ಕೊಡನಾಡು ಹತ್ಯೆ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಮಿಳುನಾಡು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಬುಧವಾರ ಆರೋಪಿಸಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗುವ ಮುನ್ನವೇ ಪಳನಿಸ್ವಾಮಿ ಈ ವಿಷಯವನ್ನು ಪ್ರಸ್ತಾಪಿಸಿ, ಡಿಎಂಕೆ ಸರ್ಕಾರವನ್ನು ಖಂಡಿಸಿದ್ದಾರೆ.
ಎಐಎಡಿಎಂಕೆ ಶಾಸಕರು ಆಡಳಿತ ಪಕ್ಷದ ವಿರುದ್ದ ಸದನದಲ್ಲಿ ಪ್ರತಿಭಟನೆ ನಡೆಸಿದ್ದು, “ಸುಳ್ಳು ಪ್ರಕರಣಗಳನ್ನು ದಾಖಲಿಸಬೇಡಿ” “ಈ ಕ್ರಮವನ್ನು ನಾವು ಖಂಡಿಸುತ್ತೇವೆ” ಎಂಬ ಘೋಷಣಾ ಬಿತ್ತಿಪತ್ರಗಳನ್ನು ಪ್ರದರ್ಶಿಸಿ, ಸದನದಿಂದ ಹೊರನಡೆದ್ದಾರೆ.
ಇದನ್ನೂ ಓದಿ: ತಮಿಳುನಾಡು ಬಜೆಟ್ 2021: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿತ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, “ಕೊಡನಾಡು ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಸತ್ಯವನ್ನು ಹೊರಹಾಕುವುದು ಡಿಎಂಕೆ ಚುನಾವಣಾ ಸಮಯದಲ್ಲಿ ನೀಡಿರುವ ಭರವಸೆಗಳಲ್ಲಿ ಒಂದಾಗಿದೆ. ಇದನ್ನು ನ್ಯಾಯಾಲಯದ ಆದೇಶದ ಮೇರೆಗೆ ಮತ್ತು ಯಾವುದೇ ರಾಜಕೀಯ ಉದ್ದೇಶ ಅಥವಾ ದ್ವೇಷವಿಲ್ಲದೆ ಮಾಡಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಯಾರೂ ಭಯವನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ. ನಮ್ಮ ಸರ್ಕಾರವು ಕೊಡನಾಡು ಪ್ರಕರಣದಲ್ಲಿ ಕಾನೂನಿನ ಪ್ರಕಾರ ನಡೆಯುತ್ತದೆ ಮತ್ತು ಅಪರಾಧಿಗಳನ್ನು ಪತ್ತೆ ಮಾಡುತ್ತದೆ” ಎಂದು ಹೇಳಿದ್ದಾರೆ.

ಪಿಎಂಕೆ ಪಕ್ಷದ ಶಾಸಕಾಂಗ ನಾಯಕ ಜಿಕೆ ಮಣಿ, ಸರ್ಕಾರವನ್ನು ಖಂಡಿಸಿ ತಮ್ಮ ಪಕ್ಷದ ಶಾಸಕರನ್ನು ಸದನದಿಂದ ಹೊರಗೆ ಕರೆದೊಯ್ದಿದ್ದಾರೆ. ಸರ್ಕಾರವು ಈ ನಡೆಯ ಮೂಲಕ ಅನಗತ್ಯ ‘ಭಯ’ವನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ಶಾಸಕಾಂಗ ನಾಯಕ ನೈನಾರ್ ನಾಗೇಂದ್ರನ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, “ತಪ್ಪು ಮಾಡಿದವರು ಮಾತ್ರ ಭಯಪಡಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು: ಕರ್ನಾಟಕದೊಂದಿಗೆ ಯಾವುದೇ ಮಾತುಕತೆಯಿಲ್ಲ, ಕೇಂದ್ರದ ಭರವಸೆಯಿದೆ ಎಂದ ತಮಿಳುನಾಡು ಸಿಎಂ
ವಿಧಾನಸಭೆಯಿಂದ ಹೊರನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಡಿಎಂಕೆ ಸರ್ಕಾರವು ನನ್ನನ್ನು ಬಂಧಿಸುವ ಉದ್ದೇಶದಿಂದ ಪ್ರಕರಣವನ್ನು ಮರು ತನಿಖೆ ನಡೆಸುತ್ತಿದೆ. ಈ ಪ್ರಕರಣದ ಆರೋಪಿಗಳ ಪರವಾಗಿ ಹಾಜರಾದ ಕೆಲವು ವಕೀಲರು ಈಗ ಸರ್ಕಾರಿ ಅರ್ಜಿದಾರರಾಗಿದ್ದಾರೆ. ಅಲ್ಲದೆ ಡಿಎಂಕೆಯ ವಕೀಲರು ಕೊಲೆ ಪ್ರಕರಣದ ಕೆಲವು ಆರೋಪಿಗಳ ಪರವಾಗಿ ಹಾಜರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಡಿಎಂಕೆ ಸರ್ಕಾರವು ಪ್ರಮುಖ ಆರೋಪಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದು, ಈ ಪ್ರಕರಣವನ್ನು ಬಳಸಿಕೊಂಡು, ನಮ್ಮ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ಎಐಎಡಿಎಂಕೆ ಅನ್ನು ಹತ್ತಿಕ್ಕಲು ಅವರಿಗೆ ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿವಾಸದಲ್ಲಿ ನಡೆದ ಭದ್ರತಾ ಸಿಬ್ಬಂದಿಯ ಕೊಲೆಯ ಪ್ರಕರಣವಾಗಿದೆ ಕೊಡನಾಡು ಪ್ರಕರಣ. ಏಪ್ರಿಲ್ 23, 2017 ರಂದು 10 ಜನರ ತಂಡವೊಂದು ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿ ದರೋಡೆ ನಡೆಸಿತ್ತು. ನೀಲಗಿರಿ ಪೊಲೀಸರು ಸೋಮವಾರವಷ್ಟೇ ಹತ್ಯೆಯ ಪ್ರಮುಖ ಆರೋಪಿ ಕೆವಿ ಸಾಯನ್‌ಗೆ ಹೊಸ ಸಮನ್ಸ್ ಜಾರಿ ಮಾಡಿದೆ.
ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ


