ಅಯೋಧ್ಯೆಯಲ್ಲಿ ಬಾಬರಿ ಮಸೀದಿ ತೆಗೆದು ದೇವಾಲಯ ನಿರ್ಮಿಸಿದಂತೆ ಗದಗದ ಜುಮ್ಮಾ ಮಸೀದಿಯನ್ನು ತೆರವು ಮಾಡಿ ಅಲ್ಲಿ ವೆಂಕಟೇಶ್ವರ ದೇವಾಲಯ ಕಟ್ಟಬೇಕೆಂಬ ಪ್ರಚೋದನೆಯನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೀಡಿದ್ದಾರೆ.
ಗದುಗಿನ ಮುನ್ಸಿಪಲ್ ಮೈದಾನದಲ್ಲಿ ಭಾನುವಾರ ನಡೆದ “ಮತಾಂತರ ತಡೆಗಾಗಿ ಪಥ ಸಂಚಲನ” ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ್ದು, ವಿಡಿಯೋ ವೈರಲ್ ಆಗಿದೆ.
“71 ವರ್ಷ ರಾಮಮಂದಿರ ಸಲುವಾಗಿ ಹೋರಾಟ ಮಾಡಬೇಕಾಯಿತು. 72 ವರ್ಷಗಳ ನಂತರ ಆ ಬಾಬರಿ ಮಸೀದಿಯನ್ನು ತೆಗೆದುಹಾಕಿ ಭವ್ಯ ದೇವಾಲಯವನ್ನು ನಿರ್ಮಾಣ ಮಾಡುವಂತಹ ಸಂಕಲ್ಪ ಪೂರ್ಣವಾಗಿದೆ. ಅದೇ ಮಾದರಿಯಲ್ಲಿ ಗದಗಿನಲ್ಲಿ ಜುಮ್ಮಾ ಮಸೀದಿ ಏನಿದೆ ಅದು ವೆಂಕಟೇಶ್ವರ ದೇವಸ್ಥಾನ…” ಎಂದು ಮುತಾಲಿಕ್ ಪ್ರಚೋದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮುತಾಲಿಕ್ ಅವರ ಪ್ರಚೋದನಕಾರಿ ಭಾಷಣಕ್ಕೆ ಶಿಳ್ಳೆ, ಚಪ್ಪಾಳೆಯನ್ನು ಸಭೆಯಲ್ಲಿದ್ದವರು ಹಾಕಿದ್ದಾರೆ. ಬಾಬರ್‌ನನ್ನು ನಿಂದಿಸಿರುವ ಮುತಾಲಿಕ್, “ಟಿಪ್ಪು ಸುಲ್ತಾನ್ ಅವಧಿಯಲ್ಲಿ ಒಡೆದು ಹಾಕಿದ ದೇವಸ್ಥಾನಗಳ ಪೈಕಿ ಜಮ್ಮಾ ಮಸೀದಿ ಜಾಗದಲ್ಲಿದ್ದ ವೆಂಕಟೇಶ್ವರ ದೇವಾಲಯವೂ ಒಂದು ಎಂಬ ಆಧಾರ ಸಹಿತ ಹೋರಾಟವನ್ನು ಮುಂದೆ ಮಾಡೋಣ” ಎಂದಿದ್ದಾರೆ.
If thisis not radicalisation, i do not know what is ? https://t.co/AWkFlljmCV
— Rana Ayyub (@RanaAyyub) October 18, 2021
ನೂರಕ್ಕೆ ನೂರು ಅದು ವೆಂಕಟೇಶ್ವರ ದೇವಸ್ಥಾನವೇ ಆಗಿತ್ತು. ಈ ಸಂಬಂಧ ಸಮಗ್ರ ದಾಖಲೆ ಸಂಗ್ರಹಿಸಿ ಹೋರಾಟ ನಡೆಸಲು ತಯಾರಿ ನಡೆಸಿದ್ದೇವೆ. 80 ವರ್ಷ ದಾಟಿ ಹಿರಿಯರ ಅಭಿಪ್ರಾಯ ಸಂಗ್ರಹ, ದಾಖಲೆಗಳ ಸಂಗ್ರಹ ಮಾಡಿ ಪಿಐಎಲ್ ಹಾಕುವವರಿದ್ದೇವೆ. ಕರ್ನಾಟಕದಲ್ಲಿ ಈ ರೀತಿ ಸಾಕಷ್ಟು ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈ ಬಗ್ಗೆಯೂ ಸಮಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತಾಂತರದ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಗದಗ ಜಿಲ್ಲೆಯಲ್ಲಿ ಕೂಡ ಹತ್ತು ಸಾವಿರಕ್ಕೂ ಅಧಿಕ ಮಂದಿ ಮತಾಂತರಗೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವ ಮತಾಂತರ ತಡೆಯುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ಯುವಪಡೆಯನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಕ್ರಿಶ್ಚಿಯನ್ ಪಾದ್ರಿಗಳು ಇಲ್ಲೀವರೆಗೆ ಬಡವರು, ದೀನ ದಲಿತರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದರು. ಆದರೆ, ಈಗ ಅವರ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದ್ದು ಕುರುಬರು, ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರು ಎಲ್ಲರನ್ನೂ ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ಆಯಾಯ ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಆಲೋಚಿಸಿ ಮತಾಂತರ ತಡೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮಠಕ್ಕೆ ಬರಲು, ವೋಟು ಹಾಕಲು ಸಮುದಾಯದ ಜನರು ಇರುವುದಿಲ್ಲ ಎಂದಿದ್ದಾರೆ.
‘ಬಡವರ ಕಷ್ಟ ನಷ್ಟಗಳನ್ನೇ ಬಂಡವಾಳ ಆಗಿಸಿಕೊಂಡ ಕ್ರೈಸ್ತ ಮಿಷನರಿಗಳು ಮತಾಂತರ ಪ್ರಕ್ರಿಯೆ ಆರಂಭಿಸಿದವು. ವೃದ್ಧಾಶ್ರಮಗಳು ಕೂಡ ಬ್ರಿಟಿಷರ ಕೊಡುಗೆ. ಸಮೃದ್ಧ ಭಾರತದಲ್ಲಿ ಹಿಂದೂ ಧರ್ಮವನ್ನು ನಾಶ ಮಾಡುವುದಕ್ಕಾಗಿಯೇ ಕ್ರೈಸ್ತರು ಚರ್ಚ್, ಪಾದ್ರಿಗಳನ್ನು ಕರೆತಂದರು. ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದಿರುವ ಭಾರತವನ್ನು ಒಡೆದು ಆಳಲು ಇಲ್ಲಿನ ಜನರನ್ನು ಅವರು ವೈಚಾರಿಕವಾಗಿಯೂ ಮತಾಂತರ ಮಾಡಿದರು ಎಂದು ಆರೋಪಿಸಿದ್ದಾರೆ.
‘ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಗೋವುಗಳ ಹತ್ಯೆ ನಿಂತಿಲ್ಲ. ಅಂತೆಯೇ, ಮತಾಂತರ ತಡೆ ಕಾನೂನು ಆಗಬಾರದು. ಮತಾಂತರಕ್ಕೆ ಮುಂದಾಗುವ ಪಾದ್ರಿಗಳಿಗೆ ಜೈಲು ಶಿಕ್ಷೆ ಆಗಬೇಕು. ಒಂದು ವರ್ಷದವರೆಗೆ ಜಾಮೀನು ಸಿಗಬಾರದು. ಈ ರೀತಿಯಾಗಿ ಮತಾಂತರ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಶ್ರೀರಾಮ ಸೇನೆ ಸಂಘಟನೆಯ ರಾಜು ಖಾನಾಪುರ ಹಾಜರಿದ್ದರು.
ಇದನ್ನೂ ಓದಿರಿ: ಉತ್ತರ ಪ್ರದೇಶ: ನ್ಯಾಯಾಲಯ ಅಂಗಳದಲ್ಲಿ ವಕೀಲನಿಗೆ ಗುಂಡಿಕ್ಕಿ ಹತ್ಯೆ


