ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗತ್ತಿದ್ದಂತೆಯೆ ಉತ್ತರ ಕನ್ನಡದ ರಾಜಕೀಯ ಪಡಸಾಲೆಯ ರಂಗೇರಹತ್ತಿದೆ. ಪ್ರಮುಖ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ತಳಮಳ ಶುರುವಾಗಿದೆ. ಗಾಡ್ ಫಾದರ್‌ಗಳ ಹಿಡಿದು ಟಿಕೆಟ್ ತರಲು ಎಮ್‌ಎಲ್‌ಸಿಗಿರಿ ಕನಸಿಗರು ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಯಾರಿಗೆ ಯಾವ ಪಕ್ಷದಲ್ಲಿ ಟಿಕೆಟ್ ತರುವ ತಾಕತ್ತಿದೆ, ಟಿಕೆಟ್ ಹಂಚಿಕೆಯಲ್ಲಿ ಪ್ರಭಾವ ಬೀರಬಲ್ಲ ಸ್ಥಳಿಯ ನಾಯಕರ ಇಷ್ಟಾನಿಷ್ಟ ಏನಿರಬಹುದೆಂಬ ಕುತೂಹಲಕರ ಚರ್ಚೆ ನಡೆಯುತ್ತಿದೆ.
ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದ ಹಾಲಿ ಎಮ್‌ಎಲ್‌ಸಿ ಶ್ರೀಕಾಂತ ಘೋಟನೇಕರ್‌ಗೆ ಮೂರನೆ ಬಾರಿ ಕಾಂಗ್ರೇಸ್‌ನಿಂದ ಸ್ಪರ್ಧಿಸುವ ಧೈರ್ಯವಿಲ್ಲ. ಜಿಲ್ಲಾ ಕಾಂಗ್ರೆಸ್ ಹೈಕಮಾಂಡ್ ಆರ್.ವಿ. ದೇಶಪಾಂಡೆ ತನ್ನ ಹಳಿಯಾಳ ಕೇತ್ರದ ಬಹುದೊಡ್ಡ ಮರಾಠ ಸಮುದಾಯದ ಘೋಟನೇಕರ್‌ಅನ್ನು ಸತತ ಎರಡು ಬಾರಿ ಎಮ್ಮೆಲ್ಸಿಯಾಗಿಸಿದ್ದರು. ಈಗ ಈ ಗುರು-ಶಿಷ್ಯ ಸಂಬಂಧ ಹಳಸಿದೆ. ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಸದಸ್ಯರ ಬಲ ಹೆಚ್ಚಿರುವುದರಿಂದ ಘೋಟನೇಕರ್‌ಗೆ ಬಿಜೆಪಿ ಟಿಕೆಟ್ ಮೇಲೆಯೇ ಆಸೆ ಜಾಸ್ತಿಯೆನ್ನಲಾಗಿದೆ. ದೇಶಪಾಂಡೆ ಮೂರು ದಶಕದಿಂದ ಶಾಸಕನಾಗಿದ್ದು ಸಾಕು ಈ ಸಲ ನನಗೆ ಅಸೆಂಬ್ಲಿಗೆ ಸ್ಪರ್ಧಿಸಲು ಅವಕಾಶ ಬೇಕೆಂದು ಘೋಟನೇಕರ್ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.
ಘೋಟನೇಕರ್ ನಡೆ-ನುಡಿ ಹಿಂದೆ ಬಿಜೆಪಿ ಟಿಕೆಟ್ ಗಿಟ್ಟಿಸುವ ಲೆಕ್ಕಾಚಾರವಿದೆಯೆಂದು ಜಿಲ್ಲೆಯ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ಈಗ ಬಿಜೆಪಿ ಮಂತ್ರಿಯಾಗಿರುವ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಾಗ ಅಂದಿನ ಕಾಂಗ್ರೆಸ್ ಶಾಸಕರಾದ ಮಂಕಾಳ್ ವೈದ್ಯ, ಸತೀಶ್ ಸೈಲ್ ಮತ್ತು ಘೋಟನೇಕರ್‌ರ ಜತೆಗಿಟ್ಟುಕೊಂಡು ಹಳೆ ಹುಲಿ ದೇಶಪಾಂಡೆ ವಿರುದ್ಧ ಕಾರ್ಯಾಚರಣೆಗಿಳಿದಿದ್ದರು. ಘೋಟನೇಕರ್ ಮತ್ತು ಹೆಬ್ಬಾರ್‌ರ ದೋಸ್ತಿ ಇಂದಿಗೂ ಅಷ್ಟೆ ಅಖಂಡವಾಗಿ ಮುಂದುವರಿದಿದೆ. ಬಿಜೆಪಿ ವಿಧಾನ ಪರಿಷತ್ ಅಥವಾ ವಿಧಾನ ಸಭೆ ಹಳಿಯಾಳ ಟಿಕೆಟ್‌ನಲ್ಲಿ ಯಾವುದು ಕೊಟ್ಟರೂ ಘೋಟನೇಕರ್ ಪಕ್ಷಾಂತರ ಮಾಡಲು ಮಾನಸಿಕವಾಗಿ ಸಿದ್ದವಾಗಿದ್ದಾರೆಂದು ಅವರ ಆಪ್ತರೆ ಹೇಳುತ್ತಿದ್ದಾರೆ. ಗೆಳೆಯನನ್ನು ಬಿಜೆಪಿಗೆ ತರಲು ಹೆಬ್ಬಾರ್ ಕೈಲಾದದ್ದೆಲ್ಲ ಮಾಡುತ್ತಿರುವುದು ರಹಸ್ಯವಾಗುಳಿದಿಲ್ಲ.
ಘೋಟನೇಕರ್‌ರಂತೆಯೆ ಗುರು ದೇಶಪಾಂಡೆಗೆ ಸೆಡ್ಡು ಹೊಡೆದು ಜೆಡಿಎಸ್-ಬಿಜೆಪಿಯೆಂದು ಸುತ್ತು ಹೊಡೆಯುತ್ತಿರುವ ಮಾಜಿ ಶಾಸಕ ಸುನಿಲ್ ಹೆಗಡೆಗೆ ಬಿಜೆಪಿಯಲ್ಲಿನ ರಾಜಕೀಯ ಒಳಸುಳಿ ಅದ್ಯಾಕೋ ತನ್ನ ಅಸಿತ್ವಕ್ಕೆ ಸಂಚಕಾರ ತರತ್ತಿದೆಯೆಂಬ ಚಡಪಡಿಕೆ ಮೂಡಿಸಿದೆ. ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಬಿಜೆಪಿ ಕ್ಯಾಂಡಿಡೇಟ್ ಆಗಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವ, ಕಳೆದ ಬಾರಿ ದೇಶಪಾಂಡೆ ಎದುರು ಕೇವಲ ಐದು ಸಾವಿರ ಮತದಂತರದಿಂದ ಸೋತಿರುವ ಸುನಿಲ್ ಹೆಗಡೆಗೆ ಸಹಜವಾಗೆ ಘೋಟನೇಕರ್ ಬಿಜೆಪಿಗೆ ಬರುವುದು ಬೇಡವಾಗಿದೆ. ಸುನಿಲ್‌ಗೆ ದೇಶಪಾಂಡೆಗಿಂತ ಘೋಟನೇಕರ್ ಮೇಲೆಯೆ ಹೆಚ್ಚು ಸಿಟ್ಟಿದೆ. ಸುನಿಲ್‌ಗೆ ಸ್ಥಳಿಯವಾಗಿ ಹೆಜ್ಜೆ-ಹೆಜ್ಜೆಗೆ ಸವಾಲಾಗಿರುವುದು ಘೋಟನೇಕರ್.
ಬಿಜೆಪಿ ಸೂತ್ರಧಾರರಿಗೆ ತೀರಾ ಕಡಿಮೆ ಜನಸಂಖ್ಯೆಯ ಜಾತಿ (ಕೊಂಕಣಿ ಬ್ರಾಹ್ಮಣ)ಯ ಸುನಿಲ್‌ಗಿಂತ ಬಹುಸಂಖ್ಯಾತ ಮರಾಠ ಸಮುದಾಯದ ಘೋಟನೇಕರ್ ಅಸೆಂಬ್ಲಿ ಚುನಾವಣಾ ದೃಷ್ಟಿಯಿಂದ ಅನುಕೂಲಕರವಾಗಿ ಕಾಣಿಸುತ್ತಿದ್ದಾರೆ. ಹಾಗಾಗಿ ಸುನಿಲ್ ಹೆಗಡೆಗೆ ಎಮ್ಮೆಲ್ಸಿ ಚುನಾಣೆಗೆ ಇಳಿಸುವ ಬಗ್ಗೆ ಯೋಚನೆ ನಡೆಯುತ್ತಿದೆಯೆಂದು ಬಿಜೆಪಿಯವರೆ ಮಾತಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ್ -ತನಗೆ ವಿಧಾನಸಭೆಯಿಂದ ಪರಿಷತ್ತಿಗೆ ಕಳಿಸುವುದಾಗಿ ಹೇಳಿ ಮೋಸ ಮಾಡಲಾಗಿದೆ; ಈಗಲಾದರೂ ಟಿಕೆಟ್ ಕೊಡಿಯೆಂದು ಬಹಿರಂಗ ಬೇಡಿಕೆ ಇಟ್ಟಿದ್ದಾರೆ. ಆದರೆ ಸ್ಥಳಿಯ ಶಾಸಕ-ಸ್ಪೀಕರ್ ಕಾಗೇರಿ ಮತ್ತು ಕೆ.ಜಿ.ನಾಯ್ಕ್ ಸಂಬಂಧ ಅಷ್ಟಕ್ಕಷ್ಟೆ.
ಸೋಲುವ ಹೊತ್ತಲ್ಲಿ ತನ್ನನ್ನು ಎಮ್ಮೆಲ್ಸಿ ಚುನಾವಣೆಗೆ ಬಲವಂತದಿಂದ ನಿಲ್ಲಿಸಲಾಗಿತ್ತು. ಕಳೆದ ವಿಧಾನ ಸಭಾ ಚನಾವಣೆಯಲ್ಲೂ ವಂಚಿಲಾಯಿತು; ಈಗಲಾದರೂ ಅವಕಾಶ ಕೊಡಿಯೆಂದು ಕಾರವಾರದ ಮೀನುಗಾರ ಸಮಾಜದ ಗಣಪತಿ ದುಮ್ಮಾ ಉಳ್ವೇಕರ್ ಹಕ್ಕು ಮಂಡಿಸಿದ್ದಾರೆ. ಕಳೆದ ಬಾರಿಯ ಅಸೆಂಬ್ಲಿ ಎಲೆಕ್ಷನ್ ಸಂದರ್ಭದಲ್ಲಿ ನಿಗೂಢವಾಗಿ ಸಾವಿಗೀಡಾದ ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಕರಾವಳಿಯ ಅಷ್ಟೂ ಬಿಜೆಪಿ ಅಭ್ಯರ್ಥಿಗಳು ಮಿನುಗಾರರ ಸಾರಾಸಗಟು ಮತ ಪಡೆದು ಗೆದಿದ್ದಾರೆಂಬುದನ್ನು ಬಿಜೆಪಿ ಹೈಕಮಾಂಡ್ ಮರೆಯಬಾರದೆಂದು ಗಣಪತಿ ಉಳ್ವೇಕರ್ ಪರವಿರುವವರ ವಾದ. ಬಿಜೆಪಿ ದೊಡ್ಡವರ ಗಮನ ಸೆಳೆಯಲು ಹಿಂದುತ್ವ ಉಗ್ರವಾಗಿ ಪ್ರತಿಪಾದಿಸುತ್ತಿರುವ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಸಂಘಪರಿವಾರದ ಬೆಂಬಲದ ಸುಬ್ರಾಯ ವಾಳ್ಕೆ ಟಿಕೆಟ್ ಲಾಬಿ ನಡೆಸಿದ್ದಾರೆನ್ನಲಾಗಿದೆ. ಅರಣ್ಯ ಅಧಿಕಾರಿಯಾಗಿದ್ದಾಗ ಅಕ್ಕಿ ಅವ್ಯವಹಾರದಲ್ಲಿ ಅಮಾನತ್ತಾಗಿದ್ದ ನಾಗರಾಜ ನಾಯಕ್ ತೊರ್ಕೆ ಸಹ ಬಿಜೆಪಿ ಟಿಕೆಟ್ ಪಡೆವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್‌ನಲ್ಲಿ ಎಮ್ಮೆಲ್ಸಿ ಸ್ಥಾನಕ್ಕೆ ಅಂಥ ಪೈಪೋಟಿಯೇನಿಲ್ಲ. ಆದರೆ ಜಿಲ್ಲೆಯ ರಾಜಕಾಣದ ನಾಡಿ ಮಿಡಿತ ಗೊತ್ತಿರುವ ದೇಶಪಾಂಡೆ ಕಾಯಾ-ವಾಚಾ-ಮನಸಾ ಪ್ರಯತ್ನಿದರೆ ಕಾಂಗ್ರೆಸ್ ಗೆಲ್ಲಿಸುವುದು ಅವರಿಗೆ ಕಷ್ಟವೇನಲ್ಲವೆಂಬುದು ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷದವರಿಗೆ ಗೊತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಲಾಬಲದ ಅಂತರವು ತೀರಾ ಸಣ್ಣದಿರುವುದರಿಂದ ದೇಶಪಾಂಡೆ ಮನಸ್ಸು ಮಾಡಿದರೆ ಕಾಂಗ್ರೆಸ್ ಯೋಗ ಖುಲಾಯಿಸಬಹುದೆಂಬ ವಿಶ್ಲೇಷಣೆ ನಡೆದಿದೆ.
ಮಗನನ್ನು ಯಲ್ಲಾಪುರದಲ್ಲಿ ಚುನಾವಣೆಗೆ ನಿಲ್ಲಿಸುವ ಯೋಚನೆಯಲ್ಲಿರುವ ದೇಶಪಾಂಡೆ ಹಳೆ ಶತ್ರು ಮಾರ್ಗರೇಟ್ ಆಳ್ವರ ಜತೆ ರಾಜಿ ಮಾಡಿಕೊಂಡಿದ್ದಾರೆ. ಹೀಗಾಗಿ ತನ್ನನ್ನು ದೇಶಪಾಂಡೆ ಈ ಸಲ ಬೆಂಬಲಿಸಬಹುದೆಂದು ಭಾವಿಸಿದ್ದರು ಮ್ಯಾಗಿ ಮಗ ನಿವೇದಿತ್ ಆಳ್ವ.. ಆದರೆ ಆಶಿರ್ವಾದ ಪಡೆಯಲು ಹೋಗಿದ್ದ ನಿವೇದಿತ್ ಗೆ ನೀನು ಸ್ಪರ್ಧಿಸುವುದು ಬೇಡ…. ವಾತಾವರಣ ಸರಿಯಿಲ್ಲ… ಎಂದೇಳಿ ನಿರಾಶೆ ಮೂಡಿಸಿದ್ದಾರೆನ್ನಲಾಗಿದೆ. ದೇಶಪಾಂಡೆ ಅರಣ್ಯ ಭೂಮಿ ಅತಿಕ್ರಮಣದಾರರ ಸಂಘಟನೆಯ ಜಿಲ್ಲೆಯಾದ್ಯಂತ ಜನ ಸಂಪರ್ಕವಿರುವ ರವೀಂದ್ರ ನಾಯ್ಕ್‌ಗೆ ನಿಲ್ಲಿಸಿದರೆ ಗೆಲ್ಲಿಸಿಕೊಂಡು ಬರುವುದು ಕಷ್ಟವಾಗಲಿಕ್ಕಿಲ್ಲವೆಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿದೆ. ಅದರೆ ದೇಶಪಾಂಡೆ ತಲೆಯಲ್ಲಿರುವುದು ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಎಂದು ಕಾಂಗ್ರೆಸಿಗರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಕ್ಯಾಸಿನೋ ಜೂಜಾಟ ಶುರುಮಾಡುವ ಸಚಿವ ಹೆಬ್ಬಾರ್ ಹೇಳಿಕೆಗೆ ವಿರೋಧ


