ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಸೇರಿದ 6 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ. ಇದು ಬಿಜೆಪಿಯ ತಾಲಿಬಾನ್ ಮನಸ್ಥಿತಿ ಎಂದು ಶಿವಸೇನೆ ಖಂಡಿಸಿದೆ.
ಶಿವಸೇನೆ ವಕ್ತಾರ ಮನೀಶ ಕಾಯಂಡೆ ಮಾತನಾಡಿ “ಇದು ಆಯ್ದ ಟಾರ್ಗೆಟ್ ಆಗಿದೆ. ಇದು ಬಿಜೆಪಿಯ ತಾಲಿಬಾನ್ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಐಟಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಉದ್ದೇಶಪೂರ್ವಕವಾಗಿ ಸೋನು ಸೂದ್‌ರನ್ನು ತುಳಿಯಲು ದಾಳಿ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋನು ಸೂದ್ ಭೇಟಿಯಾದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ರಾಜಕೀಯ ಪ್ರೇರಿತ ಎಂಬ ಟೀಕೆಗಳಿಗೂ ಗುರಿಯಾಗಿದೆ.
ಮುಂಬೈನಲ್ಲಿರುವ ಸೂನು ಸೂದ್ ಅವರ ನಿವಾಸ ಹಾಗೂ ಲಕ್ನೋದಲ್ಲಿನ ಸೋನು ಸೂದ್ ಸಂಸ್ಥೆಯ ಮೇಲೆ ಐಟಿ ಕಾರ್ಯಾಚರಣೆ ಮಾಡಿದ್ದು, ಇದನ್ನು ಐಟಿ ‘ಸರ್ವೇ’ ಎಂದು ಕರೆದಿದೆ ಎಂದು ಮೂಲಗಳು ತಿಳಿಸಿವೆ.
“ಸೋನುಸೂದ್ ಅವರಿಗೆ ಸೇರಿದ ಸಂಸ್ಥೆ ಹಾಗೂ ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವೆ ವ್ಯವಹಾರ ನಡೆದಿದೆ. ಈ ವ್ಯವಹಾರದಲ್ಲಿ ತೆರಿಗೆಯನ್ನು ವಂಚಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿರುವುದರಿಂದ ಸಮೀಕ್ಷೆ ಮಾಡಲಾಗಿದೆ” ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೋನುಸೂದ್ ಅವರನ್ನು ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ರಾಯಭಾರಿಯನ್ನಾಗಿ ಘೋಷಿಸಿದ್ದಾರೆ. ಕೇಜ್ರಿವಾಲ್ ಅವರನ್ನು ಸೂದ್ ಭೇಟಿಯಾಗಿದ್ದರು. ಆಮ್‌ಆದ್ಮಿ ಮೂಲಕ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ವಿಚಾರವನ್ನು ಸೂದ್ ನಿರಾಕರಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ಮಾಡಿದ ಮಾನವೀಯ ಕೆಲಸಗಳು ಗಮನ ಸೆಳೆದಿದ್ದವು. ಅವರು ಅಪಾರ ಪ್ರಶಂಸೆಗಳಿಗೂ ಅವರು ಪಾತ್ರರಾಗಿದ್ದರು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನ ಸೌಲಭ್ಯವನ್ನು ಸೂದ್ ಕಲ್ಪಿಸಿದ್ದರು. ಎರಡನೇ ಅಲೆಯ ವೇಳೆ ರೋಗಿಗಳಿಗೆ ಆಮ್ಲಜನಕ ದೊರಕಿಸಲು ಕೈ ಜೋಡಿಸಿದ್ದರು.
ಈವರೆಗೆ ಯಾವುದೇ ರಾಜಕೀಯ ಆಸಕ್ತಿಯನ್ನು ಸೂದ್ ವ್ಯಕ್ತಪಡಿಸಿಲ್ಲ. ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ರಾಜಕೀಯ ಊಹಾಪೋಹಗಳು ಹರಿದಾಡುತ್ತಿವೆ. ಮುಂದಿನ ಪಂಜಾಬ್ ಚುನಾವಣೆಯಲ್ಲಿ ಸೂದ್ ಸ್ಪರ್ಧಿಸಬಹುದು ಎಂದು ವದಂತಿಗಳು ಹಬ್ಬಿವೆ. ಇದೆಲ್ಲ ಊಹಾಪೋಹಗಳಿಗೂ ಐಟಿ ಕಾರ್ಯಾಚರಣೆಗೂ ಸಂಬಂಧವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
“ರಾಜಕೀಯ ವಿದ್ಯಮಾನಗಳಿಗೂ ಐಟಿ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ಯಾರು ಯಾರನ್ನಾದರೂ ಭೇಟಿಯಾಗಬಹುದು. ಐಟಿ ಕೈಗೊಂಡಿರುವುದು ರೈಡ್ ಅಲ್ಲ, ಕೇವಲ ಸರ್ಚ್ ಅಷ್ಟೇ. ಐಟಿಯವರು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ” ಎಂದು ಬಿಜೆಪಿ ವಕ್ತಾರ ಆಸಿಫ್ ಭಾಮ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ ಭೇಟಿ ಬೆನ್ನಲ್ಲೇ ಸೋನು ಸೂದ್ ಸಂಸ್ಥೆಗಳ ಮೇಲೆ ಐಟಿ ಕಾರ್ಯಾಚರಣೆ


