ಫಿಲಿಪೈನ್ಸ್ ವಾಯುಸೇನೆಗೆ ಸೇರಿದ ಸಿ-30 ವಿಮಾನವು ದಕ್ಷಿಣ ಫಿಲಿಪೈನ್ಸ್ ದ್ವೀಪದಲ್ಲಿ ಪತನಗೊಂಡಿದೆ. 92 ಪ್ರಯಣಿಕರು ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನಕ್ಕೆ ಜೋಲೊ ದ್ವೀಪದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಅಪಘಾತದಲ್ಲಿ 17 ಜನರು ಮೃತಪಟ್ಟಿದ್ದು 40 ಜನ ಪ್ರಯಾಣಿಕರನ್ನು ಅಪಾಯದಿಂದ ರಕ್ಷಿಸಲಾಗಿದೆ.
ಒಬ್ಬ ಪೈಲೆಟ್, 5 ಜನ ಸಿಬ್ಬಂದಿಗಳು ಸೇರಿದಂತೆ ಒಟ್ಟೂ 92 ಜನರು ವಿಮಾನದಲ್ಲಿದ್ದರು ಎಂದು ರಕ್ಷಣಾ ಮಂತ್ರಿ ಡೆಲ್ಫಿನ್ ಲೊರೆಂಜಾನಾ ಅಧಿಕೃತ ಹೇಳಿಕೆ ನೀಡಿದ್ದು ರಕ್ಷಿಸಲಾದ 40 ಜನ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಬು ಸಯ್ಯಾಫ್ ಬಂಡುಕೋರರ ವಿರುದ್ಧ ಫಿಲಿಫೈನ್ಸ್ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು ವಿಮಾನವು ದಕ್ಷಿಣ ಕಗಯಾನ್ ಡಿ ಒರೋ ನಗರಕ್ಕೆ ರಕ್ಷಣಾ ಪಡೆಯ ಸಿಬ್ಬಂದಿಗಳನ್ನು ವಿಮಾನದಲ್ಲಿ ಸಾಗಿಸಲಾಗಿತ್ತು ಎಂದು ಫಿಲಿಪೈನ್ಸ್ ಮಿಲಿಟರಿ ಮೂಲಗಳು ತಿಳಿಸಿವೆ.
ವಿಮಾನವು ರನ್‌ವೇಯಿಂದ ತಪ್ಪಿಸಿಕೊಂಡು ಹೊರ ಹೋಗಿದ್ದೇ ಅಪಾಯಕ್ಕೆ ಕಾರಣವೆಂದು ರಕ್ಷಣಾಪಡೆಗಳ ಮುಖ್ಯಸ್ಥ ಕಿರಿಲಿಟೊ ಸೋಬೆಜನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಹೆಚ್ಚಿನ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಬೆಂಕಿ ಹೊತ್ತಿಕೊಂಡಿರುವ ಚಿತ್ರಗಳು ಅಂತರಾಷ್ಟ್ರೀಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕೆಲಹೊತ್ತು ಆಂತಕವನ್ನು ಸೃಷ್ಟಿಸಿತ್ತು.
ಇದನ್ನೂ ಓದಿ: ಓವೈಸಿ ಸವಾಲು ಸ್ವೀಕರಿಸಿದ್ದೇವೆ, ಯುಪಿಯಲ್ಲಿ 300ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ- ಯೋಗಿ ಆದಿತ್ಯನಾಥ್


