269 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಹಣ, ಅಧಿಕಾರ ದುರ್ಬಳಕೆ ಮಾಡಿದ ಹೊರತಾಗಿಯೂ 114 ಸ್ಥಾನ ಗೆದ್ದರೆ, ವಿರೋಧ ಪಕ್ಷಸ್ಥಾನದಲ್ಲಿರುವ ಕಾಂಗ್ರೆಸ್ ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಪ್ರಚಾರ ಮಾಡಲಾಗದಿದ್ದರೂ 100 ಸ್ಥಾನದಲ್ಲಿ ಗೆದ್ದಿದೆ. ನಮಗೂ ಹಾಗೂ ಬಿಜೆಪಿಗೂ ಇರುವ ಅಂತರ ಕೇವಲ 14 ಸ್ಥಾನ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಫಲಿತಾಂಶ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಅವರು, ಏಪ್ರಿಲ್ ನಲ್ಲಿ ನಡೆದ ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಸರ್ಕಾರ ಏನೆಲ್ಲ ಪ್ರಯತ್ನ ಮಾಡಿದರೂ ಅವರ ನಿರೀಕ್ಷೆಗೆ ತಕ್ಕಂತೆ ಜನರ ಬೆಂಬಲ ಸಿಕ್ಕಿಲ್ಲ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ನಾಯಕರು ಬೆಲೆ ಏರಿಕೆ ವಿಚಾರವಾಗಿ ಜನರನ್ನು ದಾರಿ ತಪ್ಪಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಬಿಜೆಪಿಯವರ ಬಂಡತನ ಹೇಗಿದೆ ಎಂದರೆ, ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಈ ರಾಜ್ಯದ ಜನ ಬೆಲೆ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಜನ ಊಟ, ಪೂಜೆ ಮಾಡುತ್ತಿದ್ದಾರೆ ಎಂದು ಕಟೀಲ್ ಹಾಗೂ ರವಿಕುಮಾರ್ ಅವರು ಹೇಳಿದ್ದಾರೆ. ಬೆಲೆ ಏರಿಕೆ ಸಮರ್ಥಿಸಿಕೊಂಡು ಜನ ಸುಮ್ಮನಿದ್ದಾರೆ ಎಂಬುದನ್ನು ಬಿಂಬಿಸುತ್ತಿರುವವರು ಜನನಾಯಕರೇ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಕೇಂದ್ರದಿಂದ ಬರುವ ಹಣದ ಜತೆಗೆ ಕೇಂದ್ರದ ಯೋಜನೆಗೆ ಅನುದಾನ ಬಂದಿಲ್ಲ. ರಾಜ್ಯದಲ್ಲಿನ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಲ್ಲಿ ಹಾಸ್ಟೆಲ್, ಸ್ಕಾಲರ್ ಶಿಪ್ ಎಲ್ಲವೂ ನಿಂತಿದೆ. ವಿದ್ಯೆಗೆ ಅವಕಾಶ ಇಲ್ಲವಾಗಿದೆ. ಸಿದ್ದರಾಮಯ್ಯ ಅವರು ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂಪಾಯಿ ನೀಡುವ ವಿದ್ಯಾಸಿರಿ ಯೋಜನೆ ನೀಡಿದ್ದರು. ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಡುವ ಗ್ರಾಂಟ್, ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ನೀಡುವ ಹಣ ನಿಂತಿದೆ. ಇದೆಲ್ಲ ನೋಡಿದಾಗ, ಮಾನವ ಸಂಪನ್ಮೂಲ ಬೆಳೆಯಲು ಈ ಸರ್ಕಾರದಲ್ಲಿ ಅವಕಾಶ ಇದೆಯೇ? ಕೋವಿಡ್ ಸಮಯದಲ್ಲಿ ನೆರವಾಗುತ್ತಿದ್ದ ಆಹಾರ ಭದ್ರತೆ, ಪಿಎಂಜಿಎಸ್ವೈನಿಂದ ನೀಡುವ ಕೂಲಿಯಂತಹ ಯೋಜನೆಗೆ ಹಣ ಬಿಡುಗಡೆಯಾಗಿಲ್ಲ ಎಂದರೆ ಈ ಸರ್ಕಾರ ಯಾವ ಹಂತಕ್ಕೆ ತಲುಪಿದೆ. ಇನ್ನು 15ನೇ ಹಣಕಾಸು ಸಮಿತಿ ಶಿಫಾರಸ್ಸಿನಂತೆ ರಾಜ್ಯಕ್ಕೆ ಹಣ ಬಂದಿಲ್ಲ. 5495 ಕೋಟಿ ರೂ. ಬರಬೇಕಾಗಿತ್ತು. ಆದರೆ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತರೀಕೆರೆ ಪುರಸಭೆ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ, ಒಂದು ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ
ಬಿಜೆಪಿ ಭಾವನಾತ್ಮಕವಾಗಿ ಪ್ರಚೋದನೆ ನೀಡುತ್ತದೆಯೇ ಹೊರತು ಜನಪರ ಕಾರ್ಯಕ್ರಮ ನೀಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಇದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಯಡಿಯೂರಪ್ಪ ಅವರಿದ್ದರು ಅದಕ್ಕಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಭಾವಿಸಿದ್ದೆ. ಬೊಮ್ಮಾಯಿ ಅವರು ಬಂದ ನಂತರವೂ ಅದೇ ಪರಿಸ್ಥಿತಿ ಮುಂದುವರಿದರೆ ಮುಂದೆ ರಾಜ್ಯದ ಗತಿ ಏನು ಎಂಬ ಪ್ರಶ್ನೆ ಮೂಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


