ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ನಿವೃತ್ತ ಉಪ ಕುಲಪತಿ ಸೇರಿದಂತೆ ಹಲವು ನಿವೃತ್ತ ಪ್ರಾಧ್ಯಾಪಕರಿಗೆ ವಿಶ್ವವಿದ್ಯಾಲಯವು ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಸಂದಾಯ ಮಾಡದೆ ಲಕ್ಷಾಂತರ ರುಪಾಯಿ ಬಾಕಿಯಿಟ್ಟಿರುವ ಘಟನೆ ನಡೆದಿದೆ. ಹೀಗಾಗಿ ಮಾಜಿ ಉಪಕುಲಪತಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ಕುಲಸಚಿವರಿಗೆ ತಮ್ಮ ಪಿಂಚಣಿಯನ್ನು ಕಾಲಕಾಲಕ್ಕೆ ಸಂದಾಯ ಮಾಡುವಂತೆ ಪತ್ರ ಬರೆದಿದ್ದಾರೆ.
ಪ್ರಾಧ್ಯಾಪಕರು ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ, “ನಮಗೆ ಸಲ್ಲಬೇಕಾದ ಪಿಂಚಣಿ ಮತ್ತು ಪಿಂಚಣಿ ಸವಲತ್ತುಗಳನ್ನು ತಕ್ಷಣ ಸಂದಾಯ ಮಾಡಬೇಕೆಂದು ಮತ್ತು ಸಂಬಂಧಿತ ಇತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕೆಂದು” ಕೋರಿದ್ದಾರೆ.
ಇದನ್ನೂ ಓದಿ: ಚಾಣಕ್ಯ ವಿವಿ, ಮನುವಾದಿಗಳ ವಿಶ್ವವಿದ್ಯಾಲಯ ಇದರ ಸ್ಥಾಪನೆಗೆ ಅವಕಾಶ ನೀಡಬಾರದು: ಸಿದ್ದರಾಮಯ್ಯ
ಗಳಿಕೆ ರಜೆ ಮೊತ್ತ ವರ್ಗಾವಣೆ ಆಗದೆ ಪಿಂಚಣಿ ನಿಗದಿತವಾಗಿಲ್ಲ ಎಂದು ದೂರಿರುವ ಅವರು, “ಕೆಲವರಿಗೆ ಪಿಂಚಣಿ ಸೌಲಭ್ಯಗಳು ಸಂದಾಯವಾಗದೆ ಮೂರು ವರ್ಷಗಳಾದರೆ, ಇನ್ನು ಕೆಲವರಿಗೆ ಒಂದೆರಡು ವರ್ಷಗಳಾಗಿವೆ, ಮತ್ತೂ ಕೆಲವರಿಗೆ ಎರಡರಿಂದ ಐದಾರು ತಿಂಗಳುಗಳಾಗಿವೆ” ಎಂದು ಪತ್ರದಲ್ಲಿ ದೂರಿದ್ದಾರೆ.
“ಕೆಲವು ಪ್ರಾಧ್ಯಾಪಕರು ನಿವೃತ್ತರಾಗಿ ಐದಾರು ತಿಂಗಳುಗಳಾದರೂ ಪಿಂಚಣಿ ನಿಗದಿತವಾಗಿಲ್ಲ. ಪಿ೦ಜಣಿ ನಿಗದಿತವಾದವರಿಗೆ ಕಾಲಕಾಲಕ್ಕೆ ಪಿಂಚಣಿ ಸಂದಾಯವಾಗುತ್ತಿಲ್ಲ. ಆದಾಯ ತೆರಿಗೆ ಹೆಸರಲ್ಲಿ, ಹಿಂದಿನ ಬಾಕಿ ಹೆಸರಲ್ಲಿ ನಿವೃತ್ತರಾದವರ ಒಪ್ಪಿಗೆ ಇಲ್ಲದೆ ಅವರ ಪಿಂಚಣಿಯಿಂದ ವಿಶ್ವವಿದ್ಯಾಲಯ ಬೇಕಾಬಿಟ್ಟಿ ಕಡಿತ ಮಾಡುತ್ತಿದೆ” ಎಂದು ಪತ್ರದಲ್ಲಿ ಹೇಳಿದ್ದು, ಈ ಎಲ್ಲ ಸಮಸ್ಯೆಗಳ ಕುರಿತು ದೂರು ನೀಡಿದರೆ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಪತ್ರಗಳಿಗೆ ಉತ್ತರಿಸುವ ಸೌಜನ್ಯವನ್ನು ವಿಶ್ವವಿದ್ಯಾಲಯ ತೋರಿಸುತ್ತಿಲ್ಲ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಮೋದಿಗೆ ಧನ್ಯವಾದ ಸಲ್ಲಿಸುವ ಬ್ಯಾನರ್ ಹಾಕಲು ಯುಜಿಸಿ ಸೂಚನೆ
ಪಿಂಚಣಿ ಸಮಸ್ಯೆಗಳನ್ನು ಹದಿನೈದು ದಿನಗಳೊಳಗೆ ಪರಿಹರಿಸಿ ಎಂದು ವಿನಂತಿಸಿರುವ ಪ್ರಾಧ್ಯಾಪಕರು, “ಒಂದು ವೇಳೆ ವಿಶ್ವವಿದ್ಯಾಲಯ ಹಿಂದಿನಂತೆ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ನಾವು ವಿಶ್ವವಿದ್ಯಾಲಯಕ್ಕೆ ಬಂದು ನಮ್ಮ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅನಿವಾರ್ಯತೆ ಸೃಷ್ಟಿ ಅಗಬಹುದು” ಎಂದು ಎಚ್ಚರಿಸಿದ್ದಾರೆ.
ಪತ್ರಕ್ಕೆ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲತಿಯಾದ ಡಾ. ಮಲ್ಲಿಕಾ ಎಸ್. ಘಂಟೆ, ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರ ಪೂಜಾರಿ, ಡಾ. ಕೆ.ಜಿ. ಭಟ್‌ಸೂರಿ, ಡಾ. ಎಸ್.ಸಿ. ಪಾಟಿಲ್, ಡಾ. ಕೇಶವನ್ ಪ್ರಸಾದ್, ಡಾ. ಉಷಾ, ಡಾ. ನಾಗೇಶ್, ಡಾ. ಅಮರೇಶ್ ನುಗಡೋಣಿ ಮತ್ತು ಡಾ. ರಹಮತ್ ತರಿಕೆರೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಬಲಿಷ್ಠ, ವೈವಿಧ್ಯ ಭಾರತವನ್ನು ಪ್ರತಿನಿಧಿಸುತ್ತದೆ: ಪ್ರಧಾನಿ ಮೋದಿ


