ಹೈಟಿ ರಾಷ್ಟ್ರದಲ್ಲಿ ಭಯಾನಕ ಭೂಕಂಪ ಸಂಭವಿಸಿದ್ದು, ಇದೂವರೆಗೂ 1,419 ಜನರು ಸಾವನ್ನಪ್ಪಿದ್ದಾರೆ. 6,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭೂಕಂಪದಿಂದಾಗಿ ಮನೆಗಳು, ಅಂಗಡಿಗಳು ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಂಡಿವೆ. ನೈರುತ್ಯ ಹೈಟಿ ಆಸ್ಪತ್ರೆಯು ರೋಗಿಗಳಿಂದ ತುಂಬಿಹೋಗಿದೆ. ಅನೇಕರು ಜಾಗವಿಲ್ಲದೆ ಒಳಾಂಗಣ, ಕಾರಿಡಾರ್, ವರಾಂಡಾ ಮತ್ತು ಹಜಾರಗಳಲ್ಲಿ ಮಲಗಬೇಕಾದ ಪರಿಸ್ಥಿತಿ ಉಂಟಾಗಿದೆ. ಇದೇ ವೇಳೆ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆಸ್ಪತ್ರೆಯ ರೋಗಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಪರದಾಡುತ್ತಿದ್ದಾರೆ.
ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಿಂದ ಸುಮಾರು 125 ಕಿಲೋಮೀಟರ್ (80 ಮೈಲಿ) ದೂರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುಮಾರು ಕೆಲವು ಪಟ್ಟಣಗಳು ಧ್ವಂಸಗೊಂಡಿವೆ, ಭೂಕುಸಿತ ಉಂಟಾಗಿದೆ. ಅತ್ಯಂತ ಬಡವಾಗಿರುವ ದೇಶವಾಗಿರುವ ಹೈಟಿಯಲ್ಲಿ ರಕ್ಷಣಾ ಕಾರ್ಯಗಳು ತ್ವರಿತವಾಗಿಲ್ಲ.
7.2 ತೀವ್ರತೆಯ ಭೂಕಂಪನದಿಂದಾಗಿ 7,000 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಸುಮಾರು 6,000 ಜನರು ಭೂಕಂಪದಿಂದ ಗಾಯಗೊಂಡಿದ್ದಾರೆ. ಸುಮಾರು 30,000 ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ಮತ್ತು ಚರ್ಚುಗಳು ಸಹ ನಾಶವಾಗಿವೆ.
ಹೈಟಿ ಈಗಾಗಲೇ ಕೊರೊನಾ ಸೋಂಕು, ಗ್ಯಾಂಗ್ ವಾರ್, ಹದಗೆಡುತ್ತಿರುವ ಬಡತನದಿಂದ ಕೂಡಿದೆ. ಅಲ್ಲದೆ, ಜುಲೈ 7 ರಂದು ಅಧ್ಯಕ್ಷ ಜೋವೆನೆಲ್ ಮೊಸ್ ಅವರನ್ನು ಹತ್ಯೆ ಮಾಡಿದ ನಂತರ, ರಾಜಕೀಯ ಅನಿಶ್ಚಿತತೆ ಭುಗಿಲೆದ್ದಿದೆ. ಈ ನಡುವೆ, ಭೂಕಂಪ ಅಲ್ಲಿನ ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ.
ಇದರ ಜೊತೆಗೆ, ಬೀರುಗಾಳಿಯೂ ಅಬ್ಬರಿಸುತ್ತಿದ್ದು, ಭಾರೀ ಮಳೆ, ಮಣ್ಣು ಕುಸಿತ ಮತ್ತು ಪ್ರವಾಹದ ಭೀತಿ ಎದುರಾಗಿದೆ. ಸೋಮವಾರ ಲಘು ಮಳೆಯಾಗಿದೆ. ಆದರೂ, ಇದು ಕೆಲವು ಪ್ರದೇಶಗಳಲ್ಲಿ 15 ಇಂಚು (38 ಸೆಂಟಿಮೀಟರ್)ಗೆ ಏರಿಕೆಯಾಗಬಹುದು ಎಂದು ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಹೇಳಿದೆ. ಪೋರ್ಟ್-ಔ-ಪ್ರಿನ್ಸ್ ಈಗಾಗಲೇ ಭಾರೀ ಮಳೆಯಾಗುತ್ತಿದೆ.
“ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚು ಹಾನಿಗೊಳಗಾದ ಲೆಸ್ ಕೇಸ್ ಮತ್ತು ಜೆರೆಮಿ ಪಟ್ಟಣಗಳು ಮತ್ತು ನಿಪ್ಪೆ ಸ್ಥಳಗಳನ್ನು ತಲುಪಲು ಕೆಲಸ ಮಾಡುತ್ತಿದ್ದೇವೆ” ಎಂದು ಏಜೆನ್ಸಿ ಮುಖ್ಯಸ್ಥ ಜೆರ್ರಿ ಚಾಂಡ್ಲರ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಏರಿಯಲ್ ಹೆನ್ರಿ ಇಡೀ ದೇಶಕ್ಕೆ ಒಂದು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜ್ಯಗಳು ಮಾತ್ರವಲ್ಲ ಒಕ್ಕೂಟ ಸರ್ಕಾರ ಕೂಡಾ ನ್ಯಾಯಾಧೀಶರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು: ಸುಪ್ರೀಂ


