ನಮ್ಮೂರಿಗೆ ಬಾರ್ ಬೇಡ ಎಂದು ಪ್ರತಿಭಟನೆ ನಡೆಸಿದ ಮಹಿಳೆಯರ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಮುಂಜಾನೆ ಏಕಾಏಕಿ ಮಹಿಳೆಯರ ಮನೆಗೆ ನುಗ್ಗಿದ ಪೊಲೀಸರು ಬಾಗಿಲು ಮುರಿದು, ಹೆಂಚು ಹೊಡೆದು ಹಾಕಿ ಮಕ್ಕಳು, ಮಹಿಳೆಯರು ಸೇರಿದಂತೆ 7 ಮಹಿಳೆಯರನ್ನು ಎಳೆದೊಯ್ದು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.
ನಮ್ಮೂರಿಗೆ ಬಾರ್ ಬೇಡ ಎಂದು ಪ್ರತಿಭಟನೆ ನಡೆಸಿದ ಮಹಿಳೆಯರ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏಕಾಏಕಿ ಮಹಿಳೆಯರ ಮನೆಗೆ ನುಗ್ಗಿದ ಪೊಲೀಸರು ಬಾಗಿಲು ಮುರಿದು ಮಕ್ಕಳು ಸೇರಿದಂತೆ 7 ಜನರನ್ನು ಎಳೆದೊಯ್ದು ಬಂಧಿಸಿರುವ ಘಟನೆ ಕಡೂರಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ. pic.twitter.com/EcQQqbF9q0
— Naanu Gauri (@naanugauri) November 15, 2021
ಘಟನೆಯ ಹಿನ್ನೆಲೆ
ಮುಸ್ಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಾರ್ ಒಂದನ್ನು ತೆರೆಯಲು ಮುಂದಾಗಿದ್ದರು. ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿದ್ದು ನಮ್ಮೂರಿನಲ್ಲಿ ಬಾರ್ ತೆರೆದರೆ ಜನರೆಲ್ಲಾ ಕುಡಿದು ಹಾಳಾಗುವುದಲ್ಲದೆ ಮತ್ತಷ್ಟು ತಮ್ಮನ್ನು ಮತ್ತಷ್ಟು ಬಡತನಕ್ಕೆ ನೂಕಲಾಗುತ್ತದೆ ಎಂಬ ಆತಂಕದಿಂದ ಮಹಿಳೆಯರು ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸಿದ್ದರು. ಹತ್ತಾರು ಪ್ರತಿಭಟನೆಗಳು ನಡೆದು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿಯೂ ಪ್ರತಿಭಟನೆ ದಾಖಲಾಗಿತ್ತು.
ಇತ್ತೀಚೆಗಷ್ಟೆ ಬಾರ್ ಓಪನ್ ಮಾಡಲು ಮಾಲೀಕ ಮುಂದಾದ ಹಿನ್ನೆಲೆ ಬಾರ್ ಓಪನ್ ಮಾಡದಂತೆ ಗ್ರಾಮ ಪಂಚಾಯತ್ ನೋಟಿಸ್ ನೀಡಿತ್ತು. ಪೊಲೀಸರು ಬಾರ್ ಓಪನ್ ಮಾಡುವಂತಿಲ್ಲ ಎಂದು ಸೂಚಿಸಿದ್ದರು. ಈ ಮಧ್ಯೆಯೂ ಕಳೆದ ನಾಲ್ಕೈದು ದಿನಗಳಿಂದ ಬಾರ್ ಓಪನ್ ಸಿದ್ಧತೆ ನಡೆದಿತ್ತು. ಬಾರ್ ಬಾಗಿಲು ತೆಗೆಯದೆ ಬಂದವರಿಂದ ಹಣ ಪಡೆದುಕೊಂಡು ಮದ್ಯ ನೀಡುತ್ತಿದ್ದರು ಎಂದು ಮಹಿಳೆಯರು ಆರೋಪಿಸಿದ್ದರು.
ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಕೇವಲ ಸಿಎಲ್-7 ಪರವಾನಗಿ ಇದ್ದರೂ ಶುಕ್ರವಾರ ಬಾರ್ ತೆರೆಯಲಾಗಿತ್ತು ಎಂದು ಕ್ರೋಧಗೊಂಡ ಮಹಿಳೆಯರು ನವೆಂಬರ್ 12ರ ಶುಕ್ರವಾರದಂದು ಬಾರ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಮಹಿಳೆಯರು ಬಾರ್ ಒಳಗೆ ನುಗ್ಗಿ ಕುರ್ಚಿಗಳನ್ನು ಧ್ವಂಸಗೊಳಿಸಿದ್ದರು. ಈ ಚಕಮಕಿಯಲ್ಲಿ ಹಲವು ಮಹಿಳೆಯರು ಸಹ ಗಾಯಗೊಂಡು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದೂರು, ಪ್ರತಿದೂರು ದಾಖಲಾಗಿ ಪೊಲೀಸರು ಆಸ್ಪತ್ರೆಗೆ ತೆರಳಿ ಒಂದಷ್ಟು ಮಹಿಳೆಯರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಇದರಿಂದ ಕೋಪಗೊಂಡ ಹಲವು ಮಹಿಳೆಯರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಮದ್ಯದಂಗಡಿ ಮಾಲೀಕರ ಪರವಾಗಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಸಹ ಬಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಸಹ ಪೊಲೀಸ್ ಠಾಣೆಗ ಆಗಮಿಸಿ ಮಹಿಳೆಯರಿಗೆ ತೊಂದರೆ ಕೊಡಬೇಡಿ, ಮದ್ಯದಂಗಡಿ ಮುಚ್ಚಿಸಲು ಯತ್ನಿಸಿ ಎಂದು ಮನವಿ ಮಾಡಿದ್ದರು. ಈ ಕುರಿತು ಸಚಿವ ಗೋಪಾಲಯ್ಯರವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಇದಾದ ನಂತರ ಮಹಿಳೆಯರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದ್ದರು
ಪೊಲೀಸ್ ದೌರ್ಜನ್ಯ ಆರೋಪ
ಇಂದು ಬೆಳಿಗ್ಗೆ ಏಕಾಏಕಿ ಪಿಎಸ್‌ಐ ರಮ್ಯಾ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದ್ದ ಮಹಿಳೆಯರ ಮನೆಗಳಿಗೆ ನುಗ್ಗಿ ಮನೆ ಬಾಗಿಲು, ಹೆಂಚುಗಳನ್ನು ಮುರಿದು ಮೂವರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕ ಸೇರಿದಂತೆ ಏಳು ಜನರನ್ನು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಬೆಳಗ್ಗೆ ಆರು ಗಂಟೆಗೆ ಮನೆಗೆ ಬಂದ ಪೊಲೀಸರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ಮುರಿದು ಹಾಕಿದ್ದಾರೆ. ಬೂಟುಗಾಲಿನಿಂದ ಒದ್ದು ಬಾಗಿಲು ಮುರಿದಿದ್ದು, ಅಶ್ಲೀಲ ಪದಗಳಿಂದ ನಿಂದಿಸಿ, ಮನೆಯಲ್ಲಿದ್ದವರನ್ನು ಕಾರಣವನ್ನೂ ಹೇಳದೇ ಕರೆದುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ.
ಪೊಲೀಸರ ಕೃತ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ನಂತರ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಇದೇ ಕಡೂರಿನಲ್ಲಿ ಅಕ್ರಮ ಮದ್ಯದಂಗಡಿಗಳ ವಿರುದ್ಧ ಸತತ ಹೋರಾಟ ಕಂಡುಬರುತ್ತಿದೆ. ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ಅಂಚೆ ಸೋಮನಹಳ್ಳಿ ಗ್ರಾಮದಲ್ಲಿ ಸ್ಥಾಪನೆಯಾಗಿದ್ದ ಮದ್ಯದಂಗಡಿ ತೆರವಿಗೆ ಮಹಿಳೆಯರು ನಡೆಸಿದ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಅರವತ್ತು ದಿವಸದ ಒಳಗೆ ಮದ್ಯದ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಬಕಾರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಇದನ್ನು ಓದಿ: ಮಹಿಳೆಯರ ದಿಟ್ಟ ಹೋರಾಟಕ್ಕೆ ಜಯ: ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶ



ಇದು ನ್ಯಾಯಾಲಕ್ಕೆ ಇರುವ ಶಕ್ತಿ.