕ್ಕೆ ಅಪ್ಪಳಿಸಿದ ಯಾಸ್ ಚಂಡಮಾರುತವನ್ನು ನೆನಪಿಸಿದೆ.
ಬಿಹಾರದಲ್ಲಿ ಈ ಮಹಾಮಳೆಗೆ ನೂರಾರು ಜನರು ಸಂತ್ರಸ್ತರಾಗಿದ್ದಾರೆ. ಗುಡಿಸಲುಗಳು ಮತ್ತು ಅನೇಕ ಕಡೆ ಮನೆಯ ಛಾವಣಿಗಳು ಕುಸಿದಿವೆ. ಬಿಹಾರದ ಅನೇಕ ಭಾಗಗಳಲ್ಲಿ 2-3 ದಿನಗಳಿಂದ ಭಾರಿ ಮಳೆಯಾಗುತ್ತಿದೆ.
ಮಹಾಮಳೆಯ ಪರಿಣಾಮ ಬಿಹಾರದ ಕತಿಹಾರ್ ಜಿಲ್ಲಾಸ್ಪತ್ರೆಯಲ್ಲಿ ನೀರು ನುಗ್ಗಿದ್ದು ಆಸ್ಪತ್ರೆಯ ಕಾರಿಡಾರ್ ಸಂಪೂರ್ಣ ಜಲಾವೃತಗೊಂಡಿದೆ.
ಯಾಸ್ ಚಂಡಮಾರುತ ಪರಿಣಾಮವಾಗಿ ಬಿಹಾರದಲ್ಲಿ ಮಹಾಮಳೆಯಾಗುತ್ತಿದೆಯೆಂದು ಹವಾಮಾನ ಇಲಾಖೆ ಹೇಳಿದೆ. ಭೀಕರ ಯಾಸ್ ಚಂಡ ಮಾರುತಕ್ಕೆ ಪಶ್ಚಿಮ ಬಂಗಾಳ, ಒರಿಸ್ಸಾ, ಝಾರ್ಖಂಡ ಭಾಗದಲ್ಲಿ ಇದುವರೆಗೆ 5 ಜನ ಮೃತಪಟ್ಟಿರುವುದು ವರದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸರ್ವೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ: ಬ್ರಿಟನ್‌ನಲ್ಲಿ ಕೊರೋನಾ ಇಳಿಮುಖ: ಜೂನ್ 1 ರಂದು ಶೂನ್ಯ ಸಾವಿನ ವರದಿ


