ಮೂರು ದಿನಗಳ ದೆಹಲಿ ಭೇಟಿಯಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಸಭೆಯಲ್ಲಿ ಯಾವುದೇ ನಿರ್ದಿಷ್ಟ ಅಜೆಂಡಾಗಳು ಇರದಿದ್ದು, ಧೀರ್ಘಾವಧಿಯಲ್ಲಿ ವಿರೋಧ ಪಕ್ಷಗಳಾಗಿ ನಿರ್ವಹಿಸಬೇಕಾದ ಪಾತ್ರದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ರಾಹುಲ್ ಗಾಂಧಿ ನಡುವೆ ವೈಮನಸ್ಸು ಏರ್ಪಟ್ಟ ಹಿನ್ನೆಲೆಯಲ್ಲಿ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆದರೆ ಇತ್ತೀಚೆಗೆ ಟಿಎಂಸಿ ಪರ ಕೆಲಸ ಮಾಡಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲದೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದ ಹಿನ್ನೆಲೆಯಲ್ಲಿ ನಾಳೆಯ ಸೋನಿಯಾ-ಮಮತಾ ಭೇಟಿಗೆ ಮಹತ್ವ ಬಂದಿದೆ.
ಇಂದು ಮಮತಾ ಬ್ಯಾನರ್ಜಿಯವರು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಆನಂದ್ ಶರ್ಮಾರವರನ್ನು ಭೇಟಿಯಾಗಲಿದ್ದಾರೆ. ಶರ್ಮಾರವರು ಯೂತ್ ಕಾಂಗ್ರೆಸ್‌ನಲ್ಲಿದ್ದಾಗ ಮಮತಾ ಬ್ಯಾನರ್ಜಿಯವರ ಸೀನಿಯರ್ ಆಗಿದ್ದರು ಮತ್ತು ಕಮಲ್ ನಾಥ್ ಹಲವು ವರ್ಷ ಕೋಲ್ಕತ್ತಾದಲ್ಲಿ ತಂಗಿದ್ದರು. ಹಾಗಾಗಿ ಇವರಿಬ್ಬರೂ ಸಹ ಮಮತಾ ಬ್ಯಾನರ್ಜಿಯವರಿಗೆ ಆಪ್ತರು ಎನ್ನಲಾಗಿದೆ.
ಅಲ್ಲದೆ ಇಂದು ಸಂಜೆ ನಾಲ್ಕು ಗಂಟೆಗೆ ಮಮತಾರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಜಿಎಸ್‌ಟಿ ಬಾಕಿ ಮತ್ತು ಬಂಗಾಳಕ್ಕೆ ವಿಶೇಷ ಹಣಕಾಸು ಪ್ಯಾಕೇಜ್ ನೀಡುವಂತೆ ಮೋದಿಯವರನ್ನು ಒತ್ತಾಯಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಮುಖಂಡ, ಖ್ಯಾತ ವಕೀಲ ಅಭಿಷೇಕ್ ಸಿಂಘ್ವಿಯವರನ್ನು ಭೇಟಿಯಾಗಲಿರುವ ಮಮತಾ ಬ್ಯಾನರ್ಜಿಯವರು ಇಂದು ರಾತ್ರಿ ಔಪಚಾರಿಕವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರನ್ನು ಭೇಟಿಯಾಗಲಿದ್ದಾರೆ.
ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಪೆಗಾಸಸ್ ಹಗರಣ ಮತ್ತು ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ದೊಡ್ಡ ಹೋರಾಟ ನಡೆಸುತ್ತಿರುವುದರಿಂದ ನಾಳೆಯ ಸೋನಿಯಾ ಗಾಂಧಿಯವರೊಂದಿಗಿನ ಭೇಟಿಯಲ್ಲಿ ಈ ವಿಚಾರವು ಚರ್ಚೆಗೆ ಬರಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು


