ನವೆಂಬರ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ನೀಡದಿದ್ದರೆ ವೇದಿಕೆ ಪ್ರತಿಭಟನೆ ಮಾಡಲಾಗುವುದು ಎಂದು ತೀರ್ಥ ಪುರೋಹಿತರು (ಯಾತ್ರಾ ಪುರೋಹಿತರು) ಎಚ್ಚರಿಸಿದ್ದಾರೆ.
ಉತ್ತರಖಾಂಡ್ ಚಾರ್ ಧಾಮ್ ದೇವಸ್ಥಾನಮ್ ಮ್ಯಾನೇಜ್‌ಮೆಂಟ್ ಬೋರ್ಡ್ ರಚಿಸಿ ಅದರ ಅಡಿಯಲ್ಲಿ ದೇವಾಲಯಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಕ್ರಮವನ್ನು ಖಂಡಿಸಿ, ಪ್ರಧಾನಿಯವರ ಭೇಟಿಯನ್ನು ಬಹಿಷ್ಕರಿಸಲು ಪುರೋಹಿತರು ಸಜ್ಜಾಗಿದ್ದಾರೆ.
ಪ್ರಧಾನಿ ಮೋದಿಯವರು ಅಂದು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಭೆ ಅನಾವರಣ ಮಾಡಲಿದ್ದಾರೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಗಳಿಗೆ ಚಾಲನೆ ನೀಡಲಿದ್ದಾರೆ.
“ಚಾರ್‌ಧಾಮ್ ದೇವಸ್ಥಾನಮ್ ಮ್ಯಾನೇಜ್‌ಮೆಂಟ್ ರದ್ದುಗೊಳಿಸಲು ಆಗ್ರಹಿಸಿ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲು ಪದೇ ಪದೇ ಕೋರಲಾಗುತ್ತಿದೆ. ಆದರೆ ಅದಕ್ಕೆ ಮೋದಿಯವರು ಅವಕಾಶ ನೀಡುತ್ತಿಲ್ಲ” ಎಂದು ಪುರೋಹಿತರು ಬೇಸರ ವ್ಯಕ್ತಪಡಿಸಿದ್ದಾರೆ.
ಚಾರ್‌ಧಾಮ್ ಕಾಯಿದೆಯು ನಮ್ಮ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ಮಂಡಳಿಯ ವ್ಯಾಪ್ತಿಯಲ್ಲಿರುವ ದೇವಾಲಯದ ಆವರಣಗಳಲ್ಲಿನ ನಮ್ಮ ಆಸ್ತಿಗಳ ಮಾಲೀಕತ್ವವನ್ನು ಕಸಿದುಕೊಂಡಿದೆ. ಹೀಗಾಗಿ ಮೋದಿ ವಿರುದ್ಧ ನಮ್ಮ ದನಿಯನ್ನು ಎತ್ತಿದ್ದೇವೆ ಎಂದು ಬದ್ರಿನಾಥದ ಪುರೋಹಿತ ಹಾಗೂ ಚಾರ್‌ಧಾಮ್ ತೀರ್ಥ ಪುರೋಹಿತ್ ಹಕ್‌ಹುತುಕ್ ಮಹಾ ಪಂಚಾಯತ್ ಅಧ್ಯಕ್ಷ ಕೆ.ಕೆ.ಕೋಟಿಯಾಲ್ ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಂಕಷ್ಟದಲ್ಲಿ ನರೇಗ ನಂಬಿದ ಜನಸಮೂಹ: ಕೇಂದ್ರ ನೀಡಿದ ನಿಧಿ ಆರು ತಿಂಗಳಿಗೇ ಖಾಲಿ!
“ಪ್ರಧಾನಿ ಭೇಟಿಗೆ ಮುನ್ನ ರಾಜ್ಯ ಸರ್ಕಾರವು ಬೋರ್ಡ್ ಅನ್ನು ರದ್ದುಪಡಿಸುತ್ತದೆ ಎಂದು ಚಾರ್ ಧಾಮ್ ತೀರ್ಥ ಪುರೋಹಿತರು ನಂಬಿದ್ದೇವೆ. ಇಲ್ಲದಿದ್ದರೆ ನಾವು ಕೇದಾರನಾಥದಲ್ಲಿ ಪ್ರತಿಭಟನೆಗೆ ಸಿದ್ಧರಿದ್ದೇವೆ” ಎಂದು ಕೋಟಿಯಾಲ್ ಎಚ್ಚರಿಕೆ ನೀಡಿದ್ದಾರೆ.
“ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗುವುದಿಲ್ಲ, ಪ್ರಧಾನಿ ಲ್ಯಾಡ್ ಆಗಲು ಬಿಡುವುದಿಲ್ಲ. ನಾವು ಹೆಲಿಪ್ಯಾಡ್‌ನಲ್ಲೇ ಮಲಗುತ್ತೇವೆ. ಅವರ ಭೇಟಿಯನ್ನು ವಿರೋಧಿಸಿ ಕಪ್ಪು ಬಾವುಟ ತೋರಿಸಿ ಬಂದ್‌ಗೆ ಕರೆ ನೀಡುತ್ತೇವೆ” ಎಂದು ಸ್ಥಳೀಯ ಪುರೋಹಿತರ ಸಂಘವಾಗಿರುವ ಕೇದಾರನಾಥ ಸಭಾದ ಅಧ್ಯಕ್ಷ ವಿನೋದ್ ಶುಕ್ಲಾ ಹೇಳಿದ್ದಾರೆ.
ಅಕ್ಟೋಬರ್ 11ರ ಸಭೆಯ ನಂತರ ಬೋರ್ಡ್ ಅನ್ನು ರದ್ದುಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೀಡಿದ್ದರು. ಅಕ್ಟೋಬರ್ 30ರವರೆಗೆ ಪ್ರತಿಭಟನೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ನವೆಂಬರ್ 1ರಿಂದ ನಾವು ನಮ್ಮ ಪ್ರತಿಭಟನೆಯನ್ನು ಪುನಾರಂಭಿಸುತ್ತಿದ್ದೇವೆ” ಎಂದಿದ್ದಾರೆ ಶುಕ್ಲಾ.
ಮತ್ತೊಬ್ಬ ಅರ್ಚಕ, ಚಾರ್ ಧಾಮ್ ಮಹಾ ಪಂಚಾಯತ್‌ನ ಸಂಚಾಲಕ ಮತ್ತು ಗಂಗೋತ್ರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುರೇಶ್ ಸೆಂವಾಲ್ ಪ್ರತಿಕ್ರಿಯಿಸಿ, “ಚಾರ್ ಧಾಮ್ ದೇವಾಸ್ಥಾನಂ ಆಡಳಿತ ಮಂಡಳಿ ಕಾಯಿದೆಯು ಒಂದು ಕರಾಳ ಕಾನೂನು” ಎಂದಿದ್ದಾರೆ.
ಇದನ್ನೂ ಓದಿರಿ: ಸತತ ನಾಲ್ಕನೇ ದಿನವೂ ಪೆಟ್ರೊಲ್, ಡೀಸೆಲ್ ಬೆಲೆ ಏರಿಕೆ
“ಚಾರ್ ಧಾಮ್ ದೇವಾಲಯಗಳ ಪುರೋಹಿತರು ಕೇದಾರನಾಥದಲ್ಲಿ ಪ್ರಧಾನಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇತರ ಧರ್ಮಗಳಿಗೆ ಕಾನೂನು ಇಲ್ಲದಿರುವಾಗ ಕೇವಲ ಹಿಂದೂ ದೇವಾಲಯಗಳ ಮೇಲೆ ಸರ್ಕಾರ ಏಕೆ ಹೀಗೆ ಮಾಡುತ್ತಿದೆ? ಅವರು ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಮಸೀದಿ ಅಥವಾ ಚರ್ಚ್‌ಗಳನ್ನು ತೆಗೆದುಕೊಂಡಿಲ್ಲ” ಎಂದು ಸುರೇಶ್ ಸೆಂವಾಲ್ ಹೇಳಿದ್ದಾರೆ.
ಏನಿದು ವಿವಾದ?
2019ರ ಡಿಸೆಂಬರ್‌ನಲ್ಲಿ ಉತ್ತರಖಾಂಡ್ ಸರ್ಕಾರವು ಉತ್ತರ ಖಾಂಡ್ ಚಾರ್ ಧಮ್ ಶ್ರೈನ್ ಮ್ಯಾನೇಜ್‌ಮೆಂಟ್ ಮಸೂದೆಯನ್ನು ಮಂಡಿಸಿತು. ಈ ಮಸೂದೆಯು ಶಾಸನ ಸಭೆಯಲ್ಲಿ ಅಂಗೀಕಾರವಾಗಿ ಉತ್ತರಖಾಂಡ್ ಚಾರ್ ಧಮ್ ದೇವಸ್ಥಾನಮ್ ಮ್ಯಾನೇಜ್‌ಮೆಂಟ್ ಆಕ್ಟ್- 2019 ಜಾರಿಗೊಳಿಸಿ, 2020 ಜನವರಿ 15ರಂದು ಗೆಜೆಟ್ ನೋಟಿಫಿಕೇಷನ್ ಕೂಡ ಮಾಡಲಾಯಿತು.
ಈ ಬೋರ್ಡ್‌ನಲ್ಲಿ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯದ ಸಂಸ್ಕೃತಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಇತರ ಪದಾಧಿಕಾರಿಗಳೊಂದಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಪದನಿಮಿತ್ತ ಸದಸ್ಯರಾಗಿರುತ್ತಾರೆ.
ಈ ಮಂಡಲಿ ರಚನೆಯಾದಾಗಿನಿಂದಲೂ ಪುರೋಹಿತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬದ್ರಿ ಕೇದಾರನಾಥ ದೇವಾಲಯ ಸಮಿತಿ ಮುಖ್ಯಸ್ಥ ಮನೋಹರ್ ಕಾಂತ್ ಧ್ಯಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕಳೆದ ಜುಲೈನಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಅಕ್ಟೋಬರ್ 25ರಂದು ಧ್ಯಾನಿ ಸಮಿತಿಯು ಮಧ್ಯಂತರ ವರದಿಯನ್ನು ಸಿಎಂಗೆ ಸಲ್ಲಿಸಿತು.
ಪ್ರಸ್ತುತ, ಉತ್ತರಾಖಂಡ್ ಚಾರ್ ಧಾಮ್ ದೇವಸ್ತಾನಂ ಮಂಡಳಿಯು ರಾಜ್ಯದ 51 ದೇವಾಲಯಗಳ ವ್ಯವಹಾರಗಳನ್ನು ನಿರ್ವಹಿಸುವ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇವುಗಳಲ್ಲಿ ಗಂಗೋತ್ರಿ, ಯಮುನೋತ್ರಿ, ಬದರಿನಾಥ, ಕೇದಾರನಾಥ ಮತ್ತು 47 ಇತರ ದೇವಾಲಯಗಳು ಸೇರಿವೆ.
ಎಲ್ಲಾ ಚಾರ್ ಧಾಮ್ ದೇಗುಲಗಳು ಮತ್ತು ಅವುಗಳ ಸಂಯೋಜಿತ ದೇವಾಲಯಗಳ ಅರ್ಚಕರು, ಪುರೋಹಿತರು ಅತಿದೊಡ್ಡ ಮಧ್ಯಸ್ಥಗಾರರಾಗಿದ್ದಾರೆ. ಆದರೆ ದೇವಸ್ಥಾನಂ ಬೋರ್ಡ್ ಕಾನೂನನ್ನು ರೂಪಿಸುವ ಮೊದಲು ಉತ್ತರಾಖಂಡ ಸರ್ಕಾರವು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಪುರೋಹಿತರು ಆರೋಪಿಸಿದ್ದಾರೆ.
“ಎಲ್ಲಾ ನಾಲ್ಕು ಚಾರ್ ಧಾಮ್ ದೇಗುಲಗಳಲ್ಲಿ ಮತ್ತು ಅವರಿಗೆ ಸಂಯೋಜಿತವಾಗಿರುವ ದೇವಾಲಯಗಳಲ್ಲಿ ತೀರ್ಥಯಾತ್ರೆ ಪುರೋಹಿತರು ಮಾತ್ರ ತಮ್ಮ ಹಕ್ಕನ್ನು ಹೊಂದಿದ್ದಾರೆ. ಸರ್ಕಾರ ಕಾನೂನು ರೂಪಿಸುವ ಮುನ್ನ ಅವರ ಸಲಹೆ ಕೇಳಬೇಕಿತ್ತು. ಆದರೆ ಕೇಳಲಿಲ್ಲ. ಚಾರ್ ಧಾಮ್ ಅರ್ಚಕರ ಭೂಮಿ ಹಕ್ಕನ್ನು ಕಸಿದುಕೊಂಡು ಅವರ ಆಸ್ತಿಯನ್ನು ದೇವಸ್ಥಾನಂ. ಮಂಡಳಿಯ ಸ್ವಾಧೀನದಲ್ಲಿಡಲು ಉದ್ದೇಶಿಸಲಾಗಿದೆ” ಎಂದು ಗಂಗೋತ್ರಿ ದೇವಸ್ಥಾನ ಸಮಿತಿಯ ವಕ್ತಾರ ರಜನಿಕಾಂತ್ ಸೆಮ್ವಾಲ್ ಹೇಳಿದ್ದಾರೆ.
ಇದನ್ನೂ ಓದಿರಿ: ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್


