ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯ ಮುಂದೆ ಹಾಜರಾದ ಟ್ವಿಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಗುಫ್ತ ಕಮ್ರಾನ್ ಮತ್ತು ಕಾನೂನು ಪ್ರತಿನಿಧಿ ಆಯುಶಿ ಕಪೂರ್ ಭಾರತೀಯ ಕಾನೂನುಗಳು ಸರ್ವೋಚ್ಛವಾಗಿದ್ದು, ಅವುಗಳಿಗೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಸಂಸದೀಯ ಸಮಿತಿಯ ವಿಚಾರಣೆ ವೇಳೆ ಸಂಸದೀಯ ಸಮಿತಿಯು ಟ್ವಿಟ್ಟರ್‌ಗೆ ಹಲವು ಕಠಿಣ ಪ್ರಶ್ನೆಗಳನ್ನು ಕೇಳಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕಂಪನಿಯು ದೇಶದ ಕಾನೂನನ್ನು ಪಾಲಿಸಲು ಸಿದ್ಧವಿದೆಯೇ ಎಂದು ಸಂಸದೀಯ ಸಮಿತಿಯು ಕೇಳಿದಾಗ ಟ್ವಿಟರ್ ಪ್ರತಿನಿಧಿಗಳು “ಟ್ವಿಟರ್ ತನ್ನದೇ ಆದ ನೀತಿ ನಿಯಮಗಳಿವೆ. ಆದರೆ ಭಾರತೀಯ ಕಾನೂನುಗಳು ಸರ್ವೋಚ್ಛವಾಗಿದ್ದು, ಅವುಗಳಿಗೆ ಬದ್ಧರಾಗಿರುತ್ತೇವೆ” ಎಂದು ಉತ್ತರಿಸಿದೆ.
ನಾವು ಪಾರ್ಲಿಮೆಂಟಿನ ಸ್ಟ್ಯಾಂಡಿಂಗ್ ಕಮಿಟಿಯ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ದೇಶದ ಜನರ ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗೆ ಟ್ವಿಟರ್ ಸದಾ ಬದ್ಧವಾಗಿದೆ. ಪಾರದರ್ಶಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನರ ಖಾಸಗಿತನದೊಂದಿಗೆ ಟ್ವಿಟ್ಟರ್ ಎಂದೂ ರಾಜಿಯಾಗುವುದಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಜನರ ಸುರಕ್ಷತೆ, ಅಪರಾಧ ತಡೆ, ದೇಶದ ಭದ್ರತೆಗೆ ಸಂಬಂಧಿಸಿದ ಹಾಗೆ ನಾವು ಭಾರತ ಸರ್ಕಾರದೊಂದಿಗಿನ ನಮ್ಮ ಆದ್ಯತೆ ಮತ್ತು ಬದ್ಧತೆಯನ್ನು ಮುಂದುವರೆಸುತ್ತೇವೆ ಎಂದು ಟ್ವಿಟ್ಟರ್ ಪ್ರತಿನಿಧಿಗಳು ತಿಳಿಸಿದ್ದಾರೆ.
ಸಂಸದೀಯ ಸಮಿತಿಯ ವಿಚಾರಣೆಯು ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಡೆದಿದೆ. ಟ್ವಿಟ್ಟರ್ ಸಾರ್ವಜನಿಕರ ಸುರಕ್ಷತೆಗೆ ಬದ್ಧವಾಗಿಲ್ಲ ಎಂಬ ಕಾರಣದಿಂದ ಟ್ವಿಟರ್‌ಗೆ ಐಟಿ ಕಾಯ್ದೆಯಡಿ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನೀಡಿದ್ದ ಕಾನೂನಾತ್ಮಕ ರಕ್ಷಣೆಯನ್ನು ಕೇಂದ್ರ ಸರ್ಕಾರ ಬುಧವಾರ ಜೂನ್ 16 ರಂದು ಹಿಂಪಡೆದಿದೆ. ಈಗ ಪ್ರತಿಯೊಂದು ಟ್ವೀಟ್, ಪೋಸ್ಟ್ ಗಳಿಗೆ ಟ್ವಿಟರ್ ನೇರ ಹೊಣೆಯಾಗಿರುತ್ತದೆ. ಟ್ವೀಟ್ ಮಾಡಿದ ವ್ಯಕ್ತಿಗಳ ಜೊತೆಗೆ ಟ್ವಿಟರ್ ಮೇಲೆ ಕ್ರಮ ಜರುಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಮೇ ತಿಂಗಳಿನಲ್ಲಿ ‘ಕಾಂಗ್ರೆಸ್ ಟೂಲ್‌ಕಿಟ್’ ಎಂಬ ಟ್ವೀಟ್ ಮಾಡಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆ ನಂತರ ಟ್ವಿಟರ್ ಆ ಪೋಸ್ಟ್‌ಗಳಿಗೆ ಮ್ಯಾನುಪಲೇಟೆಡ್ ಮೀಡಿಯಾ ಎಂಬ ಟ್ಯಾಗ್ ಹಾಕಿತ್ತು. ಮ್ಯಾನುಪಲೇಟೆಡ್ ಮೀಡಿಯಾ ಟ್ಯಾಗ್ ಡಿಲೀಟ್ ಮಾಡುವಂತೆ ಟ್ವಿಟರ್‌ಗೆ ಕೆಂದ್ರ ಸರ್ಕಾರ ಆದೇಶಿಸಿತ್ತು. ಆದರೆ ಟ್ವಿಟ್ಟರ್ ಆ ಟ್ಯಾಗ್‌ಗಳನ್ನು ಡಿಲೀಟ್ ಮಾಡಿರಲಿಲ್ಲ. ಅಲ್ಲಿಂದ ಆರಂಭವಾದ ವೈಮನಸ್ಸು ಮುಂದುವರಿದಿದೆ.
ಇದನ್ನೂ ಓದಿ: ಕೊರೊನಾ ನಿಯಮಗಳ ಉಲ್ಲಂಘನೆ, 3ನೇ ಅಲೆಗೆ ಕಾರಣವಾಗಬಹುದು: ದೆಹಲಿ ಹೈಕೋರ್ಟ್


