ದೆಹಲಿಯ ಪೂಜಾರಿಯೊಬ್ಬ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ನಂತರ ಬಲವಂತವಾಗಿ ಶವಸಂಸ್ಕಾರ ಮಾಡಿದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ದಲಿತರ ಮಗಳು ಕೂಡ ದೇಶದ ಮಗಳು” ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮೀರಾಬಾಯಿ ಚಾನು, ಪಿ.ವಿ ಸಿಂಧು ಮತ್ತು ಲವ್ಲಿನಾ ಬೋರ್ಗಹೈನ್ ಮತ್ತು ಮಹಿಳಾ ಹಾಕಿ ತಂಡ ಅದ್ವೀತಿಯ ಪ್ರದರ್ಶನ ನೀಡಿ ಎಲ್ಲಡೆ ಪ್ರಶಂಸೆ ಗಳಿಸುತ್ತಿದ್ದಾರೆ. ಅವರನ್ನು ಭಾರತದ ಮಗಳು ಎಂದು ಕರೆಯಲಾಗುತ್ತಿದೆ. ಆದರೆ ಇನ್ನೊಂದು ಕಡೆ ಭಾರತದ ದಲಿತ ಹೆಣ್ಣು ಮಗಳನ್ನು ಅತ್ಯಾಚಾರವೆಸಗಿ ಕೊಲೆಗೈಯಲಾಗಿದೆ ಎಂಬರ್ಥದಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
दलित की बेटी भी देश की बेटी है। pic.twitter.com/CdbWkCwePP
— Rahul Gandhi (@RahulGandhi) August 3, 2021
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ, ಅಪ್ರಾಪ್ತ ದಲಿತ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಗು ಎಂದು ಪ್ರತಿಭಟನೆ ಆರಂಭಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಮಾನುಷ ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿದ್ದು ನಾಳೆ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ನ್ಯಾಯಕ್ಕಾಗಿನ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
News Update : दिल्ली बालिका हत्याकांड मामले में @BhimArmyChief ने की न्याय की माँग, पीड़ित परिवार से मिले। दोषियों पर सख़्त कार्रवाई की मांग। pic.twitter.com/vUdciy9SOf
— The Shudra (@TheShudra) August 3, 2021
ದೆಹಲಿಯ ಮೋಹನ್ ಲಾಲ್ ಮತ್ತು ಸುನೀತಾ ದೇವಿ ಎಂಬ ದಂಪತಿಗಳು ದಂಪತಿಗಳು 9 ವರ್ಷದ ಮಗಳೊಂದಿಗೆ ಹಳೆಯ ನಂಗಲ್ ಗ್ರಾಮದಲ್ಲಿ ಶ್ಮಶಾನದ ಮುಂಭಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಭಾನುವಾರ ಸಂಜೆ 5.30ರ ಸಮಯಕ್ಕೆ ಶ್ಮಶಾನದಲ್ಲಿನ ಕೂಲರ್‌ನಲ್ಲಿ ನೀರು ತರಲು ಅಪ್ರಾಪ್ತ ಬಾಲಕಿ ಹೋಗಿದ್ದಳು. ಆದರೆ ಸಂಜೆ 6 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಅದೇ ಸಮಯಕ್ಕೆ ಶ್ಮಶಾನದಲ್ಲಿನ ಪೂಜಾರಿ ಮತ್ತು ಇತರರು ಸುನೀತಾ ದೇವಿಯವರನ್ನು ಕರೆದು ಅವರ ಮಗಳ ಮೃತದೇಹ ತೋರಿಸಿ ನೀರು ತರುವಾಗ ಕರೆಂಟ್ ಷಾಕ್ ತಗಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೆ ಅವರು ಪೋಸ್ಟ್ ಮಾರ್ಟಂ ಮಾಡುತ್ತಾರೆ, ನಿಮ್ಮ ಮಗಳ ದೇಹವನ್ನು ಛಿದ್ರ ಛಿದ್ರ ಮಾಡುತ್ತಾರೆ. ಹಾಗಾಗಿ ಬೇಗನೇ ಶವಸಂಸ್ಕಾರ ಮಾಡೋಣ ಎಂದು ತಾಯಿ ಬಳಿ ಹೆದರಿಸಿದರು. ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಒಪ್ಪಿಗೆ ಪಡೆಯದೇ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೋಷಕರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವಿನ ಎಡ ಮಣಿಕಟ್ಟು ಮತ್ತು ಮೊಣಕೈ ನಡುವೆ ಸುಟ್ಟ ಗುರುತುಗಳಿದ್ದು, ಆಕೆಯ ತುಟಿಗಳು ಸಹ ನೀಲಿ ಬಣ್ಣದಲ್ಲಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ನೆರೆಹೊರೆಯ ಜನರು ಪೂಜಾರಿಯನ್ನು ಥಳಿಸಿದಾಗ ಆತ ಅತ್ಯಾಚಾಸವೆಸಗಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೋಷಕರು ಮೂಕನಾಯಕ ಚಾನೆಲ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಂತರ ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳ ತಲುಪುವ ವೇಳೆಗೆ ಮೃತ ಬಾಲಕಿಯ ಸುಟ್ಟ ಕಾಲುಗಳು ಮಾತ್ರ ಸಿಕ್ಕಿವೆ. ಸ್ಥಳೀಯರಿಂದ ಪ್ರತಿಭಟನೆ ನಡೆದ ನಂತರ ಪೊಲೀಸರು FSL ತಂಡವನ್ನು ಕರೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪೂಜಾರಿ ಸೇರಿದಂತೆ ಇತರ ಮೂವರ ಮೆಲೆ FIR ದಾಖಲಿಸಿ, ಬಂಧಿಸಿದ್ದಾರೆ.
ಇದನ್ನೂ ಓದಿ: ದಲಿತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದ ಶವಸಂಸ್ಕಾರ: ಪೂಜಾರಿಯ ಬಂಧನ


