ಮಂಗಳೂರಿನಲ್ಲಿ ಮತ್ತೊಂದು ಮತೀಯ ಗೂಂಡಾಗಿರಿ ಪ್ರಕರಣ ದಾಖಲಾಗಿದೆ. ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಯುವತಿಗೆ ಕಿರುಕುಳ ನೀಡಿರುವ ದುರ್ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಸುರತ್ಕಲ್ ಬಳಿಯ ಮುಕ್ಕಾ ಶ್ರೀನಿವಾಸ ಕಾಲೇಜಿನಲ್ಲಿ ಕೇರಳ ಮೂಲದ ಮೊಹಮ್ಮದ್ ಯಾಸಿನ್ ಎಂಬ 20 ವರ್ಷದ ಯುವಕ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದೇ ಕಾಲೇಜಿನ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅವರ ಸಹಪಾಠಿ ಗೆಳತಿಯೊಬ್ಬರು ಮುಕ್ಕಾದಿಂದ ಸುರತ್ಕಲ್‌ಗೆ ಮನೆ ಬದಲಿಸುತ್ತಿದ್ದರು. ರಾತ್ರಿ ವೇಳೆ ಆಟೋ ಸಿಗದಿದ್ದರಿಂದ ಅವರನ್ನು ಮೊಹಮ್ಮದ್ ಯಾಸಿನ್ ಡ್ರಾಪ್ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಪೊಂದು ಹಿಂಬಾಲಿಸಿ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್‌ಮೆಂಟ್ ಬಳಿ ಹಲ್ಲೆ ನಡೆಸಿದ್ದಾರೆ.
“ನಿನ್ನೆ ರಾತ್ರಿ 9.30 ರ ಸಮಯದಲ್ಲಿ ಆಟೋ ಸಿಗದಿದ್ದ ಗೆಳತಿಯನ್ನು ಮುಕ್ಕಾದಿಂದ ಸುರತ್ಕಲ್‌ಗೆ ಡ್ರಾಪ್ ಮಾಡುತ್ತಿದ್ದೆ. ಇಬ್ಬರು ಮುಕ್ಕಾದಿಂದಲೇ ನಮ್ಮನ್ನು ಹಿಂಬಾಲಿಸುತ್ತಿದ್ದರು. ನಾವು ಗೊಂದಲದಿಂದ ಸುರತ್ಕಲ್‌ನಲ್ಲಿ ಬೇರೊಂದು ಅಪಾರ್ಟ್‌ಮೆಂಟ್ ತಲುಪಿದ್ದೆವು. ಅಷ್ಟರಲ್ಲಿ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಬಳಿಯಿದ್ದ ಮಹಿಳೆಯೊಬ್ಬರು ಹೊರಬರಬೇಡಿ, ಕೆಲ ಯುವಕರ ಗುಂಪು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ತಿಳಿಸಿದರು. ಆದರೆ ಒಳಬಂದ ಯುವಕರು ನನ್ನ ಐಡಿ ಕಾರ್ಡ್ ನೋಡಿ, ಹೆಸರು ಕೇಳಿ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಗೆಳತಿಯನ್ನು ನಿಂದಿಸಿ, ನೂಕಾಡಿ ಕಿರುಕುಳ ನೀಡಿದರು” ಎಂದು ಹಲ್ಲೆಗೊಳಗಾದ ಮೊಹಮ್ಮದ್ ಯಾಸಿನ್ ದಿ ನ್ಯೂಸ್ ಮಿನಿಟ್ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
#Moralpolicing case reported in #Mangaluru's Surathkal. A few youngsters followed two students, both belonging to different faiths. The guy was thrashed. The girl was warned against moving around with boys from other faiths. Luckily, the accused have been arrested by police. pic.twitter.com/w0cjvpJGt2
— Suraj Suresh (@Suraj_Suresh16) November 16, 2021
ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪೊಲೀಸ್‌ರಿಗೆ ಫೋನ್ ಮೂಲಕ ದೂರು ನೀಡಿದ ನಂತರ ಸುರತ್ಕಲ್ ಪೊಲೀಸರು ಪ್ರಶಾಂತ್, ಗುರುಪ್ರಸಾದ್, ಪ್ರಹ್ಲಾದ್, ಪ್ರತೀಶ್ ಆಚಾರ್ಯ, ಸುಖೇಸ್ ಮತ್ತು ಭರತ್ ಎಂಬ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತರಾದ ಮೊಹಮ್ಮದ್ ಯಾಸಿನ್ ಮತ್ತು ಅವರ ಗೆಳತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಬಿರಿಯಾನಿ ರೆಸ್ಟೋರೆಂಟ್ ಮುಚ್ಚದಿದ್ದರೆ ಬೆಂಕಿ ಹಚ್ಚುತ್ತೇನೆ: ದೆಹಲಿಯಲ್ಲಿ ಮತೀಯ ಗೂಂಡಾಗಿರಿ
ರಾಜ್ಯದಲ್ಲಿ ಮತೀಯ ಗೂಂಡಾಗಿರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಹಿಂದೂ ವ್ಯಕ್ತಿಯೊಬ್ಬ ತನ್ನ ಕಚೇರಿಯ ಮುಸ್ಲಿಂ ಮಹಿಳೆಗೆ ಡ್ರಾಪ್ ಕೊಡುತ್ತಿದ್ದಾಗ ಮುಸ್ಲಿಂ ಯುವಕರ ಗುಂಪೊಂದು ಅವರನ್ನು ರಸ್ತೆಯಲ್ಲಿ ತಡೆದು ಕಿರುಕುಳ ನೀಡಿದ್ದರು. ನಿಂದಿಸಿ, ಮಹಿಳೆಯನ್ನು ಆಟೋ ಹತ್ತಿಸಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. ಇದನ್ನು ಖಂಡಿಸಿದ್ದ ಸಿಎಂ ಬೊಮ್ಮಾಯಿಯವರು ಆರೋಪಿಗಳನ್ನು ಬಂಧಿಸಲು ಆದೇಶಿಸಿದ್ದರು. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಆದರೆ ತದನಂತರ ನಡೆದ ಮತೀಯ ಗೂಂಡಾಗಿರಿಗಳನ್ನು ಸಿಎಂ ಬೊಮ್ಮಾಯಿಯವರು ಖಂಡಿಸಿಲ್ಲ ಮಾತ್ರವಲ್ಲ ಅವುಗಳನ್ನು ಸಮರ್ಥಿಸುವಂತೆ ಹೇಳಿಕೆ ನೀಡಿದ್ದರು. ಮಂಗಳೂರಿಗೆ ಅವರು ಆಗಮಿಸಿದ್ದಾಗ ವೇಳೆ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಮಾತನಾಡಿಸಿದ್ದರು. ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತವೆ” ಎಂದಿದ್ದರು. ಅಲ್ಲಿಂದೀಚೆಗೆ ಸರಣಿ ರೀತಿಯಲ್ಲಿ ಮತೀಯ ಗೂಂಡಾಗಿರಿ ಪ್ರಕರಣಗಳು ವರದಿಯಾಗುತ್ತಿವೆ.
ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ಬೆಳಗಾವಿ ನಗರದಲ್ಲಿ ಸುತ್ತಾಡಿ ಕಾಲಕಳೆಯಲು ಬಂದಿದ್ದ ಪರಸ್ಪರ ಪರಿಚಯವಿದ್ದ ವಿಭಿನ್ನ ಧರ್ಮಕ್ಕೆ ಸೇರಿದ ಸ್ನೇಹಿತರಿಬ್ಬರನ್ನು ದುಷ್ಕರ್ಮಿಗಳು ತಡೆದು ಯುವಕನನ್ನು ಥಳಿಸಿ, ಯುವತಿಯನ್ನು ಎಳೆದಾಡಿರುವ ಮತೀಯ ಗೂಂಡಾಗಿರಿ ಘಟನೆ ಅಕ್ಟೋಬರ್ 17 ರಂದು ಜರುಗಿತ್ತು.
ಮಂಗಳೂರಿನ ಹೋಟೆಲ್ ಒಂದರ ಮೇಲೆ ದಾಳಿ ಮಾಡಿರುವ ಬಜರಂಗದಳದ ಸದಸ್ಯರು ಅಲ್ಲಿ ತಂಗಿದ್ದ ಅನ್ಯ ಧರ್ಮಕ್ಕೆ ಸೇರಿದ ಯುವಕ ಯುವತಿಯರಿಬ್ಬರನ್ನು ಬಲವಂತವಾಗಿ ಪೊಲೀಸರಿಗೆ ಒಪ್ಪಿಸಿರುವ ಮತೀಯ ಗೂಂಡಾಗಿರಿ ಘಟನೆ ಅಕ್ಟೋಬರ್ 22 ನಡೆದಿದೆ.
ಒಟ್ಟಿನಲ್ಲಿ ಮತೀಯ ಗೂಂಡಾಗಿರಿ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮುಖ್ಯಮಂತ್ರಿಗಳೇ ಅದನ್ನು ಸಮರ್ಥಿಸಿ ಮಾತಾಡಿರುವುದರಿಂದ ದುಷ್ಕರ್ಮಿಗಳಿಗೆ ಕಾನೂನಿನ ಭಯವಿಲ್ಲ. ಇದರ ವಿರುದ್ಧ ಪ್ರಜ್ಞಾವಂತರು, ಮಾನವ ಹಕ್ಕು ಕಾರ್ಯಕರ್ತರು ಮತ್ತು ವಕೀಲರು ನಿರಂತರವಾಗಿ ದನಿಯೆತ್ತುತ್ತಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕದಿದ್ದಲ್ಲಿ ರಾಜ್ಯ ಅಶಾಂತಿಯ ಗೂಡಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ಮತೀಯ ಗೂಂಡಾಗಿರಿ: ಹೋಟೆಲ್‌ಗೆ ನುಗ್ಗಿ ಜೋಡಿಗೆ ತೊಂದರೆ


