ಓರಿಸ್ಸಾದ ಕೇಂದ್ರಪರ ಊರಿನಲ್ಲಿ ಮೊಸಳೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. 52 ವರ್ಷದ ವರ್ಷದ ವ್ಯಕ್ತಿ ಸ್ನಾನಕ್ಕೆಂದು ಜಗನ್ನಾಥಪುರ ಗ್ರಾಮದ ಬ್ರಹ್ಮಾಣಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೇಂದ್ರಪರ ಸಮೀಪದ ಹಳ್ಳಿಗಳಲ್ಲಿ ಮೊಸಳೆ ದಾಳಿಗೆ ಮನುಷ್ಯ ಬಲಿಯಾಗುತ್ತಿರುವುದು ಇದು 2 ನೇ ಘಟನೆ. ಕಳೆದ 3 ದಿಗಳಲ್ಲಿ ಇಬ್ಬರು ವ್ಯಕ್ತಿಗಳು ಮೊಸಳೆ ದಾಳಿಗೆ ಬಲಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ 1:30 ಗಂಟೆ ಹೊತ್ತಿನಲ್ಲಿ ಜಗನ್ನಾಥಪುರ ಗ್ರಾಮದ ಪುರುಷೋತ್ತಮ್ ಧಾಲ್ ಎಂಬುವವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಅವರನ್ನು ನದಿಯ ಆಳಕ್ಕೆ ಎಳೆದುಕೊಂಡು ಹೋಗಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಮಸ್ಥರು ಜೋರಾಗಿ ಕಿರುಚಿಕೊಂಡಿದ್ದಾರೆ. ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆ ಹೊತ್ತಿಗಾಗಲೇ ಮೊಸಳೆ ವ್ಯಕ್ತಿಯನ್ನು ಕೊಂದಾಗಿತ್ತು. ಪುರುಷೋತ್ತಮ್ ಅವರ ಮೃತದೇಹಕ್ಕಾಗಿ ಗ್ರಾಮಸ್ಥರು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಇದುವರೆಗೆ ದೇಹ ಪತ್ತೆಯಾಗಿಲ್ಲ.

ಇದಕ್ಕು ಮೊದಲು ಜೂನ್ 13ರ ಭಾನುವಾರ ಅರ್ಧ ತಿಂದ ಮಹಿಳೆಯ ದೇಹ ಸಮೀಪದ ವೆಕ್ಟಾ ಹಳ್ಳಿಯಲ್ಲಿ ಪತ್ತೆಯಾಗಿತ್ತು. ಉಪ್ಪುನೀರಿನ ಮೊಸಳೆಯೊಂದು ಮಹಿಳೆಯನ್ನು ನದಿಗೆ ಎಳೆದೊಯ್ದು ಕೊಂದುಹಾಕಿತ್ತು. ಈ ಎರಡು ಘಟನೆಗಳು ಬಿಥರ್‌ಕನಿಕಾ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನಡೆದಿವೆ. ಹೆಚ್ಚುತ್ತಿರುವ ಮೊಸಳೆ ದಾಳಿಯಿಂದ ನದಿ ದಂಡೆಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬಿಥರ್‌ಕನಿಕಾ ರಾಷ್ಟ್ರೀಯ ಉದ್ಯಾನವನವು ಸರಿ ಸುಮಾರು 1,768 ಉಪ್ಪುನೀರಿನ ಮೊಸಳೆಗಳಿಗೆ ಆಶ್ರಯತಾಣವಾಗಿದೆ. ಅದರಲ್ಲಿ ಕೆಲವು ಮೊಸಳೆಗಳು ದಾರಿತಪ್ಪಿ ರಾಷ್ಟ್ರೀಯ ಉದ್ಯಾನದ ಆಚೆಯ ನದಿ ದಂಡೆಯ ಗ್ರಾಮಗಳತ್ತ ಹೋಗಿವೆ. ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ನದಿ ದಂಡೆಗಳಿಗೆ ಪ್ರವೇಶಿಸದಂತೆ ಗ್ರಾಮಸ್ಥರಿಗೆ ಸೂಚನೆಯನ್ನು ನೀಡಿದ್ದೇವೆ. ಅಪಾಯಕಾರಿ ಮೊಸಳೆಗಳು ಇರುವುದನ್ನು ಲೆಕ್ಕಿಸದೇ ಗ್ರಾಮಸ್ಥರು ನದಿಗಳಿಗೆ ಹೋಗುತ್ತಿದ್ದಾರೆ. ಇದರಿಂದ ಹೆಚ್ಚು ಮಾನವ ಮತ್ತು ಮೊಸಳೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಅನೇಕ ವ್ಯಕ್ತಿಗಳು ಮೊಸಳೆ ದಾಳಿಗೆ ಬಲಿಯಾಗುತ್ತಿದ್ದಾರೆ ಎಂದು ಡಿವಿಜನಲ್ ಫಾರೆಸ್ಟ್ ಆಫಿಸರ್ ಬಿಕಾಶ್ ರಂಜನ್ ದಾಶ್ ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನದಿ ತೀರದಲ್ಲಿ ಸಾಕಷ್ಟು ಬ್ಯಾರಕೇಡ್‌ಗಳನ್ನು ಅಳವಡಿಸಿ ಮೊಸಳೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯುವ ಕೆಲಸವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸುತ್ತಿದ್ದಾರೆ ಎಂದು DFO ಬಿಕಾಶ್ ರಂಜನ್ ದಾಶ್ ತಿಳಿಸಿದ್ದಾರೆ.
ಇದನ್ನೂ ಓದಿ : ರಮೇಶ್ ಜಾರಕಿಹೋಳಿ ಸಂಪುಟ ಸೇರ್ಪಡೆಗೆ ಬಿಜೆಪಿಯಲ್ಲಿ ತೆರೆಮರೆಯ ಕಸರತ್ತು


