Homeಕರ್ನಾಟಕ‘ಜಾತಿ ಸಮಾವೇಶಕ್ಕೆ ಹೋಗುವುದಿಲ್ಲ ಎಂದು ಬಿಜೆಪಿಯವರು ಹೇಳಿದರೆ ರಾಜಕೀಯ ನಿವೃತ್ತಿ’

‘ಜಾತಿ ಸಮಾವೇಶಕ್ಕೆ ಹೋಗುವುದಿಲ್ಲ ಎಂದು ಬಿಜೆಪಿಯವರು ಹೇಳಿದರೆ ರಾಜಕೀಯ ನಿವೃತ್ತಿ’

ಬಿಜೆಪಿ ನಾಯಕರ ಹಳೆಯ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್‌ ಮಾಡಿ ಬಿಜೆಪಿಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

- Advertisement -
- Advertisement -

“ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ. ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ” ಎಂದಿರುವ ಕರ್ನಾಟಕ ಬಿಜೆಪಿಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಬಿಜೆಪಿ ಹೇಗೆ ಜಾತಿಗೆ ಆದ್ಯತೆ ನೀಡುತ್ತದೆ ಎಂಬುದನ್ನು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಹಾಗೂ ಸಚಿವ ಆರ್‌.ಅಶೋಕ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳ ಸ್ಕ್ರೀನ್‌ಶಾಟ್‌ ಹಾಕಿ, ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ ಬಿಜೆಪಿ ನಡೆಯನ್ನು ಪ್ರಶ್ನಿಸಿದ್ದಾರೆ.

“ಎಲ್ಲ ಜಾತಿ, ಸಮುದಾಯಗಳನ್ನು ಒಟ್ಟಾಗಿ ಕರೆದೋಯ್ದಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿಯವರ ಬಣ್ಣದ ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಅಭ್ಯರ್ಥಿಗೆ ಈ ಬಾರಿಯ ಉಪಚುನಾವಣೆಯಲ್ಲಿ ಮತ ನೀಡಿ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದನ್ನು ಪ್ರಶ್ನಿಸಿದ್ದ ಕರ್ನಾಟಕ ಬಿಜೆಪಿಯು ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿತ್ತು. “ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ” ಎಂದು ಕೇಳಿತ್ತು.

“ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಸಿದ್ದರಾಮಯ್ಯ ಅವರು ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ. ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ” ಎಂದು #ಜಾತಿವಿಭಜಕಸಿದ್ದರಾಮಯ್ಯ ಹ್ಯಾಷ್‌ ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಲಾಗಿತ್ತು.

ಇದನ್ನೂ ಓದಿರಿ: ನಾನು ಜಾತಿವಾದಿ.. ಏನೀಗ?: ಬಿಜೆಪಿ ಟ್ವೀಟ್‌ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಇದಕ್ಕೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ ಅವರು ಬಿಜೆಪಿ ಹೇಗೆ ಜಾತಿ ರಾಜಕೀಯವನ್ನು ಮಾಡುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

‘ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದೂ’ ಎನ್ನುವ ಮಂತ್ರ.‌ ಅಂತರಂಗದಲ್ಲಿ‌ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮಂಡಲ ವಿರುದ್ಧ ಕಮಂಡಲ‌ ಹಿಡಿದ ಬಿಜೆಪಿ ನಾಯಕರ ಜಾತಿ‌ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು‌ ಕೊನೆಯಿಲ್ಲದ ಧಾರವಾಹಿ ಆದೀತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ, ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ‌ ಪಾಲ್ಗೊಂಡ ಜೋಷಿ, ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.‌ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ? ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ‌ ಜಾತ್ಯತೀತರಾ? ಎಂದು ಕೇಳಿದ್ದಾರೆ.

ಜಾತಿ ಸಮಾವೇಶದಲ್ಲಿ‌ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ. ಟಿಪ್ಪು ಸುಲ್ತಾನ್ ಜಯಂತಿ‌ಯಲ್ಲಿ ನಾನು ಭಾಗವಹಿಸಿದರೆ ಹಿಂದೂ ವಿರೋಧಿ. ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ‌ ಪ್ರಕಟಿಸಿ ಹಾಡಿ ಹೊಗಳಿದ ಮಾಜಿ‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಸ್ಲಿಂ ಗಣವೇಷ ಹಾಕಿ‌ ಖಡ್ಗ ಹಿಡಿದು ಕುಣಿದ ಬಿ.ಎಸ್ ಯಡಿಯೂರಪ್ಪ, ಆರ್. ಅಶೋಕ್ ಹಿಂದೂಕುಲ ತಿಲಕರೇ? ಎಂದು ವಾಗ್ದಾಳಿ ನಡೆಸಿದ್ದಾರೆ.

“ಜಾತಿ ನಾಶವಾಗುವ ವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಿಜೆಪಿ ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ? ಅಂದ ಹಾಗೆ ಬಿಜೆಪಿ ನಾಯಕರೇ, ನಿಮ್ಮ‌ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ? ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವರು ಇರುವುದು ಯಾಕೆ?” ಎಂದು ಕೇಳಿರುವ ಸಿದ್ದರಾಮಯ್ಯ ಅವರು #ಬಿಜೆಪಿಜಾತಿಹಿಪಾಕ್ರಸಿ  ಹ್ಯಾಷ್‌ಟ್ಯಾಗ್ ಹಾಕಿದ್ದಾರೆ.


ಇದನ್ನೂ ಓದಿರಿ: ಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...