25ರಿಂದ 30 ವರ್ಷ ಮಂತ್ರಿಯಾಗಿ ಅಧಿಕಾರ ನಡೆಸಿದವರಿಂದ ಮುಂಡಗೋಡನ್ನು ಅಭಿವೃದ್ಧಿ ಮಾಡಲಾಗಲಿಲ್ಲ. ಈಗ ಮುಂಡಗೋಡಿನ ಬಗ್ಗೆ ಕಾಳಜಿ ಶುರುವಾಗಿದೆ. ಕೊರೊನಾ ನೆಪದಲ್ಲಿ ಮಗನನ್ನು ಮುಂದೆ ಮಾಡಿ ಕಿಟ್ ಹಂಚಿದ್ದಾರೆ. ಹಾಗಿದ್ದರೆ ಹಳಿಯಾಳದಲ್ಲಿ ಬಡವರಿಲ್ಲವಾ? ಬಡವರು ಮುಟ್ಟಿದಾಗ ಕಿಸೆಯಿಂದ ವ್ಯಾಸಲಿನ್ ತೆಗೆದು ಕೈಗೆ ಹಚ್ಚಿಕೊಳ್ಳುವವರಿಂದ ಬಡವರ ಉದ್ಧಾರ ಸಾಧ್ಯವಾ ಎಂದು ಉತ್ತರ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಸಚಿವ ಹೆಬ್ಬಾರ್ ಅವರು ತವರು ಕ್ಷೇತ್ರದ ಮುಂಡಗೋಡಿನಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾತನಾಡಿದ್ದು, ಇಪ್ಪತ್ತೈದು ವರ್ಷ ಇಲ್ಲಿಯ ಶಾಸಕರಾಗಿದ್ದವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ. ಈಗ ಮಗನನ್ನು ಮುಂಡಗೋಡಲ್ಲಿ ಓಡಾಡಿಸಿ ಬಣ್ಣದ ಮಾತುಗಳಿಂದ ಜನರನ್ನು ಮರುಳಾಗಿಸಲು ಹವಣಿಸುತ್ತದ್ದಾರೆ. ಬಡವರಿಗೆ ನೆರವಾಗುವ ನಾಟಕ ಮಾಡುತ್ತಿದ್ದಾರೆ. ನಿಜವಾಗಿಯೂ ಬಡವರಿಗೆ ನೆರವಾಗುವ ಮನಸ್ಸಿದ್ದರೆ ಹಲವು ಬಾರಿ ಮಂತ್ರಿಯಾಗಿದ್ದವರು ಹಳಿಯಾಳದಲ್ಲೇ ಕಿಟ್ ಹಂಚಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಉಪಚುನಾವಣೆ ಹೊತ್ತಲ್ಲಿ 12-13 ದಿನ ಈ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದರಲ್ಲ, ಏನಾಯಿತು? ನನ್ನನ್ನು ಸೋಲಿಸಲಾಯಿತಾ? ಮುಂಡಗೋಡಿನ ಜನರ ಆರ್ಶೀವಾದ ನನ್ನ ಮೇಲಿದೆ. ಹೊಸ ನಾಯಕರೀಗ ಮುಂಡಗೋಡಲ್ಲಿ ತಿರುಗಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ಬಡವರ ನೆನಪಾಗುತ್ತದೆ. 25 ವರ್ಷ ಏನೂ ಮಾಡದ ಇವರನ್ನು ನಂಬಬೇಡಿ. ಸುಳ್ಳು ಹೇಳಿ ಜನರನ್ನು ಕರೆದುಕೊಂಡು ಹೋಗಿ ಮಾಲೆ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇವರಿಗೆಲ್ಲ ಯಾರೂ ಹೆದರಬೇಕಾದ ಅವಶ್ಯಕತೆಯಿಲ್ಲ. ಹಣ ಬಲದಿಂದ ಯಾರನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಿಮ್ಮನ್ನು ಕಾಪಾಡುವ ಶಕ್ತಿ ನನಗಿದೆ ಎಂದು ಸಚಿವ ಹೆಬ್ಬಾರ್ ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ಕಿಟ್ ಹಂಚಿದ್ದೇನೆ. 550 ಕೋಟಿ ರೂ.ಗಳ ನೀರಾವರಿ ಯೋಜನೆ ತಂದಿದ್ದೇನೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಪಣ ತೊಟ್ಟಿದ್ದೇನೆ. ಮುಸ್ಲಿಮರ ಮುಂದೆ ನಾನು ಬಿಜೆಪಿಯಲ್ಲಿವುದನ್ನು ಟೀಕಿಸಲಾಗುತ್ತಿದೆ. ಆದರೆ ನನ್ನಿಂದಾಗಲಿ, ಬಿಜೆಪಿಯಿಂದಾಗಲಿ ಮುಸ್ಲಿಮರಿಗೆ ತೊಂದರೆ ಆಗಿಲ್ಲ ಎಂದಿರುವ ಹೆಬ್ಬಾರ್, ನಾನು ಯಾವುದೇ ಪಕ್ಷದಲ್ಲಿರಲಿ ಕ್ಷೆತ್ರದ ಅಭಿವೃದ್ಧಿಯೇ ನನ್ನ ಅಭಿಲಾಶೆ ಎಂದು ಹೇಳಿದ್ದಾರೆ.
ಯಾರೋ ಬಂದು ಜಾತಿಯೋ ಇನ್ನೊಂದೊ ಎಂದು ಗೊಂದಲ ಮೂಡಿಸಿದರೆ ಏನೂ ಆಗುವುದಿಲ್ಲ. ಕಿಟಕಿಯಿಂದ ನೋಡಬೇಕಾದ ಮಂತ್ರಿ ನಾನಲ್ಲ. ಹಲವು ಬಾರಿ ಮಂತ್ರಿಯಾದವರನ್ನು ನೀವು ಕಿಟಕಿಯಿಂದ ನೋಡಬೇಕಿತ್ತು ಎಂದು ಹೆಬ್ಬಾರ್ ಸಿಟ್ಟಿನಲ್ಲಿ ಮಾತನಾಡಿದ್ದು, ಜಿಲ್ಲೆಯ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಾಗ್ದಾಳಿ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಷೇತ್ರ ಪನರ್ ವಿಂಗಡಣೆಗೆ ಮೊದಲು ದೇಶಪಾಂಡೆಯವರ ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಮುಂಡಗೋಡ ಸೇರಿತ್ತು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ದೇಶಪಾಂಡೆ ಅವರು ತಮ್ಮ ಮಗ ಪ್ರಶಾಂತ ದೇಶಪಾಂಡೆಯವರನ್ನು ಹೆಬ್ಬಾರ್ ವಿರುದ್ಧ ಸ್ಪರ್ಧೆಗಿಳಿಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಮಂತ್ರಿ ಹೆಬ್ಬಾರ್ ಆಡಿರುವ ಮಾತುಗಳು ವಿಶೇಷ ಅರ್ಥವನ್ನು ಹೊಮ್ಮಿಸುತ್ತಿವೆ.
ಇದನ್ನೂ ಓದಿರಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು


