Homeಕರ್ನಾಟಕಶಿವರಾಮ ಕಾರಂತ್ ಬಡಾವಣೆ ಎಂಬ 'ಅಭಿವೃದ್ಧಿ' ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

- Advertisement -
- Advertisement -

ದೇಶದ ಅತೀ ಶ್ರೀಮಂತ ನಗರಗಳ ಪಟ್ಟಿಯ ಮೂರನೆ ಸ್ಥಾನದಲ್ಲಿ ಬೆಂಗಳೂರು ಎಂಬ ಮಹಾಪಟ್ಟಣವಿದೆ. ಹೊಸದಾಗಿ ಬರುವವರಿಗೆ ಈ ಮಹಾನಗರ ಝಗಮಗಿಸುತ್ತಾ ಕಣ್ಣಿಗೆ ಕುಕ್ಕುವ ನಗರವಾಗಿದೆ. ಆದರೆ ಈ ನಗರ ಕಟ್ಟಲ್ಪಟ್ಟಿದ್ದು ಹೇಗೆ ಎಂಬುವುದಕ್ಕೆ ಆಗಸ್ಟ್ 7ರಂದು ಬೆಂಗಳೂರಿನ ಯಲಹಂಕ ಉಪನಗರದ ಬಳಿಯ ದೊಡ್ಡ ಬೆಟ್ಟಹಳ್ಳಿಯಲ್ಲಿ ನಡೆದ ಘಟನೆ ಸಾಕ್ಷಿ.

ಜಯಮ್ಮ ಎಂಬ 55 ವರ್ಷದ ದಲಿತ ಸಮುದಾಯದ ವಿಧವೆಯೊಬ್ಬರು ಆಗಸ್ಟ್ 7ರ ಬೆಳಗ್ಗೆ ಉಪಾಹಾರವನ್ನು ತಯಾರು ಮಾಡುತ್ತಿರಬೇಕಾದರೆ, ಅಲ್ಲಿಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ (ಬಿಡಿಎ) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಮಿಸಿದ್ದರು. ಅವರೇನು ಒಬ್ಬರೇ ಬಂದಿದ್ದಲ್ಲ, ತನ್ನೊಂದಿಗೆ ಸುಮಾರು 150 ಪೊಲೀಸರನ್ನೂ, ಜೊತೆಗೆ ಒಂಬತ್ತು ಜೆಸಿಬಿಯನ್ನೂ ಕರೆತಂದು ಮಹಿಳೆಯನ್ನು ಅವರ ಮನೆಯಿಂದ ಹೊರಹಾಕಿ, ಜಾತಿನಿಂದನೆ ಮಾಡಿ ಹಲ್ಲೆ ನಡೆಸಿ ಅವರು ವಾಸಿಸುತ್ತಿದ್ದ ಮನೆಯನ್ನು ಒಡೆದು ಹಾಕಿ ದೌರ್ಜನ್ಯ ಎಸಗಿ ಹೋಗಿದ್ದಾರೆ.

ತನ್ನ ಕಣ್ಣ ಮುಂದೆಯೆ ತನ್ನ ಮನೆಯನ್ನು ಒಡೆದು ಹಾಕುತ್ತಿದ್ದಾಗ ಪ್ರತಿಭಟಿಸಿದ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರಿಂದ ಮೂರ್ಛೆ ಹೋದ ಜಯಮ್ಮ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆತಂದು ಆಸ್ಪತ್ರೆಯ ಹೊರಗೆ ಬಿಟ್ಟುಹೋಗಿದ್ದಾರೆ. ಒಂದು ವರ್ಷದ ಹಿಂದೆ ರಸ್ತೆ ಅಪಘಾತದಿಂದಾಗಿ ಬೆನ್ನುಮೂಳೆ ಮುರಿತಕ್ಕೊಳಗಾದ ತನ್ನ ಮಗನೊಂದಿಗೆ ಮಳೆಗಾಲದ ಸಮಸ್ಯೆ ಹಾಗೂ ಕೊರೊನಾ ಸಾಂಕ್ರ್ರಾಮಿಕದ ಮಧ್ಯೆ ಜಯಮ್ಮ ಇದೀಗ ಅಕ್ಷರಶಃ ಬೀದಿಪಾಲಾಗಿದ್ದಾರೆ.

ಜಯಮ್ಮ ಅವರೇ ಹೇಳುವಂತೆ, ಅವರಿಗೆ ಅವರ ಪೂರ್ವಜರಿಂದ ಬಂದ 15 ಗುಂಟೆ ಜಮೀನಿನಲ್ಲಿ ತಮ್ಮ ಮಗನೊಂದಿಗೆ ವಾಸಿಸುತ್ತಿದ್ದಾರೆ. ಅಧಿಕಾರಿಗಳು ಅವರ ಮನೆ ಒಡೆಯುವ ಬಗ್ಗೆ ನೋಟಿಸ್ ಆಗಲಿ, ಕಾನೂನಿನ ಅಡಿಯಲ್ಲಿ ಯಾವುದೇ ಪುನರ್ವಸತಿ ಒದಗಿಸಿಲ್ಲ. ತನಗೆ ತನ್ನ ಪೂರ್ವಜರಿಂದ ಬಂದ ಭೂಮಿಯನ್ನು ಅಧಿಕಾರಿಗಳು ಕಸಿದುಕೊಳ್ಳಲು ನೋಡುತ್ತಿದ್ದಾರೆ ಎಂದು ಜಯಮ್ಮ ಅವರು ದೂರು ನೀಡಿದ್ದಾರೆ.

ಏನಿದು ದೊಡ್ಡ ಬೆಟ್ಟಹಳ್ಳಿ ಘಟನೆ?

ಆಗಸ್ಟ್ 7ರಂದು ನಡೆದ ಘಟನೆಯಲ್ಲಿ ಕೇವಲ ಜಯಮ್ಮ ಅವರ ಮೇಲೆ ಮಾತ್ರ ದೌರ್ಜ ನಡೆದಿದ್ದಲ್ಲ. ದೊಡ್ಡ ಬೆಟ್ಟಹಳ್ಳಿಯ ಸುಮಾರು ಹತ್ತು ಮನೆಗಳನ್ನು ಬಿಡಿಎ ಅಧಿಕಾರಿಗಳು ಒಡೆದುಹಾಕಿದ್ದಾರೆ. ಎಲ್ಲವೂ ದಲಿತ ಸಮುದಾಯಗಳ ಮನೆಗಳು. ಇದಕ್ಕೂ ಮುಂಚೆ ಸುಮಾರು 15 ದಿನಗಳ ಹಿಂದೆ ಕೂಡ ಸೋಮಶೆಟ್ಟ ಹಳ್ಳಿ, ಮೇದ ಅಗ್ರಹಾರ ಮತ್ತು ಲಕ್ಷ್ಮೀಪುರ ಗ್ರಾಮದ ಸುಮಾರು 22 ಮನೆಗಳನ್ನು ಒಡೆದು ಹಾಕಿದ್ದಾರೆ.

ಬಿಡಿಎ ಅಧಿಕಾರಿಗಳ ಪ್ರಕಾರ ಇವೆಲ್ಲವೂ ಅಕ್ರಮ ಕಟ್ಟಡಗಳು, ಹಾಗಾಗಿ ಇದನ್ನು ಒಡೆದು ಹಾಕಿದ್ದಾರೆ. ಆದರೆ ಅಲ್ಲಿನ ನಿವಾಸಿಗಳ ಪ್ರಕಾರ ಇವೆಲ್ಲವೂ ಹಲವಾರು ವರ್ಷಗಳಿಂದ ಅವರ ವಾಸಸ್ಥಾನಗಳಾಗಿದ್ದು, ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಾ ಬರುತ್ತಿದ್ದಾರೆ. ಸರ್ಕಾರವೇ ನೀಡಿದ ಲೈಸನ್ಸ್‌ನಿಂದ ಅಲ್ಲಿ ಮನೆಯನ್ನು ಕಟ್ಟಲಾಗಿದೆ. ಮನೆಗೆ ವಿದ್ಯುತ್ ಕನೆಕ್ಷನ್ ನೀಡಲಾಗಿದೆ. ಆದರೆ ಬಿಡಿಎ ಅಧಿಕಾರಿಗಳಿಗೆ ಇವೆಲ್ಲವೂ ಅನಧಿಕೃತ ಕಟ್ಟಡಗಳು.

ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಶ್ರೀಮಂತರಿಗೆ ಮಾತ್ರ ಸಾಧ್ಯವಾಗುವ ನಿವಾಸಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಬೆಳೆಯುತ್ತಿರುವ ಬೆಂಗಳೂರಿಗೆ ಬಲಿಯಾಗುತ್ತಿರುವುದು ಸಾವಿರಾರು ಜನ ರೈತರ ತುಂಡು ಜಮೀನುಗಳಾಗಿವೆ. ಬಡ ದಲಿತ ರೈತರ ಭೂಮಿಗಳನ್ನು ಪಡೆದು, ಕಣ್ಣುಕೋರೈಸುವ ನಿವೇಶನಗಳನ್ನು ಕಟ್ಟಿ ಲಕ್ಷಾಂತರ ರುಪಾಯಿಗಳಿಗೆ ಮಾರುವುದು ಮತ್ತು ತಮ್ಮ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ಹೈನುಗಾರಿಕೆ ಮತ್ತು ಸಣ್ಣಪುಟ್ಟ ಕೃಷಿ ಮಾಡುತ್ತಾ ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದ ರೈತರನ್ನು ಇವರ ಕಟ್ಟಿದ ಕಟ್ಟಡಗಳ ಅಡಿಯಲ್ಲಿ ಕೆಲಸ ಮಾಡುವಂತಹ ಕೆಲಸಕ್ಕೆ ಹಚ್ಚುವುದನ್ನು ಆಡಳಿತ ವ್ಯವಸ್ಥೆ ಬೆಂಗಳೂರು ಅಭಿವೃದ್ಧಿ ಎಂದು ಹೆಸರಿಟ್ಟಿದೆ.

ಬಿಡಿಎ ವೆಬ್‌ಸೈಟ್‌ನಲ್ಲಿ ಕಂಡುವರುವಂತೆ 30’ 40’ ನಿವೇಶನಗಳ ಬೆಲೆ 25 ಲಕ್ಷದಿಂದಲೆ ಪ್ರಾರಂಭವಾಗುತ್ತದೆ. ಇಷ್ಟೆ ಅಲ್ಲದೆ ಉತ್ತಮ ಗುಣಮಟ್ಟದ ಮೂಲಸೌಕರ್ಯದೊಂದಿಗೆ ಬೆಂಗಳೂರನ್ನು ಆದರ್ಶ ಜಾಗತಿಕ
ಗಮ್ಯಸ್ಥಾನವನ್ನಾಗಿ ಮಾಡುವುದು ಬಿಡಿಎ ಗುರಿಯಾಗಿದೆ ಎಂದು ಹೇಳಿದೆ. ಅದಕ್ಕಾಗಿ ತಲೆತಲಾಂತರದಿಂದ ತಮ್ಮ ಸಂಸ್ಕೃತಿ, ಜೀವನವನ್ನು ಕಟ್ಟಿಕೊಂಡು ಬರುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸುವುದನ್ನು ಬಿಡಿಎ ಸದ್ಯಕ್ಕೆ ಮಾಡುತ್ತಿದೆ.

ಶಿವರಾಮ ಕಾರಂತ್ ಬಡಾವಣೆ!

2008 ಡಿಸೆಂಬರ್ 31ರಂದು ಶಿವರಾಮ ಕಾರಂತ್ ಬಡಾವಣೆಗಾಗಿ 17 ಹಳ್ಳಿಗಳ ಸುಮಾರು 3545 ಎಕರೆ ಭೂಮಿಯನ್ನು ಸ್ವಾಧೀನ ಮಾಡುವುದಾಗಿ ಬಿಡಿಎ ಅಧಿಸೂಚನೆ ಹೊರಡಿಸುತ್ತದೆ. ಆದರೆ 2014ರವರೆಗೂ ಯಾವುದೆ ರೀತಿಯ ಪ್ರೊಸೀಜರ್‌ಗಳನ್ನು ಸರ್ಕಾರ ಮಾಡುವುದಿಲ್ಲ. ಈ ಮಧ್ಯೆ ಸುಮಾರು 500 ಎಕರೆಯಷ್ಟು ಭೂಮಿಗಳು ಡಿನೋಟಿಫೈ ಆಗಿ ಸರ್ಕಾರಕ್ಕೆ ಸೇರುತ್ತದೆ. ಆದರೆ, ಸರ್ಕಾರ ಯೋಜನೆಯೊಂದನ್ನು ಘೋಷಿಸಿ ಐದು ವರ್ಷಗಳವರೆಗೂ ಯಾವುದೇ ಅಭಿವೃದ್ಧಿ ಮಾಡಿಲ್ಲ, ಆದ್ದರಿಂದ ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ರದ್ದು ಮಾಡಬೇಕು ಎಂದು 2014ರಲ್ಲಿ ಒಂದಷ್ಟು ರೈತರು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ. ಈ ಸಮಯದಲ್ಲಿ ಬಿಡಿಎ ನೋಟಿಫೈ ಮಾಡಿದ್ದನ್ನು ಹೈಕೋರ್ಟ್ ಅನೂರ್ಜಿತಗೊಳಿಸುತ್ತದೆ.

ಇದಾಗಿ ಸುಮಾರು 2017ರ ತನಕ ಬಿಡಿಎ ಈ ಯೋಜನೆಯ ಬಗ್ಗೆ ಯಾವುದೇ ಕೆಲಸಗಳನ್ನು ಮಾಡದೆ ಹಾಗೆ ಬಿಟ್ಟುಬಿಟ್ಟಿತ್ತು. ನಂತರ ಸುಪ್ರೀಂಕೋರ್ಟ್‌ಗೆ ತೆರಳಿದ ಬಿಡಿಎ 2018ರಲ್ಲಿ, 2008ರ ಅಧಿಸೂಚನೆ ಹೊರಡಿಸಿದ ಪ್ರಕಾರ ಎಲ್ಲಾ ಪ್ರದೇಶಗಳನ್ನು ಸ್ವಾಧೀನಪಡಿಸುವ ತೀರ್ಪನ್ನು, ತನ್ನ ಪರವಾಗಿ ಪಡೆದುಕೊಳ್ಳುತ್ತದೆ. ಆದರೆ 2014 ಮತ್ತು 2018ರ ಮಧ್ಯೆ ಯಾವುದೇ ನೋಟಿಫಿಕೇಷನ್ ಆಗಲಿ, ಬಿಡಿಎ ಪ್ರಕ್ರಿಯೆಗಳಾಗಲೀ ಇರುವುದಿಲ್ಲ. ಈ ಸಮಯದಲ್ಲಿ ಅಂದರೆ ಸುಮಾರು 1156 ದಿನಗಳಲ್ಲಿ (ಸರಿಸುಮಾರು ಮೂರುವರೆ ವರ್ಷ) ಹದಿನೇಳು ಗ್ರಾಮಗಳಲ್ಲಿ 7-8 ಸಾವಿರ ಮನೆಗಳು ಅಲ್ಲಿ ನಿರ್ಮಾಣವಾಗುತ್ತವೆ. ಆದರೆ ಬಿಡಿಎ 2018ರಲ್ಲಿ ಸುಪ್ರೀಂಕೋರ್ಟ್‌ನ ವಿಚಾರಣೆ ಸಮಯದಲ್ಲಿ, ಅಲ್ಲಿ ಮನೆ ನಿರ್ಮಾಣ ಆಗಿರುವುದನ್ನು ಮುಚ್ಚಿಟ್ಟು, ತನ್ನ ಪರವಾಗಿ ತೀರ್ಪು ಆಗುವಂತೆ ನೋಡಿಕೊಳ್ಳುತ್ತದೆ. ಸುಪ್ರೀಂಕೋರ್ಟ್ ಎಲ್ಲಾ ಭೂಮಿಗಳನ್ನೂ ಸ್ವಾಧೀನ ಮಾಡುವಂತೆ ತೀರ್ಪು ನೀಡಿರುತ್ತದೆ.

ಇದರ ಜೊತೆಗೆ ಸುಪ್ರೀಂ ಕೋರ್ಟ್, ಸ್ವಾಧೀನ ಮಾಡುವಾಗ ಯಾವುದೇ ಅನ್ಯಾಯ ನಡೆದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್, ಮಾಜಿ ಬಿಡಿಎ ಆಯುಕ್ತ ಜಯಕರ್ ಜೈರಾಮ್ ಮತ್ತು ರಾಜ್ಯದ ಮಾಜಿ ಡಿಜಿಪಿ ಅವರನ್ನು ಒಳಗೊಂಡ ತ್ರಿಸದಸ್ಯರ ಸಮಿತಿಯನ್ನು ರಚಿಸುತ್ತದೆ. 2018ಕ್ಕಿಂತ ಮುಂಚೆ ಇಲ್ಲಿ ಮನೆಗಳನ್ನು ಕಟ್ಟಿದ್ದರೆ ಅದರ ದಾಖಲೆಗಳನ್ನು ಸಮಿತಿಯು ಸಂಗ್ರಹಿಸುವಂತೆ ಮತ್ತು ಅದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವಂತೆ ತಿಳಿಸುತ್ತದೆ. ಆದರೆ ಈ ನಡುವೆ ಕೊರೊನಾ ಅಪ್ಪಳಿಸಿದ್ದರಿಂದ ಎಂಟು ತಿಂಗಳು ಸಮಿತಿ ಕಾರ್ಯನಿರ್ವಹಿಸಿರಲಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ಸಮಿತಿಗೆ ನೀಡಿದ್ದ ಸಮಯವನ್ನು ಮಾರ್ಚ್ 2022ರವರೆಗೆ ವಿಸ್ತರಿಸಿದೆ.

ಆದರೆ ಈ ನಡುವೆ ಬಿಡಿಎ ಖಾತೆದಾರ ರೈತರಿಗೆ ಮತ್ತು ಕೆಲವು ನಿವೇಶನದಾರರಿಗೆ ನೋಟಿಸ್ ನೀಡಿ ಅವರ ಆಕ್ಷೇಪಣೆಯನ್ನು ಸಲ್ಲಿಸುವಂತೆ ಹೇಳಿದೆ. ಆ ಸಂದರ್ಭದಲ್ಲಿ ಕೆಲವು ರೈತರು ತಮಗೆ ಪರಿಹಾರ ಕೊಡುವಂತೆ ಹಾಗೂ ಇನ್ನು ಕೆಲವರು ತಮ್ಮದು ತುಂಡು ಭೂಮಿಯಲ್ಲೇ ಜೀವನ ನಡೆಸುತ್ತಿದ್ದು, ಇದಷ್ಟೇ ತಮ್ಮ
ಆದಾಯದ ಮೂಲ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಸರಿಸುಮಾರು 30 ಸಾವಿರ ಆಕ್ಷೇಪಣೆಗಳು ಬಿಡಿಎಗೆ ಸಲ್ಲಿಕೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಮೇಶ್ ಅವರು ಹೇಳುತ್ತಾರೆ. ಆದರೆ ಈ ಯಾವುದೇ ಅರ್ಜಿಗಳ ಸಾರ್ವಜನಿಕ ವಿಚಾರಣೆಯನ್ನಾಗಲೀ ಅಥವಾ ವೈಯಕ್ತಿಕ ವಿಚಾರಣೆಯನ್ನಾಗಲೀ ಬಿಡಿಎ ನಡೆಸಿಲ್ಲ ಎಂದು ರಮೇಶ್ ಆರೋಪಿಸುತ್ತಾರೆ.

ಆದರೆ ಇದ್ಯಾವುದನ್ನೂ ಮಾಡದೆ ಬಿಡಿಎ ಸುಮಾರು 15 ದಿನಗಳ ಹಿಂದೆ ಭೂಮಿಯನ್ನು ವಶಪಡಿಸುವುದಾಗಿ ಅಂತಿಮ ನೋಟಿಸ್ ನೀಡುತ್ತಿದ್ದೇವೆ ಎಂದು ಹೇಳಿದೆ. ಆದರೆ 98% ಜನರಿಗೆ ಯಾವುದೇ ನೋಟಿಸ್‌ಅನ್ನು ಬಿಡಿಎ ನೀಡಿಲ್ಲ. ಕೆಲವೇ ದಿನಗಳ ಅಂತರದಲ್ಲಿ ಭೂಮಿಯನ್ನು ಸ್ವಾಧೀನ ಮಾಡುತ್ತಿದ್ದೇವೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಯಾವುದೇ ರೈತರ ಅಳಲನ್ನು ಆಲಿಸದೆ, ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಇದನ್ನು ವಿರೋಧಿಸಿ ಹಲವು ಹಳ್ಳಿಗಳ ಜನರು ಧರಣಿ ಪ್ರಾರಂಭಿಸಿದ್ದಾರೆ ಎಂದು ರಮೇಶ್ ಹೇಳುತ್ತಾರೆ.

ಕಳೆದ ಹದಿನೈದು ದಿನಗಳ ಹಿಂದೆ ಮೇಲೆ ಹೇಳಿದಂತೆ ಬಡ ರೈತರ ಕಟ್ಟಡಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಬಿಡಿಎ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಅದರ ನಂತರ ಆಗಸ್ಟ್ ಏಳರಂದು ದೊಡ್ಡ ಬೆಟ್ಟ ಹಳ್ಳಿಯ ಜಯಮ್ಮ ಅವರ ಮನೆಯನ್ನು ಸೇರಿ ಹತ್ತು ಮನೆಗಳನ್ನು ಧ್ವಂಸಗೊಳಿಸಿದ್ದಾರೆ.

ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?

ಶಿವರಾಮ ಕಾರಂತ ಬಡಾವಣೆಗೆ ನೋಟಿಫಿಕೇಷನ್ ಆಗಿರುವ ಒಟ್ಟು 17 ಹಳ್ಳಿಗಳು ಎರಡು ಶಾಸಕರ ಕ್ಷೇತ್ರಕ್ಕೆ ಒಳಪಟ್ಟಿದೆ. ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಕ್ಷೇತ್ರವಾದ ಯಲಹಂಕದಲ್ಲಿ 14 ಹಳ್ಳಿಗಳು ಬಂದರೆ, ಜೆಡಿಎಸ್ ಶಾಸಕ ಮಂಜುನಾಥ್ ಅವರ ಕ್ಷೇತ್ರದ ಅಡಿಯಲ್ಲಿ 3 ಹಳ್ಳಿಗಳು ಬರುತ್ತದೆ. ಬಿಜೆಪಿಯಿಂದ ಚುನಾಯಿತರಾಗಿರುವ ಬಚ್ಚೇಗೌಡರು ಈ ಎಲ್ಲಾ ಹಳ್ಳಿಗಳನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಾರೆ.

2018ರಲ್ಲಿ ರೈತರ ಪರವಾಗಿ ಹೋರಾಟ ಮಾಡಿದ್ದ ಮತ್ತು ಯಾವುದೇ ಮನೆಗಳನ್ನು ಒಡೆಯಲು ಬಿಡುವುದಿಲ್ಲ ಎಂದು ಮಾತುಕೊಟ್ಟಿದ್ದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಇದೀಗ ಬಿಡಿಎ ಅಧ್ಯಕ್ಷ ಆಗಿದ್ದಾರೆ. ಈ ಹಿಂದೆ ಯಾವುದೇ ಮನೆ ಮುರಿಯುವುದಿಲ್ಲ ಎಂದು ಹೇಳಿಕೆ ಕೊಟ್ಟದ್ದ ವಿಶ್ವನಾಥ್ ಅವರು ಇದೀಗ, “ಶಿವರಾಮ ಕಾರಂತ್ ಬಡಾವಣೆ ನಮಗೆ ಸವಾಲಾಗಿದೆ. ಅದನ್ನು ಮಾಡಲೆಬೇಕಿದೆ. ನೀವೇ ಅಧ್ಯಕ್ಷ ಆಗಿರುವುದರಿಂದ ಬಡಾವಣೆ ಯೋಜನೆಯನ್ನು ಬಿಟ್ಟುಬಿಡಬೇಕು ಎಂದು ರೈತರು ಹೇಳುತ್ತಿದ್ದಾರೆ. ಬಿಡಿಎ ಅಧ್ಯಕ್ಷ ಆಗುವುದಕ್ಕಿಂತ ಮುಂಚೆ ಬಿಟ್ಟುಬಿಡಬೇಕು ಎಂದು ಅಂದುಕೊಂಡಿದ್ದೆ, ಆದರೆ ಈ ಬಿಡಿಎ ಅಧ್ಯಕ್ಷ ಆಗಿರುವುದರಿಂದ ಈಗದನ್ನು ಬಿಡುವುದಕ್ಕೆ ಆಗುವುದಿಲ್ಲ. ಬಡಾವಣೆಯನ್ನು ಕಟ್ಟಿ ಸಾಧಿಸಿ ತೋರಿಸಬೇಕು” ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.

ಜೆಡಿಎಸ್ ಶಾಸಕ ಮಂಜುನಾಥ್ ಈಗಲೂ ರೈತರ ಪರವಾಗಿ ನಿಂತಿದ್ದು, ಅವರು ಇಲ್ಲವೆಂದಿದ್ದರೆ ನಮ್ಮ ಭೂಮಿಗಳು ಬಿಡಿಎ ಪಾಲಾಗುತ್ತಿದ್ದವು ಎಂದು ರೈತರು ನೆನೆಸಿಕೊಳ್ಳುತ್ತಾರೆ. ಇನ್ನು ಸಂಸದ ಬಚ್ಚೇಗೌಡರಿಗೆ ಈ ರೀತಿಯಾಗಿ 17 ಹಳ್ಳಿ ತಮ್ಮ ಕ್ಷೇತ್ರದಲ್ಲಿ ಇದೆ ಎಂದೇ ಗೊತ್ತಿರಲು ಸಾಧ್ಯವಿಲ್ಲ, ಯಾಕೆಂದರೆ ಇದುವರೆಗೂ ನಮ್ಮ ಹಳ್ಳಿಗಳಿಗೆ ಅವರು ಕಾಲಿಟ್ಟಿದ್ದಿಲ್ಲ ಎಂದು ಅಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರ ಪಾಡು ಕೇಳುವವರಿಲ್ಲ

ಬಿಡಿಎ ಅಧಿಕಾರಿಗಳು ತಮ್ಮ ಮನೆಗಳನ್ನು ಒಡೆಯುತ್ತಿರುವಾಗ ಅಧಿಕಾರಿಗಳೊಂದಿಗೆ, ತಮ್ಮ ಮನೆಯನ್ನು ಒಡೆಯಬೇಡಿ ಎಂದು ಅಂಗಲಾಚಿದ ಜಯಮ್ಮ ಅವರ ಮೈದುನ ಮತ್ತು ಮೊಮ್ಮಗನನ್ನು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕಾಯ್ದೆಗಳನ್ನು ಹಾಕಿ ಬಂಧಿಸಿದ್ದಾರೆ ಎಂದು ರಮೇಶ್ ಹೇಳುತ್ತಾರೆ.

“ನಮಗೆ ಒಂದೂ ಅರ್ಥ ಆಗುತ್ತಿಲ್ಲ, ನಮಗೆ ನೋಟಿಸ್ ಬಂದಿಲ್ಲ. ತಲೆತಲಾಂತರದಿಂದ ಬಾಳಿ ಬದುಕಿ ಬಂದ ನಮ್ಮ ಜಮೀನುಗಳನ್ನು, ಅಲ್ಲಿನ ಮನೆಗಳನ್ನು ಬಿಡಿಎ ಅಕ್ರಮ ಎಂದು ಹೇಳುತ್ತಿದೆ.

ಈ ಬಿಡಿಎ ಉದ್ದೇಶ ಇರುವುದು ಬಡಾವಣೆಗಳನ್ನು ನಿರ್ಮಿಸಿ ಸೈಟುಗಳನ್ನು ಹಂಚುವುದಾಗಿದೆ. ಆದರೆ
ದಲಿತ ಮನೆಗಳನ್ನು ನೆಲಸಮ ಮಾಡಿ, ಆ ಭೂಮಿಗಳಲ್ಲಿ ನಿವೇಶನಗಳನ್ನು ಮಾಡಿ ಶ್ರೀಮಂತರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಯ ಸುಪ್ರೀಂಕೋರ್ಟ್ ಒಪ್ಪುತ್ತಿದೆ ಎಂಬುವುದು ನಂಬಲಾಗುತ್ತಿಲ್ಲ. ಇದು ನಮ್ಮ ಪರಿಸ್ಥಿತಿ” ಎಂದು ರಮೇಶ್ ಬೇಸರ ವ್ಯಕ್ತಪಡಿಸುತ್ತಾರೆ.

ಸಂತ್ರಸ್ತ ಹಳ್ಳಿಗಳ ಹಲವಾರು ಪ್ರದೇಶಗಳಲ್ಲಿ ಈಗಾಗಲೆ ಧರಣಿಗಳು ಪ್ರಾರಂಭವಾಗಿದೆ ತುಂಡುಭೂಮಿಯನ್ನು ಇಟ್ಟುಕೊಂಡು ಜೀವನ ದೂಡುತ್ತಿರುವ ಇಲ್ಲಿನ ಹೆಚ್ಚಿನ ರೈತರಿಗೆ ಮೂಲ ಆದಾಯ ಹೈನುಗಾರಿಕೆಯಾಗಿದೆ. ಯೋಜನೆ ಅಡಿಯಲ್ಲಿ ಬರುವ ರಾಮಗೊಂಡನ ಹಳ್ಳಿಯೊಂದರಲ್ಲೇ ತಿಂಗಳಿಗೆ 12 ರಿಂದ 14 ಲಕ್ಷ ರುಪಾಯಿಗಳ ಹಾಲನ್ನು ಉತ್ಪಾದಿಸಲಾಗುತ್ತದೆ. ನಮಗಿರುವ ಈ ತುಂಡು ಭೂಮಿಯನ್ನು ಕಳೆದುಕೊಂಡರೆ ನಾವೇನು ಕಸುಬುಗಳನ್ನು ಮಾಡಬೇಕು ಎಂದು ಬೆಂಗಳೂರಿಗರಿಗೆ ಹಾಲು ನೀಡುವ ಈ ರೈತರು ಪ್ರಶ್ನಿಸುತ್ತಾರೆ.

ಪ್ರಸ್ತುತ ಗೋವುಗಳ ಬಗ್ಗೆ ಅತೀವ ಕಾಳಜಿ ಇಟ್ಟುಕೊಂಡಿರುವ ಈಗಿನ ಬಿಜೆಪಿ ಸರ್ಕಾರ, ಗೋವುಗಳನ್ನು ಪಾಲಿಸುತ್ತಾ, ಗೋ ಸಂರಕ್ಷಣೆ ಮಾಡುವ ರೈತರನ್ನು ಏಕಾಏಕಿ ಒಕ್ಕಲೆಬ್ಬಿಸಿ ಗೋವುಗಳೊಂದಿಗೆ ರೈತರನ್ನೂ ಬೀದಿ ಪಾಲು ಮಾಡುತ್ತಿದೆ ಎಂದು ಈ ರೈತರು ಆಕ್ಷೇಪಿಸುತ್ತಾರೆ.

ಬೆಂಗಳೂರಿನ ಬಡಾವಣೆಗಳಿಗೆ ಈ ಹಿಂದೆ ತಮ್ಮ ಭೂಮಿಗಳನ್ನು ಕೊಟ್ಟ ರೈತರು ತಮಗೆ ಸಿಕ್ಕ ಅಲ್ಪ ಹಣವನ್ನು ಖರ್ಚು ಮಾಡಿ ತಮ್ಮ ಭೂಮಿಯಲ್ಲಿ ನಿರ್ಮಾಣವಾದ ದೊಡ್ಡ ದೊಡ್ಡ ಕಟ್ಟಡಗಳಿಗೆ ವಾಚ್‌ಮೆನ್ ಆಗಿ ಮತ್ತು ಮಹಿಳೆಯರು ಅಲ್ಲಿರುವ ಶ್ರೀಮಂತರ ಮನೆಗಳ ಆಯಾಗಳಾಗಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇದು ಬಿಡಿಎಗೆ ಜಮೀನು ಕೊಟ್ಟ ರೈತರ ಪಾಡು. ಈ ಪಾಡಿಗೆ ನಮ್ಮನ್ನೂ ತಳ್ಳುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಭೂ ಸವಕಳಿ: ರೈತರ ಪರಿಹಾರದ ಮೊತ್ತ ಹೆಚ್ಚಳಕ್ಕೆ ಸಚಿವ ಮುರುಗೇಶ್ ನಿರಾಣಿ ಮನವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...