Homeಮುಖಪುಟಪುನೀತ್ ನುಡಿನಮನ; ಕರ್ನಾಟಕದ ಮನೆಮಗನ ನಿರ್ಗಮನ

ಪುನೀತ್ ನುಡಿನಮನ; ಕರ್ನಾಟಕದ ಮನೆಮಗನ ನಿರ್ಗಮನ

- Advertisement -
- Advertisement -

‘ಜೊತೆಗಿರದ ಜೀವ ಎಂದಿಗೂ ಜೀವಂತ’ ಪುನೀತ್ ರಾಜ್‌ಕುಮಾರ್ ನಮ್ಮನಗಲಿದ ದಿನ ಮೇಷ್ಟ್ರು ಬರಗೂರು ರಾಮಚಂದ್ರಪ್ಪನವರು ಪ್ರತಿಕ್ರಿಯಿಸಿದ ಬಗೆಯಿದು. ಹೌದು, ಸಾವು ನಮ್ಮ ಬದುಕಿನ ಸಹಜ ವಿದ್ಯಮಾನ. ಸತ್ತ ಮೇಲೆ ಎಲ್ಲರೂ ದಿವಂಗತರಾಗುತ್ತಾರೆ. ಆದರೆ ಸಾವು ಕೆಲವರನ್ನು ನಮ್ಮಿಂದ ಕಿತ್ತುಕೊಂಡಾಗ ಇದ್ದಕ್ಕಿದ್ದಂತೆ ಅವರು ನಿಧನರಾದರು ಎಂದು ನಂಬಲು ಹಲವು ದಿನಗಳು ಬೇಕಾಗುತ್ತವೆ. ಪುನೀತ್ ಸಾವು ಇಂತಹ ಮರ್ಮಾಘಾತವನ್ನು ಉಂಟುಮಾಡಿದೆ. ಜನರ ಪ್ರತಿಕ್ರಿಯೆಗಳನ್ನು ನೋಡಿದರೆ ಕರ್ನಾಟಕವು ತನ್ನ ಮನೆಯ ಮಗನನ್ನು ಕಳೆದುಕೊಂಡಿದೆ ಎಂದು ಭಾಸವಾಗುತ್ತಿದೆ.

ಕರ್ನಾಟಕದಲ್ಲಿ ಅಭಿನಯಕಲೆ, ಗಾಯನ ಮತ್ತು ಸಜ್ಜನಿಕೆ ಹೀಗೆ ಹಲವು ಅರ್ಥಗಳಿಗೆ ಸಂವಾದಿಯಾಗಿ ಒಂದು ’ವಿಶ್ವವಿದ್ಯಾಲಯ’ ಎಂದೇ ಡಾ. ರಾಜ್ ಅವರನ್ನು ಗುರುತಿಸಲಾಗುತ್ತದೆ. ಈ ಮುತ್ತುರಾಜನ ಕೊನೆಯ ಮಗ ಹುಟ್ಟಿದಾಗ ’ಲೋಹಿತ’ನಾಗಿ, ಬೆಳೆದಂತೆಲ್ಲಾ ’ಪುನೀತ’ನಾದರೂ ’ಅಪ್ಪು’ವಾಗಿ ವಾತ್ಸಲ್ಯದ, ಅಭಿಮಾನದ ಭಾವವಾಗಿ ಉಳಿದುಹೋದದ್ದು ಈ ಕ್ಷಣಕ್ಕೆ ಚರಿತ್ರೆ.

ರಾಜ್‌ಕುಮಾರ್ ಎನ್ನುವ ಕಲಾವಿದನೊಂದಿಗೆ ಕನ್ನಡ ಸಿನಿಮಾ, ಕನ್ನಡ ಸಮಾಜ, ಕನ್ನಡದ ಅಭಿಮಾನ ಎನ್ನುವುದೆಲ್ಲ ಪರಸ್ಪರ ಎಂಬಂತೆ ವಿಶಿಷ್ಟವಾಗಿಯೂ ಜೊತೆಜೊತೆಗೆ ಬೆಳೆದದ್ದನ್ನು ಎಂದಿಗೂ ಯಾರೂ ನಿರಾಕರಿಸುವಂತಿಲ್ಲ. ಈ ನೆಲದ ಶ್ರಮಿಕ ಸಮುದಾಯವನ್ನು ಪ್ರತಿನಿಧಿಸುವ ನಟನೊಬ್ಬ ’ಕನ್ನಡಕ್ಕೊಬ್ಬನೇ ರಾಜ್ ಕುಮಾರ್’ ಎಂಬಂತೆ ಬೆಳೆದದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಅಂತೆಯೇ ಅದು ಹೂವಿನ ಹಾದಿಯೂ ಆಗಿರಲಿಲ್ಲ. ಅವೆಷ್ಟೋ ಸಂಕಟ ಅವಮಾನಗಳನ್ನು ಮೀರಿ ಬೆಳೆದ ’ಬೇಡರ ಕಣ್ಣಪ್ಪ’ ’ದೇವತಾ ಮನುಷ್ಯ’ನಾದದ್ದು ನಿರಂತರವಾದ ಶ್ರಮದಿಂದ ಮತ್ತು ಬದ್ಧತೆಯ ಭಾವದಿಂದ. ಇಂತಹ ವ್ಯಕ್ತಿತ್ವವನ್ನು ’ಬೆವರಿನ ಮನುಷ್ಯ’ ಎಂದು ಬರಗೂರರು ಗುರುತಿಸುವುದಿಲ್ಲಿ ಉಲ್ಲೇಖಾರ್ಹ. ಇಂತಹ ವ್ಯಕ್ತಿತ್ವದಿಂದ, ಪರಿಧಿಯಿಂದ ಬಂದ ಮೂರು ಮಕ್ಕಳು ನಟನೆಯನ್ನೇ ವೃತ್ತಿಯಾಗಿಸಿಕೊಂಡದ್ದು ಕನ್ನಡ ಸಿನಿಮಾರಂಗದ ದಾಖಲೆಯೂ ಹೌದು. ಮೂವರದ್ದೂ ವಿಭಿನ್ನ ಹಾದಿ, ಅದರಲ್ಲಿ ಅಪ್ಪುವಿನದು ಮತ್ತಷ್ಟು ವಿಭಿನ್ನ.

ಬೆಳೆದಂತೆಲ್ಲಾ ರಾಜ್‌ಕುಮಾರನ ಮಗನೆಂಬ ಹಿರಿಮೆ, ತುಂಟತನ ಉಢಾಫೆಗಳನ್ನೆಲ್ಲಾ ಆಗಾಗ ನೆನಪು ಮಾಡಿಕೊಂಡ ಪುನೀತ್ ಆ ಬಗೆಗೆ ಸಾಕಷ್ಟು ಆತ್ಮಾವಲೋಕನ ಮಾಡಿಕೊಂಡದ್ದು ನಮಗೆಲ್ಲಾ ತಿಳಿದ ವಿಷಯ. ಹೌದು. ಸಹಜವಾದ ಬದುಕಿನ ಕ್ರಮವಿದು. ಬಹಳ ಸಲ ಪುನೀತ್ ರಾಜ್‌ಕುಮಾರ್ ನಮ್ಮ ಮನೆಯ ಮಗನಾದದ್ದು ಸದಾ ಅಪ್ಪುವಾಗಿಯೇ ಉಳಿದದ್ದು ಹೀಗೆ ಸರಳವಾಗಿ, ಸಹಜವಾಗಿ, ಬಹು ಜನರ ಬದುಕಿನೊಂದಿಗೆ ಮಿಳಿತವಾಗುತ್ತಲೇ ಬದುಕಿದ ಕಾರಣದಿಂದ ಎನ್ನುವುದನ್ನು ನಾವು ಮರೆಯುವುದು ಹೇಗೆ? ‘ನೀವೆಸೆದ ಚಿಲ್ಲರೆಯನ್ನು ಹಣೆಯಲ್ಲಿ ಎತ್ತಿಕೊಂಡ ಮಗ ನಾನು’ ಎನ್ನುವ ಸಾಲೊಂದು ಅಪ್ಪುವಿನ ಹಾಡಿನಲ್ಲಿದೆ. ಹೀಗೆ ಹೇಳಿಕೊಂಡ ಪ್ರೀತಿಯ ಎದೆಗಾರಿಕೆ ಸಾಮಾನ್ಯವಲ್ಲ. ಹಾಗಾಗಿಯೇ ಮತ್ತೆಮತ್ತೆ ‘ಅಭಿಮಾನಿಗಳೇ ನಮ್ಮನೆ ದೇವ್ರು’ ಎನ್ನುವುದು ಪ್ರತಿಧ್ವನಿಸಿದಂತಾಗುತ್ತದೆ. ‘ನೀವೇ ನನಗೆ ಹೆಸರಿಟ್ಟವರು’ ಎಂಬಲ್ಲಿ ಎಲ್ಲರ ಮನೆಯ ಮಗನಾಗುವ ಭಾವವಾಗುತ್ತದೆ. ‘ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮಾ ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು’ ಎಂಬ ಸಾಲುಗಳು ಕರ್ನಾಟಕದಾದ್ಯಂತ ಕೋಟ್ಯಂತರ ತಾಯಂದಿರು ಅಪ್ಪು ನಮ್ಮ ಮನೆಯ ಮಗ ಎಂದು ಭಾವಿಸಲು ಕಾರಣವಾಗಿರಬಹುದು. ತುಸು ಭಾವುಕ ಎನ್ನಿಸಬಹುದಾದರೂ ಹೀಗೆ ನಡೆದದ್ದು ಸುಳ್ಳಲ್ಲ. ಇಂದಿಗೆ ನಮ್ಮ ನಡುವೆ ಸಂಬಂಧಗಳೆಲ್ಲಾ ಸಂಕೀರ್ಣವಾಗಿ, ಯಾಂತ್ರಿಕಗೊಳ್ಳುತ್ತಿವೆ ಎನ್ನಿಸುತ್ತಿರುವ ಹೊತ್ತಿಗೂ ’ಅಪ್ಪು’ ಎನ್ನುವ ಹರೆಯದ ಮಗನನ್ನು ಕಳೆದುಕೊಂಡು ಮಕ್ಕಳಿಂದ ವೃದ್ಧರಾದಿಯಾಗಿ ಎಲ್ಲರೂ ಕಣ್ಣೀರಿಟ್ಟಾಗ, ಮತ್ತೆಮತ್ತೆ ಅವನನ್ನು ದೈಹಿಕವಾಗಿ ನಮ್ಮ ನಡುವೆ ಇಲ್ಲ ಎನ್ನುವುದನ್ನು ನಂಬಲಿಕ್ಕಾಗದ ಸಂಗತಿ.

ಬಾಲನಟನಾಗಿ ವಸಂತಗೀತ, ಭಾಗ್ಯವಂತ, ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಯಾರಿವನು ಚಿತ್ರಗಳಲ್ಲಿ ನಟಿಸಿದ ಆ ಪುಟ್ಟ ಹುಡುಗನ ಲವಲವಿಕೆ ಇನ್ನೂ ನೆನಪಿಂದ ಮಾಸೇ ಇಲ್ಲ. ಪರಶುರಾಮದಲ್ಲಿ ದಿಢೀರನೆ ಸ್ವಲ್ಪ ದೊಡ್ಡವನಾದ ಹುಡುಗನನ್ನು ಕಂಡು ಅಚ್ಚರಿ ಪಡುತ್ತಿದ್ದಾಗ ನಡುವೆಯೇ ಆತನೇ ’ಅಪ್ಪು’ವಾಗಿ ಯುವ ನಾಯಕನಾದದ್ದು ಕಾಲದ ವೇಗವನ್ನು ಅನುಮಾನದಿಂದಲೇ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಅಪ್ಪುವಿನ ಹುಡುಗುತನ, ’ಅಭಿ’ಯಲ್ಲಿನ ಸಾಹಸ, ’ವೀರ ಕನ್ನಡಿಗ’ನ ಅನ್ವರ್ಥ ಹಲವಾರು ಸಿನಿಮಾಗಳು ಹತ್ತಾರು ಪಾತ್ರಗಳು; ಮಿಲನ, ಪೃಥ್ವಿ, ಅರಸುವಿನಂತಹ ಸಿನಿಮಾಗಳ ಪಾತ್ರಗಳು ಪುನೀತ್‌ನಿಂದಷ್ಟೇ ಸಾಧ್ಯ ಎನ್ನುವಂತೆ ರೂಪುಗೊಂಡವು. ಪಾತ್ರದಿಂದ ಪಾತ್ರಕ್ಕೆ, ಚಿತ್ರದಿಂದ ಚಿತ್ರಕ್ಕೆ ‘ವಾವ್!’ ಎನ್ನುವಂತೆ ಅಭಿಮಾನಿಗಳ ಮುಂದೆಯೇ ಬೆಳೆಯುತ್ತಾ ಸಾಗಿದ ಅಪ್ಪು ಹೀಗೆ ಇದ್ದಕ್ಕಿದ್ದಂತೆ ಹೇಳದೇ ಕೇಳದೆ ಹೋದದ್ದಕ್ಕೆ ಯಾರನ್ನು ಹೊಣೆ ಮಾಡುವುದು? ಯಾರನ್ನು ಪ್ರಶ್ನಿಸುವುದು? ಇವೆಲ್ಲಾ ಉತ್ತರವೇ ಇಲ್ಲದ ಪ್ರಶ್ನೆಗಳು….

ವರನಟನ ಪುತ್ರರೆಂಬ ಸುವರ್ಣ ಚೌಕಟ್ಟಿನ ವಾಸ್ತವ ಅವರನ್ನು ಆವರಿಸಿಕೊಂಡಿದ್ದನ್ನು ಮೀರಿ ಬೆಳೆಯುವುದು ಖಂಡಿತವಾಗಿಯೂ ಸುಲಭವಾಗಿರಲ್ಲ ಮತ್ತುದು ಸಾಮಾನ್ಯ ಸಂಗತಿಯೂ ಅಲ್ಲ. ಅದನ್ನು ಮೀರಿ ಬೆಳೆದ ಸಹೋದರ ಶಿವರಾಜ್ ಕುಮಾರ್ ದಾರಿಯಲ್ಲಿಯೇ ಬೆಳೆದ ಪುನೀತ್ ಅದನ್ನು ಬೇಗನೇ ಮೈಗೂಡಿಸಿಕೊಂಡರು. ಹಾಗಾಗಿಯೇ ಅಭಿಮಾನಿಗಳು ಅವರನ್ನು ’ಪವರ್ ಸ್ಟಾರ್’ ಎಂದು ಕರೆದದ್ದು ಇರಬಹುದು.

ಸಾಮಾನ್ಯವಾಗಿ ಯಶಸ್ಸು ಎನ್ನುವುದೇ ಒಂದು ಅಮಲೇರಿದ ಕುದುರೆಯಂತೆ. ಅದು ಸಾಕಷ್ಟು ಭ್ರಮೆಗಳನ್ನು ಅಹಂಕಾರಗಳನ್ನು ತುಂಬಿಬಿಡುತ್ತದೆ. ಅಂತಹ ಉದಾಹರಣೆಗಳು ನಮ್ಮ ಕಣ್ಮುಂದೆ ಸಾಕಷ್ಟಿವೆ. ಆದರೆ ಸದಾ ನೆಲದ ಕಡೆಗೆ ಕಣ್ಣಾಗಿ ಎಲ್ಲವನ್ನು ವಿಶ್ವಾಸ, ಹೃದಯವಂತಿಕೆ ಮತ್ತು ವಿನಯದಿಂದಲೇ ಸ್ವೀಕರಿಸುತ್ತಾ ಜೀವನ ಪ್ರೀತಿಯನ್ನು ಪುನೀತ್ ಉಳಿಸಿಕೊಂಡದ್ದು ಸಾಮಾನ್ಯ ಸಂಗತಿಯಲ್ಲ. ಮತ್ತೆ ಮತ್ತೆ ’ಕನ್ನಡದ ಕೋಟ್ಯಾಧಿಪತಿ’ಯಲ್ಲಿ ನಿರಂತರವಾಗಿ ತನ್ನತನವನ್ನು ದಾಖಲಿಸಿಕೊಂಡ ಪುನೀತ್ ರಾಜ್‌ಕುಮಾರ್‌ನನ್ನು ಅವಶ್ಯ ನೆನೆಯಬೇಕು. ಆ ತನ್ನತನ ಇಲ್ಲವಾಗಿದ್ದರೆ ’ಕೌನ್ ಬನೇಗಾ ಕರೋಡ್‌ಪತಿ’ಯ ಅಮಿತಾಬ್‌ರಂತಹ ದೊಡ್ಡ ಪ್ರಭಾವಳಿಯಿಂದ ತಪ್ಪಿಸಿಕೊಳ್ಳುವುದು ಖಂಡಿತವಾಗಿ ಸಾಧ್ಯವಾಗುತ್ತಿರಲಿಲ್ಲ. ತನ್ನ ನಡವಳಿಕೆಯಿಂದ ತನ್ನಪ್ಪನನ್ನು ನೆನಪಿಸುತ್ತಿದ್ದ ಪುನೀತ್ ರಾಜ್‌ಕುಮಾರ್ ಖಂಡಿತವಾಗಿ ಕರ್ನಾಟಕದ ’ಯುವರತ್ನ’ನಾಗುವ ಅನ್ವರ್ಥವಾಗಿದ್ದು ಸುಳ್ಳಲ್ಲ.

ಪುನೀತ್ ಮೌನವಾಗಿಯೇ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದುದು, ಹೊಸಬರನ್ನು, ಹೊಸತನವನ್ನು ಗೌರವಿಸುತ್ತಿದ್ದ ನಿಲುವು, ನಿರಂತರವಾಗಿ ಸೃಜನಶೀಲತೆಗೆ ತೆರೆದುಕೊಳ್ಳುತ್ತಿದ್ದ ಬಗೆಯೆಲ್ಲವೂ ಈಗ ಪರದೆ ಸರಿದಂತೆ ನಮ್ಮೆದುರು ಕಾಣುತ್ತಿರುವಾಗ ಈ ಬಗೆಯ ಯಾವ ಮಾತುಗಳೂ ಉತ್ಪ್ರೇಕ್ಷೆಯಲ್ಲ ಎನ್ನುವುದು ಸ್ಪಷ್ಟವಾಗಬಹುದು.

ಒಂದು ಕಾಲಕ್ಕೆ ಸಿನಿಮಾ ಮಂದಿರಗಳು ನಮ್ಮ ಜನರ ಮುಖ್ಯ ಆಕರ್ಷಣೆಯೂ, ಬದುಕಿನ ನಿಲುವುಗನ್ನಡಿಯೂ ಆಗಿದ್ದವು. ಜನ ಅಲ್ಲಿ ನೇರ ಭಾಗಿಗಳಾಗಿ ತಮ್ಮನ್ನು ಸಿನಿಮಾ ಪಾತ್ರ, ಸನ್ನಿವೇಶ, ಹಾಡುಗಳು ಎಂಬೆಲ್ಲಾ ಬಗೆಯಲ್ಲಿ ಕಂಡುಕೊಳ್ಳುತ್ತಿದ್ದ ಕಾಲ ಮರೆಯಾಗಿದೆ. ಇಂದು ವಾಣಿಜ್ಯ ಸಂಕಿರಣಗಳೆಂಬ ಮಾಲ್‌ಗಳಲ್ಲಿ ಕನ್ನಡ ಸಿನೆಮಾಗಳ ಪ್ರದರ್ಶನವೇ ಅಪರೂಪವಾಗುತ್ತಿದೆ. ಇಂತಹ ಸಮಯದಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಕನ್ನಡ ಸಿನಿಮಾಗಳನ್ನು ನೋಡಲು ಜನ ಕುಟುಂಬ ಸಮೇತರಾಗಿ ಬರುವಂತೆ ಮಾಡುವುದಕ್ಕೆ ಪುನೀತ್ ಸಿನಿಮಾಗಳು ಸಹಕರಿಸವೆ.

ಅಪ್ಪನಂತೆ ಮಗನೂ ಸಂಬಂಧ ಸಾರ್ಥಕತೆಯ ಹಪಾಹಪಿಗಳ ಕಥನಗಳಲ್ಲಿ ಅಭಿನಯಿಸಿದ ಆಕಾಶ್, ರಾಮ್, ಹುಡುಗರು, ಪವರ್ ಸ್ಟಾರ್, ದೊಡ್ಮನೆ ಹುಡುಗ, ಅಂಜನಿ ಪುತ್ರ ಮುಂತಾದ ಸಿನಿಮಾಗಳು ಮತ್ತೆಮತ್ತೆ ಪುನೀತ್‌ನನ್ನು ಮನೆಯ ಅಪ್ಪುವನ್ನಾಗಿಸಿದ್ದು ಗಮನಾರ್ಹವಾದ ಸಂಗತಿಯೇ ಹೌದು.

ಸಿನಿಮಾದಂತಹ ಚಿತ್ತಾಕರ್ಷಕ ಜಗತ್ತಿನಲ್ಲಿದ್ದು, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಯಾವುದೇ ಗಾಸಿಪ್‌ಗಳಿಗೆ ಒಳಗಾಗದಂತೆ ಬದುಕುವುದು ಸುಲಭವಲ್ಲ. ಸ್ಪರ್ಧಾತ್ಮಕ ಸಿನಿಮಾ ಜಗತ್ತು ದಾರಿತಪ್ಪಿಸಲು ಖಂಡಿತವಾಗಿಯೂ ಮತ್ತೆಮತ್ತೆ ಅವೆಷ್ಟೋ ಸವಾಲುಗಳನ್ನು ಸೃಷ್ಟಿಸುತ್ತಿರುವಾಗಲೂ ಅಪ್ಪು ಅವುಗಳಿಂದ ದೂರವಾಗಿ, ಎಚ್ಚರವಾಗಿ ಉಳಿದದ್ದು ಮಾದರಿಯಾಗಬೇಕಾದದ್ದು.

ಮೂಲತಃ ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿರುವಾಗ ಅದೊಂದು ಸಾಂಸ್ಕೃತಿಕ ಜವಾಬ್ದಾರಿಯೂ ಹೌದು. ಈಚಿನ ದಿನಗಳಲ್ಲಿ ಅದು ಉಂಟು ಮಾಡುತ್ತಿರುವ ಅಪಾಯಗಳೂ ಕಡಿಮೆಯಲ್ಲ. ಇಂತಲ್ಲಿಯೇ ಪುನೀತ್ ನಮಗೆ ಆದರ್ಶ ’ಯುವ ರಾಯಭಾರಿ’ಯಂತೆಯೂ ಕಂಡದ್ದು ಮಾತ್ರ ಸಕಾಲಿಕ ಬೆಳವಣಿಗೆಯಾಗಿತ್ತು.

ನಾಟಕಗಳನ್ನು ಆರಂಭ ಕಾಲದಲ್ಲಿ ನೋಡುವುದೇ ಒಂದು ವ್ಯಸನ ಮತ್ತು ತಪ್ಪು ಎನ್ನುವ ಅಭಿಪ್ರಾಯವಿದ್ದುದು, ಕ್ರಮೇಣ ಅದು ಕಲೆಯಾಗುತ್ತಾ, ಹವ್ಯಾಸವಾಗುತ್ತಾ ಮುಂದೆ ಸಿನಿಮಾಗಳ ಮೂಲವಾಯ್ತು. ಸಿನಿಮಾಗಳು ಆರಂಭಕ್ಕೆ ಮಡಿವಂತಿಕೆಯ ಅಪಾಯಗಳಿಗೆ ಎದುರಾಗಿ ನಂತರ ಮಹತ್ವದ ಮನರಂಜನೆಯ ಮಾಧ್ಯಮವಾದಾಗ ಚಲನಚಿತ್ರಗಳು, ನಟರು, ಚಿತ್ರಗೀತೆಗಳೆಲ್ಲವೂ ಸಾಮಾಜಿಕ ಸಾಂಸ್ಕೃತಿಕ ರೂಪಕಗಳಾದಾಗ ಅದಕ್ಕೊಂದು ವಿಶಿಷ್ಟ ಬೆಡಗು ದೊರೆತಿದ್ದು ರಾಜಕುಮಾರ್ ಎಂಬ ಕಲಾವಿನಿಂದ. ಅದು ಮುಂದುವರೆದು ಆತ ರಾಜಣ್ಣನಾದದ್ದು, ಆತನಿಗೆ ತನ್ನ ಅಭಿಮಾನಿಗಳೇ ದೇವರಾದದ್ದು ಈಗ ಕನ್ನಡ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ. ಅದನ್ನು ಅತ್ಯಂತ ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೊರಟಿದ್ದ ಪುನೀತ್ ರಾಜ್‌ಕುಮಾರ್ ಹೀಗೆ ಯಾರೂ ಊಹಿಸದ ಹಾಗೆ ದಿಢೀರನೆ ಕಾಣದಂತೆ ಮಾಯವಾದದ್ದು ಇನ್ನೂ ಅರಗಿಸಿಕೊಳ್ಳಲಾಗದ ಸಂಗತಿ. ಈ ಬಾರಿ ಕನ್ನಡ ರಾಜ್ಯೋತ್ಸವ, ದೀಪಾವಳಿಯಂತಹ ಆಚರಣೆಗಳೂ ಮನೆಯ ಮಗ ಅಪ್ಪುವನ್ನು ಕಳೆದುಕೊಂಡ ಸೂತಕದಲ್ಲೇ ಕಳೆದುಹೋದದ್ದು, ಪ್ರತೀ ಹಳ್ಳಿ ನಗರಗಳಲ್ಲೆಲ್ಲಾ ಅಪ್ಪುವಿನ ನೆನಪಿನ ಚಿತ್ರಪಟಗಳು ಹೆಜ್ಜೆಹೆಜ್ಜೆಗೂ ಕಾಣುವಂತಾದದ್ದು, ಬಹು ದೊಡ್ಡ ವ್ಯಕ್ತಿತ್ವವೊಂದು ನಮ್ಮನ್ನು ಮೀರಿ, ಅಸಹಾಯಕರನ್ನಾಗಿಸಿ ಸಾಗಿಹೋದ ದುರಂತದ ಸೂಚಕವೇ ಹೌದು. ಲೆಕ್ಕವಿಡದಷ್ಟು ಲಕ್ಷಾಂತರ ಮಂದಿ ನಾಡಿನ ಮೂಲೆಮೂಲೆಯಿಂದ ರಾಜಧಾನಿಗೆ ಬಂದು ಅಪ್ಪುವಿಗಾಗಿ ಕಣ್ಣೀರಿಟ್ಟಿದ್ದು, ರಾಜ್‌ಕುಮಾರ್ ಅವರ ಸಾವಿನ ದಿನವನ್ನೇ ನೆನಪಿಗೆ ತಂದದ್ದೂ ಹೌದು. ಇದು ಸಾರ್ಥಕ ಬದುಕಿನ ಪರಿಪೂರ್ಣತೆಯ ಅರಿವಿನ ’ಮಾನವ ಜನ್ಮ ದೊಡ್ಡದು’ ಎನ್ನುವುದಕ್ಕೆ ಉದಾಹರಣೆ.

ಕೆಲವರ ಅಕಾಲಿಕ ನಿಧನದ ದುರಂತವನ್ನು ದೊಡ್ಡ ನಷ್ಟ ಎನ್ನುವ ಮಾತಿದೆ. ಆದರೆ ಪುನೀತ್ ರಾಜ್‌ಕುಮಾರ್‌ನಂತಹ ನಟನ ಈ ಕಣ್ಮರೆ ಸರಳ ಮತ್ತು ಸಾಂಪ್ರದಾಯಿಕ ಮಾತುಗಳನ್ನು ಮೀರಿದ್ದೇ ಹೌದು. ಇದು ಅನಿರೀಕ್ಷಿತವಾಗಿ ಅಸಹಜವೆನ್ನುವಂತೆ ಸೃಷ್ಟಿಯಾದ ಶೂನ್ಯ. ಇದನ್ನು ಖಂಡಿತವಾಗಿ ಯಾರೂ ಸುಲಭದಲ್ಲಿ ತುಂಬಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಜಡವಾಯಿತೇನೋ ಅನ್ನಿಸುವುದು ಕೂಡ ಉತ್ಪ್ರೇಕ್ಷೆಯಲ್ಲ. ಅಪ್ಪುವಿನ ನಿರ್ಗಮನ ಕರ್ನಾಟಕದ ಜನಮಾನಸವನ್ನು ಹಲವು ಕಾಲ ಕಾಡುತ್ತದೆ. ಏಕೆಂದರೆ ಕರ್ನಾಟಕವು ತನ್ನ ಮನೆಯ ಮಗನನ್ನು ಕಳೆದುಕೊಂಡಿದೆ.

ಡಾ. ಜಿ. ಪ್ರಶಾಂತ ನಾಯಕ

ಡಾ. ಜಿ. ಪ್ರಶಾಂತ ನಾಯಕ
ಪ್ರಾಧ್ಯಾಪಕರು, ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ


ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್‌ ಅವರ ಅಪರೂಪದ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನಸಿನ ಮಾತುಗಳ ಮೂಲಕ ನೈಜತೆಯನ್ನು ಹೇಳುತ್ತಲೇ ರಾಜ್ ಮನೆತನದೊಂದಿಗೆ ಮನೆಮಗ ಪುನೀತ್ ಅವರ ಬೆಳವಣಿಗೆಯ ಆ ಭಾವ …ಬದುಕನ್ನ ಮನಮಿಡಿಯುವಂತೆ ಚಿತ್ರಿಸಿರುವಿರಿ …ಧನ್ಯವಾದಗಳು ಸರ್…??

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...