ದೇಶದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕೋವಿಡ್ ಮೂರನೇ ಅಲೆಗೆ ಕಾರಣವಾಗಬಹುದು ಎಂದು ಕೋವಿಡ್ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಮೂರನೇ ಅಲೆಯು ದೇಶದಲ್ಲಿ ಸದ್ಯದಲ್ಲೇ ಕಾಣಿಸಿಕೊಳ್ಳುವ ಲಕ್ಷಣವಿದ್ದು ಇದು ಎಚ್ಚರಿಕೆಯಿಂದ ಇರಬೇಕಾದ ಸಮಯ ಎಂದಿರುವ ಅವರು ಮೂರು ವಿಚಾರಗಳನ್ನು ಮುಂದಿಟ್ಟಿದ್ದಾರೆ.
ದೇಶದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿದೆ ಎಂಬುದು ಮೂರನೇಯ ಅಲೆಯ ಸೃಷ್ಟಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಬಹುತೇಕರಿಗೆ ಕೋವಿಡ್ ಸೋಂಕು ತಗುಲಿ ಹೋಗಿದ್ದರೆ ಮತ್ತೆ ಹೆಚ್ಚಿನ ಜನರು ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗುವುದಿಲ್ಲ. ಸಾಮಾನ್ಯ ಶೀತ ಜ್ವರ ಕಾಣಿಸಿಕೊಂಡು ಜನರು ಗುಣಮುಖರಾಗುತ್ತಾರೆ.
ಎರಡನೇಯದು ಕೋವಿಡ್ ಮೂರನೇ ಅಲೆ ದೇಶದಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ಎಷ್ಟು ಜನರು ಲಸಿಕೆ ಪಡೆದುಕೊಳ್ಳುತ್ತಾರೆ ಎಂಬುದರ ಮೇಲೆಯೂ 3ನೇ ಅಲೆಯ ತೀವ್ರತೆ ನಿರ್ಧಾರವಾಗುತ್ತದೆ. ಒಂದು ವೇಳೆ ದೇಶದ ಬಹುಪಾಲು ಜನರು ಲಸಿಕೆಯನ್ನು ಪಡೆದಿದ್ದರೆ ಅವರಲ್ಲಿ ವೈರಸ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಸ್ವಾಭಾವಿಕವಾಗಿ ಹೆಚ್ಚಲಿದೆ. ಒಂದು ಡೋಸ್ ವ್ಯಾಕ್ಸಿನ್ ಕೂಡ ಪರಿಣಾಮಕಾರಿಯಾಗಿರಲಿದೆ. ಯಾವ ವೇಗದಲ್ಲಿ ವ್ಯಾಕ್ಸಿನೇಶನ್ ಪ್ರಕ್ರಿಯೆ ನಡೆಯುತ್ತದೆ ಎಂಬುದರ ಮೇಲೆ ಮೂರನೇ ಅಲೆಯ ತೀವ್ರತೆ ಅವಲಂಬಿಸಿದೆ.
ಮೂರನೇಯದಾಗಿ ಕೋವಿಡ್ ನಿಯಮಾವಳಿಗಳ ಪಾಲನೆ, ಸಾಮಾಜಿಕ ಅಂತರ, ವಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಗಮನ ನೀಡಿ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಕೋವಿಡ್ ಮೂರನೇ ಅಲೆಯನ್ನು ದೇಶದಲ್ಲಿ ತಪ್ಪಿಸಬಹುದಾಗಿದೆ. ಹೊಸ ಹೊಸ ರೂಪಾಂತರಿ ತಳಿಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಸಾಂಕ್ರಾಮಿಕದ ಹೊಸ ಅಲೆಯನ್ನು ಸೃಷ್ಟಿಸಿವೆ. ಭಾರತ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಹರಡದಂತೆ ಆರಂಭದಲ್ಲಿಯೇ ತಡೆಯಬೇಕಿದೆ ಎಂದು ರಾಷ್ಟ್ರೀಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ. ಅರೋರಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬ್ರಿಟನ್: ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ರಾಜೀನಾಮೆ ನೀಡಿದ ಆರೋಗ್ಯ ಸಚಿವ


