ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂಧು ಅಧಿಕಾರಿ ಮತ್ತು ಅವರ ಸಹೋದರನ ವಿರುದ್ಧ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಜೂನ್ 1 ರಂದು ಕಾಂಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಿಂದ 150 ಕಿಲೋ ಮೀಟರ್ ದೂರದ ಮಿಡ್ನಾಪುರ್ ಜಿಲ್ಲೆಯ ಪುರಸಭೆಯಿಂದ ಸುವೇಂಧು ಮತ್ತವರ ಸಹೋದರ ಸುಮೇಂಧು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಕಾಂಥಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನದೀಪ್ ಮನ್ನ ಎಂಬುವವರು ಸುವೇಂಧು ಸಹೋದರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
29 ಮೇ 2021 ರ ಮಧ್ಯಾಹ್ನ 12:30 ಗಂಟೆಯ ಹೊತ್ತಿಗೆ ಸುವೇಂಧು ಅಧಿಕಾರಿ ಮತ್ತು ಪುರಸಭೆಯ ಮಾಜಿ ಅಧ್ಯಕ್ಷ ಸುಮೇಂಧು ಅವರ ಮಾರ್ಗದರ್ಶನದಲ್ಲಿ ಕೆಲವರು ಮುನ್ಸಿಪಾಲ್ಟಿಯ ಗೋಡೌನ್‌ನಲ್ಲಿ ಇರಿಸಲಾಗಿದ್ದ ಲಕ್ಷಾಂತರ ಮೌಲ್ಯದ ಸರಕಾರ ಪರಿಹಾರ ಸಾಮಾಗ್ರಿಗಳನ್ನು ಬಲವಂತದಿಂದ ಕೊಂಡೊಯ್ದಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಗೋಡೌನ್ ಬೀಗವನ್ನು ಸಹ ಒಡೆಯಲಾಗಿದೆ ಎಂದು ದೂರಿನಲ್ಲಿ ರತ್ನದೀಪ್ ಮನ್ನ ಆರೋಪಿಸಿದ್ದಾರೆ.
ಬಿಜೆಪಿಯು ಈ ಹಿಂದೆ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರದ ಪರಿಹಾರ ಸಾಮಾಗ್ರಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತ ಬಂದಿತ್ತು. ಈಗ ತಮ್ಮ ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಾಲಾಗಿರುವ ಕುರಿತು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲು ಅದು ಮುಂದಾಗಿಲ್ಲ.
ಹಾಗೇ ಪ್ರಕರಣದಲ್ಲಿ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಮತ್ತು ಅವರ ಸಹೋದರ ತಮ್ಮ ರಕ್ಷಣೆಗೆ ಕೇಂದ್ರ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ಸಹ ಬಳಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸುವೇಂಧು ಅಧಿಕಾರಿಯವರು ಇದುವರೆಗೆ ಈ ಸಂಬಂಧ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಇದನ್ನೂ ಓದಿ; ಪಶ್ಚಿಮ ಬಂಗಾಳ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಮೂವರು ಬಿಜೆಪಿ ಶಾಸಕರ ಬಂಧನ


