“ಕಳೆದ ವರ್ಷದ ದೆಹಲಿ ಚುನಾವಣೆಗೆ ಮುನ್ನ ಸಾಮಾಜಿಕ ಜಾಲತಾಣದ ನಕಲಿ ಖಾತೆಗಳ ವಿರುದ್ಧ ಆಯ್ದ ಕ್ರಮ ಕೈಗೊಳ್ಳಲಾಗಿತ್ತು” ಎಂದು ಫೇಸ್‌ಬುಕ್‌ನ ಮಾಜಿ ಡೇಟಾ ವಿಜ್ಞಾನಿ ಹೇಳಿದ್ದಾರೆ.
ವಿಸಿಲ್‌ಬ್ಲೋವರ್ (ಕಾನೂನು ಬಾಹಿರ ನಡೆಗಳನ್ನು ಪತ್ತೆ ಹಚ್ಚುವವರು) ಆಗಿರುವ ಸೋಫಿ ಜಾಂಗ್, ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಮತದಾನದ ಮೇಲೆ ಪ್ರಭಾವ ಬೀರಲು ನಕಲಿ ಖಾತೆಗಳನ್ನು ಬಳಸಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಸಂಸದರಿಗೆ ನೇರವಾಗಿ ಲಿಂಕ್ ಮಾಡಿದ ಖಾತೆಗಳ ನೆಟ್‌ವರ್ಕ್ ಅನ್ನು ಮಾತ್ರ ಫೇಸ್‌ಬುಕ್ ತೆಗೆದುಹಾಕಲಿಲ್ಲ ಎಂದು ದೂರಿದ್ದಾರೆ.
“ನಾವು ಐದು ನೆಟ್ವರ್ಕ್ಗಳಲ್ಲಿ ನಾಲ್ಕನ್ನು ತೆಗೆದಿದ್ದೇವೆ, ಆದರೆ ಐದನೆಯದು ಬಿಜೆಪಿ ಸಂಸದರಿಗೆ ಸೇರಿದ್ದೆಂದು ಕೊನೆಯ ಕ್ಷಣದಲ್ಲಿ, ನಾವು ಅದನ್ನು ರದ್ದು ಮಾಡುವ ಮೊದಲು ತಿಳಿಯಿತು. ಅದು ಬಿಜೆಪಿ ರಾಜಕಾರಣಿ, ಲೋಕಸಭಾ ಸದಸ್ಯರಿಗೆ ಸಂಬಂಧಿಸಿದೆ ಎಂದು ನಾವು ಅರಿತುಕೊಂಡೆವು. ಈ ನೆಟ್‌ವರ್ಕ್ ನೇರವಾಗಿ ಬಿಜೆಪಿ ಸಂಸದನಿಗೆ ಸೇರಿದೆ ಎಂದು ತಿಳಿದಾಗ, ಈ ನಕಲಿ ಖಾತೆಗಳ ನೆಟ್‌ವರ್ಕ್‌ನೊಂದಿಗೆ ಏನು ಮಾಡಬೇಕೆಂದು ಯಾರಿಂದಲೂ ಉತ್ತರವನ್ನು ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕಳೆದ ವರ್ಷದವರೆಗೆ ಫೇಸ್‌ಬುಕ್‌ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಜಾಂಗ್ ಮಾಹಿತಿ ನೀಡಿದ್ದಾರೆ.
2019ರ ಕೊನೆಯಲ್ಲಿ ನಾಲ್ಕು ನಕಲಿ ಜಾಲಗಳನ್ನು ಪತ್ತೆ ಹಚ್ಚಿದ್ದೆವು. ಅದರಲ್ಲಿ ಎರಡು ಬಿಜೆಪಿ ಮತ್ತು ಇತರ ಎರಡು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದವು ಎಂದು ಹೇಳಿರುವ ಜಾಂಗ್, “ನಾವು ಮೂರು ನೆಟ್‌ವರ್ಕ್‌ಗಳನ್ನು ತೆಗೆದುಹಾಕಿದ್ದೇವೆ, ಅದರಲ್ಲಿ ಎರಡು ಕಾಂಗ್ರೆಸ್‌ಗೆ, ಮತ್ತೊಂದು ಬಿಜೆಪಿಗೆ ಸಂಬಂಧಿಸಿದ ನೆಟ್‌ವರ್ಕ್ ಆಗಿದ್ದವು. ನಾವು ಕೊನೆಯ ನೆಟ್‌ವರ್ಕ್ ತೆಗೆದು ಹಾಕಬೇಕಿತ್ತು. ಆದರೆ ನಾಲ್ಕನೆಯ ನೆಟ್‌ವರ್ಕ್ ನೇರವಾಗಿ ಬಿಜೆಪಿ ರಾಜಕಾರಿಗೆ ಸಂಬಂಧಪಟ್ಟಿದ್ದು, ಆ ರಾಜಕಾರಣಿಯಿಂದಲೇ ನೆಟ್ವರ್ಕ್ ನಡೆಯುತ್ತಿದೆ ಎಂದು ತಿಳಿದಾಗ, ತೆರವು ಕಾರ್ಯ ನಿಲ್ಲಿಸಲು ಸೂಚಿಸಲಾಯಿತು. ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.
ಎಎಪಿ ಪರ ರಾಜಕೀಯ ಸಂದೇಶಗಳನ್ನು ಹರಡಲು ಬಳಸಲಾಗುತ್ತಿರುವ “ಸಾವಿರಾರು ಖಾತೆಗಳ” ನೆಟ್‌ವರ್ಕ್‌ಗಳನ್ನು ಜನವರಿ ವೇಳೆಗೆ ಕಂಡು ಹಿಡಿದಿದ್ದೆ. ಈ ಖಾತೆಗಳು ತಮ್ಮನ್ನು ಪ್ರಧಾನಿ ಮೋದಿಗೆ ಮತ ಹಾಕಿದ ಬಿಜೆಪಿ ಬೆಂಬಲಿಗರು ಎಂದು ತಪ್ಪಾಗಿ ಬಿಂಬಿಸಿಕೊಂಡಿದ್ದು, “ಇತರ ಬಿಜೆಪಿ ಬೆಂಬಲಿಗರನ್ನು ಗೆಲ್ಲುವ ಸ್ಪಷ್ಟ ಉದ್ದೇಶಕ್ಕಾಗಿ ದೆಹಲಿ ಚುನಾವಣೆಯಲ್ಲಿ ಎಎಪಿಯನ್ನು ಬೆಂಬಲಿಸುತ್ತಿರುವುದಾಗಿ ಹೇಳಿಕೊಂಡಿದ್ದವು” ಎಂದು ಜಾಂಗ್ ಹೇಳಿದ್ದಾರೆ. ಬಿಜೆಪಿ ಸಂಸದನಿಗೆ ಸೇರಿದ ಖಾತೆಯನ್ನು ಜನವರಿ ತಿಂಗಳು ತೆರವುಗೊಳಿಸಲಾಯಿತು ಎಂದು ಜಾಂಗ್ ತಿಳಿಸಿದ್ದಾರೆ.
“ಐದನೇ ನಕಲಿ ನೆಟ್‌ವರ್ಕ್‌ಗೆ ಯಾರು ಹೊಣೆಗಾರರು ಎಂದು ತಿಳಿದಿದ್ದರೂ ಅದನ್ನು ತೆಗೆದುಹಾಕಲು ನನಗೆ ಸಾಧ್ಯವಾಗಲಿಲ್ಲ. ಪುನರಾವರ್ತಿತ ಜ್ಞಾಪನೆಗಳ ಹೊರತಾಗಿಯೂ, ಫೇಸ್‌ಬುಕ್ ಸಮಸ್ಯೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿತು” ಎಂದು ಜಾಂಗ್ ವಿಷಾದಿಸಿದ್ದಾರೆ.
ಎನ್‌ಡಿಟಿವಿಯೊಂದಿಗೆ ಮಾತನಾಡಿರುವ ಜಾಂಗ್, “ಗಣ್ಯರು ಮತ್ತು ಶಕ್ತಿಶಾಲಿಗಳಿಗೆ ಒಂದು ರೀತಿಯ ನಿಯಮಗಳು ಮತ್ತು ಮತ್ತೊಂದು ವರ್ಗಕ್ಕೆ ಒಂದು ರೀತಿಯ ನಿಯಮಗಳಿದ್ದರೆ ಪ್ರಜಾಪ್ರಭುತ್ವವು ಉಳಿಯಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿರಿ: ಪ್ರತ್ಯೇಕ ಪ್ರಕರಣ: ನಾಲ್ಕು ವರ್ಷದ ಮಗು, ಬಾಲಕಿ ಮೇಲೆ ಅತ್ಯಾಚಾರ


