ದೆಹಲಿಯ ಗೋವಿಂದ್ ವಲ್ಲಭ್ ಪಂತ್ ಆಸ್ಪತ್ರೆ (GIPMER) ತನ್ನ ನರ್ಸ್‌ಗಳು ಮಲಯಾಳಿ ಭಾಷೆಯಲ್ಲಿ ಮಾತನಾಡುವುದನ್ನು ನಿಷೇಧಿಸಿದೆ. ಆಸ್ಪತ್ರೆಯ ಆವರಣದಲ್ಲಿ ಮಲಯಾಳಂ ಬದಲು ಹಿಂದಿಯಲ್ಲಿಯೇ ಮಾತಾಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ತನ್ನ ಆರೋಗ್ಯ ಸಿಬ್ಬಂದಿಗೆ ಕಠಿಣವಾದ ಎಚ್ಚರಿಕೆ ಮತ್ತು ನಿರ್ದೇಶನಗಳನ್ನು ನೀಡಿದೆ. ಜೊತೆಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಹೆಚ್ಚಿನ ರೋಗಿಗಳು ಮಲಯಾಳಂ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ನರ್ಸ್‌ಗಳು ಮಲಯಾಳಂ ಭಾಷೆಯಲ್ಲಿ ಸಂಭಾಷಣೆಯನ್ನು ನಡೆಸತೊಡಗಿದರೆ ರೋಗಿಗಳಲ್ಲಿ ಅಸಹಾಯಕ ಭಾವನೆ ಹುಟ್ಟುತ್ತದೆ. ಹಾಗಾಗಿ ಮಲಯಾಳಂ ಭಾಷೆಯಲ್ಲಿ ಮಾತನಾಡದಂತೆ ನರ್ಸ್‌ಗಳಿಗೆ ಆದೇಶಿಸಿದ್ದೇವೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ನಾವು 300-350 ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಯಾವಾಗಲೂ ಹಿಂದಿಯಲ್ಲಿಯೇ ರೋಗಿಗಳೊಂದಿಗೆ ಸಂಭಾಷಣೆ ನಡೆಸುತ್ತೇವೆ. ನಾವು ಮಲಯಾಳಂ ನಲ್ಲಿ ಮಾತನಾಡಿದರೆ ರೋಗಿಗಳಿಗೆ ಏನೂ ಅರ್ಥವಾಗುವುದಿಲ್ಲವೆಂದೂ ತಿಳಿದಿದೆ. ಆದರೆ ನಾವು ಸಿಬ್ಬಂದಿಗಳು ಪರಸ್ಪರ ಮಾತನಾಡುವಾಗ ಮಲೆಯಾಳಂ ಭಾಷೆಯನ್ನು ಬಳಸುವಂತಿಲ್ಲ ಎಂದು ಈಗ ಆಸ್ಪತ್ರೆ ಹೇಳಿದೆ ಎಂದು ನರ್ಸ್ ಒಬ್ಬರು ತಿಳಿಸಿದ್ದಾರೆ.
ದೆಹಲಿಯ ಗೋವಿಂದ್ ವಲ್ಲಭ ಪಂತ್ ಆಸ್ಪತ್ರೆಯ ಮಲಯಾಳಂ ವಿರೋಧಿ ಧೋರಣೆಗೆ ದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ದೇಶದಲ್ಲಿ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಭಾಷೆಯಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕಿದೆ. ಸಂವಿಧಾನದ ಅನುಚ್ಛೇಧ 19 ರಲ್ಲಿ ಹೇಳಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಸ್ಪತ್ರೆ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಶಿ ತರೂರ್, ಥಾಮಸ್ ಐಸಾಕ್ ಸೇರಿದಂತೆ ದೇಶದ ಅನೇಕ ರಾಜಕೀಯ ನಾಯಕರು ಮತ್ತು ಗಣ್ಯರು ದೆಹಲಿ ಆಸ್ಪತ್ರೆಯ ಹಿಂದಿ ಹೇರಿಕೆಯ ವಿರುದ್ಧ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.






ದೆಹಲಿ ಆಸ್ಪತ್ರೆಯ ಈ ಕ್ರಮ ಕಂಡನಾರ್ಹ. ಸಂವಿಧಾನಾತ್ಮಕ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಈ ಆಸ್ಪತ್ರೆ ಈ ಕೂಡಲೇ ನಿಲ್ಲಿಸಬೇಕು.