ಭಾರತದ 300 ಕ್ಕೂ ಹೆಚ್ಚು ಪತ್ರಕರ್ತರು, ವಿರೋಧ ಪಕ್ಷದ ಮುಖಂಡರನ್ನು ಪೆಗಾಸಸ್ ಎಂಬ ಇಸ್ರೇಲಿ ಸ್ಪೈವೇರ್ ಬಳಸಿ ಕಣ್ಗಾವಲು ಇಡಲಾಗಿತ್ತು ಎಂಬ ಸುದ್ದಿ ಬಹಿರಂಗಗೊಂಡ ನಂತರ ವಿರೋಧ ಪಕ್ಷಗಳು ನರೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಕರ್ನಾಟಕದ ವಿರೋಧ ಪಕ್ಷದ ಮುಖಂಡರಾದ ಸಿದ್ದರಾಮಯ್ಯನವರ ಆಪ್ತ ಸಹಾಯಕರ ಫೋನ್ ಅನ್ನು ಹ್ಯಾಕ್ ಮಾಡಲಾಗಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು ‘ಇದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮಾಡಿರುವ ಕಾನೂನು ಬಾಹಿರ ಕೃತ್ಯ ಎಂದು ಕಿಡಿಕಾರಿದ್ದಾರೆ.
ಪೋನ್ ಕದ್ದಾಲಿಕೆ ಬಗ್ಗೆ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಇರುವ ಭಯ ನನಗಿಲ್ಲ. ನುಡಿದಂತೆ ನಡೆಯುವ ಸತ್ಯದ ಹಾದಿ ನನ್ನದು. ಆದರೆ ಪ್ರಜೆಗಳ ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಚಟ ಸಂವಿಧಾನ ವಿರೋಧಿ ಮಾತ್ರ ಅಲ್ಲ, ಸಭ್ಯತೆಯ ಸಂಸ್ಕೃತಿಯೂ ಅಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಮೋದಿ ಮತ್ತು ಬಿಜೆಪಿ ಭಾಗಿಯಾಗಿದೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅಮಾಯಕ ಪ್ರಜೆಗಳ ಪೋನ್ ಕದ್ದಾಲಿಕೆ ಮಾಡಿ ಕುಖ್ಯಾತಿ ಪಡೆದವರು. ಅವರ ಹುಟ್ಟುಗುಣ ಸುಲಭದಲ್ಲಿ ಬಿಟ್ಟುಹೋಗುವುದಿಲ್ಲ. ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ಬಿಜೆಪಿಯವರ “ಡರ್ಟಿ ಗೇಮ್”. ಕೇಂದ್ರ ಸರ್ಕಾರವೇ ನಡೆಸಿರುವ ಈ ಕಾನೂನು ಬಾಹಿರ ಕೃತ್ಯವನ್ನು ಮೇಲ್ಮನೆಯ ಎರಡೂ ಸದನಗಳಲ್ಲಿ ಪ್ರಸ್ತಾಪಿಸಬೇಕು ಎಂದು ಅಧೀರ್ ರಂಜನ್ ಚೌಧರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೋರುತ್ತೇನೆ ಎಂದು ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಕಾಲದಲ್ಲಿ ನನ್ನ ಆಪ್ತಸಹಾಯಕನ ಪೋನ್ ಕರೆಗಳನ್ನು ಕೇಂದ್ರ ಸರ್ಕಾರ ಟ್ಯಾಪ್ ಮಾಡಿದೆ ಎನ್ನುವುದು ಅಚ್ಚರಿಯ ಸುದ್ದಿ ಅಲ್ಲ. ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸದವರು ಎನ್ನುವುದು ನಮಗೆ ಗೊತ್ತಿದೆ. ಆಮಿಷ, ಬೆದರಿಕೆ ಮತ್ತು ಸುಳ್ಳುಗಳೇ ಆಪರೇಷನ್ ಕಮಲ ಎಂಬ ಪಾತಕದ ಅಸ್ತ್ರಗಳು. ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಮಾಡಿದ ಕುಕೃತ್ಯಗಳು ಒಂದೊಂದಾಗಿ ಬಯಲಾಗುತ್ತಿದೆ, ಬಿಜೆಪಿ ನಾಯಕರು ಜನರ ಮುಂದೆ ಬೆತ್ತಲಾಗುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪೆಗಾಸಸ್ ಗೂಢಾಚರ್ಯೆಯಲ್ಲಿ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಗುಟ್ಟೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು” ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ ಎಂದು ಅವರು ಕಿಡಿಕಾರಿದ್ದಾರೆ.
ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕದು ಎಂಬುದಕ್ಕೆ ಖಚಿತತೆ ಇದೆಯೇ? ಅಂತ ದಿನ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ. ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಉರುಳಲು ಪೆಗಾಸಸ್ ಕಾರಣ? HDK, ಸಿದ್ದು ಆಪ್ತ ಸಹಾಯಕರು, ಜಿ.ಪರಮೇಶ್ವರ್ ಫೋನ್ ಹ್ಯಾಕ್!


