ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ನಟ ಸಂಚಾರಿ ವಿಜಯ್ (38) ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಚಿಕ್ಕಮಗಳೂರಿನ ಪಂಚನಹಳ್ಳಿಗೆ ತರಲಾಗಿದೆ. ಪ್ರತಿಭಾವಂತ ನಟನ ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಸೇರಿದಂತೆ ನೆರೆಯ ಊರಿನವರು ಸೇರಿದ್ದಾರೆ. ಅವರ ಸ್ನೇಹಿತ ರಘು ಎಂಬವರ ತೋಟದಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಕಳೆದ ಶನಿವಾರ ರಾತ್ರಿ ಬೈಕ್ ಅಪಘಾತಕ್ಕೀಡಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ಸೇರಿದ್ದ ವಿಜಯ್ ಅವರು ಮಂಗಳವಾರ ಮುಂಜಾನೆ ಮೃತಪಟ್ಟರು ಎಂದು ಆಸ್ಪತ್ರೆಯು ಅಧೀಕೃತವಾಗಿ ಘೋಷಿಸಿತ್ತು. ಅಂತಿಮ ದರ್ಶನಕ್ಕಾಗಿ ಇಂದು ಬೆಳಿಗ್ಗೆ ಮೃತ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿತ್ತು. ಅಲ್ಲಿ ಸಿನಿಮಾ ನಟರು, ರಂಗಭೂಮಿ ಕಲಾವಿದರು, ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಅಂತಿಮ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: Sanchari Vijay | ಬೈಕ್ ಅಪಘಾತಕ್ಕೀಡಾಗಿದ್ದ ನಟ ಸಂಚಾರಿ ವಿಜಯ್ ನಿಧನ
ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಚೆನ್ನೈನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿ ಕನ್ನಡದಲ್ಲೇ ಸಂತಾಪ ಸೂಚಿಸಿದೆ. ಅದು ತನ್ನ ಟ್ವೀಟ್‌ನಲ್ಲಿ, “ರಾಷ್ಟ್ರ ಪ್ರಶಸ್ತಿ ವಿಜೇತ #SanchariVijay ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ “ನಾನು ಅವನಲ್ಲ…ಅವಳು” ಪ್ರದರ್ಶನ-ಸಂವಾದದಲ್ಲಿ ಸಂಚಾರಿ ವಿಜಯ್ ಭಾಗಿಯಾಗಿದ್ದರು. #RIP” ಎಂದು ಬರೆದಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ #SanchariVijay ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ #Pride ತಿಂಗಳ ಆಚರಣೆಯ ಅಂಗವಾಗಿ LGBTQi+ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ “ನಾನು ಅವನಲ್ಲ…ಅವಳು” ಪ್ರದರ್ಶನ-ಸಂವಾದದಲ್ಲಿ ಭಾಗಿಯಾಗಿದ್ದ ಸಂಚಾರಿ ವಿಜಯ್. #RIP
— US Consulate Chennai (@USAndChennai) June 15, 2021
ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ರಂಗಾಪುರ ಗ್ರಾಮದ ವಿಜಯ್ ಅವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಂಗಭೂಮಿ ಕಲಾವಿದರಾಗಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇವರು ನಟಿಸಿದ್ದ ನಾನು ಅವನಲ್ಲ…ಅವಳು ಕನ್ನಡ ಸಿನಿಮಾ ಚಿತ್ರಕ್ಕೆ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಈ ಚಿತ್ರದಲ್ಲಿ ಅವರು ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ.
ನಾತಿಚರಾಮಿ, ದಾಸವಾಳ, ಪಾದರಸ, ವರ್ತಮಾನ, ಒಗ್ಗರಣೆ, ರಂಗಪ್ಪ ಹೋಗ್ಬಿಟ್ನ, ಉಲವಚಾರು ಬಿರಿಯಾನಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.
ಇದನ್ನೂ ಓದಿ: ನಟ ಸಂಚಾರಿ ವಿಜಯ್ ನಿಧನ: ಗಣ್ಯರು, ಅಭಿಮಾನಿಗಳಿಂದ ಅಂತಿಮ ದರ್ಶನ


