2019ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇಥಿಯೋಪಿಯಾದ ಪ್ರಧಾನಿ ಆಬಿ ಅಹ್ಮದ್‍ಗೆ ಘೋಷಿಸಿದಾಗ ನೊಬೆಲ್ ಪ್ರಶಸ್ತಿ ಸಮಿತಿಯು “ಶಾಂತಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಸಾಧಿಸುವ ಅವರ ಪ್ರಯತ್ನಗಳಿಗಾಗಿ ಮತ್ತು ನಿರ್ದಿಷ್ಟವಾಗಿ ನೆರೆಯ ಎರಿಟ್ರಿಯಾದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸುವ ಅವರ ನಿರ್ಣಾಯಕ ಪಾತ್ರಕ್ಕಾಗಿ ಮತ್ತು ಪೂರ್ವ ಮತ್ತು ಈಶಾನ್ಯ ಆಫ್ರಿಕಾದ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡುವ ಎಲ್ಲ ಪಾಲುದಾರರನ್ನು ಗುರುತಿಸಲಿ ಈ ಬಹುಮಾನವನ್ನು ನೀಡಲಾಗಿದೆ” ಎಂದು ಪ್ರಕಟಿಸಿತ್ತು. ಆದರೆ ಇಂದು ಅದೇ ಅಬಿ ಅಹ್ಮದ್ ಉತ್ತರದ ಎರಿಟ್ರಿಯಾ ಮತ್ತು ಸೂಡಾನ್ ದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ತಮ್ಮದೇ ದೇಶದ ಟಿಗ್ರೆಯ್ ಪ್ರದೇಶದ ಮೇಲೆ ಯುದ್ಧ ಸಾರಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತ ಟಿಗ್ರೆಯ್ ಜನತೆಯ ಮೇಲೆ ಸಾಮೂಹಿಕ ನರಹತ್ಯೆ ಮತ್ತು ಯುದ್ಧಾಪರಾಧದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆಫ್ರಿಕಾದ ಎರಡನೆ ಅತಿ ದೊಡ್ಡ ಜನಸಂಖ್ಯೆಯುಳ್ಳ ಇಥಿಯೋಪಿಯಾ (ಹನ್ನೊಂದು ಕೋಟಿಗೂ ಮೇಲೆ) ಆಂತರಿಕ ಯುದ್ಧ ಸೇರಿದಂತೆ ತನ್ನ ಸುತ್ತ ಮುತ್ತಲಿನ ದೇಶಗಳ ಪ್ರಾದೇಶಿಕ ಅಸ್ಥಿರತೆಗೆ ದಾರಿಮಾಡಿಕೊಡುತ್ತಿದೆ.
ಇಥಿಯೋಪಿಯಾ ಆಫ್ರಿಕಾ ಖಂಡದ ಎರಡನೆ ಅತಿ ದೊಡ್ಡ ಜನಸಂಖ್ಯೆಯುಳ್ಳ ರಾಷ್ಟ್ರ. ಇದು ಜಾಗತಿಕ ರಾಜಕೀಯದಲ್ಲಿ ವ್ಯಾಪಾರ ವಹಿವಾಟುಗಳಿಗೆ ‘ಹಾರ್ನ್ ಆ ಆಫ್ರಿಕಾ’ ಎಂದು ಕರೆಯಲ್ಪಡುವ ಪ್ರದೇಶ. ಆಫ್ರಿಕಾ ಖಂಡದ ಮುಖ್ಯದ್ವಾರ ಎಂದು ಪರಿಗಣಿಸಲ್ಪಡುತ್ತದೆ. ಜನಸಂಖ್ಯೆ 80ಕ್ಕಿಂತಲೂ ಹೆಚ್ಚು ಬುಡಕಟ್ಟು ಗುಂಪುಗಳಿಂದ ಕೂಡಿದೆ. ಎಲ್ಲ ಗುಂಪುಗಳೂ ತಮ್ಮದೇ ಆದ ಸಂಸ್ಕೃತಿ, ಭಾಷೆ ಅಥವಾ ಉಪಭಾಷೆಗಳ ವೈವಿಧ್ಯತೆಯನ್ನು ಹೊಂದಿದೆ. ಇವುಗಳಲ್ಲಿ ಮೂರು ಗುಂಪುಗಳು ಪ್ರಾಬಲ್ಯ ಹೊಂದಿವೆ: ಒರೊಮೊ (ಜನಸಂಖ್ಯೆ 35%), ಅಮ್ಹರಾ (27%) ಮತ್ತು ಟಿಗ್ರೆಯನ್ (6%). ಈ ಪ್ರಬಲ ಗುಂಪುಗಳ ನಡುವೆ ಭೂಮಿ ಒಡೆತನ ಮತ್ತು ಬಲ ಪ್ರದರ್ಶದ ಬಗ್ಗೆ ಐತಿಹಾಸಿಕ ವಿವಾದಗಳಿವೆ.
ಇಥಿಯೋಪಿಯಾದ ರಾಜಕೀಯದಲ್ಲಿ ಬಹುವರ್ಷ ಅಗೋಚರವಾಗಿದ್ದವರು ಆಬಿ ಅಹ್ಮದ್. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ಯಾವುದೇ ಚುನಾವಣೆ ಗೆಲ್ಲದೇ ದೇಶದ ಅತ್ತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಗೆ 2018ರಲ್ಲಿ ಏರಿದರು. ದೇಶದ ಬೇಹುಗಾರಿಕೆ ಸಂಸ್ಥೆಯಲ್ಲಿ ಉನ್ನತದ ಸ್ಥಾನದಲ್ಲಿ ಕೆಲಸ ಮಾಡಿದ ಹಿನ್ನೆಲೆಯಿರುವ ಆಬಿ ಅಹ್ಮದ್ ಪ್ರಧಾನಿಯಾಗಿದ್ದ ಅವಧಿಯ ಒಂದು ವರ್ಷದಲ್ಲಿಯೇ ದಶಕಗಳ ಎರಿಟ್ರಿಯಾ ಗಡಿಯ ಸಂಘರ್ಷವನ್ನು ಕೊನೆಗಳಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಎರಿಟ್ರಿಯ ಪ್ರಧಾನಿ ಇಸಾಯಾಸ್ ಅಫ್ವೆರ್ಕಿಯನ್ನು ಇಥಿಯೋಪಿಯದ ರಾಜಧಾನಿ ಅಡಿಸ್ ಅಬಾಬಾಗೆ ಕರೆಸಿ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದರು. ಅದಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ 2019ರಲ್ಲಿ ಲಭಿಸಿತ್ತು. ಆದರೆ ಗಡಿಯಲ್ಲಿ ನಡೆದ ದಶಕಗಳ ಕಾಲದ ಯುದ್ಧದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದ ಟಿಗ್ರೇಯ್ ಅಲ್ಪಸಂಖ್ಯಾತ ಸಮುದಾಯದ “ಟಿಗ್ರೇಯ್ ಪೀಪಲ್ಸ್ ಲಿಬರೇಶನ್ ಫ್ರಂಟ್” (ಟಿಪಿಎಲ್ಎಫ್) ಇದನ್ನು ವಿರೋಧಿಸಿತ್ತು ಮತ್ತು ಈ ಒಪ್ಪಂದದಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲವೆಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಶಾಂತಿ ಒಪ್ಪಂದದ ಪ್ರಕಾರ ಆದ ಇತ್ಯರ್ಥದ ಯಾವುದೇ ವಿವರಗಳನ್ನು ಇದುವರೆಗೆ ಪ್ರಕಟಿಸಲಾಗಿಲ್ಲ. ವಾಸ್ತವವಾಗಿ ಹೇಳುವುದಾದರೆ, ಟಿಗ್ರೇಯ್ ಮತ್ತು ಎರಿಟ್ರಿಯಾದ ಜನರು (ಇಬ್ಬರದ್ದು ಮೂಲ ಟಿಗ್ರೇಯ್ ಜನಾಂಗ ಮತ್ತು ಸಾಮಾನ್ಯ ಕುಟುಂಬ ಸಂತತಿಯನ್ನು ಹಂಚಿಕೊಳ್ಳುತ್ತಾರೆ) ಸಂಬಂಧಗಳಲ್ಲಿ ಯಾವುದೇ ಸಾಮಾನ್ಯೀಕರಣವನ್ನು ಕಂಡುಕೊಂಡಿಲ್ಲ. ಗಡಿ ಈಗಲೂ ಮುಚ್ಚಲ್ಪಟ್ಟಿದೆ ಮತ್ತು ಕುಟುಂಬಗಳು ಪರಸ್ಪರ ಭೇಟಿ ಮಾಡಲು ಸಾಧ್ಯವಾಗದಂತೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ವಿವಿಧ ಬುಡಕಟ್ಟುಗಳು ಮತ್ತು ಪಕ್ಷಗಳ ಮೈತ್ರಿಯಿಂದ ಸಮಿಶ್ರ ಸರ್ಕಾರ ನಿರ್ಮಾಣವಾಗಿತ್ತು. ಇದರಿಂದ ಪ್ರಧಾನಿಯಾದ ಆಬಿ ಕಳೆದ ವರ್ಷ ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (ಇಪಿಆರ್ಡಿಎಫ್) ಎಂದು ಕರೆಯಲ್ಪಡುವ ಒಕ್ಕೂಟವನ್ನು ವಿಸರ್ಜಿಸಿ ತಮ್ಮ ನಾಯಕತ್ವದಲ್ಲಿ “ಸಮೃದ್ಧಿ ಪಕ್ಷ”ವನ್ನು ರಚಿಸಿದರು. ಟಿಗ್ರೇಯ್ ಬಣವು ಈ ಹೊಸ ಏಕೀಕೃತ ಪಕ್ಷಕ್ಕೆ ಸೇರಲು ನಿರಾಕರಿಸಿತು. ನಂತರ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆಬಿ ಈ ವರ್ಷದ ಚುನಾವಣೆಯನ್ನು ರದ್ದುಗೊಳಿಸಿದರು. ಟಿಪಿಎಲ್ಎಫ್ ಇದು ಸರ್ವಾಧಿಕಾರ ಎಂದು ದೂರಿ ಕಳೆದ ಸೆಪ್ಟೆಂಬರ್ನಲ್ಲಿ ತನ್ನ ಯೋಜಿತ ಪ್ರಾದೇಶಿಕ ಚುನಾವಣೆಗಳನ್ನು ನೆಡೆಸಿತು..
ನಂತರ ಆಬಿ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಟಿಪಿಎಲ್ಎಫ್ ಆರಂಭಿಸುತ್ತದೆ. ಇದರ ಮುಂದುವರೆದ ಭಾಗವಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಶಸ್ತ್ರಸಜ್ಜಿತ ಟಿಪಿಎಲ್ಎಫ್ ಮತ್ತು ಸರ್ಕಾರದ ಭದ್ರತಾ ಪಡೆಗಳ ಮಧ್ಯೆ ಎರಡು ವಾರಗಳ ಕಾಲ ಅಂತರ್ಯುದ್ಧ ನೆಡೆದು ಸರ್ಕಾರಿ ಪಡೆಗಳು ವಿಜಯ ಘೋಷಿಸಿಕೊಂಡಿದ್ದವು. ಆದರೆ ನಂತರದ ಬೆಳೆವಣಿಗೆಗಳು ಕಳವಳಕಾರಿಯಾಗಿದೆ. ಸರ್ಕಾರಿ ಪಡೆಗಳ ಕ್ರೌರ್ಯದ ಹಿನ್ನೆಲೆಯಲ್ಲಿ ಅಲ್ಲಿನ ವಿವಿಧ ಸ್ಥಳೀಯ ಬುಡಕಟ್ಟು ಸಮುದಾಯಗಳು ಪರಸ್ಪರವಾಗಿ ಮತ್ತು ಸರ್ಕಾರೀ ಪಡೆಗಳ ವಿರುದ್ಧ ಯುದ್ಧ ಘೋಷಿಸಿವೆ. ಅಚ್ಚರಿಯ ಸಂಗತಿಯಲ್ಲಿ ಇಥಿಯೋಪಿಯನ್ ಸರ್ಕಾರವು ಈಗ ಉತ್ತರ ಟಿಗ್ರೇಯ್ ಪ್ರದೇಶದಲ್ಲಿ ತನ್ನದೇ ಜನರ ವಿರುದ್ಧ ಯುದ್ಧ ಮಾಡಲು ಎರಿಟ್ರಿಯಾದೊಂದಿಗೆ ಕೈ ಜೋಡಿಸಿದೆ. ಟಿಪಿಎಲ್ಎಫ್ ಮತ್ತು ಬೆಂಬಲಿತ ಸಂಘಟನೆಗಳು ಇಥಿಯೋಪಿಯನ್ ಸರ್ಕಾರ ತಮ್ಮ ವಿರುದ್ಧ ಜನಾಂಗೀಯ ನಿರ್ನಾಮ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸುತ್ತಿವೆ. ಜೊತೆಗೆ ಸಿ.ಎನ್.ಎನೆನ್ ಮತ್ತು ಬಿ.ಬಿ.ಸಿ ಸುದ್ದಿವಾಹಿನಿಗಳು, ೩೦ ಮಂದಿ ಟಿಗ್ರೇಯ್ ಯುವಕರನ್ನು ಸರ್ಕಾರಿ ಪಡೆಗಳು ಗುಂಡಿಟ್ಟು ಕೊಲ್ಲುವ ತನಿಖಾ ವರದಿಯನ್ನು ಬಿತ್ತರಿಸುತ್ತಿವೆ. ಸರ್ಕಾರಿ ವಾಯುಪಡೆಗಳು ತನ್ನದೇ ದೇಶದ ಪ್ರಜೆಗಳ ವಿರುದ್ಧ ನಿರಂತರ ವಾಯುದಾಳಿ ನಡೆಸುತ್ತಿದೆ. ಸರ್ಕಾರಿ ಸೇನಾ ಪಡೆಗಳಿಂದ ನಿರಂತರ ದಾಳಿ, ಆಸ್ತಿ-ಪಾಸ್ತಿ ಹಾನಿ, ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡುತ್ತಿವೆ.
ಇಥಿಯೋಪಿಯಾದ ಪ್ರಧಾನಿ ಆಬಿ ಅಹ್ಮದ್ ಶಾಂತಿ ಮಾತುಕತೆಗಾಗಿ ವಿಶ್ವಸಂಸ್ಥೆ ಸಲ್ಲಿಸಿದ ಮನವಿಯನ್ನು ನಿರಾಕರಿಸಿದ್ದಾರೆ. ಟಿಪಿಎಲ್ಎಫ್ ದೇಶದ್ರೋಹ ಮತ್ತು ಭಯೋತ್ಪಾದನೆ ನೆಡೆಸುತ್ತಿದೆ ಎಂದು ಆರೋಪಿಸಿದ್ದಾರೆ ಮತ್ತು 50 ಲಕ್ಷ ಜನಬಿಡಿತ ಪ್ರದೇಶದ ಮೇಲೆ ಅವರು ನೆಡೆಸುತ್ತಿರುವ ಆಕ್ರಮಣವನ್ನು “ಕಾನೂನು ಮತ್ತು ಸುವ್ಯವಸ್ಥೆ ಕಾರ್ಯಾಚರಣೆ” ಎಂದು ಕರೆಯುತ್ತಿದ್ದಾರೆ. ಆಬಿ ಅಧಿಕಾರಕ್ಕೆ ಬಂದಾಗಿನಿಂದ, ಇಥಿಯೋಪಿಯಾದಲ್ಲಿ ಅನೇಕ ಜನಾಂಗೀಯ ಗುಂಪುಗಳ ನಡುವೆ ಪ್ರಕ್ಷುಬ್ಧ ಮತ್ತು ಹಿಂಸಾತ್ಮಕ ಘರ್ಷಣೆ ಹೆಚ್ಚಾಗಿದೆ. ಪಾಶ್ಚಾತ್ಯ ಮಾಧ್ಯಮಗಳು “ಸುಧಾರಣೆಗಳ” ವ್ಯಕ್ತಿವಾದದ ನೆರಳಿನಲ್ಲಿ ಪ್ರಧಾನಿ ಆಬಿಯನ್ನು ಕೊಂಡಾಡುತ್ತವೆ. ಆಂತರಿಕ ಬಿಕ್ಕಟನ್ನು ನಿವಾರಿಸುವ ಈ “ಸುಧಾರಣೆಗಳ” ಕ್ರಮಗಳು ಏಕೆ ಅಲ್ಲಿನ ಬಿಕ್ಕಟ್ಟನ್ನು ಇನ್ನೂ ತೀವ್ರಗೊಳಿಸುತ್ತಿವೆ ಎಂದು ವಿವರಿಸಲು ಅವು ಹೋಗುವುದಿಲ್ಲ. ಈವರೆಗೂ ಸರ್ಕಾರಿ ಪಡೆಗಳ ಮೇಲಿನ ದಾಳಿಯನ್ನು “ಸಮರ್ಥನೀಯವಲ್ಲ” ಎಂದು ಅಮೆರಿಕ ಖಂಡಿಸಿದ್ದರೂ ಟಿಗ್ರೇಯ್ ಮೇಲಿನ ಸರ್ಕಾರಿ ನಿಯೋಜಿತ ಕ್ರೌರ್ಯವನ್ನು ಈವರೆಗೂ ಖಂಡಿಸಿಲ್ಲ. ಯೆಮೆನ್ ಯುದ್ಧದಲ್ಲಿ ಭಾಗಿಯಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಡ್ರೋನ್‍ಗಳನ್ನು ಈಗ ಟಿಗ್ರೇಯ್ ವಿರುದ್ಧದ ಯುದ್ಧದಲ್ಲಿ ಬಳಸಲಾಗುತ್ತಿದೆ. ಜಾನಾಂಗಿಯ ನರಹತ್ಯೆಯನ್ನು ಗ್ರಹಿಸಿ ಎಚ್ಚರಿಸುವ ಜಿನೊಸೈಡ್ ವಾಚ್ ಎಂಬ ಸಂಸ್ಥೆ ಇದನ್ನು ದೃಢಪಡಿಸಿದ್ದು, “ಓರೊಮೊ, ಅಮ್ಹರಾ, ಟಿಗ್ರೇಯಾನ್ ಮತ್ತು ಗೆಡಿಯೊ ಜನರ ನಡುವಿನ ಜನಾಂಗೀಯ ಪ್ರೇರಿತ ಹಿಂಸಾಚಾರಕ್ಕೆ ಸರ್ಕಾರದ ನಿಷ್ಕ್ರಿಯತೆಯೇ ಕಾರಣ” ಎಂದು ಹೇಳಿಕೆ ನೀಡಿದೆ.

ಈ ಘರ್ಷಣೆ/ಯುದ್ಧ ಸೂಡಾನ್ ದೇಶಕ್ಕೂ ವಿಸ್ತರಿಸಲಿದೆ. ಜಾಗತಿಕ ಆರ್ಥಿಕತೆಗೆ ಗಣಿಯಾಗಿರುವ ಆಫ್ರಿಕಾ ಖಂಡದ ಹೆಬ್ಬಾಗಿಲು ಎಂದು ಕರೆಯೆಲ್ಪಡುವ ಇಥಿಯೋಪಿಯ ಇಂದು ಭೌಗೋಳಿಕ ಆರ್ಥಿಕ ಹಿಡಿತಕ್ಕಾಗಿ ಯುದ್ಧದಲ್ಲಿ ಮುಳುಗುತ್ತಿದೆ. ಇಷ್ಟೆಲ್ಲ ದೌರ್ಜನ್ಯ-ನರಮೇಧದ ಆರೋಪಗಳ ನಡುವೆಯೂ ಶಾಂತಿ ನೊಬೆಲ್ ಪುರಸ್ಕೃತ ಪ್ರಧಾನಿಯ ಮೌನ ಮತ್ತು ಆ ಶಾಂತಿ ಪ್ರಶಸ್ತಿಯನ್ನು ಕೊಟ್ಟ ನೊಬೆಲ್ ಸಂಸ್ಥೆಗೆ ಮೌನವಾಗಿದ್ದಾರೆ. ಹಾಗೆ ನೋಡಿದರೆ ಇವರಿಗೂ ಮುಂಚೆ ನೊಬೆಲ್ ಶಾಂತಿ ಪ್ರಶಸ್ತಿ ಇಬ್ಬರು ಯುದ್ಧಕೋರರಿಗೆ ನೀಡಲಾಗಿದೆ. ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ ಮೇಲೆ ದಾಖಲೆ ಪ್ರಮಾಣದಲ್ಲಿ ಬಾಂಬುಗಳನ್ನು ಸುರಿಸಿದ ಹೆನ್ರಿ ಕಿಸ್ಸಿಂಗರ್ ಮತ್ತು ಏಳು ರಾಷ್ಟ್ರಗಳ ಮೇಲೆ ಬಾಂಬ್‍ಗಳ ಸುರಿಮಳೆಗೈದ ಬರಾಕ್ ಒಬಾಮ ಅವರಿಗೆ. ಬಿಳಿಯರಿಗೆ ಮೀಸಲಿದ್ದ ಕೆಲವು ಕುಖ್ಯಾತ ನೊಬೆಲ್‍ಗಳು ಇಂದು ವಸಾಹುತು ವಿಸ್ತರಣವಾದದಿಂದ ಬಡ ರಾಷ್ಟ್ರಗಳ ನಾಯಕರುಗಳಿಗೂ ವಿಸ್ತರಿಸುತ್ತಿದೆ.
– ಭರತ್ ಹೆಬ್ಬಾಳ


