ತನಗೆ ಬೇಕಾದ ವರನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಎಲ್ಲಾ ಮಹಿಳೆಯರಿಗೆ ಭಾರತ ಸಂವಿಧನ ನೀಡಿದೆ. ಸಂಗಾತಿ ಆಯ್ಕೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ತೀರ್ಪು ನೀಡಿದೆ. ಸಂವಿಧಾನ, ಕಾನೂನು ಏನೇ ಇರಲಿ ದೇಶದಲ್ಲಿ ಪುರಾತನ ಕಾಲದಿಂದ ನಡೆದು ಬಂದ ಕಟ್ಟಳೆಗಳ ಕಾರಣದಿಂದ ಮಹಿಳೆಯರು ಇಂದಿಗೂ ನೋವನುಭವಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಮನೆಯವರು ತೋರಿಸಿದ ವರನನ್ನು ಒಪ್ಪಿಕೊಳ್ಳದ ಕಾರಣಕ್ಕೆ ಯುವತಿಯನ್ನು ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ಹತ್ಯೆ ಮಾಡಿರುವ ವ್ಯಕ್ತಿ ಬೇರಾರು ಅಲ್ಲ. ಸ್ವತ: ಯುವತಿಯ ಒಡಹುಟ್ಟಿದ ಅಣ್ಣ. ಕರುಳು ಬಳ್ಳಿಯ ಸಂಬಂಧವನ್ನೂ ಲೆಕ್ಕಿಸದೇ ಆರೋಪಿ ಪೈಶಾಚಿಕ ಕೃತ್ಯ ನಡೆಸಿದ್ದಾನೆ.
ಮದುವೆ ನಿಶ್ಚಯವಾಗಿದ್ದ ವರ ಕಪ್ಪಗಿದ್ದಾನೆ ಅನ್ನೋ ಕಾರಣಕ್ಕೆ ವಧು ಮದುವೆಯನ್ನು ನಿರಾಕರಿಸಿದ್ದಾರೆ. ಮದುವೆಗೆ ಒಂದೆರಡು ದಿನವಿರುವಾಗ ಮದುವೆ ನಿರಾಕರಿಸಿದ ತಂಗಿಯನ್ನ ಅಣ್ಣ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಎಂಬಲ್ಲಿ ನಡೆದಿದೆ.
ಗಬ್ಬೂರು ಗ್ರಾಮದ ನಿವಾಸಿ ಚಂದ್ರಕಲಾ (22 ವರ್ಷ) ಎಂಬಾಕೆಯೇ ಅಣ್ಣನಿಂದ ಕೊಲೆಯಾದ ಯುವತಿ. ಶ್ಯಾಮ ಸುಂದರ ಎಂಬಾತನೇ ತಂಗಿಯನ್ನು ಕೊಲೆ ಮಾಡಿ ಅಣ್ಣ. ಚಂದ್ರಕಲಾಗೆ ಜುಲೈ 13 ರಂದು ಮದುವೆ ನಿಗದಿಯಾಗಿತ್ತು. ಮನೆಯವರು ಮದುವೆಯ ಲಗ್ನಪತ್ರಿಕೆಯನ್ನು ಹಂಚಿಕೆ ಮಾಡಿ, ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ಚಂದ್ರಕಲಾ ಮದುವೆಗೆ ಇನ್ನೇನು ಮೂರು ದಿನವಿರುವಾಗ ಮದುವೆ ಬೇಡ ಎಂದಿದ್ದಾಳೆ.
ಮನೆಯವರು ಮದುವೆ ಯಾವ ಕಾರಣಕ್ಕೆ ಬೇಡಾ ಎಂದಾಗ, ಹುಡುಗ ಕಪ್ಪಾಗಿದ್ದಾನೆ ಅಂತ ತಿಳಿಸಿದ್ದಾಳೆ. ಈ ವೇಳ ಕೋಪಗೊಂಡ ಅಣ್ಣ ಶ್ಯಾಮಸುಂದರ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಈ ಕುರಿತು ಗಬ್ಬೂರು ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ಶ್ಯಾಮಸುಂದರನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಕೆಆರ್ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ



ಈ ಹತ್ಯೆ ಕಂಡನಾರ್ಹ. ಆರೋಪಿಗೆ ಕಟಿಣ ಶಿಕ್ಷೆ ಆಗಬೇಕು.