Homeಮುಖಪುಟಹಾರುವ ತಟ್ಟೆಯಲ್ಲೊಂದು ಪಯಣ; ಯುಎಫ್‌ಒ ಕುರಿತು ವರದಿಯೊಂದರ ಜಾಡಿನಲ್ಲಿ

ಹಾರುವ ತಟ್ಟೆಯಲ್ಲೊಂದು ಪಯಣ; ಯುಎಫ್‌ಒ ಕುರಿತು ವರದಿಯೊಂದರ ಜಾಡಿನಲ್ಲಿ

- Advertisement -
- Advertisement -

ಕೆಲವು ದಿನಗಳಿಂದ ಹಾರುವ ತಟ್ಟೆಗಳ ವಿಚಾರವು ಅಮೆರಿಕಾದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಕಳೆದ ಹಲವಾರು ದಶಕಗಳಿಂದ ಆ ದೇಶದಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಗುರುತಿಸಲಾಗದ ಹಾರುವ ವಸ್ತುಗಳು
(ಯುಎಫ್‌ಒ) ಎಂಬ ವಿದ್ಯಮಾನದ ಕುರಿತು ಸೈನ್ಯದ ಅಧಿಕೃತ ವರದಿಯು ಅಲ್ಲಿನ ಸೆನೆಟ್‌ನ ಮುಂದೆ ಈ ತಿಂಗಳು ಬಹಿರಂಗಗೊಳ್ಳಲಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ವಾಯುಮಂಡಲದಲ್ಲಿ ಗುರುತಿಸಲಾಗದ ವಿದ್ಯಮಾನ (ಅನ್‌ಐಡೆಂಟಿಫೈಡ್ ಏರಿಯಲ್ ಫೆನಾಮೆನ – ಯುಎಪಿ) ಎಂದೇ ಹೆಸರಾಗಿರುವ ಯುಎಫ್‌ಒ, ಅಥವಾ, ಹಾರುವ ತಟ್ಟೆಯ ಪ್ರಸಂಗದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಟ್ರಂಪ್ ಸರಕಾರವು ಕಳೆದ ವರ್ಷ ಸೈನ್ಯಕ್ಕೆ ಆದೇಶ ನೀಡಿತ್ತು. ಆ ಆದೇಶದಂತೆ ಒಂದು ಕಾರ್ಯಪಡೆಯನ್ನು ರಚಿಸಿ, ಸೈನ್ಯವು ತನಿಖೆ ಮಾಡಿತು. ಇದೀಗ ತನಿಖಾ ವರದಿಯು ಪೂರ್ಣಗೊಂಡಿದ್ದು, ಅದು ಇನ್ನೇನು ಸೆನೆಟ್‌ನ ಮುಂದೆ ಬಟಾಬಯಲಾಗಬೇಕಿದೆ. ಆದರೆ, ಆ ವರದಿಯ ಮುಖ್ಯಾಂಶಗಳು ಸೋರಿಕೆಯಾಗಿವೆ ಎನ್ನುವ ಸುದ್ದಿಯೂ ಇದೆ. ಆ ಸುದ್ದಿಯ ಪ್ರಕಾರ, ತನಿಖೆಯು ಅನ್ಯಗ್ರಹಜೀವಿಗಳ ಕೈವಾಡವನ್ನು ಸಾಧಿಸಿ ತೋರಿಸಿಲ್ಲವಾದರೂ, ಕೈವಾಡವನ್ನು ನಿರಾಕರಿಸಿಯೂ ಇಲ್ಲ. ಈ ಅಪರಿಚಿತ ವಸ್ತುಗಳು ತಮ್ಮ ರಾಷ್ಟ್ರದ ರಹಸ್ಯ ಸೇನಾ ಕಾರ್ಯಾಚರಣೆಯ ಫಲವಂತೂ ಅಲ್ಲ ಎಂದು ಆ ವರದಿಯು ಹೇಳಿದೆಯಂತೆ.

ಅಮೆರಿಕದಲ್ಲಿ, ಬಗೆಬಗೆಯ ಚಿತ್ರವಿಚಿತ್ರ ನಂಬಿಕೆಗಳನ್ನುಳ್ಳ ಜನರಿದ್ದಾರೆ. ನಮ್ಮಲ್ಲಿ ಬಹುತೇಕರು ಭೂಮಿಯು ಗುಂಡಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದೇವೆ (ಅದರ ಬಗ್ಗೆ ತಲೆಕೆಡಿಸಿಕೊಳ್ಳದವರೂ ಬೃಹತ್ ಸಂಖ್ಯೆಯಲ್ಲಿದ್ದಾರೆ). ಆದರೆ, ಭೂಮಿಯು ಚಪ್ಪಟೆಯಾಗಿದೆ ಎಂದು ನಂಬುವ ಲಕ್ಷಾಂತರ ಜನರು ಅಮೆರಿಕದಲ್ಲಿದ್ದಾರೆ. ಅವರು ಒಂದು ಸಂಘವನ್ನೂ ಕಟ್ಟಿಕೊಂಡಿದ್ದಾರೆ! ಇನ್ನು ನಮ್ಮಲ್ಲಿ, ದೇವರು, ದೈವ, ದೆವ್ವಗಳು ಮೈಮೇಲೆ ಬರುತ್ತವೆಂದು ನಂಬುವವರಿದ್ದರೆ, ಅಮೆರಿಕದಲ್ಲಿ, ತಮ್ಮ ದೇಹಗಳನ್ನು ಅನ್ಯಗ್ರಹಜೀವಿಗಳು ಅಪಹರಿಸಿವೆ, ಪ್ರಯೋಗ ನಡೆಸಿವೆ, ಅಷ್ಟೇ ಏಕೆ, ಕೂಡಿ ಮಕ್ಕಳನ್ನೂ ಪಡೆದಿವೆ ಎಂದು ನಂಬುವವರೂ ಇದ್ದಾರೆ! ಆ ಜೀವಿಗಳು ಇದ್ದಾವೆ ಎಂದು ಬಲವಾಗಿ ನಂಬಿರುವ ಕೆಲವು ವಿದ್ವತ್‌ಮಣಿಗಳು, ಯುಫೋಲೊಜಿ, ಯುಎಫ್‌ಒ ಶಾಸ್ತ್ರ ಎನ್ನುವ ಜ್ಞಾನಶಾಖೆಯನ್ನೇ ಕಟ್ಟಿ, ಬೆಳೆಸಿದ್ದಾರೆ.

ಜಗತ್ತಿನಾದ್ಯಂತ ಕಾಣಿಸಿಕೊಂಡಿರುವ ಹಾರುವ ತಟ್ಟೆಗಳಲ್ಲಿ ಕೆಲವಾದರೂ ಅನ್ಯಗ್ರಹಜೀವಿಗಳದ್ದೆಂದೂ, ಪ್ರಪಂಚದ ಬಹುತೇಕ ರಾಷ್ಟ್ರಪ್ರಭುತ್ವಗಳಿಗೆ ಇದರ ಮಾಹಿತಿ ಇದೆಯೆಂದೂ, ಬೇಕಂತಲೇ ಜನಸಾಮಾನ್ಯರಿಂದ ಈ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂದೂ ಈ ಯುಎಫ್‌ಒ ಭಕ್ತರು ಅಭಿಪ್ರಾಯ ಪಡುತ್ತಾರೆ. ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ತಮ್ಮದೇ ’ವೈಜ್ಞಾನಿಕ’ ವಿಧಾನಕ್ರಮಗಳನ್ನೂ ರೂಪಿಸಿದ್ದಾರೆ. ಇಂಥವರು, ಇನ್ನೇನು ಬಹಿರಂಗಗೊಳ್ಳಲಿರುವ ವರದಿಯನ್ನು ಕಾತುರದಿಂದ ಕಾಯುತ್ತಿದ್ದಾರೆ. ವರದಿಯಲ್ಲಿ ಅನ್ಯಗ್ರಹಜೀವಿಗಳ ಕೈವಾಡವನ್ನು ನಿರಾಕರಿಸಲಾಗಿಲ್ಲ ಎಂಬ ಸುದ್ದಿಯಿಂದ ಅವರು ಗೆಲುವಿನ ನಗೆ ಬೀರಿರಬಹುದು. ಒಂದುವೇಳೆ, ಅನ್ಯಗ್ರಹಜೀವಿಗಳ ಕೈವಾಡ ಇಲ್ಲವೇ ಇಲ್ಲ ಎಂದು ವರದಿ ಹೇಳಿದ್ದರೆ, ಅವರು ಆ ವರದಿಯನ್ನೇ ತಿರಸ್ಕರಿಸಿ, ಸರಕಾರ ಮರೆಮಾಚುತ್ತಿದೆ ಎನ್ನುವ ಸಂಕಥನಕ್ಕೇ ಜೋತುಬೀಳುತ್ತಿದ್ದರು. ಅದು ಅವರ ಭಕ್ತಿ, ಸಂಕಲ್ಪ! ಅನ್ಯಗ್ರಹಜೀವಿಗಳ, ಏಲಿಯನ್‌ಗಳ ಭೇಟಿಯ ಕುರಿತು ಅಮೆರಿಕದಲ್ಲಿ ಕೆಲವರಷ್ಟೇ ನಂಬಿದ್ದಾರೆ ಎಂದಾಗಿದ್ದರೆ, ಆ ವರದಿಯು ಅಮೆರಿಕದ ಆಂತರಿಕ ವಿಚಾರ, ನಮಗೇಕೆ ಎಂದು ಸುಮ್ಮನಾಗಬಹುದಿತ್ತು.

PC : ABC News

ಆದರೆ, ಆ ನಂಬಿಕೆಯು ಜಾಗತೀಕರಣದಂತೆ ವಿಶ್ವದೆಲ್ಲೆಡೆ ಬೇರೆಬೇರೆ ಸ್ವರೂಪದಲ್ಲಿ ನೆಲೆಕಂಡಿದೆ. ಸ್ಥಳೀಯ ನಂಬಿಕೆಗಳೊಂದಿಗೆ ಬೆರೆತು, ತಮ್ಮ ದೇವಾನುದೇವತೆಗಳ ಕುರಿತು ಹೊಸ ನಂಬಿಕೆಗಳನ್ನು ಸೃಷ್ಟಿಸಿದೆ. ಮನುಷ್ಯರಲ್ಲಿ ನಾಗರಿಕತೆಯು ಕಾಣಿಸಿಕೊಂಡಿದ್ದೇ ಅನ್ಯಗ್ರಹಜೀವಿಗಳ ಕೈವಾಡದಿಂದ ಎನ್ನುವ ಪ್ರಾಚೀನ ಬಾನಾಡಿಗರ ಸಿದ್ಧಾಂತ, ಏನ್ಶಿಯೆಂಟ್ ಆಸ್ಟ್ರೋನಾಟ್ ಥಿಯರಿ ಮೈದಾಳಿದೆ. ರಾಮ, ಕೃಷ್ಣರು ನೀಲವರ್ಣದವರು, ಏಕೆಂದರೆ, ಅವರು ಏಲಿಯನ್‌ಗಳು ಎಂದೂ, ಪುಷ್ಪಕ ವಿಮಾನವು ಆ ಏಲಿಯನ್‌ಗಳ ಸ್ಪೇಸ್ಶಿಪ್ ಎಂದೂ ಹೇಳುವ ಜನರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ. ನಮ್ಮ ಮಹಾಕಾವ್ಯಗಳನ್ನೇ ಆ ದೃಷ್ಟಿಯಲ್ಲಿ ಮರುಸೃಷ್ಟಿಸಿದ ’ಮಹಾಸಂಪರ್ಕವಾದಿಗಳು ಕನ್ನಡ ಬೌದ್ಧಿಕತೆಗೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಇನ್ನು, ಹಾರುವ ತಟ್ಟೆಯಾಕಾರದ ವಸ್ತುವನ್ನೋ, ಬೆಳಕಿನ ಚೆಂಡನ್ನೋ ಕಂಡು ಬೆರಗಾದವರು ಭಾರತದ ನಗರ, ಪಟ್ಟಣ, ಹಳ್ಳಿಗಳಲ್ಲೂ ಇದ್ದಾರೆ! ಹಾಗಾಗಿ, ಅಮೆರಿಕದ ಸೆನೆಟ್‌ನ ಮುಂದೆ ಬಹಿರಂಗಗೊಳ್ಳಲಿದೆ ಎಂದು ನಂಬಲಾದ ಆ ವರದಿಯು ಬೈಡನ್‌ಗೆ ಎಷ್ಟು ಮಹತ್ವದ್ದೋ ಭದ್ರಮ್ಮಳಿಗೂ ಅಷ್ಟೇ ಮಹತ್ವದ್ದಾಗಿದೆ.

ಯುಎಫ್‌ಒ ವಿದ್ಯಮಾನದ ಕುರಿತು ಯಾವ ಮುಖ್ಯ ವಿಚಾರಗಳನ್ನೂ ಬಿಡದಂತೆ ಸಂಕ್ಷಿಪ್ತವಾಗಿ ತಿಳಿಯಲು ಪೂರ್ಣಚಂದ್ರ ತೇಜಸ್ವಿಯವರ ‘ಫ್ಲೈಯಿಂಗ್ ಸಾಸರ್ಸ್’ ಪುಸ್ತಕ ಓದಬಹುದು. ಸಾಮಾನ್ಯವಾಗಿ, ಬಾನಿನತ್ತ ಕತ್ತೆತ್ತಿ ನೋಡಿದಾಗ ಕಾಣಿಸುವ ಎಲ್ಲ ವಸ್ತುಗಳನ್ನೂ ನಾವು ಗುರುತಿಸುತ್ತೇವೆ. ಸೂರ್ಯ, ಚಂದ್ರ, ಮೋಡ, ನಕ್ಷತ್ರಗಳು; ವಿಮಾನ, ಬಲೂನು, ಗಾಳಿಪಟಗಳು; ಇವೆಲ್ಲವನ್ನು ನಾವು ಗುರುತಿಸಬಲ್ಲೆವು. ಅಪರೂಪಕ್ಕೆ ಕಾಣಿಸುವ ಧೂಮಕೇತು, ಉಲ್ಕೆಗಳು; ನಕ್ಷತ್ರವೇ ಉರಿದು ಬೀಳುತ್ತಿದೆಯೇನೋ ಎಂದು ಭ್ರಮೆಮೂಡಿಸುವಂತೆ ವಾಯುಮಂಡಲದಲ್ಲಿ ಉರಿದು ಬೀಳುವ, ಅಂತರಿಕ್ಷದಿಂದ ಆಗಮಿಸಿದ ಕಲ್ಲುಗಳು, ಕಣಗಳು; ಭೂಮಿಯನ್ನು ಸುತ್ತುವ ಮಾನವ ನಿರ್ಮಿತ ಉಪಗ್ರಹಗಳು; ಇಂಥವನ್ನು ಕಂಡೂ ಗುರುತಿಸಲು ಆಗದಿದ್ದಾಗ ಇವನ್ನೇ
ಯುಎಫ್‌ಒಗಳು ಎಂದು ತಿಳಿಯುವವರಿದ್ದಾರೆ.

ಹೀಗಿದ್ದೂ, ಕೊಂಚ ವಿಚಾರ ಮಾಡಿದ ಬಳಿಕ ಇವುಗಳ ಹಕೀಕತ್ ಅನ್ನು ನಾವು ಅರಿಯಬಲ್ಲೆವು. ಆದರೆ, ಯುಎಫ್‌ಒ ಎಂದು ಸ್ಪಷ್ಟವಾಗಿ ಪರಿಗಣಿಸಲಾಗುವ ಗುರುತಿಸಲಾಗದ ವಸ್ತುಗಳೇ ಬೇರೆಯಿವೆ. ಆ ವಸ್ತುಗಳು ಯಾರದೋ ನಿಯಂತ್ರಣಕ್ಕೆ ಒಳಪಟ್ಟಂತೆ ಅತ್ತಿಂದಿತ್ತ ಹಾರುತ್ತವೆ, ನಿಮಿಷಗಳ ಕಾಲ ಒಂದೇ ಕಡೆ ನಿಲ್ಲುತ್ತವೆ, ಕಣ್ಣು ಮಿಟುಕಿಸುವುದರೊಳಗೆ ಮರೆಯಾಗುತ್ತವೆ. ಹೆಚ್ಚು ಕಡಿಮೆ ತಟ್ಟೆಯಾಕಾರದ, ಯಾವುದೇ ಎಂಜಿನ್‌ನ ಶಬ್ದವನ್ನೂ ಮಾಡದ ಬಾನಾಡಿಗಳು. ಇವು, ಅಲ್ಲಲ್ಲಿ ಸಾಮಾನ್ಯ ಜನರಿಗೆ, ವಿಮಾನ ಹಾರಿಸುವಾಗ
ಕೆಲವು ಪೈಲೆಟ್‌ಗಳಿಗೆ, ಅಂತರಿಕ್ಷಯಾನ ಕೈಗೊಂಡವರಿಗೆ, ಅಷ್ಟೇ ಏಕೆ, ಚಂದ್ರನ ಮೇಲೆ ಇಳಿದ ಗಗನಯಾತ್ರಿಗಳಿಗೂ ಕಾಣಿಸಿವೆಯಂತೆ. ಕಂಡಿದ್ದನ್ನು ಫೋಟೋ, ವಿಡಿಯೋಗಳಲ್ಲಿ ಸೆರೆಹಿಡಿದಿದ್ದಾರೆ. ಆದರೆ, ತಮಾಷೆ ಏನಪ್ಪ ಅಂದರೆ, ಈ ಯಾವ ಫೋಟೋ, ವಿಡಿಯೋದಲ್ಲೂ ಆ ವಸ್ತುವು ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಇನ್ನು, ಏರ್ ಟ್ರಾಫಿಕ್ ನಿಯಂತ್ರಣ ಉಪಕರಣಗಳು ಹಾಗೂ ರೆಡಾರ್‌ಗಳಿಗೆ ಯುಎಫ್‌ಒನ ಯಾವ ಸುಳಿವೂ ಸಿಕ್ಕಿಲ್ಲ, ಅಥವಾ, ಸಿಕ್ಕಿದೆ ಎಂದು ಯಾರೂ ಅಧಿಕೃತವಾಗಿ ಘೋಷಿಸಿಲ್ಲ. ಇವೆಲ್ಲವನ್ನು ಪರಿಗಣಿಸಿ ಕೆಲವು ವಿಜ್ಞಾನಿಗಳು, ಅಂಥಾ ಚಿತ್ರಗಳು, ವಿಡಿಯೋಗಳ ಕುರಿತು ಅನುಮಾನಪಡುತ್ತಾರೆ. ಅವು ತಿದ್ದಿ ತಿರುಚಲಾದ ಮಾಹಿತಿ ಅಲ್ಲದಿದ್ದರೂ, ಜನರು ಯೋಚಿಸುವಂತೆ ಅವು ಅನೈಸರ್ಗಿಕ, ಬುದ್ಧಿ ನಿಯಂತ್ರಿತ ವಿದ್ಯಮಾನಗಳಾಗಿರದೆ, ನಮಗಿನ್ನೂ ತಿಳಿದಿರದ ನೈಸರ್ಗಿಕ ಪ್ರಕ್ರಿಯೆಗಳೇ ಆಗಿವೆ ಎಂದು ಆ ಸಂಶಯವಾದಿಗಳು ವಾದಿಸುತ್ತಾರೆ. ಒಂದುವೇಳೆ ಅವು ಬುದ್ಧಿ ನಿಯಂತ್ರಿತ ವಿದ್ಯಮಾನಗಳೇ ಆಗಿದ್ದರೂ, ನಮ್ಮದೇ ದೇಶದ, ಬಹಿರಂಗಗೊಳ್ಳದ ಸೇನಾ ತಂತ್ರಜ್ಞಾನವಾಗಿರಬಹುದು, ಇಲ್ಲವೇ, ಶತ್ರುರಾಷ್ಟ್ರಗಳ ತಂತ್ರಜ್ಞಾನವಾಗಿರಲೂಬಹುದು ಎಂದು ಸಮಜಾಯಿಷಿ ನೀಡುತ್ತಾರೆ. ಪ್ರಸ್ತುತ ವರದಿಯಂತೂ, ಸ್ವದೇಶಿ ತಂತ್ರಜ್ಞಾನದ ಸಬೂಬನ್ನು ನಿರಾಕರಿಸಿದಂತಿದೆ. ಇನ್ನು, ರಕ್ಷಣಾ ಪರಿಣಿತರಲ್ಲಿ ಕೆಲವರು ವಿದೇಶಿ ತಂತ್ರಜ್ಞಾನದ ಸಾಧ್ಯತೆಯನ್ನೂ ತಳ್ಳಿಹಾಕಿದ್ದಾರೆ!

ಯುಎಫ್‌ಒ ವಿದ್ಯಮಾನ ಇಲ್ಲದೇ ಹೋಗಿದ್ದರೂ, ಬೇರೆ ಗ್ರಹಗಳಲ್ಲಿ ಜೀವಿಗಳು ಇರಬಹುದು, ನಮ್ಮಂತೆ ಬುದ್ಧಿವಂತ ಪ್ರಾಣಿಗಳೂ ವಾಸಿಸುತ್ತಿರಬಹುದು ಎಂದು ಊಹಿಸಲು ಕಾರಣಗಳು ಇದ್ದೇ ಇವೆ. ನಮ್ಮ ಮಿಲ್ಕಿವೇ ಗ್ಯಾಲಾಕ್ಸಿಯಲ್ಲೇ ಹತ್ತು ಸಾವಿರ ಕೋಟಿಗಿಂತ ಹೆಚ್ಚು ನಕ್ಷತ್ರಗಳಿವೆ. ಹೆಚ್ಚುಕಡಿಮೆ ಇಷ್ಟೇ ಪ್ರಮಾಣದ ನಕ್ಷತ್ರಗಳನ್ನು ಹೊಂದಿರುವ ಗ್ಯಾಲಾಕ್ಸಿಗಳೇ ಹತ್ತು ಸಾವಿರ ಕೋಟಿಯಷ್ಟಿವೆ! ಅಂದರೆ, ಒಂದರ ಪಕ್ಕ 22 ಸೊನ್ನೆಗಳನ್ನು ಹಾಕಿದರೆ ಯಾವ ಸಂಖ್ಯೆ ಬರುತ್ತದೋ ಅಷ್ಟು ನಕ್ಷತ್ರಗಳು ಈ ವಿಶ್ವದಲ್ಲಿ! ಬಹುತೇಕ ನಕ್ಷತ್ರಗಳು ಗ್ರಹಗಳನ್ನು ಹೊಂದಿರುತ್ತವೆ. ಇಲ್ಲಿಯವರೆಗಿನ ಹುಡುಕಾಟದಲ್ಲಿ ವಿಜ್ಞಾನಿಗಳು, ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ಗ್ರಹಗಳನ್ನು ಪತ್ತೆಮಾಡಿದ್ದಾರೆ. ವಿಶ್ವದಲ್ಲಿ, ಕನಿಷ್ಟಪಕ್ಷ ನಕ್ಷತ್ರಗಳ ಸಂಖ್ಯೆಯಷ್ಟಾದರೂ ಗ್ರಹಗಳು ಇವೆ ಎಂದು ನಂಬಲಾಗಿದೆ. ಅವುಗಳಲ್ಲಿ ಕೆಲವಾದರೂ ಜೀವಿಗಳನ್ನು ಹೊಂದಿರಲು ಸಾಧ್ಯವಲ್ಲವೇ? ಆ ಜೀವಿಗಳು ಕಾಲಾಂತರದಲ್ಲಿ ಮನುಷ್ಯರಷ್ಟು ಅಥವಾ, ಮನುಷ್ಯರನ್ನೂ ಮೀರಿದ ಜಾಣ್ಮೆಯನ್ನು ಹೊಂದಿರುವ ಜೀವಿಗಳಾಗಿ ವಿಕಾಸಹೊಂದಲು ಸಾಧ್ಯವಲ್ಲವೇ? ನಾವು ಚಂದ್ರಲೋಕ, ಮಂಗಳಲೋಕವನ್ನು ಅನ್ವೇಷಿಸಿದಂತೆಯೇ ಆ ಜೀವಿಗಳು, ಪ್ರಪಂಚದ ಬೇರೆಬೇರೆ ಭಾಗಗಳನ್ನು ಅನ್ವೇಷಿಸುತ್ತ, ನಮ್ಮ ಭೂಮಿಗೂ ಭೇಟಿಯಿತ್ತಿರಲು ಸಾಧ್ಯವಲ್ಲವೇ? ಹೀಗೆ, ವಿಶ್ವದ ಕುರಿತು ನಾವು ಇಲ್ಲಿಯವರೆಗೂ ತಿಳಿದುಕೊಂಡಿರುವ ವಿಷಯಗಳನ್ನಾಧರಿಸಿಯೇ ಅನ್ಯಗ್ರಹ ಬುದ್ಧಿಜೀವಿಗಳು ಇರಬಹುದು ಎಂದು ಊಹಿಸಲು ಸಾಧ್ಯ.

ಆದರೆ, ನಮಗೆ ದಕ್ಕಿರುವ ತಂತ್ರಜ್ಞಾನಕ್ಕೆ, ಸಂವಹನ ವಿಧಾನಕ್ಕೆ ಆ ಜೀವಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಯಾವುದೋ ಒಂದು ಸುಳಿವು ಸದ್ಯದಲ್ಲೇ ಸಿಗಬಹುದು ಎನ್ನುವ ನಂಬಿಕೆಯೂ ಬಹುತೇಕ ವಿಜ್ಞಾನಿಗಳಲ್ಲಿಲ್ಲ. ಕಾರಣ, ದೂರದೂರದ ನಕ್ಷತ್ರಗಳನ್ನು, ಗ್ಯಾಲಾಕ್ಸಿಗಳನ್ನು ಕೂಲಂಕಷವಾಗಿ ಅನ್ವೇಷಿಸುವಷ್ಟು, ಸಂಪರ್ಕ ಸಾಧಿಸಬಹುದಾದಷ್ಟು ತಂತ್ರಜ್ಞಾನವನ್ನು ನಾವು ಹೊಂದಲು ಶತಮಾನಗಳೇ ಬೇಕು. ಅನ್ಯಗ್ರಹ ಜೀವಿಗಳಲ್ಲಿ ಯಾರಾದರು ನಮ್ಮ ಜೊತೆ ಸಂಪರ್ಕ ಸಾಧಿಸಲು ಬಯಸಿದ್ದರೂ, ಅವರ ಸಂವಹನ ವಿಧಾನವನ್ನು ಗುರುತಿಸುವಷ್ಟು, ಅರಿತುಕೊಳ್ಳುವಷ್ಟು ತಂತ್ರಜ್ಞಾನವೂ ನಮ್ಮಲ್ಲಿಲ್ಲ. ಹಾಗಾಗಿ, ಆ ಜೀವಿಗಳು ಇದ್ದೂ, ಅವರನ್ನು ಸಂಪರ್ಕಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲಿದ್ದೂ, ನೂರಾರು, ಬಹುಶಃ ಸಾವಿರಾರು ವರ್ಷಗಳವರೆಗೆ ಅವರ ಇರವನ್ನು ಖಾತರಿಪಡಿಸಲು ಸಾಧ್ಯವಾಗದೇ ಹೋಗಬಹುದು.

ಇನ್ನು, ಕೆಲವು ವಿಜ್ಞಾನಿಗಳ ಪ್ರಕಾರ ಇಡೀ ಪ್ರಪಂಚದಲ್ಲಿ ಬುದ್ಧಿವಂತ ಜೀವಿಗಳಿರುವ ಗ್ರಹ ನಮ್ಮ ಭೂಮಿಯೊಂದೇ! ಹೀಗೆ ಹೇಳಲು ಅವರು ಕೂಡ ವೈಜ್ಞಾನಿಕ ಕಾರಣಗಳನ್ನೇ ನೀಡುತ್ತಾರೆ. ಭೂಮಿಯಲ್ಲಿರುವ ಜೀವಿಗಳನ್ನು ಆಧರಿಸಿಯೇ ಜೀವದ ಕುರಿತು ನಮ್ಮ ತಿಳಿವಳಿಕೆಯು ರೂಪುಗೊಂಡಿರುವುದು, ಅಲ್ಲವೇ? ಈ ಜೀವ ಹುಟ್ಟಲು, ವಿಕಾಸ ಹೊಂದಲು ಭೂಮಿಯು ಪ್ರಶಸ್ತವಾದ ಸ್ಥಳ. ಹಾಗಾಗಿ, ಭೂಮಿಯ ಗುಣ-ಲಕ್ಷಣಗಳನ್ನೇ ಹೋಲುವ ಗ್ರಹಗಳಲ್ಲಷ್ಟೇ ಜೀವಿಗಳು ಕಂಡುಬರಲು ಸಾಧ್ಯ ಎಂದು ಕೆಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಭೂಮಿಯಂಥ ಗ್ರಹಗಳು ಇರುವ ಸಾಧ್ಯತೆ ಸಾಕಷ್ಟು ಕಡಿಮೆಯಿದೆ. ಇನ್ನು, ಅಂಥ ಗ್ರಹವಿದ್ದರಷ್ಟೇ ಸಾಲದು. ಜೀವ ಉಗಮವಾಗಲು ಸೂಕ್ತ ನೈಸರ್ಗಿಕ ವಿದ್ಯಮಾನಗಳು, ರಾಸಾಯನಿಕ ಪ್ರಕ್ರಿಯೆಗಳು ನಡೆಯಬೇಕು. ಹಾಗೆ ನಡೆದೂ, ಆ ಜೀವಿಗಳು ಅಲ್ಪಾವಧಿಯಲ್ಲೇ ನಾಶವಾಗುವಂಥ ನೈಸರ್ಗಿಕ ವಿಕೋಪಗಳು ಉಂಟಾಗಬಾರದು.

PC : BBC

ಆಗಲಷ್ಟೇ ಆ ಜೀವಿಗಳು ವಿಕಾಸ ಹೊಂದಲು ಸೂಕ್ತ ವೇದಿಕೆ ಸಿದ್ಧಗೊಳ್ಳುತ್ತದೆ. ಇಷ್ಟಾದರೂ, ಅವು ಮನುಷ್ಯರಂತೆ ಜಾಣ ಜೀವಿಗಳಾಗಿ ವಿಕಾಸ ಹೊಂದಲೇಬೇಕು ಎಂದೇನಿಲ್ಲ. ಆರುವರೆ ಕೋಟಿ ವರ್ಷಗಳಷ್ಟು ಹಿಂದೆ ಬಾನ ಹೆಬ್ಬಂಡೆಯೊಂದು ಭೂಮಿಗೆ ಅಪ್ಪಳಿಸಿ, ಡೈನಾಸರ್ ಸಂತತಿಗಳನ್ನು ನಾಶಪಡಿಸದೇ ಹೋಗಿದ್ದರೆ, ಮಂಗನಿಂದ ಮಾನವನಾಗುವ ಪ್ರಕ್ರಿಯೆಗೇ ಅವಕಾಶವಿರುತ್ತಿರಲಿಲ್ಲ ಎಂದು ಜೀವವಿಕಾಸವಾದಿಗಳು ಹೇಳುತ್ತಾರೆ. ಹೀಗೆ, ಜೀವಿಗಳು ಬುದ್ಧಿಜೀವಿಗಳಾಗಿ ವಿಕಾಸ ಹೊಂದುವ ಸಾಧ್ಯತೆ, ಅದು ಸಾಧ್ಯವೇ ಇಲ್ಲ ಎನ್ನುವಷ್ಟು ಕಡಿಮೆಯಂತೆ. ಅಂದರೆ, ಪ್ರಪಂಚದಲ್ಲಿರುವ ಅಷ್ಟೂ ಗ್ರಹಗಳಲ್ಲಿ ಒಂದು ಗ್ರಹದಲ್ಲಷ್ಟೇ ಆ ವಿಕಾಸ ಸಾಧ್ಯ ಎನ್ನುವುದು ಕಡಿಮೆಯಂತೆ! ಹೀಗೆ ವಾದಿಸುವವರ ಲೆಕ್ಕವೇ ನಿಜವಾದಲ್ಲಿ, ನಾವು ಈ ಪ್ರಪಂಚದ ಏಕೈಕ ಬುದ್ಧಿವಂತ ಜೀವಿಗಳು. ಒಂದುವೇಳೆ ಮನುಜಕುಲ ಸರ್ವನಾಶವಾದರೆ ವಿಶ್ವದ ಅಸ್ತಿತ್ವಕ್ಕೆ ಅರ್ಥವೇ ಇರುವುದಿಲ್ಲ. ಏಕೆಂದರೆ, ಅಸ್ತಿತ್ವದ ಕುರಿತು ಚಿಂತಿಸುವವರು ಆಗ ಯಾರೂ, ಎಲ್ಲಿಯೂ ಇರುವುದಿಲ್ಲವಲ್ಲ! ಪ್ರಜ್ಞೆಯಿಂದಲೇ ಪರಿಸರ ಎಂದು ನಂಬುವವರ ಪ್ರಕಾರ, ಮಾನವಪ್ರಜ್ಞೆ ಅಳಿದ ದಿನ ಪ್ರಪಂಚವೂ ನಾಶವಾಗಲೇಬೇಕು.

ಹೀಗೆಲ್ಲ ಇದ್ದೂ, ಅಮೆರಿಕದ ಸೆನೆಟ್‌ನ ಮುಂದೆ ಬಹಿರಂಗಗೊಳ್ಳಲಿದೆ ಎಂದು ನಂಬಲಾಗಿರುವ ಆ ವರದಿಯ ಬಗ್ಗೆ ನನಗೆ ಅತೀವ ಕುತೂಹಲವಿದೆ. ನಮಗಿಂತಲೂ ಜಾಣಜೀವಿಗಳು ಅನ್ಯಗ್ರಹಗಳಲ್ಲಿ ಇದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇರಲಿ ಎಂದು ಬಯಸುತ್ತೇನೆ. ಕೆಲವು ವಿಜ್ಞಾನಿಗಳ ಪ್ರಕಾರ, ಬುದ್ಧಿವಂತ ಜೀವಿಗಳು ಲಕ್ಷಾಂತರ ವರ್ಷಗಳು ಬಾಳಿ, ಬದುಕಲು ಭಾವಜೀವಿಗಳೂ, ಅಧ್ಯಾತ್ಮಜೀವಿಗಳೂ ಆಗಿರಲೇಬೇಕು. ಇಲ್ಲಿ ಅಧ್ಯಾತ್ಮ ಎಂದರೆ, ತಾನು ತನ್ನದು ಎನ್ನುವ ಸ್ವಾರ್ಥವನ್ನು ಮೀರಿ ಇಡೀ ವಿಶ್ವವನ್ನು ಕಾರುಣ್ಯದಿಂದ ಕಾಣುವುದು. ಹಾಗೆ ಆ ಬುದ್ಧಿಜೀವಿಗಳು ಕಾಣದೇ ಹೋದರೆ, ಅಧಿಕಾರದ ಹಮ್ಮಿನಲ್ಲಿ ಅವರು, ತಮ್ಮ ಜಾಣ್ಮೆಯ ಬಲದಿಂದ ರೂಪುಗೊಂಡ ಮಾರಕಾಸ್ತ್ರಗಳಿಂದ ತಮ್ಮತಮ್ಮಲ್ಲೇ ಮಹಾಯುದ್ಧಗಳನ್ನು ಮಾಡುತ್ತಾರೆ, ಪರಸ್ಪರರನ್ನು ಹೊಸಕಿ ಹಾಕುತ್ತ ಈ ವಿಶ್ವದಿಂದಲೇ ಕಣ್ಮರೆಯಾಗುತ್ತಾರೆ. ಅಲ್ಲದೆ, ಇನ್ನೂ ಒಂದು ವಿಚಾರವಿದೆ. ಅದೇನೆಂದರೆ, ಬುದ್ಧಿಯು ಬಲಿತಂತೆ ಸಹಬಾಳ್ವೆಯನ್ನೂ, ಸಾಮರಸ್ಯದ ಜೀವನವನ್ನೂ ಪ್ರತಿಪಾದಿಸಲು ಹೆಚ್ಚೆಚ್ಚು ಕಾರಣಗಳು ಸಿಗುತ್ತವೆ. ಎತ್ತುಗೆಗೆ, ಒಂದು ಮರವನ್ನು ಕಡಿಯಬಾರದು ಎನ್ನಲು ನಮ್ಮ ಪೂರ್ವಿಕರಿಗೆ ಭಾವನಾತ್ಮಕ ನಂಟಷ್ಟೇ ಕಾರಣವಾಗಿತ್ತು. ಆದರೆ ಈಗ, ನಮ್ಮ ಪರಿಸರವನ್ನು ಮತ್ತಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿರುವ ನಾವು ಮರಕಡಿಯದಿರಲು ಹತ್ತಾರು ಕಾರಣಗಳನ್ನು ನೀಡಬಹುದು. ಹಾಗಾಗಿ, ಈ ವಿಶ್ವದ ಯಾವುದೇ ಸುಸ್ಥಿರ ನಾಗರಿಕತೆಯಿಂದ, ಸಸ್ಟೆನೆಬಲ್ ಸಿವಿಲೈಸೇಶನ್‌ನಿಂದ ನಾವು ಕಲಿಯಬೇಕಾದ ಮೌಲ್ಯಗಳು ಸಾಕಷ್ಟಿರುತ್ತವೆ. ಅಂಥದ್ದೊಂದು ನಾಗರಿಕತೆಯ ಸಂಪರ್ಕವು ಮಾನವಕುಲಕ್ಕೆ ಒಳಿತನ್ನೇ ಮಾಡುತ್ತದೆ. ಬಹುಶಃ, ಆ ಸಂಪರ್ಕದ ಅಗತ್ಯವೂ ನಮಗಿದೆ. ಅಲ್ಲವೇ?

ಇರಲಿ, ವರದಿ ಏನು ಹೇಳುತ್ತದೆ ಎಂದು ಕಾದುನೋಡೋಣ.

ಅಮರ್ ಹೊಳೆಗದ್ದೆ

ಅಮರ್ ಹೊಳೆಗದ್ದೆ
ಎಂಜಿನಿಯರಿಂಗ್ ಪದವೀಧರರಾದ ಅಮರ್, ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಹೇಳಿಕೊಡುವುದರ ಜೊತೆಗೆ ಕರ್ನಾಟಕ-ಕನ್ನಡ ಕೇಂದ್ರಿತ ಹೋರಾಟಗಳಲ್ಲಿ ಆಸಕ್ತಿ ವಹಿಸಿದ್ದವರು. ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ


ಇದನ್ನೂ ಓದಿ: ಹಿರಿಯ ಕೈದಿಗಳ ಬಿಡುಗಡೆಗಾಗಿ ಹೋರಾಟಗಾರ್ತಿ‌ ಮೇಧಾ ಪಾಟ್ಕರ್‌‌ ಅರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...