ದೇಶದ ಇತಿಹಾಸವನ್ನು ತಿರುಚಲಾಗಿದೆ. ಅಲೆಕ್ಸಾಂಡರ್‌ರನ್ನು ಶ್ರೇಷ್ಠ, ಮಹಾನ್ ವ್ಯಕ್ತಿ ಎಂದು ಕರೆಯುತ್ತದೆ ಆದರೆ ಅಲೆಕ್ಸಾಂಡರ್‌ರನ್ನು ಸೋಲಿಸಿದ ಚಂದ್ರಗುಪ್ತ ಮೌರ್ಯರನ್ನು ಶ್ರೇಷ್ಠ ಎನ್ನದೆ ದೇಶಕ್ಕೆ ಮೋಸ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸರಿಯಾದ ಶಿಕ್ಷಣ ಬೇಕಾಗಿದೆ AIMIM ನಾಯಕ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.
ಅಸಲಿಗೆ ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯರ ನಡುವೆ ಯುದ್ದವೇ ನಡೆದಿಲ್ಲ, ಇದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಯುಪಿ ಸಿಎಂ ಹೇಳಿಕೆ ನೀಡಿದ್ದಾರೆ. ನಮಗೆ ಉತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಏಕೆ ಬೇಕು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಲಕ್ನೋದಲ್ಲಿ ನಡೆದ ‘ಸಾಮಾಜಿಕ ಪ್ರತಿನಿಧಿ ಸಮ್ಮೇಳನ’ದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, “ಇತಿಹಾಸ ಹೇಗೆ ತಿರುಚಲ್ಪಟ್ಟಿದೆ! ಇತಿಹಾಸವು ಚಂದ್ರಗುಪ್ತ ಮೌರ್ಯನನ್ನು ಶ್ರೇಷ್ಠ ಎಂದು ಕರೆಯಲಿಲ್ಲ, ಅದು ಯಾರನ್ನು ಶ್ರೇಷ್ಠ ಎಂದು ಕರೆದಿದೆ? ಅವನಿಂದ ಸೋತ ಅಲೆಕ್ಸಾಂಡರ್‌ನನ್ನು ಮಹಾನ್ ಎಂದು ಕರೆಯುತ್ತಾರೆ. ದೇಶಕ್ಕೆ ಮೋಸ ಮಾಡಲಾಗಿದೆ. ಆದರೆ ಇತಿಹಾಸಕಾರರು ಈ ಬಗ್ಗೆ ಮೌನವಾಗಿದ್ದಾರೆ” ಎಂದು ಹೇಳಿಕೆ ನೀಡಿದ್ದರು.
ಮುಂದುವರೆದು “ಭಾರತೀಯರ ಮುಂದೆ ಸತ್ಯ ಹೊರಬಿದ್ದರೆ ಸಮಾಜ ಮತ್ತೊಮ್ಮೆ ಎದ್ದು ನಿಲ್ಲುತ್ತದೆ. ಸಮಾಜ ಎದ್ದು ನಿಂತಾಗ ರಾಷ್ಟ್ರವೂ ಎದ್ದು ನಿಲ್ಲುತ್ತದೆ. ಪ್ರಧಾನಿ ಮೋದಿಯವರು ಇಂದು ಈ ದೇಶವನ್ನು ಎದ್ದು ನಿಲ್ಲುವಂತೆ ಮಾಡುತ್ತಿದ್ದಾರೆ. ನಾವು ‘ಒಂದೇ ಭಾರತ, ಶ್ರೇಷ್ಠ ಭಾರತ’ದ ಬಗ್ಗೆ ಮಾತನಾಡುವಾಗ, ಈ ವಿಷಯಗಳ ಬಗ್ಗೆ ಮಾತನಾಡಲಾಗುತ್ತದೆ” ಎಂದು ಯುಪಿ ಸಿಎಂ ಹೇಳಿದ್ದರು.
Hindutva is a fake history factory. Chandragupta & Alexander never met in war. This is yet another example of why we need good public education system. In absence of good schools, Baba-log get to make up facts according to convenience. Baba doesn’t value education & it shows https://t.co/nFWqvoRZLy
— Asaduddin Owaisi (@asadowaisi) November 14, 2021
ಇದಕ್ಕೆ ಪ್ರತಿಕ್ರಿಯಿಸಿರುವ AIMIM ನಾಯಕ ಅಸಾದುದ್ದೀನ್ ಒವೈಸಿ “ಹಿಂದುತ್ವವೆಂಬುದು ನಕಲಿ ಇತಿಹಾಸದ ಕಾರ್ಖಾನೆಯಾಗಿದೆ. ಚಂದ್ರಗುಪ್ತ ಮತ್ತು ಅಲೆಕ್ಸಾಂಡರ್ ನಡುವೆ ಯುದ್ಧ ನಡೆದಿಲ್ಲ. ನಮಗೆ ಉತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಏಕೆ ಬೇಕು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಉತ್ತಮ ಶಾಲೆಗಳ ಅನುಪಸ್ಥಿತಿಯಲ್ಲಿ, ಈ ಬಾಬಾಗಳು (ಯೋಗಿ ಆದಿತ್ಯನಾಥ್) ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸತ್ಯಗಳನ್ನು ತಿರುಚುತ್ತಾರೆ. ಬಾಬಾ ಶಿಕ್ಷಣಕ್ಕೆ ಬೆಲೆ ಕೊಡುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ: ಹಿಂದುತ್ವ ಎಂದರೆ ರಾಜಕೀಯ – ನಟಿ ರಮ್ಯಾ


