ತುಂಗಾಭದ್ರ ಅಣೆಕಟ್ಟಿನಿಂದ ನದಿಯು ಉಕ್ಕಿ ಹರಿಯುತ್ತಿರುವುದರಿಂದ ಹಂಪಿಯ ಪುರಂದರ ಮಂಟಪ ಕಳೆದ ಒಂದು ವರ್ಷದಲ್ಲಿ 11 ಬಾರಿ ಮುಳುಗಡೆಯಾಗಿದೆ. 14ನೇ ಶತಮಾನದ ಈ ಸ್ಮಾರಕದಲ್ಲಿ ಇಷ್ಟೊಂದು ಬಾರಿ ನೀರು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಮಾಧ್ಯಮಗಳು ಉಲ್ಲೇಖಿಸಿವೆ.
ಭಾರತದ ಪುರಾತತ್ವ ಇಲಾಖೆ(ಎಎಸ್‌ಐ)ಯು ತುಂಗಭದ್ರಾ ನದಿಯ ದಡದಲ್ಲಿರುವ ಪುರಂದರ ಮಂಟಪಕ್ಕೆ 2021 ರ ಮಾನ್ಸೂನ್ ಪ್ರಾರಂಭವಾಗುವ ಮೊದಲು ಜಲನಿರೋಧಕವನ್ನು ಅಳವಡಿಸಿತ್ತು. ಜೊತೆಗೆ, ಅಣೆಕಟ್ಟಿನಿಂದ ಮೇಲಕ್ಕೆ ಬಿಡುವ ನೀರಿನ ಹರಿವನ್ನು ತಡೆದುಕೊಳ್ಳಲು ಪಿಲ್ಲರ್‌ಗಳನ್ನು ಬಲಪಡಿಸಲಾಗಿತ್ತು.
ಸ್ಮಾರಕವೂ ಯಾವ ಮಟ್ಟಿಗೆ ಹಾನಿಯಾಗಿದೆ ಎಂದು ತಿಳಿದುಕೊಳ್ಳಬೇಕಾಗದರೆ, ನೀರಿನ ಪ್ರಮಾಣ ಕಡಿಮೆಯಾಗಬೇಕು ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
“600 ವರ್ಷಗಳ ಹಿಂದೆ ನಿರ್ಮಿಸಲಾದ ಪುರಂದರ ಮಂಟಪದ ಕಂಬಗಳ ನಿರ್ವಹಣೆಯನ್ನು ‘ಎಎಸ್‌ಐ’ ವಹಿಸಿಕೊಂಡಿದ್ದು, ಕಂಬಗಳು ಗಟ್ಟಿಯಾಗಿ ನಿಂತಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಮಂಟಪವು ಮೊದಲಿಗಿಂತ ಹೆಚ್ಚು ಮುಳುಗಡೆಯಾಗುತ್ತಿದೆ. ನೀರಿನ ಮಟ್ಟ ಕಡಿಮೆಯಾದ ನಂತರ ಎಎಸ್‌ಐ ತಂಡವು ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಮರುಸ್ಥಾಪನೆ ಕೆಲಸ ಅದು ಮಾಡಬಹುದು” ಎಂದು ಅಧಿಕಾರಿ ಹೇಳಿದ್ದಾರೆ.
“ಹಂಪಿ ಯುನೆಸ್ಕೋ ಪಾರಂಪರಿಕ ತಾಣವಾಗಿರುವುದರಿಂದ ಯಾವುದೇ ಸ್ಮಾರಕಗಳನ್ನು ಪುನಃಸ್ಥಾಪಿಸಲು ನಾವು ಸಿಮೆಂಟ್ ಸೇರಿದಂತೆ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ಅಗತ್ಯವಿರುವ ಯಾವುದೇ ಕಟ್ಟಡವನ್ನು ಬಲಪಡಿಸಲು ಕಲ್ಲು ಮತ್ತು ಕಲ್ಲಿನ ಚಪ್ಪಡಿಗಳನ್ನು ಬಳಸಲಾಗುತ್ತದೆ. ಕಳೆದ ವರ್ಷ ಭಾರಿ ಮಳೆಯಿಂದಾಗಿ ಹಂಪಿಯಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿದ್ದವು. ಪುನಃಸ್ಥಾಪನೆಯ ಕೆಲಸ ನಡೆಯುತ್ತಿದೆ, ಶಿಥಿಲಗೊಂಡಿರುವ ಇತರ ಸ್ಮಾರಕಗಳೂ ಇವೆ ಮತ್ತು ಅವುಗಳ ಸ್ಥಿರತೆಗಾಗಿ ನಿಯಮಿತವಾಗಿ ಪರಿಶೀಲಿಸಲಾಗುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.
“ಪುರಂದರ ಮಂಟಪವು ಹಂಪಿಯಲ್ಲಿ ಛಾಯಾಚಿತ್ರಕ್ಕೆ ಬಲು ಬೇಡಿಕೆಯಿರುವ ತಾಣವಾಗಿದೆ. ಹಂಪಿಯಲ್ಲಿ ಹಲವಾರು ಪ್ರಮುಖ ಸ್ಮಾರಕಗಳಿದ್ದರೂ, ನೀರಿನ ಮಟ್ಟವು ಸಾಮಾನ್ಯವಾಗಿದ್ದರೆ ಹೆಚ್ಚಿನ ಪ್ರವಾಸಿಗರು ಇಲ್ಲಿ ಸೆಲ್ಫಿ ತೆಗೆದುಕೊಳ್ಳದೆ ಹಿಂತಿರುಗುವುದಿಲ್ಲ” ಎಂದು ಹಂಪಿಯ ಪ್ರವಾಸಿ ಗೈಡ್ ಒಬ್ಬರು ಹೇಳಿದ್ದಾರೆ.


