ಕ್ರಾಂತಿಕಾರಿ ಕವಿ, ಹೋರಾಟಗಾರ ವರವರ ರಾವ್ ಅವರ ವೈದ್ಯಕೀಯ ಜಾಮೀನು ವಿಸ್ತರಣೆಯ ಮನವಿಯನ್ನು ಆಲಿಸುವವರೆಗೆ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಮುಂಬಯಿ ಹೈಕೋರ್ಟ್‌ಗೆ ಮೌಖಿಕವಾಗಿ ಹೇಳಿಕೆ ನೀಡಿದೆ.
ಭೀಮಾಕೊರೆಗಾಂವ್-ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ವರವರ ರಾವ್ ಅವರು, ಪ್ರಸ್ತುತ ಫೆಬ್ರವರಿಯಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ವೈದ್ಯಕೀಯ ಜಾಮೀನಿನಲ್ಲಿ ಇದ್ದಾರೆ. ಅವರು ಸೆಪ್ಟೆಂಬರ್ 5 ರಂದು ತಾಲೋಜಾ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕಾಗಿದೆ.
ವರವರ ರಾವ್ ಅವರ ವಕೀಲರಾಗಿರುವ ಹಿರಿಯ ವಕೀಲ ಆನಂದ್ ಗ್ರೋವರ್ ಅವರು ಶುಕ್ರವಾರ ಜಸ್ಟಿಸ್ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದರ್ ಅವರ ಪೀಠದ ಮುಂದೆ ಜಾಮೀನು ವಿಸ್ತರಿಸುವಂತೆ ಕೋರಿದ್ದಾರೆ. ಆದರೆ, ಸಮಯದ ಕೊರತೆಯಿಂದಾಗಿ, ಅರ್ಜಿಯಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಭೀಮಾ ಕೊರೆಗಾಂವ್ – ಕ್ರಾಂತಿಕಾರಿ ತೆಲುಗು ಕವಿ ವರವರ ರಾವ್‌ಗೆ ಆರು ತಿಂಗಳ ಜಾಮೀನು
ಸೆಪ್ಟೆಂಬರ್ 6 ರಂದು ಮನವಿಯನ್ನು ಆಲಿಸುವುದಾಗಿ ಹೈಕೋರ್ಟ್ ಹೇಳಿದೆ. ಈ ಹಿನ್ನಲೆಯಲ್ಲಿ, ಅಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳುವಂತೆ ಗ್ರೋವರ್ ಹೈಕೋರ್ಟ್‌ಗೆ ಕೇಳಿಕೊಂಡಿದ್ದಾರೆ.
ಹೀಗಾಗಿ, ಎನ್‌ಐಎ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮೌಖಿಕ ಹೇಳಿಕೆ ನೀಡಿ, “ಮುಂದಿನ ವಿಚಾರಣೆಯವರೆಗೆ ನಾವು ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ” ಎಂದು ತಿಳಿಸಿದ್ದಾರೆ.
ಈ ವರ್ಷ ಫೆಬ್ರವರಿ 22 ರಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಮನೀಶ್ ಪಿತಾಲೆ ಅವರ ಪೀಠವು “ಮಾನವೀಯತೆಯ ಆಧಾರದ ಮೇಲೆ” 82 ವರ್ಷದ ವರವರ ರಾವ್ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಗಿತ್ತು.
ಜಾಮೀನು ನೀಡುವ ಸಮಯದಲ್ಲಿ, ಅವರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ವರವರ ರಾವ್ ಅವರು ತಲೋಜಾ ಜೈಲಿನಿಂದ ಹೊರಬಂದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ


