ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ವಾಹನ ಹತ್ತಿಸಿ ಎಂಟು ಮಂದಿಯ ಸಾವಿಗೆ ಕಾರಣರಾದ ಆರೋಪದಲ್ಲಿ ಒಬ್ಬ ಬಿಜೆಪಿ ಮುಖಂಡ ಸೇರಿದಂತೆ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ.
ರೈತರ ಮೇಲೆ ಹರಿದ ಕಾರಿನಲ್ಲಿದ್ದವರನ್ನು ಸೋಮವಾರ ಬಂಧಿಸಲಾಗಿದ್ದು, ಈಗಾಗಲೇ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾನನ್ನು ಬಂಧಿಸಲಾಗಿತ್ತು.
“ಆರೋಪಿಗಳಾದ ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಸ್ಟ್, ಸತ್ಯ ಪ್ರಕಾಶ್ ತ್ರಿಪಾಠಿ ಎಂಬವರನ್ನು ಲಖಿಂಪುರ್ ಖೇರಿ ಪೊಲೀಸರು ಹಾಗೂ ಅಪರಾಧ ಬ್ರಾಂಚ್ಆದ ಸ್ವಾತ್ ತಂಡದವರು ಬಂಧಿಸಿದ್ದಾರೆ. ಸತ್ಯ ಪ್ರಕಾಶ್ ತ್ರಿಪಾಠಿ ಅವರ ಬಳಿ ಇದ್ದ ಪರವಾನಗಿ ಇದ್ದ ಬಂದೂಕು ಹಾಗೂ ಮೂರು ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿಕೆ ನೀಡಿದ್ದಾರೆ.
ರೈತರ ಮೇಲೆ ಹರಿದ ಎಸ್‌ಯುವಿಯಲ್ಲಿ ಬಿಜೆಪಿ ಸ್ಥಳೀಯ ಮುಖಂಡ ಸುಮಿತ್ ಜೈಸ್ವಾಲ್ ಪರಾರಿಯಾಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಇದಕ್ಕೂ ಮುಂಚೆ, “ರೈತರು ತಮ್ಮ ಮೇಲೆ ಕಲ್ಲುಗಳನ್ನು ತೂರಾಟ ನಡೆಸಿದ್ದರಿಂದ ವಾಹನ ನಿಯಂತ್ರಣ ಕಳೆದುಕೊಂಡಿತು. ಅಪರಿಚಿತ ರೈತರು ನನ್ನ ವಾಹನ ಚಾಲಕ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದರು” ಎಂದು ಹೇಳಿ ಅಪರಿಚಿತ ರೈತರ ಮೇಲೆ ಕೊಲೆ ಆಪಾದನೆ ಹೊರಿಸಿ ಜೈಸ್ವಾಲ್ ಎಫ್‌ಐಆರ್ ದಾಖಲಿಸಿದ್ದರು.
ಅಕ್ಟೋಬರ್ 3ರಂದು ಮೂರು ವಾಹನಗಳು ಹರಿದು ಒಬ್ಬ ಪತ್ರಕರ್ತ ಹಾಗೂ ನಾಲ್ವರು ರೈತರು ಹತ್ಯೆಯಾಗಿದ್ದರು. ಜೊತೆಗೆ ಭುಗಿಲೆದ್ದ ಪ್ರತಿರೋಧದಲ್ಲಿ ಬಿಜೆಪಿ ಕಾರ್ಯಕರ್ತರೂ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್‌ನನ್ನು ಅಕ್ಟೋಬರ್ 9ರಂದು ಬಂಧಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕೋನಿಯ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 3ರಂದು ಪ್ರಕರಣ ದಾಖಲಾಗಿತ್ತು. ಈಗ ಬಂಧನವಾಗಿರುವ ಸುಮಿತ್ ಜೈಸ್ವಾಲ್ ನೀಡಿದ ದೂರಿನ ಅನ್ವಯವೂ ಅದೇ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು.
ಆಶೀಶ್ ಮಿಶ್ರಾ ಅವರ ಬೆಂಗಾವಲಿನ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಆದರೆ ಕಾರು ಚಲಿಸುತ್ತಿರಲಿಲ್ಲ ಎಂದ ಜೈಸ್ವಾಲ್ ಹೇಳಿಕೊಂಡಿದ್ದರು.
“ನಾವು ಕಾರ್ಯಕ್ರಮದ ಸ್ಥಳದಲ್ಲಿದ್ದೆವು. ಭಯದ ವಾತಾವರಣವಿತ್ತು. ಪ್ರತಿಭಟನಾಕಾರರು ದೊಣ್ಣೆಗಳು ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಜೊತೆಗೆ ನಮ್ಮ ಮೇಲೆ ಹಲ್ಲೆ ಮಾಡಿದರು, ನಮ್ಮನ್ನು ನಿಂದಿಸಿದರು. ಜೊತೆಗೆ ಖಾಲಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು” ಎಂದು ಬಿಜೆಪಿ ಮುಖಂಡ ಜೈಸ್ವಾಲ್ ಆರೋಪಿಸಿದ್ದರು.
ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹ
ಲಖಿಂಪುರ್ ಖೇರಿ ಹತ್ಯಾಕಾಂಡವನ್ನು ಖಂಡಿಸಿ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಬಂಧಿಸಬೇಕು ಎಂದು ಆಗ್ರಹಿಸಿ ರೈತರು ಸೋಮವಾರ (ಅ.18) ದೇಶಾದ್ಯಂತ ರೈಲ್ ರೋಕೋ ಚಳವಳಿ ನಡೆಸಿದೆ.
ಕಳೆದ ವರ್ಷದಿಂದ ಒಕ್ಕೂಟ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳ ಒಕ್ಕೂಟ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಸೋಮವಾರ ಆರು ಗಂಟೆಗಳ ಕಾಲ ದೇಶಾದ್ಯಂತ ‘ರೈಲು ರೋಕೋ’ ಆಂದೋಲನಕ್ಕೆ ಕರೆ ನೀಡಿತ್ತು.
ಇದನ್ನೂ ಓದಿರಿ: ಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ


